ಸ್ವಾತಂತ್ರ್ಯ ದಿನಾಚರಣೆಯೆಂದರೆ, ವಸಾಹತುಶಾಹಿ ದಾಸ್ಯದಿಂದ ಬಿಡುಗಡೆ ಪಡೆಯಲು ಹೋರಾಡಿದವರನ್ನು ಸ್ಮರಿಸಿ ಅವರ ನೆನಪನ್ನು ಹೊಸ ತಲೆಮಾರಿಗೆ ದಾಟಿಸುವ ಕೆಲಸ. ಆದರೆ ಕಳೆದ ಕೆಲವು ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದ್ದಂತೆ ದುಗುಡ ಆವರಿಸುತ್ತಿದೆ. ಸ್ವಾತಂತ್ರ್ಯ ಹೋರಾಟದ ಕೇಂದ್ರದಲ್ಲಿ ಗಾಂಧಿ ಇದ್ದರು ಎಂದು ಇತಿಹಾಸದ ದಾಖಲೆಗಳಲ್ಲಿ ನಾವು ನೋಡಿದ್ದೇವೆ.
ಆದರೆ, ಮೋದಿ ಸರಕಾರ ಬಂದ ಮೇಲೆ ಯುವಕರು, ಐಟಿ ಪೈಟಿ ಮಂದಿ,ಗೃಹಸ್ಥರು, ಗೃಹಿಣಿಯರು,,ಮೇಷ್ಟ್ರುಗಳು, ಸರಕಾರಿ ನೌಕರರು ಸೇರಿ ಬಲು ದೊಡ್ಡ ಗುಂಪು ಗಾಂಧಿಯನ್ನು ಜರೆಯುತ್ತಿರುವುದು ಕಾಣಿಸುತ್ತಿದೆ. ಇದನ್ನು ತಲೆಗೆ ತುಂಬಿದವರು ಯಾರು ಅಂತ ಹುಡುಕಿಕೊಂಡು ಹೋದರೆ ಮತ್ತೆ ಭಾಜಪದ ಗರ್ಭಗುಡಿಗೆ ಹೋಗಿ ನಿಲ್ಲುತ್ತದೆ. ಗಾಂಧಿ ಅಷ್ಟೇ ಅಲ್ಲ, ನೆಹರೂ ಬಗ್ಗೆ ಇದಕ್ಕಿಂತ ದೊಡ್ಡ ಚಾರಿತ್ರ್ಯಹನನ ನಡೆಯುತ್ತಿದೆ. ಇದಕ್ಕೆ ಒಂದೆರಡು ಸ್ಟಾಂಡರ್ಡ್ ಪ್ರಸಂಗಗಳನ್ನು ಈ ಮಂದಿ ಹೇಳುತ್ತಾರೆ.
ಭಗತ್ ಸಿಂಗ್ ಸಾವನ್ನು ಗಾಂಧಿ ಯಾಕೆ ತಡೆಯಲಿಲ್ಲ, ದೇಶ ವಿಭಜನೆಯನ್ನು ಗಾಂಧಿ ಯಾಕೆ ತಡೆಯಲಿಲ್ಲ? ಇತ್ಯಾದಿ. ಇನ್ನು ನೆಹರೂ ಬಗ್ಗೆ , ಆತ ಸಾಬರಿಗೆ ಹುಟ್ಟಿದವನು ಅಂತೆಲ್ಲಾ ವಿಕೃತ ಪೋಸ್ಟುಗಳನ್ನು ನಿಷ್ಠೆಯಿಂದ ಹಂಚಿದ ನನ್ನ ನೆಂಟರಿಷ್ಟರು ನನಗೆ ಗೊತ್ತು. ನೆಹರೂಗೆ ನೇತಾಜಿ ಬಗ್ಗೆ ಅಸೂಯೆ ಇತ್ತು, ಪಟೇಲ್ ಪ್ರಧಾನಿಯಾಗದಂತೆ ತಡೆದರು ಇತ್ಯಾದಿ. ಇವರನ್ನು ಹಿಡಿದು ಚಾರಿತ್ರಿಕ ಸಂದರ್ಭವನ್ನು ವಿವರಿಸೋಣ ಅಂದರೆ ಇವರೆಲ್ಲಾ ಹಕ್ಕಿ ಹಿಕ್ಕೆ ಹಾಕಿದ ಹಾಗೆ ಈ ಸ್ಟೇಟ್ ಮೆಂಟ್ ಮಾಡಿ ಕಾಣೆಯಾಗುವವರು. ವಾಟ್ಸಪ್ ಯುನಿವರ್ಸಿಟಿ ಎಂಬ ನುಡಿ ಹುಟ್ಟಿದ್ದೇ ಹೀಗೆ. ಭಾಜಪ ಇದನ್ನು ವ್ಯವಸ್ಥಿತವಾಗಿ ಹಬ್ಬಿಸಿದೆ ಎಂಬ ಬಗ್ಗೆ ಅನುಮಾನ ಬೇಡ.
