ದಾವಣಗೆರೆ : ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶ್ರೀಮತಿ ಗಾಯಿತ್ರಿ ಸಿದ್ಧೇಶ್ವರ್ ಅವರು 1.5 ರಿಂದ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ತ್ಯಾವಣಗಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಈಗಾಗಲೇ 18-20 ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿ, ಇಂದು ದಾವಣಗೆರೆ ಬಂದಿದ್ಧೇನೆ. ಎಲ್ಲೆಡೆಯೂ, ಎಲ್ಲರ ಬಾಯಿಯಲ್ಲಿ ಮೋದಿ ಮೋದಿ ಎಂಬ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್ಗೆ ತಾಕತ್ತಿದ್ದರೆ ತಾವು ಗೆಲ್ಲುವ ಒಂದೆರಡು ಕ್ಷೇತ್ರದ ಹೆಸರು ಹೇಳಲಿ ಎಂದು ಸವಾಲು ಹಾಕಿದರು.
ದೇಶದಲ್ಲಿ ಕಾಂಗ್ರೆಸ್ ಮುಳುಗುವ ಹಡಗು. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಧೂಳಿಪಟವಾಗಲಿದೆ. ಕಾಂಗ್ರೆಸ್ ಇಷ್ಟು ವರ್ಷ ಹಣ, ಹೆಂಡ, ತೋಳ್ಬಲ, ಅಧಿಕಾರ ಬಲಿದಿಂದ ಜಾತಿಯ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರುತ್ತಿದೆ. ಆದರೆ, ಈಗ ಕಾಂಗ್ರೆಸ್ನ ಆಟ ನಡೆಯುವುದಿಲ್ಲ. ಜನ ಬುದ್ಧಿವಂತರಾಗಿದ್ದಾರೆ. ಮೋದಿ ಜೀ ಅವರ ಆಡಳಿತ ಮೆಚ್ಚಿಕೊಂಡಿದ್ದಾರೆ. ಈ ಬಾರಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು, ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗುವುದು ನಿಶ್ಚಿತ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಗಾಯಿತ್ರಿ ಸಿದ್ದೇಶ್ವರ್ ಅವರು ಇಲ್ಲಿ ಗೆಲ್ಲುವುದು, ನರೇಂದ್ರ ಮೋದಿ ಅವರ ಪ್ರಧಾನಿ ಆಗುವುದು ಅಷ್ಟೇ ಸತ್ಯ ಎಂದರು.
ಇಲ್ಲಿ ಸೇರಿರುವ ಜನ ಸಮೂಹವನ್ನು ನೋಡಿದರೆ ಗಾಯಿತ್ರಿ ಸಿದ್ದೇಶ್ವರ್ ಅವರು ಈಗಾಗಲೇ 1.5 ರಿಂದ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎನ್ನುವುದು ಸ್ಪಷ್ಟವಾಗಿದೆ. ನೀವೆಲ್ಲರೂ ಇಂದಿನಿಂದಲೇ ಗ್ರಾಮದ ಮನೆ ಮನೆಗೂ ಹೋಗಿ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಬೇಕು. ಮೋದಿ ಸರ್ಕಾರ, ವಿಕಸಿತ ಭಾರತ, ವಿಕಸಿತ ದಾವಣಗೆರೆ ನೀವು ಮುನ್ನುಡಿ ಬರೀಬೇಕು ಎಂದು ಕರೆ ನೀಡಿದರು.
ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ಧೇಶ್ವರ್ ಮಾತನಾಡಿ, ದೇಶದ 80 ಕೋಟಿ ಜನರಿಗೆ 5 ಕೆಜಿ ಉಚಿತ ಪಡಿತರ ನೀಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ. ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯ ಮೂಟೆ ಮೇಲೆ ಕಾಂಗ್ರೆಸ್ ತನ್ನ ಹೆಸರು ಹಾಕಿಕೊಳ್ಳುತ್ತಿದೆ. ನರೇಂದ್ರ ಮೋದಿ ಅವರಿಗೆ ಸಮನಾದ ನಾಯಕ ಕಾಂಗ್ರೆಸ್ನಲ್ಲಿ ಇಲ್ಲ. ನಾವು ಧೈರ್ಯದಿಂದ ಹೇಳುತ್ತೇವೆ. ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜೀ ಅಂತ.. ಕಾಂಗ್ರೆಸ್ ನವರಿಗೆ ತಾಕತ್ ಇದ್ದರೆ ತಮ್ಮ ಪ್ರಧಾನಿ ಅಭ್ಯರ್ಥಿ ಹೆಸರು ಹೇಳಲಿ ಎಂದು ಸವಾಲು ಹಾಕಿದರು.
ದೇಶದಲ್ಲಿ ಮೋದಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಕೆಲಸಗಳು, ದಾವಣಗೆರೆಯಲ್ಲಿ ಜಿ.ಎಂ.ಸಿದ್ಧೇಶ್ವರ್ ತಂದಿರುವ ಯೋಜನೆಗಳನ್ನು ಗಮನಿಸಿ ಜನ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ನೀವು ನೀಡುವ ಒಂದೊಂದು ಮತ ದೇಶದ ಬದಲಾವಣೆ, ರಕ್ಷಣೆ, ವಿಶ್ವಗುರು ಮಾಡುತ್ತಿದೆ. ಮಹಿಳಾ ಸಬಲೀಕರಣ, ಯುವ ಶಕ್ತಿ ಬಲಪಡಿಸಲು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಜನರ ಆಶಯ. ನೀವು ನನ್ನ ಕಮಲದ ಗುರುತಿಗೆ ಮತ ಹಾಕುವ ಮೂಲಕ ನನ್ನನ್ನು ಗೆಲ್ಲಿಸಿ, ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ, ಎಂಎಲ್ಸಿ ರವಿಕುಮಾರ್, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಬಸವರಾಜ್ ನಾಯ್, ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾಜ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಜೆಡಿಎಸ್ ಮುಖಂಡ ತೇಜಸ್ವಿ ಪಟೇಲ್, ಹಾರಿಕಾ ಮಂಜುನಾಥ್, ಮಾಡಳ್ ಮಲ್ಲಿಕಾರ್ಜುನ್, ಮಹಿಮಾ ಜೇ ಪಟೇಲ್, ದೇವೇಂದ್ರಪ್ಪ, ಶಿವಾನಂದಮೂರ್ತಿ, ಜಿ.ಎಸ್. ಶ್ಯಾಮ್, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮತ್ತು ಸಾವಿರಾರು ಕಾರ್ಯಕರ್ತರು ಉಪಸ್ಥಿತರಿಸದ್ದರು.