ಬ್ಯಾಂಕ್ ನೌಕರರ ದಶಕಗಳ ಬೇಡಿಕೆಯಾದ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರಕಾರ, ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಹಣಕಾಸು ಸೇವೆಗಳ ಇಲಾಖೆಯನ್ನು ಒತ್ತಾಯಿಸಿ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯ ಕರೆಯ ಮೇರೆಗೆ ಜನವರಿ 27 ಮಂಗಳವಾರ ಅಖಿಲ ಭಾರತ ಬ್ಯಾಂಕ್ ಮುಷ್ಕರ ನಡೆಯಲಿದೆ ಎಂದು ಯುಎಫ್‌ಬಿಯು ದಾವಣಗೆರೆ ಜಿಲ್ಲಾ ಸಂಚಾಲಕ ಮತ್ತು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ.
ಬ್ಯಾಂಕ್ ಉದ್ಯೋಗಿಗಳ 5 ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೆ ಬರಬೇಕು ಎನ್ನುವ ಬೇಡಿಕೆಯ ಕುರಿತಾಗಿ ಈಗಾಗಲೇ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಕಾರ್ಮಿಕ ಸಂಘಗಳ ನಡುವೆ ದಿನಾಂಕ 08.03.2024 ರಂದು ಒಪ್ಪಂದವಾಗಿ ಅದರ ಅನುಮೋದನೆಗಾಗಿ ಕೇಂದ್ರ ಹಣಕಾಸು ಸೇವೆಗಳ ಇಲಾಖೆಗೆ ಕಳುಹಿಸಲಾಗಿತ್ತು. ಆದರೆ ಒಪ್ಪಂದವಾಗಿ 2 ವರ್ಷಗಳು ಕಳೆದರೂ, ಈ ಕುರಿತಾಗಿ ಹತ್ತಾರು ಸಭೆಗಳು ನಡೆದರೂ, ಬೇಡಿಕೆ ಈಡೇರಿಸಬೇಕು ಎಂದು ಹಲವಾರು ಪ್ರತಿಭಟನೆಗಳು ನಡೆದಿದ್ದರೂ ಸಹ ಅನಗತ್ಯವಾಗಿ ವಿಳಂಬ ಧೋರಣೆಯನ್ನು ಅನುಸರಿಸಲಾಗುತ್ತಿದೆ.
ಬೇಡಿಕೆಯ ಈಡೇರಿಕೆಗಾಗಿ ಈ ಹಿಂದೆ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ಕೊಟ್ಟಂತಹ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಉನ್ನತಾಧಿಕಾರಿಗಳು ಅತೀ ಶೀಘ್ರವಾಗಿ ಬ್ಯಾಂಕ್ ಉದ್ಯೋಗಿಗಳ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಅದಾಗಿ ಒಂದು ವರ್ಷವೇ ಕಳೆದಿದ್ದರೂ ಬೇಡಿಕೆ ಇನ್ನೂ ಈಡೇರಿಲ್ಲ. ಈಗ ಬ್ಯಾಂಕ್ ಉದ್ಯೋಗಿಗಳ ಸಹನೆಯ ಕಟ್ಟೆ ಒಡೆದಿದೆ.
Read also : ದಾವಣಗೆರೆ:ಡಾ.ಸುರೇಶ್ ಹನಗವಾಡಿ ಅವರಿಗೆ’ಪದ್ಮಶ್ರೀ’,
ಮುಷ್ಕರದ ಹಾದಿ ಅನಿವಾರ್ಯವಾಗಿದೆ. ಪ್ರಸ್ತುತ ಬ್ಯಾಂಕ್ ಉದ್ಯೋಗಿಗಳು ಅತೀ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ವ್ಯವಹಾರಕ್ಕೆ ತಕ್ಕನಾಗಿ ಉದ್ಯೋಗಿಗಳ ನೇಮಕಾತಿ ಆಗುತ್ತಿಲ್ಲ. ವಾರದ ದಿನಗಳಲ್ಲಿ ನೌಕರರು ರಾತ್ರಿ ಹತ್ತಾದರೂ ಮನೆಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಬಂದರೆ ನೌಕರರ ಕಾರ್ಯಕ್ಷಮತೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಇದಲ್ಲದೇ ಕೇಂದ್ರ ಸರಕಾರದ ಅಧೀನದಲ್ಲಿ ಇರುವ ಹಲವಾರು ಇಲಾಖೆಗಳು, ಜೀವ ವಿಮೆ, ಸಾಮಾನ್ಯ ವಿಮೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಬಿ, ನಬಾರ್ಡ್ ಮೊದಲಾದ ಇಲಾಖೆಗಳು ವಾರಕ್ಕೆ ಐದು ದಿನ ಮಾತ್ರವೇ ಕೆಲಸ ಮಾಡುತ್ತಿವೆ.
ಜಾಗತಿಕ ಮಟ್ಟದಲ್ಲೂ ಬ್ಯಾಂಕುಗಳು 5 ದಿನ ಕೆಲಸ ಮಾಡುವ ವ್ಯವಸ್ಥೆ ಇದೆ. ಹೀಗಿದ್ದರೂ ಸಹ ಕೇಂದ್ರ ಹಣಕಾಸು ಇಲಾಖೆ ಅನಗತ್ಯವಾಗಿ ಕಾಲಹರಣ ಮಾಡಿ ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಲ್ಲಿ ಸೋತಿದೆ. ಆದ್ದರಿಂದ ಅನಿವಾರ್ಯವಾಗಿ ಜನವರಿ 27 ರ ಮಂಗಳವಾರ ದೇಶದಾದ್ಯಂತ ಬ್ಯಾಂಕ್ ಮುಷ್ಕರ ನಡೆಯುತ್ತಿದೆ. ಸುಮಾರು 8 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡು, ಬೀದಿಗಿಳಿದು ಸರಕಾರದ ವಿಳಂಬ ಧೋರಣೆಯ ವಿರುದ್ಧ ಪ್ರತಿಭಟಿಸಲಿದ್ದಾರೆ.
ಜನವರಿ 24, 25 ಮತ್ತು 26 ರಂದು ಬ್ಯಾಂಕ್ ರಜೆ ಇರುವುದರಿಂದ 27 ರ ಬ್ಯಾಂಕ್ ಮುಷ್ಕರವು ಖಂಡಿತವಾಗಿ ಸಾರ್ವಜನಿಕರಿಗೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದರೆ ಈ ಸಮಸ್ಯೆಗೆ ಕೇಂದ್ರ ಸರಕಾರ, ಕೇಂದ್ರ ಹಣಕಾಸು ಸಚಿವಾಲಯ, ಕೇಂದ್ರ ಹಣಕಾಸು ಸೇವೆಗಳ ಇಲಾಖೆಯೇ ನೇರವಾಗಿ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಬ್ಯಾಂಕ್ ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿ ಹೇಳಿದರು.
