ನೆಲಮೂಲದ ಸಾಹಿತ್ಯ ಯಾವಾಗಲೂ ಚಲನಶೀಲವಾಗಿರುತ್ತದೆ. ಅದು ನಿತ್ಯ ನೂತನ. ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುವ ಅನೇಕ ಸಾಹಿತಿಗಳು ಈ ನೆಲದ ನೋವನ್ನು ತಮ್ಮದೇ ಆದ ರೀತಿಯಲ್ಲಿ ಬಿಂಬಿಸುತ್ತಾ ಬಂದಿರುವುದನ್ನು ಕಾಣುತ್ತೇವೆ. ನೆಲದ ನೋವಿನ ಪ್ರತೀಕವಾಗಿ ಹೊರಹೊಮ್ಮಿದ ಬಂಡಾಯ ಸಾಹಿತ್ಯ ತನ್ನದೇ ಆದ ಪ್ರಖರ ಬೆಳಕಿನ ಕಿರಣಗಳನ್ನು ಅಲ್ಲಲ್ಲಿ ಸೂಸಿದೆ. ಅದರ ಬೆಳಕು ಅನೇಕ ದಮನಿತರ ನೋವಿಗೆ ಔಷಧವಾಗಿದೆ ಎಂದರೆ ತಪ್ಪಿಲ್ಲ. ಅಂತಹ ಬೆಳಕಿನ ಕಿಡಿಗಳ ಕಾವ್ಯದ ಅವಲೋಕನವೇ ‘ಬಿಸಿಲ ಮಳೆ’. ನೆಲಮೂಲದ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡ ಜೀವಪರ ಬರಹಗಾರ ಹಾಗೂ ಕವಿಯಾದ ಬಿ. ಶ್ರೀನಿವಾಸ ಅವರು ತಾವು ಕಂಡುಂಡ ಬಳ್ಳಾರಿಯ ಆಯ್ದ ಕವಿಗಳ ಕಾವ್ಯವನ್ನು ಇಲ್ಲಿ ಸಾದ್ಯಂತವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ.
ಬಳ್ಳಾರಿ ಎಂದರೆ ಎರಡೇ ಕಾಲಗಳು ನೆನಪಾಗುತ್ತವೆ. ಒಂದು ಬೇಸಿಗೆ ಕಾಲ ಮತ್ತೊಂದು ಬಿರುಬೇಸಿಗೆ ಕಾಲ. ಇಲ್ಲಿ ಮಳೆ ಎಂಬುದು ಮರಳುಗಾಡಿನ ಓಯಸಿಸ್ ಇದ್ದಂತೆ. ಮಳೆಗಾಲದಲ್ಲಿ ಬಿದ್ದ ಮಳೆ, ಬಿಸಿಲ ಝಳವನ್ನು ಹೊದ್ದುಕೊಂಡೇ ಸುರಿಯುತ್ತದೆ. ನೆಲದ ಕಾವನ್ನು(ಬಿಸಿಯನ್ನು) ಆರಿಸುವ ಮೊದಲೇ ತಣ್ಣಗಾಗುವ ಮಳೆ ಬದುಕನ್ನು ತಂಪುಗೊಳಿಸಿದ್ದು ಮಾತ್ರ ಕಡಿಮೆ ಎನ್ನಬಹುದು. ಆದಾಗ್ಯೂ ,ಬದುಕಿನ ಭರವಸೆಯನ್ನಂತೂ ಕುಂದಿಸಿಲ್ಲ. ಅಂತೆಯೇ ಅವಿಭಜಿತ ಬಳ್ಳಾರಿ ಜಿಲ್ಲೆಯಾದ್ಯಂತ ಜೀವಪರ ಕಾಳಜಿಯನ್ನಿಟ್ಟುಕೊಂಡು ಅನ್ಯಾಯ, ಅಕ್ರಮ, ಭ್ರಷ್ಟಾಚಾರಗಳ ವಿರುದ್ಧ ಗುಡುಗಿದ ಅನೇಕ ಕವಿಗಳ ಕಾವ್ಯಾವಲೋಕನದ ಸಾರವೇ ‘ಬಿಸಲ ಮಳೆ’.
