1) ಕಳೆದ ಎರಡು ಮೂರು ದಿನಗಳಿಂದ,ದೇಶದ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ಸುದ್ದಿಯಿಂದ ವಿಚಲಿತನಾಗಿದ್ದ ನನಗೆ ದುಗುಡ ಆವರಿಸಿದಂತಾಗಿತ್ತು.
ಕೊಪ್ಪಳದ ಕವಿ ಮಿತ್ರ ಮಹೇಶ್ ಬಳ್ಳಾರಿಯವರ ‘ದುಬೈ ದೌಲತ್ತು’ಪ್ರವಾಸ ಕಥನ ಕೈಗೆ ಸಿಕ್ಕಾಗ ಒಂದೇ ಏಟಿಗೆ ಓದಿ ಮುಗಿಸಿದೆ.
ಮೊದಮೊದಲಿಗೆ, ಅಮೇರಿಕಾ,ದುಬೈ ಗಳಂತಹ ವಿದೇಶಗಳಿಗೆ ಕನ್ನಡ ಹಬ್ಬಕ್ಕೆಂದು ಹೋಗುವವರ ಬಗ್ಗೆ ಅಷ್ಟೇನೂ ಇಷ್ಟವಿಲ್ಲದ ನನಗೆ, ಮಹೇಶ ರ ದುಬೈ ಪ್ರವಾಸ ಕಥನದುದ್ದಕ್ಕೂ ಕೊಪ್ಪಳ ಎಂಬ ಊರೂ ಕೂಡ ಅವರ ಜೊತೆಗೆ ಪಯಣಿಸಿರುವುದು ಗೋಚರಿಸಿತು.
ಊರಿನ ಕಟಿಂಗ್ ಶಾಪಿನಲ್ಲಿ ಮೊತ್ತಮೊದಲು ವೀಲ್ ಚೇರ್ ಬಂದಾಗ ‘ರಾಜನ ಕುರ್ಚಿ’ಎಂದು ಸಂಭ್ರಮಿಸಿದ ಬಾಲ್ಯದ ನೆನಪುಗಳೊಂದಿಗೆ ಚಲಿಸುವ ಕಥನವು, ಉಸಿರುಗಟ್ಟಿಸುವ ಓಟದ ಬದುಕಿನ ಬೊಂಬಾಯಿಯ ರೈಲುಗಳ ವೇಗದಂತೆ ಅಲ್ಲಿನ ಜನರ ಬದುಕಿನ ಸ್ಪೀಡೂ ಇರುವುದರ ಕುರಿತು, ಕವಿಯ ಕಣ್ಣಿಂದ ನೋಡಿ ಮಿಡಿದಿದ್ದಾರೆ.
ಕೊಪ್ಪಳದಿಂದ ಮುಂಬೈನ ದಾದರ್ ನಲ್ಲಿನ ಬದುಕನ್ನು ಅವರು ವಿವರಿಸೋದು ಹೀಗೆ..
“…..ಎದುರಿಗೆ ರೈಲು ಮತ್ತು ಜನರ ಓಡಾಟ ನಿರಂತರವಾಗಿತ್ತು.ಬಲಕ್ಕೆ ಬೂಟ್ ಪಾಲಿಶ್ ಗಾಗಿ ಕುಳಿತ ಹತ್ತಾರು ಜೀವಗಳು ನಡೆದಾಡುವ ಬೂಟುಗಳನ್ನು ದಿಟ್ಟಿಸಿ ನೋಡುತ್ತಿದ್ದವು.
ಪೇಪರ್,ಹಾಲು ಇತರೆ ದಿನಸಿಗಳನ್ನು ಹರವಿಕೊಂಡು ಜೋಡಿಸುತ್ತಿದ್ದ ಕಾರ್ಮಿಕರ,ಲಗೇಜುಗಳಿಗಾಗಿ ಹಾತೊರೆಯುತ್ತಿದ್ದ ಕೂಲಿಗಳು, ಕೈ ಚಾಚಿದ್ದ ಭಿಕ್ಷುಕರ,ನಿರ್ಗತಿಕರ,ನರಳಾಡುತ್ತಿದ್ದ ರೋಗಿಗಳ,ತೂರಾಡುತ್ತಿದ್ದ ಕುಡುಕರ, ಅಲ್ಲಲ್ಲಿ ಮಲಗಿ ದವರು….ಹೀಗೆ ದಾದರಿನ ಬರ್ಬಾದ್ ಬದುಕು ನನ್ನೊಳಗೆ ತಲ್ಲಣಿಸಿ ಹೋಯಿತು”ಎಂದು ಬರೆಯುತ್ತಾರೆ.