ಸುಮಾರು 1857ರಿಂದ 1947ರ ವರೆಗಿನ ಭಾರತದ ಹೋರಾಟದ ಮಥನ ಅತ್ಯಂತ ರೋಚಕ. ಅದರಲ್ಲಿ ಯಾರೆಲ್ಲರ ಪಾಲುದಾರಿಕೆ ಇದೆ ಎಂಬುದನ್ನು ಓದುವುದೇ ಒಂದು ಕೃತಕೃತ್ಯತೆಯ ಅನುಭವ. ಇವರೆಲ್ಲರಿಗೂ ನಾವು ಕೃತಜ್ಞರಾಗಿರಬೇಕು. ಕೃತಜ್ಞರಾಗಿರಬೇಕು ಎಂದೆ. ಅಚ್ಚರಿ ಎಂದರೆ ಆರೆಸ್ಸೆಸ್ಸಿನ ಒಬ್ಬನೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ನಿಮಗೆ ಸಿಗುವುದಿಲ್ಲ!!!. ಹೆಸರಿಸಿದರೆ ಹತ್ತು ಸಾವಿರ ರೂಪಾಯಿ ಬಹುಮಾನ ಕೊಡುತ್ತೇನೆ ಎಂದು ನಾನೇ ಘೋಷಿಸಿ ದಶಕವಾಯಿತು!. ಆದರೆ ಈ ಮಂದಿಯ ಪೀಳಿಗೆಯೇ ಈ ಅಪಮಾಹಿತಿ ಹರಡುವ ಚೋದ್ಯ ಇತಿಹಾಸದ ವ್ಯಂಗ್ಯವೇ ಸರಿ.
ಸಾಮಾನ್ಯ ಜನರು ಮೊದಲ ಬಾರಿಗೆ ಹೋರಾಟದ ಕಣಕ್ಕಿಯುವಂತೆ ಮಾಡಿದ್ದು ಗಾಂಧಿ. ಭಗತ್ ಸಿಂಗ್ ನಿಂದ ಹಿಡಿದು ಸುಭಾಸ್ ಬೋಸ್ ವರೆಗೆ ಗಾಂಧಿ ಎಲ್ಲರ ನಾಯಕ ಆಗಿದ್ದರು.. ದೇಶೀಯ ಆರ್ಥಿಕತೆ ಸುಧಾರಿಸದೇ ಸ್ವರಾಜ್ಯ ಅರ್ಥ ಹೀನ ಎಂದು ಖಾದಿಯನ್ನು ರೂಪಕವಾಗಿ ಮುಂದಿಟ್ಟವರು ಗಾಂಧಿ. ನೈತಿಕ ಮೌಲ್ಯಗಳನ್ನು ಹೋರಾಟದ ಬೆನ್ನೆಲುಬಾಗಿ ಇಟ್ಟವರು ಗಾಂಧಿ. ಈ ಬಗ್ಗೆ ಎಷ್ಟೂ ವಿವರ ನೀಡಬಹುದು. ಈ ಸ್ವಾತಂತ್ರ್ಯದ ಮಹಾನದಿಗೆ ಹಲವು ಸೈದ್ಧಾಂತಿಕ ನಿಲುಮೆಯ ಉಪನದಿಗಳೂ ಇದ್ದವು. ಈ ಧೀರರು ಸೈದ್ಧಾಂತಿಕ ಭಿನ್ನಮತ ಇದ್ದಾಗಲೂ ಪರಸ್ಪರ ಗೌರವ ಹೊಂದಿದ್ದರು ಎಂಬುದೇ ನಮ್ಮ ಸ್ವಾತಂತ್ರ್ಯ ಹೋರಾಟದ ಬಹುದೊಡ್ಡ ಪಾಠ.