ಬಿಸಿಲ ಝಳದ ನಂತರ ಬರುವ ಮಳೆ, ಬದುಕಿಗೆ ಭರವಸೆಯನ್ನು ನೀಡುವಂತೆ ಇಲ್ಲಿನ ಕಾವ್ಯದ ಅವಲೋಕನವೂ ಸಹ ಸಾಹಿತ್ಯದ ಬದುಕಿಗೆ ಭರವಸೆಯನ್ನು ನೀಡಿದೆ. ಬಳ್ಳಾರಿ ಜಿಲ್ಲೆಯ ಪ್ರಮುಖ ಪಟ್ಟಣ ಹಾಗೂ ನಗರಗಳಿಂದ ಮಾತ್ರವಲ್ಲದೇ ಹಳ್ಳಿ-ಹಳ್ಳಿಗಳಲ್ಲೂ ಕಾವ್ಯದ ಕಿಚ್ಚು ಹಚ್ಚಿಕೊಂಡ ಅನೇಕ ಕವಿಗಳು ತಮ್ಮ ಪ್ರಖರವಾದ ಪದಗಳ ಬಾಣದಿಂದ ನಮ್ಮನ್ನಾಳುವವರನ್ನು ತಿವಿದು ಎಚ್ಚರಿಸಿರುವುದನ್ನು ಇಲ್ಲಿನ ಕವಿಗಳ ಕಾವ್ಯತ್ವ ತಿಳಿಸುತ್ತದೆ.
ಇಲ್ಲಿ ಹದಿನಾರು ಕವಿಗಳ ಕಾವ್ಯದ ಅವಲೋಕನವಿದೆ. ಹದಿನಾರು ಕವಿಗಳ ಬರಹಗಳು, ಚಳುವಳಿಗಳು, ಅವರ ಜೀವಪರವಾದ ಕಾಳಜಿಗಳು, ಬದುಕಿಗೆ ಬೇಕಾದ ಬದ್ಧತೆಗಳು, ಸೃಜನಶೀಲ ಸಾಹಿತಿಕ ಚಟುವಟಿಕೆಗಳು, ಹೋರಾಟಗಳು, ಅವರು ಎದುರಿಸಿದ ಸವಾಲುಗಳು. ದಮನಿತರ ಬದುಕಿಗೆ ನೀಡಿದ ಬೆಂಬಲಗಳು, ಬದುಕನ್ನು ಉನ್ನತಿಗೊಳಿಸಲು ನೀಡಿದ ಸಾಂಸ್ಕೃತಿಕ ಚೈತನ್ಯಗಳು, ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಅವರ ಬರಹಗಳನ್ನು ಭಿತ್ತಿಚಿತ್ರಗಳಾಗಿ ಲೇಖಕ ಶ್ರೀನಿವಾಸರು ಪ್ರಸ್ತುಪಡಿಸಿದ್ದಾರೆ.
ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ಜಾತೀಕರಣ, ಧಾರ್ಮಿಕರಣ. ಹೀಗೆ ಹತ್ತು ಹಲವು ಕರಣಗಳನ್ನು ತಮ್ಮ ಕಾವ್ಯ, ಕಥೆ, ಕಾದಂಬರಿಗಳ ಮೂಲಕ ಖಂಡಿಸುತ್ತಾ, ಜನಪರ ಆಶಯಗಳನ್ನು ಬೆಂಬಲಿಸಲು ಪ್ರಯತ್ನಿಸಿದ ಎಸ್.ಎಸ್.ಹಿರೇಮರ್, ಪರಶುರಾಮ ಕಲಾಲ, ಶೇಷಗಿರಿ ಹವಾಲ್ದಾರ್, ಪಿ.ಆರ್.ವೆಂಕಟೇಶ್, ಪೀರಬಾಷಾ, ಹುಲಿಕಟ್ಟಿ ಚನ್ನಬಸಪ್ಪ, ಮೇಟಿ ಕೊಟ್ರಪ್ಪ, ಹುರಕಡ್ಲಿ ಶಿವಕುಮಾರ, ಡಿ.ಬಿ.ಬಡಿಗೇರ, ಪಂಚಪ್ಪ ಮೇಷ್ಟ್ರು, ಚೆನ್ನಬಸವಣ್ಣ, ಕಾಟ್ರಹಳ್ಳಿ ಮಹಾಬಲೇಶ್ವರ, ಡಿ. ರಾಮ ನವಲಿ, ಇಸ್ಮಾಯಿಲ್ ಎಲಿಗಾರ್ ಮತ್ತು ಎಲ್. ಖಾದರ್ ಬಾಷಾ ಇವರುಗಳ ಕಾವ್ಯದ ಧ್ವನಿಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.
