ದಾವಣಗೆರೆ: ‘ಶಾಲೆಯ ಸುತ್ತಲೂ ಕಪ್ಪು ಹೋಗೆ ಸೂಸುವ ವಿಷಪೂರಿತ ಮಂಡಕ್ಕಿ ಭಟ್ಟಿಗಳು, ಕಸ, ಧೂಳುನಿಂದ ಕೂಡಿದ ಗಾಳಿ ವಾತಾವರಣ, ಇಂತಹ ಉಸಿರು ಕಟ್ಟುವ ವಾತಾವರಣದಲ್ಲಿ ಮಕ್ಕಳ ವಿದ್ಯಾಭ್ಯಾಸ.’!
ಇದು, ದಾವಣಗೆರೆ ಉತ್ತರ ವಲಯದ ಮಂಡಕ್ಕಿ ಭಟ್ಟಿ ಲೇಔಟ್‌ನಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಶಾಲೆಯನ್ನು ನೋಡಿದರೆ ಕಾಡು ಪ್ರಾಣಿಗಳು ವಾಸ ಮಾಡಲು ಇಚ್ಛಿಸುವುದಿಲ್ಲ. ಅಂತಹ ಕೆಟ್ಟ ಜಿಡ್ಡು ಹಿಡಿದು ನಾರುತ್ತಿರುವ ಶಾಲೆ.
ದುರ್ವಾಸನೆಯಲ್ಲೇ ಮಕ್ಕಳಿಗೆ ಪಾಠ:
1ನೇ ತರಗತಿಯಿಂದ ೫ನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಅಲ್ಪಸಂಖ್ಯಾತರ ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರ ೬೦ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ದುರ್ವಾಸನೆ ಬೀರುವ ಈ ವಾತಾವರಣದಲ್ಲೇ ಪಾಠ, ಪ್ರವಚನ ಕಲಿಯುವ ದುಸ್ಥಿತಿ ಇದೆ.
ದುರ್ವಾಸನೆ ಬೀರುವ ಚರಂಡಿಗಳು:
ಪ್ರತಿವರ್ಷ ಮಳೆ ಬಂದಾಗ ಆಟದ ಮೈದಾನದಲ್ಲಿ ಹೊಂಡಗಳ ರೂಪದಲ್ಲಿ ನಿಂತಿರುವ ನೀರು, ಚರಂಡಿಗೆ ಹರಿಯದೆ ನಿಂತಲ್ಲಿ ನಿಂತು ಪಾಚಿಗಟ್ಟಿ ದುರ್ವಾಸನೆಯಿಂದ ಬೀರುತ್ತದೆ. ಮಂಡಕ್ಕಿ ಭಟ್ಟಿಯ ಕಸದಿಂದ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಈ ಅವ್ಯವಸ್ಥೆ ನಿರ್ಮಾಣವಾಗಿದೆ.

ಆರೋಗ್ಯದ ಮೇಲೆ ದುಷ್ಪರಿಣಾಮ:
ಕಲುಷಿತ ವಾತಾವರಣದಲ್ಲಿ ಮಕ್ಕಳಿಗೆ ಜ್ವರ, ಶೀತ, ಕೆಮ್ಮು, ನೆಗಡಿ ಅಸ್ತಮಾದಂತಹ ಕಾಯಿಲೆಗಳು ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಕಾಣಿಸುತ್ತಿವೆ. ಮಾತ್ರವಲ್ಲ, ಶಾಲೆಯಲ್ಲಿಯೇ ಅಂಗನವಾಡಿ ನಡೆಯುತ್ತಿದ್ದು ಅಂಗನವಾಡಿಯಲ್ಲಿ ಚಿಕ್ಕ ಮಕ್ಕಳು ಬಾಣಂತಿಯರು, ಗರ್ಭಿಣಿಯರು ಹೊಲಸು ನಾರುವ ವಾತಾವರಣದಲ್ಲಿ ಬಂದು ಆಹಾರ ಪದಾರ್ಥಗಳನ್ನು ಸೇವಿಸುವಂತಹ ಪರಿಸ್ಥಿತಿ ಉಂಟಾಗಿದೆ.
