ದಾವಣಗೆರೆ.ಅ.9 (Davanagere): ಅಡಿಕೆ ವ್ಯಾಪಾರಿಯನ್ನು ಬೆದರಿಸಿ 17 ಲಕ್ಷ ರೂಪಾಯಿಗೂ ಹೆಚ್ಚು ಹಣ ದರೋಡೆ ಮಾಡಿದ್ದ ಅಡಿಕೆ ವ್ಯಾಪಾರದ ಮಧ್ಯವರ್ತಿ ಸೇರಿದಂತೆ 7 ಜನರ ತಂಡವನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನಗಿರಿಯ ಮಹ್ಮದ್ ಇನಾಯತ್ (21), ಉಮ್ಮರ್ ಫಾರೂಕ್ (20) ಷಬುದ್ದೀನ್ ಖಾಜಿ ಅಲಿಯಾಸ್ ಶಾಹಿದ್ ಖಾಜಿ (24) ಹಾಗೂ ಮೈಸೂರಿನ ಸಲ್ಮಾನ್ ಅಹಮದ್ ಖಾನ್ (25), ಖುರಂ ಖಾನ್ (25) ತುಮಕೂರು ಜಿಲ್ಲೆ, ಸೈಯದ್ ಸೈಫುಲ್ಲಾ ಅಲಿಯಾಸ್ ಸೈಪು (24) ಮೈಸೂರು, ಹಾಗೂ ಖಾಷಿಪ್ ಅಹಮದ್ (25) ಬಂಧಿತ ಆರೋಪಿಗಳು.
ಅಡಿಕೆ ವ್ಯಾಪಾರದ ಮಧ್ಯವರ್ತಿ ಚನ್ನಗಿರಿ ಟೌನ್ ನಿವಾಸಿ ಮಹ್ಮದ್ ಇನಾಯುತುಲ್ಲಾ ಎಂಬಾತ ಜೋಳದಾಳ ಮತ್ತು ಕಲ್ಲಾಪುರ ಗ್ರಾಮಗಳಲ್ಲಿ 35 ಚೀಲ ಅಡಿಕೆ ಇದೆ ವ್ಯಾಪಾರ ಮಾಡಿಸಿಕೊಡುವುದಾಗಿ ಬುಳಸಾಗರದ ಅಶೋಕ ಅವರಿಗೆ ಹೇಳಿದ್ದಾರೆ. ಈ ಮಾತನ್ನು ನಂಬಿದ ಅಶೋಕ ಅವರು 17.24 ಲಕ್ಷ ರೂಗಳನ್ನು ತಗೆದುಕೊಂಡು ತಮ್ಮ ಬೊಲೆರೋ ಪಿಕ್‍ಅಪ್ ಗೂಡ್ಸ್ ವಾಹನದಲ್ಲಿ ತನ್ನ ಹಮಾಲರೊಂದಿಗೆ ಚನ್ನಗಿರಿಯ ಅಜ್ಜಿಹಳ್ಳಿ ಸರ್ಕಲ್‍ಗೆ ಬಂದು ಅಲ್ಲಿಂದ ಮಹ್ಮದ್ ಇನಾಯತ್ ವುಲ್ಲಾ ಜೊತೆಗೊಡಿ ಜೋಳದಾಳ್ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಭದ್ರಾವತಿ ಕಡೆಗೆ ಹೋಗುವ ಜೋಳದಾಳ ಅರಣ್ಯ ಪ್ರದೇಶದ ರಸ್ತೆಯಲ್ಲಿ ಮಹಮದ್ ಇನಾಯತ್ ಮೂತ್ರ ವಿಸರ್ಜನೆ ಮಾಡಬೇಕು ಗಾಡಿಯನ್ನು ನಿಲ್ಲಿಸು ಎಂದು ಹೇಳಿದಾಗ ಅಶೋಕ ಅವರು ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸುತ್ತಿದ್ದಂತೆ, ಹಿಂದಿನಿಂದ ಇನ್ನೋವ ಕಾರಿನಲ್ಲಿ ಬಂದ 7 ರಿಂದ 8 ಜನ ಅಪರಿಚಿತರು ಕೈಗಳಲ್ಲಿ ಚಾಕು ಹಿಡಿದುಕೊಂಡು ಅಶೋಕ ಮತ್ತು ಅವರ ಕಡೆಯವರನ್ನು ಹೆದರಿಸಿ ಅವರ ಬಳಿಯಲ್ಲಿದ್ದ 17,24,000 ರೂ ನಗದು, ಮೊಬೈಲ್ ಮತ್ತು ಗೂಡ್ಸ್ ವಾಹನದ ಕೀಯನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಈ ಕುರಿತು ಅಶೋಕ ಅವರು ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಉಮಾಪ್ರಶಾಂತ್ ಪರಿಶೀಲನೆ ನಡೆಸಿ ಚನ್ನಗಿರಿ ಉಪ-ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕರಾದ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ಚನ್ನಗಿರಿ ಠಾಣೆ ಪೊಲೀಸ್ ನಿರೀಕ್ಷಕ ಬಾಲಚಂದ್ರನಾಯ್ಕ್, ಪಿ.ಎಸ್.ಐಗಳಾದ ಸುರೇಶ್, ಜಗದೀಶ್, ಸಂಜೀವ್‍ಕುಮಾರ್, ಡಿಸಿಆರ್‍ಬಿ ಸಿಬ್ಬಂದಿಗಳಾದ ಮಜೀದ್ ಕೆ ಸಿ, ರಾಘವೇಂದ್ರ, ರಮೇಶ್ ನಾಯ್ಕ್, ಆಂಜನೇಯ, ಬಾಲಾಜಿ ಮತ್ತು ಚನ್ನಗಿರಿ ಠಾಣೆ ಸಿಬ್ಬಂದಿಗಳಾದ ಶಶಿಧರ್, ರಮೇಶ್, ರವಿ, ಚನ್ನಕೇಶವ, ಶ್ರೀನಿವಾಸ್, ಹರೀಶ್ ಕುಮಾರ್ ಮತ್ತು ರೇವಣಸಿದ್ದಪ್ಪ, ಸಂತೇಬೆನ್ನೂರು ಠಾಣೆ ಇವರುಗಳ ನೇತೃತ್ವದ ತಂಡ ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಅಶೋಕ ಅವರ ಜೊತೆಯಲ್ಲಿದ್ದ ವ್ಯಕ್ತಿಯೇ ಕೃತ್ಯ ಮಾಡಿಸಿರುವ ಬಗ್ಗೆ ಅನುಮಾನಗೊಂಡು ಮಧ್ಯವರ್ತಿ ಮಹ್ಮದ್ ಇನಾಯತ್ ವುಲ್ಲಾನನ್ನು ವಿಚಾರಣೆ ನಡೆಸಿ, ವೈಜ್ಞಾನಿಕ ತನಿಖಾ ಕ್ರಮಗಳನ್ನು ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.
Read also : Davanagere | ಪ್ರೀತಿ, ಪ್ರೇಮದ ಸುಳಿಯಲ್ಲಿ ಸಿಲುಕಿ ಬದುಕಿನ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ : ಎಸ್ಪಿ
ಚನ್ನಗಿರಿಯ ಈ ತಂಡ ಮೈಸೂರಿನ ಮತ್ತೊಂದು ತಂಡದ ಜೊತೆ ಸೇರಿ ಜೋಳದಾಳ್ ಅರಣ್ಯ ಪ್ರದೇಶದಲ್ಲಿ ದರೋಡೆ ಮಾಡುವುದರ ಬಗ್ಗೆ ಮೊದಲೇ ಸಂಚು ರೂಪಿಸಿ ಕೃತ್ಯ ಎಸಗಿರುವುದಾಗಿ ಹೆಚ್ಚಿನ ವಿಚಾರಣೆಯಿಂದ ತಿಳಿದು ಬಂದಿದೆ. ಇದೀಗ 7 ಮಂದಿ ಬಂಧಿತರಿಂದ 7,37,920/- ರೂ ನಗದು ಹಣವನ್ನು ಹಾಗೂ ಈ ಕೃತ್ಯಕ್ಕೆ ಬಳಸಿದ 04 ವಾಹನಗಳು ಹಾಗೂ 09 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.