ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಳೆದ ವಾರ ಪದ್ಮನಾಭನಗರಕ್ಕೆ ಹೋದರು.ಹೀಗೆ ಹೋದವರು ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದರು.
ಅಂದ ಹಾಗೆ ಮೊನ್ನೆ ಮೊನ್ನೆಯವರೆಗೆ ಜೆಡಿಎಸ್ ಜತೆಗಿನ ಮೈತ್ರಿಯ ವಿಷಯದಲ್ಲಿ ವಿಜಯೇಂದ್ರ ಉತ್ಸುಕರಾಗಿರಲಿಲ್ಲ. ಕಾರಣ? ಈ ಮೈತ್ರಿ ವಿಧಾನಸಭಾ ಚುನಾವಣೆಯಲ್ಲಿ ಮುಂದುವರಿದರೆ,ಮತ್ತು ಬಿಜೆಪಿ ಮಿತ್ರಕೂಟ ಗೆದ್ದು ಅಧಿಕಾರ ಹಿಡಿದರೆ ಧರ್ಮ ಸಂಕಟ ಶುರುವಾಗಬಹುದು ಎಂಬುದು.
ಅರ್ಥಾತ್, ಅಧಿಕಾರ ಹಿಡಿಯುವ ಮೈತ್ರಿಕೂಟ ಸರ್ಕಾರಕ್ಕೆ ಕುಮಾರಸ್ವಾಮಿ ನಾಯಕರಾಗಬಹುದು ಎಂಬ ಆತಂಕ ವಿಜಯೇಂದ್ರ ಅವರಿಗಿತ್ತು. ಹೀಗಾಗಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ತ ಬಿಜೆಪಿ ಏಕಾಂಗಿಯಾಗಿ ಹೋರಾಡುವಂತೆ ನೋಡಿಕೊಂಡ ವಿಜಯೇಂದ್ರ ಜೆಡಿಎಸ್ ನಿಂದ ದೂರವೇ ಇದ್ದರು.ಅಷ್ಟೇ ಅಲ್ಲ, ಇವತ್ತು ಚುನಾವಣೆ ನಡೆದರೂ ನಾವು ಸ್ವಯಂಬಲದ ಮೇಲೆ ಗೆಲ್ಲುತ್ತೇವೆ. ಹೀಗಾಗಿ ನಮಗೆ ಜೆಡಿಎಸ್ ಜತೆ ಮೈತ್ರಿ ಯಾಕೆ? ಅಂತ ದಿಲ್ಲಿಗೆ ಸಂದೇಶ ರವಾನಿಸುತ್ತಿದ್ದರು.
ದಿನ ಕಳೆದಂತೆ ಬಿಜೆಪಿಯಲ್ಲಿರುವ ಅವರ ವಿರೋಧಿಗಳ ಶಕ್ತಿ ಹೆಚ್ಚಿಸಿತ್ತಲ್ಲದೆ,ಇನ್ನೇನು ವಿಜಯೇಂದ್ರ ಅವರನ್ನು ಕೆಳಗಿಳಿಸಿ ಕೇಂದ್ರ ಮಂತ್ರಿ ವಿ.ಸೋಮಣ್ಣ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತರಲು ವರಿಷ್ಟರು ರೆಡಿಯಾಗಿದ್ದಾರೆ ಎಂಬ ಮಾತುಗಳು ದಟ್ಟವಾದವು.
ಅಷ್ಟೇ ಅಲ್ಲ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರ ಆರ್ಭಟ ದಿನಕಳೆದಂತೆ ಹೆಚ್ಚಾಗತೊಡಗಿತು. ಸಾಲದೆಂಬಂತೆ ಜೆಡಿಎಸ್ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ತಮ್ಮ ವಿಷಯದಲ್ಲಿ ಅಸಹನೆ ಹೊಂದಿದ್ದಾರೆ ಎಂಬ ವರ್ತಮಾನ ವಿಜಯೇಂದ್ರ ಅವರ ಕಿವಿಗೆ ಬೀಳತೊಡಗಿತು.
