ದಾವಣಗೆರೆ: ಆರು ಲಕ್ಷ ಜನಸಂಖ್ಯೆ ಹೊಂದಿರುವ ದಾವಣಗೆರೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪ್ರಶಾಂತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಮತ್ತು ಈಶ್ವರಮ್ಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಹಯೋಹದಲ್ಲಿ ‘ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಮತ್ತು ಆರೋಗ್ಯ ಉಳಿಸಿ’ ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ‘ಪ್ಲಾಸ್ಟಿಕ್ ಮುಕ್ತ ಸಮಾಜ ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರೂ ಮತ್ತೊಬ್ಬರನ್ನು ದೂರುವವರೇ ಆಗಿದ್ದಾರೆ. ಅದರ ಬದಲು ನಿಮ್ಮ ಮನೆಗಳಲ್ಲಿರುವ ಪ್ಲಾಸ್ಟಿಕ್ ಕಸವನ್ನು ಶಾಲೆಗೆ ವಾರಕ್ಕೊಮ್ಮೆ ತಂದರೆ ಮಹಾನಗರಪಾಲಿಕೆಯ ಸ್ವಚ್ಛತಾ ಕೆಲಸದವರು ಅದನ್ನು ತೆಗೆದುಕೊಂಡು ಹೋಗಿ ವೈಜ್ಞಾನಿಕವಾಗಿ ವಿಂಗಡಿಸಿ, ಮರುಬಳಕೆಗಾಗಿ ಉಪಯೋಗಿಸುತ್ತಾರೆ. ಇದರಿಂದ ಸಾವಿರಾರು ಕಿಲೋಮೀಟರ್ ಸಮುದ್ರ ಮಲಿನವಾಗುವುದನ್ನು
ತಪ್ಪಿಸಿದಂತಾಗುತ್ತದೆ. ಇದು ಸಮಾಜಕ್ಕೆ ನಿಮ್ಮಿಂದಾಗುವ ಸೇವೆಯಾಗಿದೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನೀವು ಓದಿನಲ್ಲಿ ಶೇ.90ರಷ್ಟು ಅಂಕಗಳನ್ನು ತೆಗೆದುಕೊಳ್ಳುವುದು ವಿದ್ಯೆಯಲ್ಲ, ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ ಆಗ ನಿಮಗೆ ನಿಜವಾದ ತೃಪ್ತಿ ಸಿಗುತ್ತದೆ. ಪೌರ ಕಾರ್ಮಿಕರನ್ನು ಗೌರವಿಸಿರಿ. ಮನೆಯ ಕಸವನ್ನು ಹಸಿ ಕಸ, ಒಣ ಕಸವನ್ನಾಗಿ ಬೇರ್ಪಡಿಸಿ, ಪ್ಲಾಸ್ಟಿಕ್ ತ್ಯಜಿಸಿ, ಪರಿಸರವನ್ನು ಸಂರಕ್ಷಿಸಿರಿ. ಮುಂದಿನ ಯುವ ಜನಾಂಗವಾದ ಮಕ್ಕಳಿಂದಲೇ ಈ ಕಾರ್ಯ ನೆರವೇರಿದಾಗ ಮಾತ್ರ ಪರಿಸರ ಉಳಿಯುತ್ತದೆ ಎಂದು ಮಕ್ಕಳಲ್ಲಿ ಸ್ಫೂರ್ತಿ ತುಂಬಿದರು.
ಇಂದು ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಪ್ಲಾಸ್ಟಿಕ್‌ನಿಂದಲೇ ಗಾಳಿ, ನೀರು, ಮಣ್ಣು ಮತ್ತು ವಾತಾವರಣ ಕಲುಷಿತಗೊಂಡು ರೋಗಗಳು ಹರಡುತ್ತವೆ. ಜತೆಗೆ ಮಳೆ ಪ್ರಮಾಣ ಕಡಿಮೆಯಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ಹಲವು ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ಲಾಸ್ಟಿಕ್ ಬಳಕೆ ಮನುಷ್ಯನಿಗೆ ಅರಿವಿಲ್ಲದೇ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಆದ್ದರಿಂದ ಶಿಕ್ಷಕರು ತರಗತಿಗಳಲ್ಲಿ ಪಾಠ ಮಾಡುವಾಗ ಪರಿಸರದ ಸಂರಕ್ಷಣೆ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಜೊತೆಗೆ ಪರಿಸರಕ್ಕೆ ಹಾನಿ ಉಂಟು ಮಾಡುವ ವಸ್ತುಗಳನ್ನು ಬಳಕೆ ಮಾಡದಂತೆ ತಿಳಿ ಹೇಳಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.
ಡಿಡಿಪಿಐ ಜಿ.ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರ ಸಮ್ಮುಖದಲ್ಲಿ ಶಾಲೆಯ ೧ ರಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿರುವ ಸುಮಾರು ನೂರಾರು ಕೆ.ಜಿ.ಯಷ್ಟು ಪ್ಲಾಸ್ಟಿಕ್ ಕಸವನ್ನು ತಂದಿದ್ದರು. ಅದನ್ನು ಮಕ್ಕಳೇ ಬಂದು ದೊಡ್ಡ ಚೀಲಗಳಿಗೆ ತುಂಬಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಚೌಡಪ್ಪ, ಈಶ್ವರಮ್ಮ ಶಾಲೆಯ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್, ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಸೇರಿದಂತೆ ಸಹ ಶಿಕ್ಷಕರು ಉಪಸ್ಥಿತರಿದ್ದರು.
ಪ್ರತಿಯೊಬ್ಬರು ಮನೆಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಲ್ಲಿಸಿ. ಪರಿಸರ ಸ್ನೇಹಿ ವಸ್ತುಗಳ ಬಳಸುವ ಪಣ ತೊಡಗಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಅರಿವು ಮೂಡಿsಸುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.-ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ.
