ದಾವಣಗೆರೆ ನ.16 (Davanagere) : ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ-ಕದರನಹಳ್ಳಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪವೆಸಗಿದ ಆರೋಪದ ಮೇಲೆ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಮೊಹಿತೆ ಹಾಗೂ ಇದಕ್ಕೆ ಸಹಕರಿಸಿದ ದೈಹಿಕ ಶಿಕ್ಷಕ ಮಂಜುನಾಥ ಇವರನ್ನು ಅಮಾನತು ಮಾಡಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಆದೇಶಿಸಿದ್ದಾರೆ.
ಶಾಲಾ ಮಕ್ಕಳಿಗೆ ಸರ್ಕಾರ ಹಾಗೂ ಅಜೀಂ ಪ್ರೇಮ್‍ಜಿ ಫೌಂಡೇಷನ್ ವತಿಯಿಂದ ವಾರದ ಎಲ್ಲಾ ದಿನಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಲೆಂದು ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ ಮಾಡಲಾಗುತ್ತದೆ. ವಿತರಣೆ ಮಾಡಿದ ಬಗ್ಗೆ ಆಯಾ ದಿನದಂದು ಎಸ್‍ಎಟಿಎಸ್ ತಂತ್ರಾಂಶದಲ್ಲಿ ದಾಖಲು ಮಾಡಲಾಗುತ್ತದೆ.
ನವೆಂಬರ್ 13 ರಂದು ಶಾಲೆಯಲ್ಲಿ ಭೌತಿಕವಾಗಿ 87 ಮಕ್ಕಳಿದ್ದು ಇದರಲ್ಲಿ 79 ಮೊಕ್ಕಳಿಗೆ ಮೊಟ್ಟೆ ವಿತರಣೆ ಮಾಡಿ ಉಳಿದ 8 ಮಕ್ಕಳಿಗೆ ಬಾಳೆಹಣ್ಣು ವಿತರಣೆ ಮಾಡಲಾಗಿರುತ್ತದೆ. ಆದರೆ ಎಸ್‍ಎಟಿಎಸ್ ತಂತ್ರಾಂಶದಲ್ಲಿ 104 ಮಕ್ಕಳಿರುತ್ತಾರೆ ಎಂದು ದಾಖಲು ಮಾಡಿರುವುದು ಕಂಡು ಬಂದಿದ್ದು ಮೊಟ್ಟೆ ವಿತರಣೆಯಲ್ಲಿ ಲೋಪವಾಗಿರುತ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಶಾಲೆಗೆ ಭೇಟಿ ನೀಡಿದಾಗ ಕಂಡುಬಂದಿದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಮೇರೆಗೆ ಅಮಾನತು ಮಾಡಲಾಗಿದೆ.
Read also : Davanagere | ಕಳಪೆ ಗುಣಮಟ್ಟದ ಟಾರ್ಪಲ್ ಮಾರಾಟ : ತಯಾರಿಕಾ ಸಂಸ್ಥೆಗೆ ಪರಿಹಾರ ನೀಡಲು ಆದೇಶ