ಕೆಲವು ಚಾರಿತ್ರಿಕ ಉದಾಹರಣೆ ನೀಡುವೆ. ಅಂಡಮಾನಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ ಅತ್ಯಂತ ಹೆಚ್ಚು ಕ್ರಾಂತಿಕಾರಿಗಳು ಬಂಗಾಲ ಮತ್ತು ಪಂಜಾಬಿನ ಮೂಲದವರು. ಇವರಲ್ಲಿ ಬಹುತೇಕ ಕ್ರಾಂತಿಕಾರಿಗಳು ಎಡಪಂಥದವರು. ಈ ಹುತಾತ್ಮರ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಅಂಡಮಾನಿನಿಂದ ಕ್ಷಮಾ ಯಾಚನೆ ಮಾಡಿ ಹೊರಗೆ ಬಂದಿದ್ದು ಮೂವರು ಮಾತ್ರಾ . ಅವರೆಲ್ಲಾ ಮಹಾರಾಷ್ಟ್ರದವರು.
ಅವರಲ್ಲಿಬ್ಬರು ಸಾವರ್ಕರ್ ಸಹೋದರರು.! ಕರಿನೀರಿನ ಶಿಕ್ಷೆ ಎಂದರೆ ಸಾವರ್ಕರ್ ಉದಾಹರಣೆ ಕೊಡುವಷ್ಟರ ಮಟ್ಟಿಗೆ ಸಾವರ್ಕರ್ ಅವರನ್ನು ಹಿಂದುತ್ವ ದೇಶಾದ್ಯಂತ ಹರಡಿ ಬಿಟ್ಟಿದೆ. ವಿವೇಕಾನಂಧರ ತಮ್ಮ ಭೂಪೇಂದ್ರನಾಥ ದತ್ತ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷ ಸ್ಥಾಪಿಸಲು ಜರ್ಮನಿಯಿಂದ ಪ್ರಯತ್ನಿಸಿದವರು. ಅವರು ಮತ್ತು ವೀರೇಂದ್ರನಾಥ ಚಟ್ಟೋಪಾಧ್ಯಾಯ (ಸರೋಜಿನಿ ನಾಯ್ಡು ಅವರ ಅಣ್ಣ) ಲೆನಿನ್ ರನ್ನೂ ಭೇಟಿ ಮಾಡಿದ್ದರು. ( ಚಟ್ಟೋಪಧ್ಯಾಯ ರಷ್ಯಾದಲ್ಲಿ ಸ್ಟಾಲಿನ್ನಿಂದ ಹತ್ಯೆಗೊಳಗಾದರು) ಭೂಪೇಂದ್ರನಾಥ ದತ್ತ ಟ್ರಾಮ್ ವರ್ಕರ್ಸ್ ಯೂನಿಯನ್ ಸ್ಥಾಪಿಸಿದವರು. ಇಂಟಕ್ ಸ್ಥಾಪಿಸಿದವರು.
ಭಗತ್ ಸಿಂಗ್ ಅನುಯಾಯಿಗಳು ಅಂಡಮಾನಿನಲ್ಲಿ ಶಿಕ್ಷೆ ಅನುಭವಿಸಿದರು. ಭಗತ್ ಸಿಂಗ್ ಸ್ವತಃ ನಾಸ್ತಿಕನೂ, ಉಗ್ರ ಎಡಪಂಥೀಯನೂ ಆಗಿದ್ದ. ಆತನ ಸಂಗಾತಿ ಈ ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ( HSRA)ಯ ಮಹಾ ದಂಡನಾಯಕನಾಗಿದ್ದ ಚಂದ್ರಶೇಖರ ಆಜಾದ್ ಕೂಡಾ ಎಡಪಂಥೀಯ.! ನಮ್ಮ ಕರ್ಮ ನೋಡಿ ! ಆರೆಸ್ಸೆಸ್ ಆತ ಜನವಾರ ಹಾಕಿಕೊಂಡು ಮೀಸೆ ತಿರುವುವ ಫೋಟೋ ಹಂಚುತ್ತಿದೆ.
