Kannada News | Dinamaana.com | 05-09-2024
ಭಾರತದ ರಾಷ್ಟ್ರ ರಾಜಕಾರಣದಲ್ಲಿ ಮಹಾ ಮೇಧಾವಿಗಳು,ತತ್ವಜ್ಞಾನಿಗಳು,ಪುರೋಗಾಮಿ ಗಳು,ಬುದ್ದಿಜೀವಿಗಳು ಎನ್ನುವವರೂ ತಲೆಗೆ ಹಚ್ಚಿಕೊಳ್ಳಲಾಗದ ಮೀಸಲಾತಿ ವಿಚಾರದ ಬಗ್ಗೆ ಪದೇ ಪದೇ ಗುಲ್ಲೆಬ್ಬಿಸುತ್ತಿದ್ದ ಡಾ.ರಾಮಮನೋಹರ ಲೋಹಿಯಾರವರನ್ನು ಮೇಲ್ವರ್ಗದ ಜನ ಇವನ್ಯಾರಪ್ಪ ಮೀಸಲಾತಿ ,ಮೀಸಲಾತಿ ಅಂತಾನೆ ಎಂದು “ಅರೆ ಹುಚ್ಚ” ಎಂದು ನಿಂದಿಸುವ ಮಟ್ಟಕ್ಕೆ ಹೋಗಿದ್ದರು.
ದಮನಿತ ಸಮುದಾಯಗಳು,ಶೋಷಿತ ಸಮುದಾಯಗಳಿಗೆ ಹಸಿವು ಮುಖ್ಯವಾಗಿತ್ತು ವಿನಃ ಈ ತೆರನಾದ ಸುದ್ದಿಗಳಿಗೆ ಪ್ರತಿಕ್ರಿಯಿಸಲು ಶಕ್ತಿಯೂ ಇರಲಿಲ್ಲ.ಇಂತಹ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ದೇವರಾಜ ಅರಸು, ಹಾವನೂರರೊಂದಿಗೆ ಸೇರಿ ಸಾಹಸಕ್ಕೆ ಕೈ ಹಾಕಿದ್ದರು.
ಕೇವಲ ಒಂದು ಸಾವಿರಕ್ಕೂ ಕಡಿಮೆ ಸಂಖ್ಯೆಯಲ್ಲಿರುವ ಗುಂಡ್ಲುಪೇಟೆ ಯು ಕಲ್ಲಹಳ್ಳಿ ಗ್ರಾಮದ ಅರಸು,ಇತ್ತು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದ ಬೇಡ ಜನಾಂಗದ ಯುವ ವಕೀಲ ಎಲ್.ಜಿ.ಹಾವನೂರ್ ಒಂದಾಗಿ ಮಾಡಿದ ಕೆಲಸ ಸಾಮಾನ್ಯದ್ದೇನಲ್ಲ.
1975 ರಲ್ಲಿ ಹಾವನೂರ್ ಆಯೋಗ ತನ್ನ ವರದಿ ಒಪ್ಪಿಸಿದಾಗಲಂತೂ ಸಾಮಾಜಿಕ ವ್ಯವಸ್ಥೆಯೇ ಅಲುಗಾಡಿತು.ರಾಜ್ಯದಲ್ಲಿ ಸಾಕಷ್ಟು ಸಂಖ್ಯಾಬಲದ ವೀರಶೈವರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸದೇ ಇದ್ದ ಕಾರಣ ಇಡೀ ರಾಜ್ಯವೇ ಕಂಪಿಸಿತು.
ಅಂದಿನವರೆಗೂ ಈ ಕೋಟಾದಲ್ಲಿ ಮೇ ಉನ್ನತ ಶಿಕ್ಷಣ ಮತ್ತು ಸರ್ಕಾರಿ ನೌಕರಿಯಲ್ಲಿ ತಮ್ಮ ಪಾಲಿನ ಮೀಸಲಾತಿ ಪಡೆದಿದ್ದ ವೀರಶೈವರು ಕೆರಳಿದರು. ಎಷ್ಟರಮಟ್ಟಿಗೆ ಆಕ್ರೋಶವಿತ್ತೆಂದರೆ ವರದಿ ಸ್ವೀಕರಿಸಿದರೂ ಎರಡು ವರ್ಷಗಳ ಕಾಲ ಅಂದರೆ ಅನುಷ್ಠಾನದ ಗೊಡವೆಗೆ ಹೋಗಲಿಲ್ಲ.
1978 ರಲ್ಲಿ ರಾಮಮನೋಹರ ಲೋಹಿಯಾರ ಸಮಾಜವಾದಿ ಶಿಷ್ಯ ಕರ್ಪೂರಿ ಠಾಕೂರ್ ಬಿಹಾರದ ಮುಖ್ಯಮಂತ್ರಿಯಾಗಿದ್ದರು.ಅವರೂ ಸಹ ಸಾಮಾಜಿಕವಾಗಿ ತೀರಾ ಹಿಂದುಳಿದ ಕ್ಷೌರಿಕ ಜನಾಂಗದಿಂದ ಬಂದ ನಾಯಕರಾಗಿದ್ದರು. ಪ್ರಾಮಾಣಿಕತೆಗೆ ,ಸರಳ ಜೀವನಕ್ಕೆ ಹೆಸರಾಗಿದ್ದ ಕರ್ಪೂರಿ ಠಾಕೂರ್ ಬಿಹಾರದ ಎಸ್ಸೆಲ್ಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ಪರೀಕ್ಷೆಯನ್ನು ಪಾಸು ಮಾಡಲೇಬೇಕು ಎಂಬ ನಿಬಂಧನೆಯನ್ನೇ ತೆಗೆದುಹಾಕಿ,ಗ್ರಾಮೀಣ ಮಕ್ಕಳು ವಿದ್ಯಾಭ್ಯಾಸವನ್ನು ಮುಂದುವರೆಸುವಂತೆ ಮಾಡಿದ್ದರು.
ಹಾವನೂರ್ ವರದಿಯ ಪ್ರಭಾವ ಅವರಿಗೂ ಮುಟ್ಟಿತು.ಹಾವನೂರ್ ವರದಿಯ ಮಾದರಿಯಲ್ಲಿಯೇ ಇಡೀ ದೇಶಕ್ಕೇ ಅಂಥದೊಂದು ವರದಿ ತಯಾರಿಸಬೇಕೆನ್ನುವ ಮಾತುಗಳು ಕೇಳಿಬಂದವು.ಕರ್ಪೂರಿ ಠಾಕೂರ್ ಕರ್ನಾಟಕ ಮಾದರಿಯನ್ನು ಅನುಸರಿಸಲು ಉತ್ಸುಕರಾಗಿದ್ದರು.ಆದರೆ ಅಲ್ಲಿನ ಬಹುಸಂಖ್ಯಾತ ಭೂಮಾಲೀಕರ ಕೆಂಗಣ್ಣಿಗೆ ಗುರಿಯಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು.ಆದರೂ ಬದ್ಧತೆಯ ರಾಜಕಾರಣಿಯಾಗಿ ದ್ದು ಠಾಕೂರ್ ಪರಿಶ್ರಮದಿಂದಾಗಿ 1978 ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರ್ಕಾರದ ಮೇಲೆ ಒತ್ತಡ ಹಾಕಿ,ಹಾವನೂರ್ ಆಯೋಗದ ಮಾದರಿಯಲ್ಲಿಯೇ ಸೆಂಟ್ರಲ್ ಗವರ್ನಮೆಂಟ್ ಸಹ ಆಯೋಗವನ್ನು ರಚಿಸಲು ಕಾರಣವಾಯಿತು.
ಇಂದು ದೇಶದ ಬಹುತೇಕ ಅದರಲ್ಲೂ ಯುವಜನತೆಗೆ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೆ ಪ್ರೇರಣೆಯಾದದ್ದು ಎಲ್.ಜಿ.ಹಾವನೂರ್ ಎಂಬ ಅಪ್ಪಟ ಹಳ್ಳಿಗಾಡಿನ ಪ್ರತಿಭೆಯ ಶ್ರಮದಿಂದ ಎನ್ನುವುದು ತಿಳಿದಿಲ್ಲ.ಒಬ್ಬ ನ್ಯಾಯವಾದಿಯಾಗಿ ಸಾಮಾಜಿಕ ಎತ್ತರದಿಂದ ತಯಾರಿಸಿದ ವರದಿಯಿಂದಾಗಿ ಹಿಂದುಳಿದ ವರ್ಗಗಳು ಸರ್ಕಾರದ ಸಂವಿಧಾನದತ್ತ ಸೌಲಭ್ಯಗಳಿಂದ ಅವಕಾಶ ವಂಚಿತರಾಗದಂತೆ ಮಾಡಿತು ಎಂಬುದು ಸ್ವತಃ ಹಾವನೂರರ ಊರಾದ ರಾಣೆಬೆನ್ನೂರು ಸುತ್ತಮುತ್ತಲಿನ ಜನರಿಗೂ ತಿಳಿದಂತಿಲ್ಲ.
ಕಾಂಗ್ರೆಸ್ಸಿನಂತಹ ಪಕ್ಷದೊಳಗೆ ಇದ್ದೂ ಕೂಡ ಅಪ್ಪಟ ಸಮಾಜವಾದಿಗಳು ಕತೆ ಕಾರ್ಯನಿರ್ವಹಿಸಿದ ಅರಸು -ಹಾವನೂರ್ ಈ ಇಬ್ಬರು ಮಹನೀಯರು ಫೋಟೋ ಮನೆಮನೆಗಳ ಗೋಡೆಗಳಲ್ಲಿ ಕಾಣಿಸಬೇಕಿತ್ತು.ದುರಂತವೆಂದರೆ ಈ ಹೊತ್ತು ಯಾರು ಮನೆಗಳಲ್ಲೂ ಇವರ ನೆನಪುಗಳಿಲ್ಲ.
ಬಿ.ಶ್ರೀನಿವಾಸ . ದಾವಣಗೆರೆ
LG Havanur | ಎಲ್.ಜಿ.ಹಾವನೂರ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಕೋನ