ಕಥೋಲಿಕ ಕ್ರೈಸ್ತರು ಪ್ರತಿ ವರ್ಷ ನವೆಂಬರ್ 02 ರಂದು “ಸಕಲ ಮೃತರ ಸ್ಮರಣೆಯ ದಿನ” ಅಂದರೆ “ಆಲ್ ಸೋಲ್ಸ್ ಡೇ” (ALL Souls Day) ಅನ್ನುಆಚರಿಸುತ್ತಾರೆ.
ಈ ದಿನವು ಸ್ವರ್ಗವನ್ನು ಪ್ರವೇಶಿಸುವ ಮೊದಲು ಶುದ್ಧೀಕರಣದ ಸ್ಥಿತಿ ಅಥವಾ ’ಶುದ್ಧೀಕರಣದ ಸ್ಥಳ’ದಲ್ಲಿರುವ(Purgatory) ಎಲ್ಲಾ ನಂಬಿಗಸ್ತರಾದ ಮೃತರ ಆತ್ಮಗಳಿಗಾಗಿ ಪ್ರಾರ್ಥಿಸಲು ಮೀಸಲಾದ ದಿನವಾಗಿದೆ. ಇದು ಕ್ರೈಸ್ತರ ನಂಬಿಕೆ ಮತ್ತು ಸಂಪ್ರದಾಯದಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ.
ಈ ದಿನದ ಮಹತ್ವವೇನು : ಪ್ರಾರ್ಥನೆ ಮತ್ತು ನೆನಪು: ಈ ದಿನದ ಮುಖ್ಯ ಉದ್ದೇಶವೆಂದರೆ ಇಹಲೋಕ ತ್ಯಜಿಸಿದ ಎಲ್ಲ ಆತ್ಮಗಳಿಗಾಗಿ ಪ್ರಾರ್ಥಿ ಸುವುದು ಮತ್ತು ಅವರನ್ನು ನೆನಪಿಸಿಕೊಳ್ಳುವುದು. ಮೃತರ ಆತ್ಮಗಳಿಗೆ ಶಾಂತಿ ಸಿಗಲೆಂದು ಮತ್ತು ಅವರು ಶೀಘ್ರವಾಗಿ ದೇವರ ಸಾನ್ನಿಧ್ಯವನ್ನು ಸೇರಲೆಂದು ಪ್ರಾರ್ಥಿಸಲಾಗುತ್ತದೆ.
ಪವಿತ್ರೀಕರಣದ ನಂಬಿಕೆ: ಕಥೋಲಿಕ ಧರ್ಮವು, ಕ್ರಿಸ್ತನಲ್ಲಿ ಮರಣ ಹೊಂದಿದರೂ ಸಹ, ಸ್ವರ್ಗವನ್ನು ಪ್ರವೇಶಿಸುವ ಮೊದಲು ಪವಿತ್ರೀಕರಣದ ಅಗತ್ಯವಿರುವ ಆತ್ಮಗಳಿಗೆ “ಶುದ್ಧೀಕರಣದ ಸ್ಥಳ” (Purgatory) ಇದೆ ಎಂದು ನಂಬುತ್ತದೆ. ಈ ದಿನದಂದು ಪ್ರಾರ್ಥನೆಗಳನ್ನು ಅರ್ಪಿಸುವುದರಿಂದ ಅವರಿಗೆ ಸಹಾಯವಾಗುತ್ತದೆ ಎಂಬುದು ನಂಬಿಕೆಯಾಗಿದೆ.
Read also : ಕನ್ನಡಿಗರ ಹೆಮ್ಮೆಯ ಉಸಿರು: ಕನ್ನಡವೇ ನಮ್ಮಉಸಿರು|ಡಾ. ಡಿ. ಫ್ರಾನ್ಸಿಸ್
ಎಲ್ಲಾ ಸಂತರುಗಳ ದಿನದ ಮುಂದುವರಿಕೆ: ಈ ದಿನದ ಹಿಂದಿನ ದಿನ, ಅಂದರೆ ನವೆಂಬರ್ 1 ರಂದು “ಎಲ್ಲಾ ಸಂತರುಗಳ ದಿನ (All saints’ day)ವನ್ನು ಆಚರಿಸಲಾಗುತ್ತದೆ. ಈ ಸಂತರು ಸ್ವರ್ಗವನ್ನು ಪ್ರವೇಶಿಸಿದವರು. ಆದರೆ, ನವೆಂಬರ್ 2 ರಂದು ಇನ್ನೂ ಶುದ್ಧೀಕರಣದ ಸ್ಥಳದಲ್ಲಿರುವ ಅಥವಾ ಹೆಸರಿಲ್ಲದ ಎಲ್ಲಾ ಮೃತರನ್ನು ಸ್ಮರಿಸಲಾಗುತ್ತದೆ.