ದಾದರಿನಿಂದ ಮಲಾಡ್ ಪ್ರದೇಶದ ವಸತಿಗೃಹವೊಂದರಲ್ಲಿದ್ದಾಗಲೂ ಮಹೇಶರಿಗೆ,”…..ಲಾಜ್ ಹಿಂಭಾಗದಲ್ಲಿ ಆಕಾಶಕ್ಕೆ ಚಾಚಿದ್ದ ಅವಳಿ ಕಟ್ಟಡಗಳು ಗಮನ ಸೆಳೆದವು. ಈ ಕಟ್ಟಡಗಳು ಅವೆಷ್ಟು ಜೀವಿಗಳ ರಕ್ತ, ಮಾಂಸ,ಬೆವರ ಹನಿಗಳ ಮೇಲೆ ನಿಂತಿವೆಯೋ ಎನಿಸಿತು” ಎಂದು ಬರೆಯುತ್ತಾರೆ.
….ಓಡುವ ಜನತೆ,ಪುಟ್ ಪಾತ್ ಜೀವನ,ನೋವುಗಳ ಅನಾವರಣ,ಹಸಿವು-ಬಡತನಗಳ ನೂರಾರು ಮುಖಗಳ ದರ್ಶನದಿಂದಲೂ ಹೃದಯ ಭಾರವಾಗುತ್ತದೆ.
ಭಾರತದ ಬಹುತ್ವದ ಪ್ರತಿನಿಧಿಯಂತೆ ಕಾಣುವ ಮಹೇಶ್,ದುಬೈ ಪ್ರವಾಸಕ್ಕೆ ಗೆಳೆಯ ಮೆಹಬೂಬ ಕಿಲ್ಲೆದಾರ, ಹಾಸ್ಯದ ನಗೆಗಡಲಿನಲ್ಲಿ ತೇಲಿಸುವ ಗೆಳೆಯ ಮರಿಯಪ್ಪನ ಜೊತೆಗೆ ತಮ್ಮ ನೆಲ, ಜನ, ತಮ್ಮತನ, ತಮ್ಮ ಬೇರುಗಳ ಕೊಪ್ಪಳ ಎಂಬ ಊರು ಕೂಡ ಸದಾ ಕಾಲ ಬಿಡಿಸದ ಬೆಸುಗೆಯ ಹಾಗೆ ಪ್ರಯಾಣದುದ್ದಕ್ಕೂ ಜೊತೆಗಾರ ನಾಗಿರುವುದು ಕಂಡುಬರುತ್ತದೆ.
Read Also: ಬೂಟು: ಅಸ್ತವ್ಯಸ್ತಗೊಂಡ ಭಾರತದ ಸಂಕೇತ
2) ನಾವು ಅಲ್ಲಿಗೆ ಹೋಗಿದ್ದು ಆಗಸ್ಟ್ ತಿಂಗಳಲ್ಲಿ, ಹೊರಗೆ ಕಾಲಿಟ್ಟರೆ ನಮ್ಮೂರಿನಲ್ಲಿ ಮೊಹರಂ ಹಬ್ಬದಲ್ಲಿ ಅಲೆದೇವರ ಕುಣಿಯಲ್ಲಿ ಹಾಕಿದ ಬೆಂಕಿಯ ಮುಂದೆ ಹಾಕಿದಂತಾಯಿತು.ನಿಗಿನಿಗಿ ಕೆಂಡದ ಝಳ…ಮತ್ತು ಉರಿ!
ನಮ್ಮ ಹಡಗಿನ ಹಿಂದೆಯೇ ಅವನಿದ್ದ ಸಣ್ಣ ದೋಣಿ ಚಲಿಸುತ್ತಿತ್ತು.ಡ್ಯಾನ್ಸ್ ಮುಗಿಯುತ್ತಲೇ ಆತ ತನ್ನ ಸಣ್ಣ ದೋಣಿಯಲ್ಲಿ ಮತ್ತೆ ಅವನು ತನ್ನ ಚೀಲಗಳನ್ನಾಕಿಕೊಂಡು ಹೊರಟುಬಿಟ್ಟ.ಮತ್ತೆ ಅವನ ಪ್ರಯಾಣ ಮತ್ತೊಂದು ದೋಣಿಯ ಕಡೆಗೆ.ಹೊಟ್ಟೆಪಾಡು…,
ಒಂದು ಕಡೆ ಮರಳು,ಇನ್ನೊಂದು ಕಡೆ ಉಪ್ಪುನೀರಿನ ಸಮುದ್ರ. ಒಂದು ಕಾಲದಲ್ಲಿ ಕೇವಲ ಮೀನು ಹಿಡಿದರೆ ಮಾತ್ರ ಆ ದಿನದ ಊಟ ಕಾಣುತ್ತಿದ್ದ ಕಡು ಬಡತನ ಅನುಭವಿಸಿದ ದುಬೈ ಎಂಬ ಮಾಯಾನಗರಿ ಇದೀಗ ಸಿರಿವಂತಿಗೆಯಲ್ಲಿ ಜಗತ್ತನ್ನೇ ತನ್ನೆಡೆಗೆ ಸೆಳೆದುಕೊಂಡಿರುವುದನ್ನು ಅಚ್ಚರಿ , ಉದ್ವೇಗಗಳಿಂದ ಜನ ನೋಡುತ್ತಾರೆ.