ಆಜಾದ್ ಎಂದರೆ ಮೋತಿಲಾಲ್ ನೆಹರೂ ಅವರಿಗೆ ಪಂಚಪ್ರಾಣ. ಒಮ್ಮೆ ಸಂಘಟನೆಯ ಊಟ ವಸತಿ –ಪ್ರಯಾಣಕ್ಕೆಂದು ಮೋತಿಲಾಲ್ ಹಣ ಕೊಟ್ಟರೆ ಈ ಆಜಾದ್ ಆ ದುಡ್ಡಲ್ಲಿ ಎರಡು ರಿವಾಲ್ವರ್ ಖರೀದಿಸಿದ್ದರು. ಮೋತಿಲಾಲ್ ಗೆ ಗೊತ್ತಾಗಿ ಕಂಬನಿ ತುಂಬಿ ಮತ್ತೆ ಹಣ ಕೊಟ್ಟಿದ್ದರು.
ಅತ್ತ ನೆಹರೂ ಮತ್ತು ಸುಭಾಸ್ ಕಾಂಗ್ರೆಸ್ ಒಳಗೇ ಸಮಾಜವಾದಿ ಪ್ರಭಾವವನ್ನು ಮುನ್ನೆಲೆಗೆ ತರಲು ಶತಪ್ರಯತ್ನ ಮಾಡಿದ್ದರು. ಇದರಿಂದಾಚೆಗೆ ಮನುಷ್ಯ ಪ್ರೀತಿ ಇದೆಯಲ್ಲಾ.. ಕಮಲಾ ನೆಹರೂ ಚಿಕಿತ್ಸೆಗಾಗಿ ಸ್ವಿಜರ್ ಲ್ಯಾಂಡ್ ಗೆ ಹೋಗಬೇಕಾಗಿ ಬಂದಾಗ ನೆಹರೂ ಜೈಲಲ್ಲಿದ್ದರು. ಸುಭಾಸ್ ಬೋಸ್ ಕಮಲಾ ನೆಹರೂ ಅವರನ್ನು ಸ್ವಿಜರ್ ಲ್ಯಾಂಡ್ ಗೆ ಕರೆದುಕೊಂಡು ಹೋಗಿ ನೆಹರೂ ಬರುವ ವರೆಗೂ ಕಮಲಾ ಅವರನ್ನು ನೋಡಿಕೊಂಡಿದ್ದರು.
ಇವೆಲ್ಲಾ ಆ ಕಾಲದ ರಾಜಕೀಯ ಹೋರಾಟದ ನಡುವೆಯೂ ಇದ್ದ ಮನುಷ್ಯ ಸಂಬಂಧದ ಗಂಗಾ ಸೆಲೆ. ನೇತಾಜಿ ಹಿಂದೂಸ್ತಾನ್ ನ್ಯಾಷನಲ್ ಆರ್ಮಿ ಸ್ಥಾಪಿಸಿದಾಗ ತಾನು ಅಪಾರವಾಗಿ ಗೌರವಿಸುವ ನಾಲ್ಕು ನೇತಾರರ ಹೆಸರಿನಲ್ಲಿ ತುಕಡಿಗಳನ್ನು ಸ್ಥಾಪಿಸಿದರು. ಈ ತುಕಡಿಗಳ ಹೆಸರು ಗಾಂಧಿ, ನೆಹರೂ, ಆಜಾದ್( ಮೌಲಾನಾ ಅಬುಲ್ ಕಲಾಮ್ ಆಜಾದ್) ಮತ್ತು ಝಾನ್ಸಿ ರಾಣಿ (ಮಹಿಳಾ ತುಕಡಿ) ಗಾಂಧಿಯನ್ನು ರಾಷ್ಟ್ರಪಿತ ಎಂದು ಮೊದಲು ಘೋಷಿಸಿದ್ದು ನೇತಾಜಿ. ಜನಮನಗಣವನ್ನು ರಾಷ್ಟ್ರಗೀತೆಯೆಂದು ಘೋಷಿಸಿದ್ದು ನೇತಾಜಿ.