ಲೇಖಕರು ತಮ್ಮ ನುಡಿಯಲ್ಲಿ ತಿಳಿಸಿದಂತೆ ಇದೊಂದು ಬಳ್ಳಾರಿ ಜಿಲ್ಲೆ ಆಯ್ದ ಕವಿಗಳ ಕಾವ್ಯಾವಲೋಕನ. ಆದರೆ ಇಲ್ಲಿರುವ ಎಲ್ಲರೂ ಎಡಪಂಥೀಯ ಚಳವಳಿಗಳಲ್ಲಿ ತೊಡಗಿಸಿಕೊಂಡವರು ಎಂಬುದು ಗಮನಾರ್ಹ. ಹಾಗಾದರೆ ಬಳ್ಳಾರಿ ಜಿಲ್ಲೆಯಲ್ಲಿ ಇಷ್ಟೇ ಜನ ಮಾತ್ರ ಎಡ ಪಂಥೀಯ ಕವಿಗಳು ಇರುವರೇ? ಅ ನುಮಾನ ಕಾಡದಿರದು. ಆದರೆ ಲೇಖಕರು ತಮ್ಮಷ್ಟಕ್ಕೆ ತಾವೇ ಇಲ್ಲಿನ ಬರಹಕ್ಕೊಂದು ಮಿತಿಯನ್ನು ಹಾಕಿಕೊಂಡಿದ್ದಾರೆ. ಇದನ್ನು ಯಾಕೆ ಮೊಟಕುಗೊಳಿಸಿದ್ದಾರೋ ತಿಳಿಯದು. ಇನ್ನೂ ಸಾಕಷ್ಟು ಹೊಸ ತಲೆಮಾರಿನ ಕವಿಗಳೂ ಇಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಕಾವ್ಯತ್ವವನ್ನೂ ಇಲ್ಲಿ ಗಮನಿಸಬಹುದಾಗಿತ್ತು. ಬಹುಶಃ ಇದರ ಎರಡನೇ ಭಾಗದಲ್ಲಿ ಅದು ಸಾಕಾರಗೊಳ್ಳಬಹುದು.
ಇದು ಅಖಂಡ ಬಳ್ಳಾರಿಯ ಹದಿನಾರು ಕವಿಗಳ ಕಾವ್ಯದ ಇಣುಕು ನೋಟವಾದರೂ ಇಡೀ ಅಖಂಡ ಬಳ್ಳಾರಿಯ ಕವಿಗಳ ಕಾವ್ಯದ ಘಮಲನ್ನು, ತುಮುಲವನ್ನು, ತುಡಿತ-ಮಿಡಿತವನ್ನು ಹೊಂದಿದೆ. ಕಾವ್ಯಕ್ಕೆ ಬೇಕಾಗಿರುವ ಭಾಷೆ, ಶೈಲಿ, ತಂತ್ರಗಳನ್ನು ಸಾಮಾಜಿಕ ಬದುಕಿನೊಂದಿಗೆ ಹೇಗೆ ತಳುಕುಹಾಕಬೇಕೆನ್ನುವ ಭವಿಷ್ಯದ ಕವಿಗಳಿಗೆ ಇದೊಂದು ಸಣ್ಣ ಕೈದೀವಿಗೆಯಾಗಲಿದೆ. ಚರಿತ್ರೆಯ ಸಮಾಜಮುಖಿ ದಿನಗಳನ್ನು ‘ಬಿಸಿಲ ಮಳೆ’ಯಲ್ಲಿ ದಾಖಲಿಸುವ ಪ್ರಯತ್ನದಲ್ಲಿ ಬಿ. ಶ್ರೀನಿವಾಸ ಅವರು ಯಶಸ್ವಿಯಾಗಿದ್ದಾರೆ. ಬಿಸಿಲ ಝಳವನ್ನು ತಂಪಾಸುವ ಮಳೆ ಎಲ್ಲಡೆ ಸುರಿದು ಸಾಹಿತ್ಯದ ಬೆಳೆ ಹುಲುಸಾಗಲಿ ಎಂಬುದು ನಮ್ಮ ಆಶಯ.
ಪುಸ್ತಕಕ್ಕಾಗಿ 99163322730 ಈ ಸಂಖ್ಯೆಗೆ ಸಂಪರ್ಕಿಸಿ
ಆರ್.ಬಿ.ಗುರುಬಸವರಾಜ. ಹೊಳಗುಂದಿ