ಯಾವಾಗ ಈ ಸುದ್ದಿಗಳು ತಮ್ಮ ಕಿವಿ ತಲುಪತೊಡಗಿದವೋ? ಆಗ ವಿಜಯೇಂದ್ರ ರಪ್ಪಂತ ಎಚ್ಚೆತ್ತಿದ್ದಾರೆ.ಅಷ್ಟೇ ಅಲ್ಲ, ಜೆಡಿಎಸ್ ಜತೆಗಿನ ಹೊಂದಾಣಿಕೆಯ ವಿಷಯದಲ್ಲಿ ನಸನಸೆ ತೋರಿಸದೆ ಪಾಸಿಟಿವ್ ಸಿಗ್ನಲ್ಲುಗಳನ್ನು ರವಾನಿಸತೊಡಗಿದ್ದಾರೆ.
Read also : Political analysis|ಕಂಪ್ಲೇಂಟು ಪಟ್ಟಿ ರೆಡಿ ಮಾಡಿದ್ರು ರಾಜಣ್ಣ
ಯಾವಾಗ ಅವರಿಂದ ಪಾಸಿಟಿವ್ ಸಿಗ್ನಲ್ಲುಗಳು ರವಾನೆಯಾಗತೊಡಗಿದವೋ? ಇದಾದ ನಂತರ ನಂತರ ಜೆಡಿಎಸ್ ಪಾಳಯದಿಂದಲೂ ಪಾಸಿಟಿವ್ ಸಿಗ್ನಲ್ಲುಗಳು ಬರತೊಡಗಿವೆ.ಅದರಲ್ಲೂ ಮುಖ್ಯವಾಗಿ ದಿಲ್ಲಿಯಿಂದ ಬರುತ್ತಿದ್ದ ಕೆಲ ಸಂದೇಶಗಳು ವಿಜಯೇಂದ್ರ ಖುಷಿಯಾಗುವಂತೆ ಮಾಡಿವೆ. ಮೂಲಗಳ ಪ್ರಕಾರ,ತಮ್ಮ ಬಳಿ ವಿಜಯೇಂದ್ರ ಅವರ ಬಗ್ಗೆ ಕಂಪ್ಲೇಂಟು ತರುತ್ತಿದ್ದ ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ಕೇಂದ್ರ ಮಂತ್ರಿ ಕುಮಾರಸ್ವಾಮಿ ಸಪೋರ್ಟು ಕೊಡುತ್ತಿಲ್ಕ.
‘ಅಣ್ಣಾ, ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೆ ಜೆಡಿಎಸ್ ಜತೆಗಿನ ಮೈತ್ರಿಗೆ ಅಡ್ಡಗಾಲು ಹಾಕುತ್ತಾರೆ.ನಿಮ್ಮ ಬಗೆಗಂತೂ ಫುಲ್ಲು ನೆಗೆಟೀವ್ ಆಗಿ ಮಾತನಾಡುತ್ತಾರೆ’ ಅಂತ ತಮ್ಮ ಕಿವಿ ಚುಚ್ಚಲು ಬಂದ ಕರ್ನಾಟಕದ ಕೆಲ ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಮುಖಕ್ಕೆ ಹೊಡೆದಂತೆ ಮಾತನಾಡಿದ್ದಾರೆ.
‘ನೋಡಿ ಬ್ರದರ್,ನಾನು ಬಿಜೆಪಿ ಜತೆಗಿದ್ದೇನೆಯೇ ಹೊರತು ರಾಜ್ಯ ಬಿಜೆಪಿಯ ಭಿನ್ನಮತದ ಜತೆಗಲ್ಲ’ಅಂತ ಅವರಾಡಿದ ಮಾತುಗಳು ವಿಜಯೇಂದ್ರ ಅವರ ಕಿವಿಗೆ ಘಟ್ಟಿಸಿವೆ. ಯಾವಾಗ ಈ ಬೆಳವಣಿಗೆ ನಡೆಯತೊಡಗಿತೋ? ಇದಾದ ನಂತರ ವಿಜಯೇಂದ್ರ ಅವರು ಜೆಡಿಎಸ್ ಜತೆಗಿನ ಸಖ್ಯದ ವಿಷಯದಲ್ಲಿ ಫುಲ್ಲು ಲಿಬರಲ್ ಆಗಿದ್ದಾರೆ.