ಈಗ ಠಳಾಯಿಸುತ್ತಿರುವ ಹಿಂದುತ್ವದ ಮೂಲ ಸಂಘಟನೆಯನ್ನು ಅದರ ಕೋಮು ವಿಕೃತಿಯ ಸಿದ್ಧಾಂತಕ್ಕಾಗಿ ನೇತಾಜಿ ದೂರವಿಟ್ಟಿದ್ದರು. ಐ. ಎನ್. ಎ.ಯಲ್ಲಿದ್ದ ಒಬ್ಬನೇ ಒಬ್ಬ ಕ್ರಾಂತಿಕಾರಿ ಹಿಂದೂ ಸಂಘಟನೆಗಳನ್ನು ಸೇರಲಿಲ್ಲ ಎಂಬುದನ್ನು ಗಮನಿಸಬೇಕು. ನೇತಾಜಿ ಸ್ಥಾಪಿಸಿದ ಫಾರ್ವರ್ಡ್ ಬ್ಲಾಕ್ ಎಡ ಮೈತ್ರಿಯ ಭಾಗವಾಗಿಯೇ ಇತ್ತು. ಅಷ್ಟೇಕೆ ನೇತಾಜಿ ಜೊತೆ ಇದ್ದ ಕ್ಯಾ. ಲಕ್ಷ್ಮಿ ಸೆಹಗಲ್ ವಾಜಪೇಯಿ ಸರಕಾರ ಇದ್ದಾಗ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದಾಗ ಸೋಲಿಸಿದ್ದು ಇದೇ ಬಿಜೆಪಿ!! ಇವೆಲ್ಲಾ ಚರಿತ್ರೆಯಲ್ಲಿ ಹರಡಿ ಬಿದ್ದಿವೆ.
ಅವುಗಳನ್ನು ಮುಚ್ಚಿಡುವುದು ಸಾಧ್ಯವೇ ಇಲ್ಲ. ಆದರೆ ಸುಳ್ಳುಗಳ ಸಿಮೆಂಟನ್ನು ಮೆದುಳಿಗೆ ಮೆತ್ತಲು ಸಾಧ್ಯ. ಇದು ಎಷ್ಟು ಅಪಾಯಕಾರಿಯೆಂದರೆ ರಾಜಕೀಯ ಚರಿತ್ರೆಯ ಅಪಮಾಹಿತಿ ತಲೆಗಿಳಿಸಿಕೊಂಡ ತಲೆಮಾರು ಪ್ರಾಯಶಃ ಶಾಶ್ವತವಾಗಿ ಈ ಮಂಪರನ್ನು ಉಳಿಸಿಕೊಂಡು ಬರುತ್ತದೆ. ಇತಿಹಾಸದ ಸತ್ಯವನ್ನು ಮತ್ತೆ ಹೇಳಬೇಕೆಂದರೆ ಶಿಕ್ಷಣದ ಮೂಲಕವೋ ಸಾರ್ವಜನಿಕ ಪ್ರಚಾರದ ಮೂಲಕವೋ ಹೊಸ ತಲೆಮಾರಿನ ಜೊತೆ ಸಂವಾದಿಸಬೇಕು.
ನೋಡಿ, ನಮ್ಮಲ್ಲಿ ಅರ್ಥ ಶಾಸ್ತ್ರ, ರಾಜಕೀಯ ಶಾಸ್ತ್ರ, ಸಮಾಜ ಶಾಸ್ತ್ರ, ಚರಿತ್ರೆ ಪಾಠ ಮಾಡುವ ಸಾವಿರಾರು ಉಪನ್ಯಾಸಕರಿದ್ದಾರೆ. ಇವರಲ್ಲಿ ಒಂದಷ್ಟು ಮಂದಿಯಾದರೂ ಪಾಠ ಮಾಡುವಾಗ ಈ ಇತಿಹಾಸ, ವರ್ತಮಾನವನ್ನು ವಿದ್ಯಾರ್ಥಿಗಳ ಜೊತೆ ಚರ್ಚಿಸಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲವೇನೋ. ಈ ಸತ್ಯಗಳನ್ನು ಮರುಸ್ಥಾಪಿಸದಿದ್ದರೆ ಭವಿಷ್ಯ ಇನ್ನಷ್ಟು ಕರ್ಕಶವಾಗುತ್ತದೆ.