ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಾಣಿಕೊಪ್ಪದ,ಶಿವರುದ್ರಯ್ಯ ಸ.ಹಿರೇಮಠ ಎಂಬ ಗಾಂಧಿವಾದಿ,ಬಳ್ಳಾರಿ ಜಿಲ್ಲೆಯ ಹೊಸಪೇಟೆ ಕಾಲೇಜಿನ ಮೇಷ್ಟ್ರಾಗುವ ಹೊತ್ತಿಗೆ ಭೀಮಸೇನರಾವ್ ಎಂಬ ಮಾರ್ಕ್ಸ್ ವಾದಿಯೊಬ್ಬರ ಪ್ರಭಾವದಿಂದಾಗಿ ಕಟ್ಟಾ ಮಾರ್ಕ್ಸ್ ವಾದಿಯಾದರು. ಸಿ.ಪಿ.ಎಂ.ಪಕ್ಷದ ಬೆಳವಣಿಗೆಗೆ ಅಪಾರವಾದ ಕೊಡುಗೆಯನ್ನು ನೀಡಿದರು.
ಈ ಭಾಗದಲ್ಲಿ ನೂರಾರು ಎಡಪಂಥೀಯ ನಾಯಕರು ಬೆಳೆಯಲು ಕಾರಣರಾದರು.1979-80ರ ಆಸುಪಾಸಿನಲ್ಲಿ ಜಿಲ್ಲೆಯಲ್ಲಿ ಜನಪರ ಹೋರಾಟಗಳು ಆಗಿನ್ನೂ ತೆರೆದುಕೊಳ್ಳುತ್ತಿದ್ದ ಕಾಲ.ಮೊಟ್ಟ ಮೊದಲ ಬಾರಿಗೆ ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಎಸ್.ಎಫ್.ಐ.ಸಂಘಟನೆಯನ್ನು ಹುಟ್ಟುಹಾಕಿದ್ದಲ್ಲದೆ,ಸಮುದಾಯ ಸಾಂಸ್ಕೃತಿಕ ಸಂಘಟನೆಗಳ ಮೂಲಕ ತೀವ್ರವಾಗಿ ಯುವ ಸಮುದಾಯವನ್ನು ಆಕರ್ಷಿಸಿದರು.
ಬಂಡ್ರಿ ರಾಘಪ್ಪ ಛತ್ರದಲ್ಲಿ “ಬೆಲ್ಚಿ” ನಾಟಕ ಆಡಿಸಿದರು.ಇದು ಹಲವಾರು ಯುವಕರ ಮೇಲೆ ಪರಿಣಾಮ ಬೀರಿತು.ಆ ನಂತರದಲ್ಲಿ ಸಾಂಸ್ಕೃತಿಕವಾಗಿ ಚಳುವಳಿಗಳನ್ನು ಕಟ್ಟುವುದಕ್ಕೆ ಕಟಿಬದ್ಧರಾದವರಂತೆ ಸಮುದಾಯ ತಂಡದ ಮೂಲಕ ಒಂದರ ಮೇಲೊಂದರಂತೆ ನಾಟಕಗಳನ್ನು ಬರೆದು,ನಿರ್ದೇಶಿಸಿದರು.
ಹುತ್ವಗಳನ್ನು ಒಗ್ಗೂಡಿಸುವ ನಿರಂತರ ಪ್ರಯತ್ನ
ಸಮುದಾಯದ ಆ ಕಾಲದ ನಾಟಕಗಳು ಯುವ ಮಸ್ಸುಗಳನ್ನು ಭಿನ್ನ ರೀತಿಯಲ್ಲಿ ಆಲೋಚಿಸಲು ಹಚ್ಚಿಬಿಟ್ಟವು.ಬೆಲ್ಚಿ,ನಂತರ ‘ಪತ್ರೆ ಸಂಗಪ್ಪನ ಕೊಲೆ’ಬೆಳೆದವರು,ದುಡಿಮೆಗಾರ ದೇವರು,ಇತ್ಯಾದಿ ನಾಟಕಗಳನ್ನು ಆಡಿಸುತ್ತಾ ,ಆಡುತ್ತಾ ಇಡೀ ಜಿಲ್ಲೆಯನ್ನು ಕೇವಲ ಸೈಕಲ್ ಮೇಲೆಯೇ ಸುತ್ತಾಡಿದರು.ಹೀಗೆ ಹತ್ತು ಹಲವು ಆಲೋಚನೆಗಳ ಮೇಷ್ಟ್ರು,ಭಾರತದ ಶಕ್ತಿಯಾದ ಬಹುತ್ವಗಳನ್ನು ಒಗ್ಗೂಡಿಸುವ ನಿರಂತರ ಪ್ರಯತ್ನ ಮಾಡಿದರು.