ಸಕ್ಸಸ್ ಆಗುತ್ತಿದ್ದಾರೆ ನಿಖಿಲ್ (Political analysis)
ಈ ಮಧ್ಯೆ ವಿಜಯೇಂದ್ರ ಅವರಿಗೆ ಕನ್ ಫರ್ಮ್ ಆಗಿರುವ ಎರಡು ಸಂಗತಿಗಳೆಂದರೆ,ಕೇಂದ್ರ ಸಚಿವ ಕುಮಾರಸ್ವಾಮಿ ಸಿಎಂ ಹುದ್ದೆಯ ರೇಸಿಗೆ ಬರುವುದಿಲ್ಲ ಮತ್ತು ಭವಿಷ್ಯದ ಜೆಡಿಎಸ್ ಅಧಿನಾಯಕನಾಗಿ ನಿಖಿಲ್ ಹೊರಹೊಮ್ಮುತ್ತಿದ್ದಾರೆ ಎಂಬುದು.
ಇವತ್ತು ತಮ್ಮಜ್ಜ ದೇವೇಗೌಡರು ಮತ್ತು ತಂದೆ ಕುಮಾರಸ್ವಾಮಿಯವರ ಕಣ್ಣಳತೆಯಲ್ಲಿ ಪಟ್ಟಾಭಿಷೇಕ ಯಾತ್ರೆ ಮಾಡುತ್ತಿರುವ ನಿಖಿಲ್ ಈಗಾಗಲೇ ಅರವತ್ತಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಜ್ಜೆ ಮೂಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಬಹುದಾದ ಕ್ಷೇತ್ರಗಳಿಗೆ ನುಗ್ಗುತ್ತಿರುವ ನಿಖಿಲ್, ಸ್ಥಳೀಯ ನಾಯಕರ ಭಿನ್ನಾಭಿಪ್ರಾಯಗಳನ್ನು ದೂರ ಮಾಡುತ್ತಿದ್ದಾರೆ.
ಅಂತರಿಕ ಸಂಘರ್ಷಗಳನ್ನು ನಿವಾರಿಸದಿದ್ದರೆ ಗೆಲುವು ಕಷ್ಟ ಅಂತ ದೊಡ್ಡಗೌಡರು ಹೇಳಿದ ಕಿವಿ ಮಾತನ್ನು ಗಂಭೀರವಾಗಿ ತೆಗೆದುಕೊಂಡಿರುವ ಅವರು ಇಂತಹ ಕಸರತ್ತು ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್ ಮೂಲಗಳ ಪ್ರಕಾರ, ಜೆಡಿಎಸ್ ಯುವ ಜನತಾದಳದ ಅಧ್ಯಕ್ಷ ಸ್ಥಾನಕ್ಕೆ ಬಂದಾಗ, ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ನಿಖಿಲ್ ಅವರಿಗೆ ವಹಿಸಿರಲಿಲ್ಲ. ಆದರೆ, ಇವತ್ತು ದಿಲ್ಲಿಯಲ್ಲೇ ಹೆಚ್ಚು ಸಮಯ ಕಳೆಯುವ ಅನಿವಾರ್ಯತೆಯಲ್ಲಿರುವ ಕುಮಾರಸ್ವಾಮಿ ಅವರು,ಆಗಿದ್ದಾಗಲಿ ಅಂತ ಈಗ ಮಗನಿಗೆ ಜವಾಬ್ದಾರಿ ವಹಿಸಿರುವುದು ಕ್ಲಿಕ್ ಆಗಿದೆ.
ವಾಸ್ತವವಾಗಿ ನಿಖಿಲ್ ಪಟ್ಟಾಭಿಷೇಕ ಯಾತ್ರೆ ಆರಂಭವಾಗುವ ಮುನ್ನ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕೆಲ ಹಿರಿಯ ನಾಯಕರ ಹೆಸರುಗಳು ತೇಲಿ ಬಂದಿದ್ದವು. ಆದರೆ, ನಿಖಿಲ್ ಅವರ ಯಾತ್ರೆ ಶುರುವಾಗಿ ಮುಕ್ತಾಯದ ಹಂತಕ್ಕೆ ಬರುವ ಹೊತ್ತಿಗೆ ಆ ಯಾವ ಹೆಸರುಗಳೂ ಕೇಳುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಟಾರ್ ಇಮೇಜ್ ಕೊಡಬಲ್ಲ ಶಕ್ತಿ ನಿಖಿಲ್ ಅವರನ್ನು ಬಿಟ್ಟರೆ ಬೇರೆಯವರಿಗಿಲ್ಲ ಎಂಬ ಮಾತುಗಳು ದಟ್ಡವಾಗಿವೆ. ಪರಿಣಾಮ? ಭವಿಷ್ಯದ ರಾಜಕಾರಣ ತಮಗೆ ಹೇಗೆ ಪ್ಲಸ್ ಆಗಲಿದೆ ಎಂಬುದು ವಿಜಯೇಂದ್ರ ಅವರಿಗೆ ಕನ್ ಫರ್ಮ್ ಆಗಿದೆ.