ಆಚರಣೆಯ ವಿಧಾನ :“ಸಕಲ ಮೃತರ ಸ್ಮರಣೆಯ ದಿನ”ದಂದು ಕಥೋಲಿಕ ಕ್ರೈಸ್ತರು ಈ ಕೆಳಗಿನ ಸಂಪ್ರದಾಯಗಳನ್ನು ಪಾಲಿಸುತ್ತಾರೆ:
ಪವಿತ್ರ ಬಲಿಪೂಜೆ (ಮಾಸ್): ಈ ದಿನದಂದು ಚರ್ಚುಗಳಲ್ಲಿ ಮೃತರ ಆತ್ಮಗಳಿಗಾಗಿ ವಿಶೇಷವಾದ ಪವಿತ್ರ ಬಲಿಪೂಜೆಗಳನ್ನು (Holy mass) ಅರ್ಪಿಸಲಾಗುತ್ತದೆ. ಈ ಬಲಿಪೂಜೆಗಳು ದಿನದ ಮುಖ್ಯ ಭಾಗವಾಗಿರುತ್ತವೆ.
ಗೋರಿಗಳಿಗೆ ಭೇಟಿ: ಕುಟುಂಬದವರು ತಮ್ಮ ಪ್ರೀತಿಪಾತ್ರರ ಸಮಾಧಿಗಳಿಗೆ (ಗೋರಿಗಳಿಗೆ) ಭೇಟಿ ನೀಡುತ್ತಾರೆ. ಅವರು ಸಮಾಧಿಗಳನ್ನು ಸ್ವಚ್ಛಗೊಳಿಸಿ, ಹೂವುಗಳನ್ನು ಇಟ್ಟು, ದೀಪಗಳನ್ನು ಹಚ್ಚಿ (ಮೇಣದಬತ್ತಿ) ವಿಶೇಷವಾಗಿ ಪ್ರಾರ್ಥಿಸುತ್ತಾರೆ.
“ರೆಕ್ವಿಯಮ್” ಪ್ರಾರ್ಥನೆ: ಮೃತರ ಆತ್ಮಗಳಿಗೆ ಶಾಂತಿ ಕೋರುವ ವಿಶೇಷ ಪ್ರಾರ್ಥನೆಗಳನ್ನು (ಉದಾಹರಣೆಗೆ: ರೆಕ್ವಿಯಮ್ Requiem) ಹೇಳಲಾಗುತ್ತದೆ. ದಾನ ಮತ್ತು ಉಪವಾಸ: ಕೆಲವರು ಮೃತರ ಉದ್ದೇಶಗಳಿಗಾಗಿ ಉಪವಾಸ ಮತ್ತು ದಾನ ಕಾರ್ಯಗಳನ್ನು ಸಹ ಮಾಡುತ್ತಾರೆ.
ಐತಿಹಾಸಿಕ ಹಿನ್ನೆಲೆ : ಈ ಆಚರಣೆಯು 10 ನೇ ಶತಮಾನದಲ್ಲಿ ಫ್ರಾನ್ಸ್‌ನ ಕ್ಲುನಿ ಮಠದ ಸಂತ ಓಡಿಲೋ ಅವರಿಂದ ಆರಂಭವಾಯಿತು ಎಂದು ಹೇಳಲಾಗುತ್ತದೆ. ಅವರು ಮಠದಲ್ಲಿರುವ ಎಲ್ಲ ನಂಬಿಗಸ್ತರಾದ ಮೃತರ ಸ್ಮರಣೆಗಾಗಿ ನವೆಂಬರ್ 2 ಅನ್ನು ಮೀಸಲಿಟ್ಟರು. ಕ್ರಮೇಣ ಈ ಸಂಪ್ರದಾಯವು ರೋಮನ್ ಕಥೋಲಿಕ ಚರ್ಚ್‌ನಾದ್ಯಂತ ಹರಡಿತು ಮತ್ತು ಸಾರ್ವತ್ರಿಕವಾಗಿ ಆಚರಣೆಗೆ ಬಂದಿತು.
ಸಕಲ ಮೃತರ ಸ್ಮರಣೆಯ ದಿನ ಕೇವಲ ಶೋಕದ ದಿನವಲ್ಲ, ಬದಲಿಗೆ ಕ್ರೈಸ್ತರ “ಪವಿತ್ರರ ಸಹಭಾಗಿತ್ವ” ಎಂಬ ಪ್ರಮುಖ ನಂಬಿಕೆಯನ್ನು ಪ್ರತಿ ಬಿಂಬಿಸುತ್ತದೆ.
ಈ ನಂಬಿಕೆಯ ಪ್ರಕಾರ, ಭೂಮಿಯ ಮೇಲಿರುವವರು, ಶುದ್ಧೀಕರಣದ ಸ್ಥಳದಲ್ಲಿರುವವರು ಮತ್ತು ಸ್ವರ್ಗದಲ್ಲಿರುವವರು ಕ್ರಿಸ್ತನಲ್ಲಿ ಒಂದು ಕುಟುಂಬ ವಾಗಿ ಸಂಪರ್ಕದಲ್ಲಿದ್ದಾರೆ. ಈ ದಿನವು ಬದುಕಿರುವವರು ಮತ್ತು ಮೃತರ ನಡುವಿನ ಈ ಆಧ್ಯಾತ್ಮಿಕ ಬಂಧವನ್ನು ಬಲಪಡಿಸುತ್ತದೆ.
ಲೇಖನ : ಡಿ.ಫ್ರಾನ್ಸಿಸ್ ಕ್ಸೇವಿಯರ್, ಹರಿಹರ
