ದಾವಣಗೆರೆ: ಯುಜಿಸಿ – ನೆಟ್ ಪರೀಕ್ಷೆ ಅಕ್ರಮಗಳ ಸಮಗ್ರ ತನಿಖೆಗೆ ಒತ್ತಾಯಿಸಿ ದೆಹಲಿಯಲ್ಲಿ ಜೂನ್ 27ರಂದು ಸಂಸತ್ ಗೆ ಮುತ್ತಿಗೆ ಹಾಕುವ ಕಾರ್ಯಕ್ರಮವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತೆಲಂಗಾಣದಿಂದ ಪಾಲ್ಗೊಳ್ಳಬೇಕು ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲಿದ್ ಆಹ್ಮದ್ ಕರೆ ನೀಡಿದರು.
ಹೈದರಾಬಾದ್ ನ ಗಾಂಧಿಭವನದಲ್ಲಿ ನಡೆದ ತೆಲಂಗಾಣ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದು, ತೆಲಂಗಾಣ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಹಾಗೂ ಅಕ್ರಮದ ವಿರುದ್ಧ ಹೋರಾಡೋಣ ಎಂದು ಹೇಳಿದರು.
ಪರೀಕ್ಷೆಗೆ ಒಂದು ದಿನ ಮುಂಚೆ ನೀಟ್ ಪಿಜಿ ರದ್ದುಪಡಿಸಲಾಗಿದೆ. ಇದರ ಹೊಣೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರದ್ದಾಗಿದೆ. ಕೂಡಲೇ ದೇಶದ ವಿದ್ಯಾರ್ಥಿಗಳು ಹಾಗೂ ಪೋಷಕರ ಕ್ಷಮೆಯನ್ನು ಪ್ರಧಾನಿ ಮೋದಿ ಕೇಳಬೇಕು. ಈ ಪ್ರಕರಣ ಕುರಿತಂತೆ ಪಾರದರ್ಶಕ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇಂಥ ಪ್ರಕರಣ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ದೇಶದ ಶಿಕ್ಷಣ ಕ್ಷೇತ್ರವೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಳಾಗಿದೆ ಎಂಬುದಕ್ಕೆ ನೀಟ್ – ನೆಟ್ ಪರೀಕ್ಷೆಯ ಅಕ್ರಮವೇ ಉತ್ತಮ ನಿದರ್ಶನ. ಈ ಪ್ರಕರಣ ನಡೆದಿರುವುದು ದುರದೃಷ್ಟಕರ. ಭವಿಷ್ಯದ ಕನಸು ಹೊತ್ತು ಹಗಲು ರಾತ್ರಿ ಓದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರದ ಇಂಥ ನಿರ್ಲಕ್ಷ್ಯದ ಪರಮಾವಧಿಯಿಂದ ಸಮಸ್ಯೆ ಎದುರಿಸುವಂತಾಗಿದೆ. ತಪ್ಪಿತಸ್ಥರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು. ಶಿಕ್ಷೆಯಾಗಲೇಬೇಕು. ಅಲ್ಲಿಯವರೆಗೆ ಹೋರಾಟ ನಡೆಸೋಣ ಎಂದು ತಿಳಿಸಿದರು.
ನೀಟ್ ಪರೀಕ್ಷಾ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ವಹಿಸಲಾಗಿದೆ. ಇದು ಕೇವಲ ಕಣ್ಣೊರೆಸುವ ತಂತ್ರ ಆಗಬಾರದು. ಸಿಬಿಐಗೆ ಸ್ವತಂತ್ರವಾಗಿ ತನಿಖೆ ನಡೆಸಲು ಅವಕಾಶ ನೀಡಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಸಿಬಿಐ ತನಿಖೆಯಲ್ಲಿ ಕೇಂದ್ರ ಸರ್ಕಾರವು ಹಸ್ತಕ್ಷೇಪ ಮಾಡಬಾರದು. ಮೇ 5ರಂದು ವಿದೇಶದ 14 ನಗರಗಳು ಸೇರಿದಂತೆ ದೇಶದ 571 ನಗರಗಳ 4,750 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಾಗಿತ್ತು. ಸುಮಾರು 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕೆಲ ರಾಜ್ಯಗಳಲ್ಲಿ ಪರೀಕ್ಷಾ ಅಕ್ರಮಗಳು ನಡೆದಿರುವ ಕುರಿತಂತೆ ದೂರುಗಳು ಬಂದಿದ್ದು, ಈ ವಿಚಾರವನ್ನು ಶಿಕ್ಷಣ ಸಚಿವಾಲಕ್ಕೆ ಬಂದಿರುವ ದೂರಿನಲ್ಲಿ ಆರೋಪಿಸಲಾಗಿದೆ. ಈ ವಿಚಾರ ಸಂಬಂಧ ಸಮಗ್ರ ತನಿಖೆ ಆಗಿ, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುವವರೆಗೂ ಹೋರಾಟ ನಿಲ್ಲಿಸುವುದು ಬೇಡ ಎಂದು ಖಾಲಿದ್ ಅಹ್ಮದ್ ಅವರು ಸಲಹೆ ನೀಡಿದರು.
ಎಂಎಲ್ ಸಿ ಮಹೇಶ್ ಕುಮಾರ್ ಗೌಡ್, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಶಿವಸೇನ ರೆಡ್ಡಿ, ಸುರಭಿ ದ್ವಿದೇವಿ ಮತ್ತಿತರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.