ಇದೇ ರೀತಿ ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಭವಿಷ್ಯದ ಸಿಎಂ ಎಂಬ ಮಾತುಗಳು ಕೇಳುತ್ತಿದ್ದವಲ್ಲ? ಆ ಮಾತಿಗೆ ಪುಷ್ಟಿ ನೀಡುವ ಸನ್ನಿವೇಶ ಈಗ ವಿಜಯೇಂದ್ರ ಅವರಿಗೆ ಕಾಣುತ್ತಿಲ್ಲ. ಕಾರಣ? ರಾಜ್ಯ ರಾಜಕಾರಣ ತಲುಪಿರುವ ಸಂಕೀರ್ಣ ಕಾಲಘಟ್ಟವನ್ನು ಗಮನಿಸಿದರೆ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ. ಪರಿಸ್ಥಿತಿ ಹೀಗಿರುವಾಗ ಅವಧಿಗೂ ಮುನ್ನ ಕೇಂದ್ರ ಮಂತ್ರಿಗಿರಿಯಿಂದ ಕುಮಾರಸ್ವಾಮಿ ಅವರಿಗೆ ಮೋದಿ-ಅಮಿತ್ ಶಾ ಜೋಡಿ ಬಿಡುಗಡೆ ಕೊಡುವುದಿಲ್ಲ.
ಎಷ್ಟೇ ಅದರೂ ರಾಷ್ಟ್ರ ರಾಜಕಾರಣದಲ್ಲಿ ಯುವ ಶಕ್ತಿಗೆ ಹೆಚ್ಚು ಆದ್ಯತೆ ಕೊಡಬೇಕು ಎಂಬುದೇ ಮೋದಿ-ಶಾ ಜೋಡಿಯ ಇಂಗಿತವಾಗಿರುವಾಗ ಕುಮಾರಸ್ವಾಮಿ ಸಿಎಂ ಆಗಲಿ ಅಂತ ಅವರು ಬಯಸುವುದಿಲ್ಲ. ಯಾವಾಗ ಈ ವಿಷಯದಲ್ಲಿ ತಮ್ಮ ದಾರಿ ನಿಚ್ಚಳವಾಗಿದೆ ಅನ್ನಿಸಿತೋ?ಇದಾದ ನಂತರ ವಿಜಯೇಂದ್ರ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ನಿರ್ಧರಿಸಿದ್ದಾರೆ.
ಕಳೆದ ವಾರ ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ದೇವೇಗೌಡರನ್ನು ಅವರು ಭೇಟಿ ಮಾಡಲು ಇದೇ ಮುಖ್ಯ ಕಾರಣ. ಜೆಡಿಎಸ್ ಮೂಲಗಳ ಪ್ರಕಾರ,ತಮ್ಮನ್ನು ಭೇಟಿ ಮಾಡಿದ ವಿಜಯೇಂದ್ರ ಅವರಿಗೆ ದೊಡ್ಡಗೌಡರು ಒಂದು ಮೇಜರ್ ಟಿಪ್ಸ್ ನೀಡಿದ್ದಾರೆ. ಅದೆಂದರೆ,’ಈ ಹಿಂದೆ ಮೈಸೂರು ಚಲೋ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಮಧ್ಯೆ ಯಾವ ಒಗ್ಗಟ್ಟು ಕಾಣಿಸುತ್ತೋ? ಅದು ಮುಂದುವರಿಯಲಿ. ನೀವು ಮತ್ತು ನಿಖಿಲ್ ಕುಮಾರದ್ವಾಮಿ ಒಗ್ಗೂಡಿ ಅಶ್ವಮೇಧ ಯಾತ್ರೆ ಶುರು ಮಾಡಿ.ಸಕ್ಸಸ್ ಆಗುತ್ತೀರಿ’ ಎಂಬುದು.