ನೀರನ್ನು ಬಂಗಾರದಂತೆ ಕಾಣುವ ದೇಶದಲ್ಲಿ, ತಿರುಗಾಡಿದ ನಂತರ ಲೇಖಕರಿಗೆ ,ಬೇರುಗಳ ಪಕ್ಕದಲ್ಲೇ ಇರುವ ಎಲೆಗಳಿಗಿಂತ ಬೇರುಗಳಿಂದ ಬಹುದೂರದಲ್ಲಿ,ಮರದ ತುದಿಯಲಿರುವ ಎಲೆಗಳಿಗೆ ಬೇರುಗಳ ಮೇಲೆ ಅಪರಿಮಿತ ಅಪ್ಪುಗೆಯ ಆಸೆ ಆಕಾಂಕ್ಷೆಗಳಿರುತ್ತವೆ ಎಂಬುದಾಗಿ ಹೇಳುತ್ತಾರೆ.
ಜಗವೆಲ್ಲ ಮಲಗಿರಲು
ಜಗಮಗಿಸುವ
ಈ ನೆಲದಲ್ಲಿ ಹಗಲು ಸವಾಲಿನ ಬದುಕು
ಇರುಳು ಹೊನಲಿನ ಜೀಕು
ಎನ್ನುವ ಕವಿ ಮನಸ್ಸಿಗೆ,ಮರಳಿ ಕೊಪ್ಪಳದ ಬಿಸಿಲು ಬಡಿದಾಕ್ಷಣ ನನ್ನೊಳಗಿನ ದುಗುಡಗಳೆಲ್ಲ ಕಳೆದುಹೋಗಿ,ಜೀವ ಚೈತನ್ಯ ಮೊಳಗಿತು ಎನ್ನುತ್ತಾರೆ.
ಬೆಳಕು ಕೈ ಕೊಟ್ಟರೂ ಕನಸುಗಳಿದ್ದೇ ಇವೆಯಲ್ಲಾ ಎಂಬ ಧೈರ್ಯದಲ್ಲಿ ಬದುಕುವ ಕವಿ,ಲೇಖಕ ದುಬೈ ನೆಪದಲ್ಲಿ ಭೂಮಂಡಲದ ನರಮಂಡಲ ಗಳನ್ನೇ ವಿಷಾದದ ನೆಲೆಯಲ್ಲಿ ತಡಕಾಡಲು ಪ್ರಯತ್ನಿಸಿದ್ದಾರೆ.
ಜಗವೇ ತಲೆಬಾಗಿ ನಮಿಸುವ ಹಾಗೆ ತೋರುವ ಬುರ್ಜ್ ಖಲೀಫಾ ಬೃಹತ್ ಕಟ್ಟಡದ ಎದುರು-ಗವಿಮಠದ ಗುಡ್ಡದ ವಿಶಾಲ ಹಾಸು ಬಂಡೆಗಳನ್ನು ಕಾಣಬಲ್ಲ ಶಕ್ತಲೇಖಕ ಮಹೇಶರಿಗೆ,ತನ್ನನ್ನು ತಾನು ನಿರಾಕರಿಸಿಕೊಳ್ಳುವ ಶಕ್ತಿಯಿದೆ
ಈ ಕಿರು ಪ್ರವಾಸ ಕಥನದುದ್ದಕ್ಕೂಲೇಖಕ ಸೃಜನಶೀಲ ಘಳಿಗೆಯಲ್ಲಿ ಮಿಂದೆದ್ದಿದ್ದಾರೆ. ಕೊಪ್ಪಳ ಟು ಮುಂಬೈ; ಮುಂಬೈ ಟು ದುಬೈ: ಮಾಯಾ ಲೋಕದ ಈ ‘ಪ್ರವಾಸ’ದುದ್ದಕ್ಕೂ ತನಗೆಲ್ಲಾ ಹೊಸದು ಎಂಬಂತೆ ನೋಡುವ ಲೇಖಕರ ಭಾವವು ಓದುಗರದೂ ಆಗುವಂತೆ ‘ಆಗುಮಾಡು’ವ ಈ ಪುಟ್ಟ ಕೃತಿ ಒಂದೇ ಏಟಿಗೆ ಓದಿದ ನಂತರ ಮನಸ್ಸಿಗೆ ನಿರಾಳತೆಯನ್ನಂತೂ ತಂದುಕೊಂಡು ಬಲ್ಲುದು.
ಬಿ.ಶ್ರೀನಿವಾಸ