ಸಾಂಕ್ರಾಮಿಕ ರೋಗಗಳ ಭೀತಿ:
ಮೊದಲೇ ಕಲುಷಿತ ವಾತಾವರಣ ಜೊತೆಗೆ ಶಾಲೆಯ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಕಟ್ಟಿರುವ ದನ, ಕರುಗಳ ಗಂಜಲ ಹಾಗೂ ಸಗಣಿಯ ವಾಸನೆ, ಸೊಳ್ಳೆಗಳ ಹಾವಳಿಯಿಂದ ಡೆಂಘಿ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇಲಿನ ನಿವಾಸಿಗಳು, ಶಾಲೆಯ ಮಕ್ಕಳು, ಶಿಕ್ಷಕರನ್ನು ಕಾಡುತ್ತಿದೆ.
ನಿರ್ವಹಣೆ ಇಲ್ಲದ ಶೌಚಾಲಯ:
ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಕ್ಕಳಿಗೆ ಸುಸಜ್ಜಿತ ಶೌಚಾಲಯ ಇಲ್ಲ. ಇರುವ ಒಂದು ಶೌಚಾಲಯವಿದ್ದರೂ ಸರಿಯಾದ ನಿರ್ವಹಣೆ ಇಲ್ಲ. ಜೊತೆಗೆ ಶಾಲೆಯ ಕಾಂಪೌಂಡ್ ಪಕ್ಕದಲ್ಲೇ ಇರುವ ವಿದ್ಯುತ್ ಪರಿವರ್ತಕದಿಂದ ಪ್ರಾಣಾಪಾಯ ಹೆಚ್ಚಿದೆ. ಇಷ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಇಲ್ಲಿನ ನಿವಾಸಿಗಳನ್ನು ಕೆರಳಿಸಿದೆ.
ಜಿಲ್ಲಾಡಳಿತ ಇತ್ತ ಗಮನ ಹರಿಸಲಿ:
ಪಠ್ಯ ಚಟುವಟಿಕೆ ಕೈಗೊಳ್ಳಲು ಸೂಕ್ತ ಕೊಠಡಿಗಳನ್ನು ನೀಡಿ ಆವರಣವನ್ನು ಸ್ವಚ್ಛಗೊಳಿಸಿ ಶಾಲೆಯ ಸುತ್ತಲಿನ ವಾತಾವರಣವನ್ನು ಪರಿಶುದ್ಧವಾಗಿಟ್ಟುಕೊಳ್ಳಲು ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಮಹಾನಗರಪಾಲಿಕೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಯೋಗ ಇತ್ತ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಆಗ್ರಹಿಸಿದೆ.
ಹೊರ ರಾಜ್ಯಗಳಲ್ಲಿ ಶಾಲಾ ಕೊಠಡಿಗಳು ಕುಸಿದು ಬಿದ್ದು ಮಕ್ಕಳು ಸಾವು ಕಾಣುವ ದುರ್ಘಟನೆಗಳು ನಡೆಯುತ್ತಿವೆ. ನಮ್ಮ ಜಿಲ್ಲೆಯಲ್ಲಿ ಸಂಭವಿಸುವ ಮುನ್ನ ಮಕ್ಕಳ ಜೀವ ರಕ್ಷಣೆ ಹಿತದೃಷ್ಟಿಯಿಂದ ಹಾಗೂ ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಆತಂಕವಿಲ್ಲದೆ ನಿರಾಳವಾಗಿ ಸರ್ಕಾರಿ ಶಾಲೆಗೆ ಕಳುಹಿಸಲು ವ್ಯವಸ್ಥೆ ನಿರ್ಮಾಣ ಮಾಡುವ ಅಗತ್ಯತೆ ಇದೆ.-ಎಂ.ಲಿಂಗರಾಜು, ಗಾಂಧಿನಗರ.ಕರ್ನಾಟಕ ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