ದಾವಣಗೆರೆ : ಶ್ರೀ ವಾಸವಿ ಪೀಠಂ ವಿಶ್ವವಾಸವಿ ಜಗದ್ಗುರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಯವರ ಪೀಠಾರೋಹಣದ 4ನೇ ವಾರ್ಷಿಕೋತ್ಸವದ ಅಂಗವಾಗಿ ಆರ್ಯವೈಶ್ಯ ಮಹಾಸಭಾದ ದಾವಣಗೆರೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘ, ಶ್ರೀ ವಾಸವಿ ಸೇವಾ ಸಂಘ, ಆರ್ಯವೈಶ್ಯ ಮಹಾಜನ ಸಮಿತಿ ಸಂಯುಕ್ತಾಶ್ರಯದಲ್ಲಿ “ಭಕ್ತಿ ಸಿಂಚನ” ಕಾರ್ಯಕ್ರಮ ಜು.9 ರಂದು ಹಮ್ಮಿಕೊಂಡಿದ್ದು ಪರಮಪೂಜ್ಯ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಯವರು ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ನಗರಕ್ಕೆ ಪುರಪ್ರವೇಶ ಮಾಡಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಯವೈಶ್ಯ ಜನಾಂಗದ ಯುವಕ ಯುವತಿಯರು ಪರಮಪೂಜ್ಯ ಮಹಾಸ್ವಾಮಿ ಅವರನ್ನು ದಾವಣಗೆರೆಯ ಬಾಡಾ ಕ್ರಾಸ್‍ನಿಂದ ಬೈಕ್‍ರ್ಯಾಲಿ ಮೂಲಕ ಸ್ವಾಗತಿಸಿ, ಆವರಗೆರೆ ಗೋಶಾಲೆ ತಲುಪಿ ಗೋವುಗಳಿಗೆ ಗ್ರಾಸ, ತರಕಾರಿ ಮತ್ತು ಧಾನ್ಯಗಳನ್ನು ಸಮರ್ಪಿಸುವ ಮೂಲಕ ಗೋಪೂಜೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನಂತರ ಪರಮಪೂಜ್ಯ ಮಹಾಸ್ವಾಮಿಗಳನ್ನು ಗೌರವ ರಕ್ಷೆಯೊಂದಿಗೆ ಬೈಕ್ ರ್ಯಾಲಿಯ ಮೂಲಕ ಪಿ.ಬಿ.ರಸ್ತೆ ಮಾರ್ಗವಾಗಿ ಎಸ್.ಎಸ್. ಲೇಔಟ್‍ನಲ್ಲಿರುವ ಸುಭಾಷ್ ಚಂದ್ರ ಬೋಸ್ ಇಂಡೋರ್ ಸ್ಟೇಡಿಯಂ ಹತ್ತಿರವಿರುವ ಆರ್.ಜಿ. ಶ್ರೀನಿವಾಸಮೂರ್ತಿಯವರ ಸ್ವಗೃಹವನ್ನು ತಲುಪುವ ಮೂಲಕ ಬೈಕ್‍ರ್ಯಾಲಿ ಮುಕ್ತಾಯಗೊಳಿಸಲಾಗುವುದು ಎಂದರು.
ಜು.10 ರ ಗುರುಪೌರ್ಣಿಮೆಂದು ಬೆಳಿಗ್ಗೆ 7.30ಕ್ಕೆ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿ ಹಿರೇಮಠದ ಆವರಣದಲ್ಲಿ ಆರ್ಯವೈಶ್ಯ ಮಹಿಳೆಯರು, ಮಹನೀಯರು, ಯುವಕರು, ಯುವತಿಯರು ಮತ್ತು ಮಕ್ಕಳಾದಿಯಾಗಿ ಸೇರಿ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಯವರನ್ನು ರಥದ ಮೂಲಕ, ಯಕ್ಷಗಾನ, ಕರಗ, ಚಂಡೆಮೇಳ, ಡೋಲು, ನಾದಸ್ವರದ ಕಲಾತಂಡಗಳು ಒಟ್ಟುಗೂಡಿ ವಾಸವಿ ಮಾತೆಯ ಜಯಘೋಷದೊಂದಿಗೆ ಸದ್ಯೋಜಾತ ಮಠದಿಂದ ಶೋಭಾ ಯಾತ್ರೆಯನ್ನು ಪ್ರಾರಂಭ ಮಾಡಿ ಗುಂಡಿ ವೃತ್ತದ ಮೂಲಕ ಸಾಗಿ ಡೆಂಟಲ್ ಕಾಲೇಜ್ ರಸ್ತೆಯ ಮುಖಾಂತರ “ಭಕ್ತಿ ಸಿಂಚನ” ಕಾರ್ಯಕ್ರಮ ನಡೆಯುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನಕ್ಕೆ ತಲುಪಲಿದೆ ಎಂದು ವಿವರಿಸಿದರು.
ಸಮುದಾಯ ಭವನದ ಪ್ರವೇಶ ದ್ವಾರದಿಂದ ಮಹಿಳೆಯರಿಂದ ಪೂರ್ಣಕುಂಭ, ವಾಸವಿ ಮಾತೆಯ ಗೀತೆಯ ಸ್ವಾಗತ ಹಾಡುಗಳು, ಭಜನೆ ಹಾಗೂ ಕೋಲಾಟದೊಂದಿಗೆ ಮತ್ತು ಸಜ್ಜನರಿಗೆ ಸ್ವಾಗತ ದಾಸರಪದಗಳೊಂದಿಗೆ ಪರಮಪೂಜ್ಯರನ್ನು “ಭಕ್ತಿಸಿಂಚನ”ದ ವೇದಿಕೆಗೆ ಕರೆದೊಯ್ಯಲಾಗುವುದು ಎಂದರು.
ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಓಂಕಾರ ಮತ್ತು ವೇದಮೂರ್ತಿಗಳಿಂದ ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಗುರುವಂದನೆ ಹಾಗೂ ಕಾರ್ಯಕ್ರಮ ಉದ್ಘಾಟಿಸುವರು. ನಂತರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಸಾಮೂಹಿಕ ಮಂತ್ರ ಜಪ, ಭಜನೆ, ಧ್ಯಾನ, ಆಶೀರ್ವಚನ ಮತ್ತು ಪ್ರವಚನ ನಂತರ ಕೋಲಾಟದೊಂದಿಗೆ ಶ್ರೀರಾಮನಾಮ ಸ್ಮರಣೆಯನ್ನು ನೆರವೇರಿಸಲಾಗುವುದು. ನಂತರ ಸನಾತನತೆ, ಸಂಸ್ಕಾರದ ಅಳಿವು-ಉಳಿವು ಮತ್ತು ಇಂದಿನ ಪ್ರಸ್ತುತತೆಯ ಸಿಂಚನದ ಬಗ್ಗೆ ಮಹಾಸ್ವಾಮೀಜಿಯವರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು.
Read also : ಭದ್ರಾ ಜಲಾಶಯದಲ್ಲಿ 170 ಅಡಿ ನೀರು ಸಂಗ್ರಹ : ಭದ್ರೆ ತುಂಬಲು ದಿನಗಣನೆ
ಸಂಜೆ 4.30 ರಿಂದ ಮಹಿಳೆಯರಿಂದ ಗೋವಿಂದ ನಾಮಾವಳಿ ಮೂಲಕ ದೇವಾನುದೇವತೆಗಳಿಗೆ ಪುಷ್ಪಾಭಿಷೇಕ ಮತ್ತು ಮಹಿಳೆಯರಿಂದ ಸಾಮೂಹಿಕ ಶತಕಂಠ ಗಾಯನ ಧಾರ್ಮಿಕ ಕಾರ್ಯಕ್ರಮವು ನೆರವೇರುವುದು. ಮಹಾಸ್ವಾಮೀಜಿಯವರಿಂದ ಧ್ಯಾನ, ಧಾರ್ಮಿಕ ಹಾಗೂ ಇತರೇ ವಿಷಯಗಳ ಬಗ್ಗೆ ಸಂವಾದ ಕಾರ್ಯಕ್ರಮವು ನೆರವೇರುವುದು. ಸ್ವಾಮೀಜಿಯವರಿಂದ ಆಶೀರ್ವಚನ. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವ ಆರ್ಯವೈಶ್ಯ್ವ ಬಂಧುಗಳ ಸ್ವಹಸ್ತದಿಂದ ವಾಸವಿ ಮಾತೆಗೆ ಮತ್ತು ಮಹಾಸ್ವಾಮೀಜಿಯವರಿಗೆ ಪುಷ್ಪಾರ್ಚನೆಯನ್ನು ನೆರವೇರಿಸಲಾಗುವುದು. ನಂತರ ನಗರೇಶ್ವರ ಹಾಗೂ ದೇವರುಗಳಿಗೆ ಆರತಿ ಮಾಡುವ ಮೂಲಕ “ಭಕ್ತಿ ಸಿಂಚನ” ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುವುದು ಎಂದು “ಭಕ್ತಿ ಸಿಂಚನ” ಸಮಿತಿಯ ಅಧ್ಯಕ್ಷ ಆರ್.ಎಲ್. ಪ್ರಭಾಕರ್ ತಿಳಿಸಿದರು.
ಗೋಷ್ಠಿಯಲ್ಲಿ ದಾವಣಗೆರೆ ಜಿಲ್ಲಾ ಸಮಿತಿ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್, ಭಕ್ತಿ ಸಿಂಚನ ಸಮಿತಿಯ ಗೌರವ ಅಧ್ಯಕ್ಷ ಡಾ. ಬಿ.ಎಸ್. ನಾಗಪ್ರಕಾಶ್,ಎಸ್.ಟಿ. ಕುಸುಮ ಶ್ರೇûಷ್ಠಿ, ಕಾರ್ಯಾಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ಹೆಚ್.ವಿ. ಶ್ರೀನಿವಾಸ್, ಟಿ.ಎಸ್. ಕಿರಣ್‍ಕುಮಾರ್ ಕಾರ್ಯದರ್ಶಿ ಬಿ.ಹೆಚ್. ಅಶೋಕ್, ವೈ.ಎಸ್. ಸುನೀಲ್, ಖಜಾಂಚಿ ಕೆ.ಎಸ್. ದರ್ಶನ್, ಸಹಕಾರ್ಯದರ್ಶಿ ಜೆ. ರವೀಂದ್ರ ಗುಪ್ತ, ಹೆಚ್. ವೆಂಕಟೇಶ್, ಜಿಲ್ಲಾ ಸಮಿತಿ ಕಾರ್ಯದರ್ಶಿಎಂ. ನಾಗರಾಜ್ ಗುಪ್ತ ಹಾಗೂ ನಿರ್ವಾಹಕ ಡಿ.ಹೆಚ್. ಅಂಬಿಕಾಪತಿ ಶೆಟ್ಟಿ ಉಪಸ್ಥಿತರಿದ್ದರು.