ಯಾವಾಗ ದೇವೇಗೌಡರು ಈ ಟಿಪ್ಸು ನೀಡಿದರೋ? ಇದಾದ ಮೇಲೆ ವಿಜಯೇಂದ್ರ ಖುಷಿಯಾಗಿದ್ದಾರೆ.ಅಷ್ಟೇ ಅಲ್ಲ, ಜೆಡಿಎಸ್ ಹಿಂದೆ ನಿಂತು ಆಡುತ್ತಿದ್ದ ಸ್ವಪಕ್ಷೀಯ ನಾಯಕರಿಗೆ ಟಾಂಗ್ ಕೊಟ್ಟ ಸಮಾಧಾನದಲ್ಲಿದ್ದಾರೆ. ಅಲ್ಲಿಗೆ ವಿಜಯೇಂದ್ರ ಮತ್ತು ನಿಖಿಲ್ ಅವರು ಬಿಜೆಪಿ ಮಿತ್ರಕೂಟದ ಪಾಲಿಗೆ ಹೊಸ ಜೋಡೆತ್ತುಗಳಾಗುವ ಲಕ್ಷಣ ದಟ್ಟವಾಗಿದೆ.
ದಿಲ್ಲಿಗೆ ನುಗ್ಗಲಿದ್ದಾರೆ ಜಾರಕಿಹೊಳಿ (Political analysis)
ಇನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದಿಲ್ಲಿಗೆ ನುಗ್ಗಲು ಸಜ್ಜಾಗುತ್ತಿದ್ದಾರೆ. ಹೀಗವರು ಸಜ್ಜಾಗುತ್ತಿರುವುದಕ್ಕೆ ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಕಾರಣ. ‘ಅಲ್ರೀ,ನಿಮ್ಮ ಪಕ್ಷದ ವರಿಷ್ಟರು ನಮ್ಮ ಸಮುದಾಯದ ಇಬ್ಬರು ನಾಯಕರ ಬಲಿ ಪಡೆದಿದ್ದಾರೆ. ಇಷ್ಟಾದರೂ ನಾವು ಸುಮ್ಮನಿದ್ದರೆ ಸಮುದಾಯಕ್ಕೇನು ಮೆಸೇಜ್ ಹೋಗುತ್ತದೆ? ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರೇನು ಭ್ರಷ್ಟರೇ? ಯಾರದೋ ತಪ್ಪಿಗೆ ಬಲಿಯಾದ ನಾಗೇಂದ್ರ ಏನು ಅಪರಾಧಿಯೇ? ಇವತ್ತು ಸಚಿವ ಸಂಪುಟದಲ್ಲಿರುವ ಎಷ್ಟು ಮಂದಿಯ ಮೇಲೆ ಭ್ರಷ್ಟಾಚಾರದ ಆರೋಪವಿಲ್ಲ?
ಆದರೆ ಅವರನ್ನೆಲ್ಲ ಬಿಟ್ಟು ನಮ್ಮ ಸಮುದಾಯದವರನ್ನೇ ಬಲಿ ಪಡೆದಿದ್ದಾರೆ ಎಂದರೆ ನಾವು ಸುಮ್ಮನಿರಬೇಕಾ? ಈ ಕುರಿತು ದಿಲ್ಲಿಗೆ ನುಗ್ಗಿ ಕಾಂಗ್ರೆಸ್ ವರಿಷ್ಟರನ್ನು ಕೇಳಬೇಕೆಂದರೆ ಅವರು ಟೈಮೇ ಕೊಡುತ್ತಿಲ್ಲ.ಹಾಗಂತ ಇದನ್ನು ನೋಡಿಕೊಂಡು ನಾವು ಸುಮ್ಮನಿರಲು ಸಾಧ್ಯವಿಲ್ಲ.ಹೀಗಾಗಿ ನೀವೇ ದಿಲ್ಲಿ ನಾಯಕರ ಟೈಮು ತೆಗೆದುಕೊಳ್ಳಿ.ನಿಮ್ಮ ಹಿಂದೆ ನಾವಿರುತ್ತೇವೆ’ ಎಂಬುದು ಸ್ವಾಮೀಜಿಗಳ ಕಟ್ಟಪ್ಪಣೆ.
ಹೀಗೆ ಸಮುದಾಯದ ಸ್ವಾಮೀಜಿಗಳ ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಸತೀಶ್ ಜಾರಕಿಹೊಳಿ ಅವರು ದಿಲ್ಲಿಗೆ ನುಗ್ಗಲು ಸಜ್ಜಾಗತೊಡಗಿದ್ದಾರೆ. ಮಂತ್ರಿ ಮಂಡಲದಿಂದ ಹೊರಬಿದ್ದಿರುವ ಕೆ.ಎನ್.ರಾಜಣ್ಣ ಮತ್ತು ಬಿ.ನಾಗೇಂದ್ರ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು.ಇಲ್ಲದಿದ್ದರೆ ವಾಲ್ಮೀಕಿ ಸಮುದಾಯ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಲಿದೆ ಎಂಬ ಮೆಸೇಜನ್ನು ವರಿಷ್ಟರಿಗೆ ಮುಟ್ಟಿಸುವುದು ಅವರ ಅಜೆಂಡಾ.
ಶಾಸಕ ಸ್ಥಾನಕ್ಕೆ ರಾಜಣ್ಣ ರಾಜೀನಾಮೆ? (Political analysis)
ಹೀಗೆ ಒಂದು ಕಡೆಯಿಂದ ಜಾರಕಿಹೊಳಿ ದಿಲ್ಲಿಗೆ ನುಗ್ಗಲು ಸಜ್ಜಾಗುತ್ತಿದ್ದರೆ, ಮತ್ತೊಂದು ಕಡೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಸಿದ್ದರಾಮಯ್ಯ ಅವರ ಮುಂದೆ ಪಕ್ಷ ತೊರೆಯುವ ಮಾತನಾಡಿದ್ದಾರೆ.ಕಳೆದ ವಾರ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದ ರಾಜಣ್ಣ:’ನನ್ನ ಮಾತುಗಳನ್ನು ತಿರುಚಿ ಮಂತ್ರಿಮಂಡಲದಿಂದ ವಜಾ ಮಾಡಿಸಲಾಗಿದೆ.
ಇದರ ಹಿಂದೆ ಏನು ನಡೆದಿದೆ?ಅಂತ ವಿಧಾನಸಬೆಯಲ್ಲೇ ಬಿಚ್ಚಿಡಲು ತೀರ್ಮಾನಿಸಿದ್ದೆ.ಆದರೆ ನಿಮ್ಮ ಸೂಚನೆಯಂತೆ ಮೌನಿಯಾದೆ. ಆದರೆ, ಪ್ರಕರಣ ನಡೆದು ಇಷ್ಟು ದಿನವಾದರೂ ನಿಜವಾಗಿ ನಡೆದಿದ್ದೇನು?ಅಂತ ಬಹಿರಂಗಪಡಿಸುವ,ನನಗೆ ನ್ಯಾಯ ಕೊಡಿಸುವ ಕೆಲಸವಾಗಿಲ್ಲ. ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೈ ಎಲೆಕ್ಷನ್ ಗೆ ನಿಲ್ಲುತ್ತೇನೆ.
ಕಾಂಗ್ರೆಸ್ಸೇ ಇರಲಿ,ಬಿಜೆಪಿ ಬರಲಿ,ಗೆದ್ದು ತೋರಿಸುತ್ತೇನೆ’ ಎಂದಿದ್ದಾರೆ. ಯಾವಾಗ ರಾಜಣ್ಣ ಹೀಗೆ ಸಿಟ್ಟು ತೋರಿಸಿದರೋ?ಆಗ ಅವರನ್ನು ಸಮಾಧಾನಿಸಿದ ಸಿದ್ದರಾಮಯ್ಯ:’ಇರ್ರೀ ರಾಜಣ್ಣ ,ನಾನು ಹೇಳಿದ್ದೇನಲ್ಲ?ಎಲ್ಲ ಸರಿಯಾಗುತ್ತೆ.ಸ್ವಲ್ಪ ಕಾಲ ಸುಮ್ಮನಿರಿ’ ಎಂದಿದ್ದಾರೆ.
ಆರ್.ಟಿ.ವಿಠ್ಠಲಮೂರ್ತಿ