ದಾವಣಗೆರೆ (Davanagere news) : ಆರ್‌ಪಿಎಫ್ ಮುಖ್ಯ ಪೇದೆಯೊಬ್ಬ ಚಲಿಸುವ ರೈಲಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದ ಯುವಕನ ಜೀವ ಉಳಿಸಿದ ಘಟನೆ ಶನಿವಾರ ರಾತ್ರಿ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಪ್ರಜ್ವಲ್ (18) ಚಲಿಸುವ ರೈಲಿಗೆ ಸಿಲುಕಿದ್ದ ಯುವಕ. ಸತೀಶ್ ಬೆಂಕಿಕೆರೆ ಯುವಕನ ಜೀವ ಉಳಿಸಿದ ದಾವಣಗೆರೆ ರೈಲ್ವೆಯ ಆರ್‌ಪಿಎಫ್ ಮುಖ್ಯ ಪೇದೆ.
ಘಟನೆ ವಿವರ: ಪ್ರಜ್ವಲ್ ಉದ್ಯೋಗ ಅರಸಿ ದುಗ್ಗಾವತಿ ಗ್ರಾಮದಿಂದ ಬ್ಯಾಡಗಿಗೆ ರೈಲಿನಲ್ಲಿ ಹೋಗಲು ನಿರ್ಧರಿಸಿ ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಶನಿವಾರ ದಾವಣಗೆರೆಯಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಮೆರವಣಿಗೆ ಇದ್ದರಿಂದ ಸಂಜೆ ಬ್ಯಾಡಗಿಗೆ ಹೋಗಲು ನಿರ್ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ. ಮೆರವಣಿಗೆ ಮುಗಿಸಿಕೊಂಡು ರಾತ್ರಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾನೆ.
ಮೈಸೂರಿನಿಂದ ಸೋಲ್ಲಾಪುರಕ್ಕೆ ಹೋಗುವ ಗೋಲ್‌ಗುಂಬಜ್ ರೈಲು (ಗಾಡಿ ಸಂಖ್ಯೆ-16535 ) ರಾತ್ರಿ 11.30 ಸುಮಾರಿಗೆ ನಿಲ್ದಾಣದ 1ನೇ ಪ್ಲಾಟ್ ಫಾರಂಗೆ ಆಗಮಿಸಿದೆ. ನಿಲುಗಡೆಯಾದ ಕೂಡಲೇ ಸಾಮಾನ್ಯ ಬೋಗಿಯಲ್ಲಿ ಹತ್ತಿದ ಪ್ರಜ್ವಲ್, ಬ್ಯಾಡಗಿಗೆ ನಿಲುಗಡೆ ಇದೆಯೇ ಎಂದು ಒಬ್ಬರನ್ನು ಕೇಳಿದ್ದಾನೆ. ಅವರು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಅಷ್ಟರಲ್ಲಿ ರೈಲು ಚಲಿಸಲು ಮುಂದಾಗಿದೆ. ತಕ್ಷಣವೇ ರೈಲಿನಿಂದ ಜಿಗಿದಾಗ ಇನ್ನೇನು ರೈಲಿನ ಕೆಳಗೆ ಬೀಳಬೇಕೆನ್ನುವಷ್ಟರಲ್ಲಿ ಅಲ್ಲೇ ನಿಂತಿದ್ದ ಮುಖ್ಯ ಪೇದೆ ಸತೀಶ್ ಬೆಂಕಿಕೆರೆ, ಕ್ಷಣಾರ್ಧದಲ್ಲಿ ಜೀವ ಕಳೆದುಕೊಳ್ಳುತ್ತಿದ್ದ ಪ್ರಜ್ವಲ್‌ನನ್ನು ಎಳೆದು ಜೀವ ಉಳಿಸಿದ್ದಾರೆ.
Read also : Davanagere | ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ : ಸಚಿವ ಜಮೀರ್ ಅಹಮದ್ ಖಾನ್
ಯುವಕನ ಕೈ,ಕಾಲು ಪರಚಿದ್ದು, ಆಘಾತಕ್ಕೆ ಒಳಗಾಗಿದ್ದ ಪ್ರಜ್ವಲ್‌ನನ್ನು ಕಚೇರಿಗೆ ಕರೆದುಕೊಂಡು ಹೋಗಿ ನೀರು ಕುಡಿಸಿ ಸಂತೈಷಿಸಿದ್ದಾರೆ. ಬಳಿಕ ಬ್ಯಾಡಗಿಗೆ ನಿಲುಗಡೆೆ ಹೋಗುವ ರೈಲಿಗೆ ಹತ್ತಿಸಿ ಕಳುಹಿಸಿದ್ದಾರೆ. ಆದರೆ ಮೊದಲೇ ಆಘಾತಕ್ಕೆ ಒಳಗಾಗಿದ್ದ ಪ್ರಜ್ವಲ್ ಹರಿಹರದಲ್ಲಿ ಇಳಿದು ದುಗ್ಗಾವತಿ ಗ್ರಾಮಕ್ಕೆ ಮರಳಿದ್ದಾನೆ.