ಒಬ್ಬ ಕಾಲೇಜು ಮೇಷ್ಟ್ರಾಗಿ ಚಳುವಳಿಗಳಿಗೆ ಸಂಬಂಧಿಸಿದ ಗೋಡೆಬರಹಗಳನ್ನು ಮತ್ತು ರಸ್ತೆಬರೆಹಗಳಿಗೆ ಸ್ವತಃ ಅವರೇ ನಿದ್ದೆಗೆಟ್ಟು ರಾತ್ರಿಯೆಲ್ಲಾ ಗೋಡೆಬರೆಹ ಮಾಡುತ್ತಿದ್ದರು ಎಂಬುದನ್ನು ಕೇಳುವುದಕ್ಕೆ ರೋಮಾಂಚನವಾಗುವ ಕಾಲದಲ್ಲಿ ಈಗ ನಾವಿದ್ದೇವೆ.ಇಂಥದ್ದೇ ಒಂದು ರಾತ್ರಿ,ಒಂದು ಮನೆಯ ಯಜಮಾನರಾಗಿದ್ದ ವಕೀಲರೊಬ್ಬರು ಬಾಯಿಗೆ ಬಂದಂತೆ ಬೈದದ್ದನ್ನೂ ,ಹಿರೇಮಠರು ಕ್ಷಮೆ ಕೋರಿದ್ದಕ್ಕೆ ಸಾಕ್ಷಿಯಂತೆ ಈಗಲೂ ಇವೆ.
1981ರ ಜನವರಿ 15 ರಿಂದ ಹದಿನೇಳು ದಿನಗಳ ಕಾಲ ಬಳ್ಳಾರಿ ಜಿಲ್ಲೆಯಾದ್ಯಂತ ನಡೆದ ಸಮುದಾಯ ಸಾಂಸ್ಕೃತಿಕ ಜಾಥಾ (ಸೈಕಲ್ ಜಾಥಾ )ಹಲವಾರು ಪಾಠಗಳನ್ನು ಕಲಿಸಿತು.ಜೊತೆಗೆ ನೂರಾರು ಯುವಕರನ್ನು ಸಂಘಟನೆಗೆ ಸೆಳೆಯಿತು.
ಇಂಥದ್ದೇ ಒಂದು ದಿನ 1981ರ ಒಂದು ಮಟ ಮಟ ಮಧ್ಯಾಹ್ನ ,ಹಡಗಲಿ ತಾಲೂಕಿನ ಹೊಳಲು ಗ್ರಾಮದ ಸಂತೆಯ ಬಯಲಿನಲ್ಲಿ ಕುರುಚಲು ಗಡ್ಡದ ಕಾಲೇಜು ಮೇಷ್ಟ್ರು ಬೆಲ್ಚಿ ಬೀದಿ ನಾಟಕಕ್ಕಾಗಿ ತಮ್ಮ ಕಂಚಿನ ಕಂಠದಿಂದ ಹೀಗೆ ಕೂಗುತ್ತಿದ್ದರು,
ತಾಳೋದಂದ್ರೆ ಎಲ್ಲಿತನಕ
ಬಗ್ಗೋದಂದ್ರೆ ಭೂಮಿತನಕ
ಹೆಣ್ ಕಿತ್ರು ಮಣ್ ಕಿತ್ರು
ಹೊಟ್ಟೇನ್ ಸಿಟ್ಟು ರಟ್ಟೇಲ್ ಬಂದ್ರೆ
ಬಡ್ಡಿ ಮಕ್ಳು ನೂರ್ ಚೂರ್
ಚೂರ್ ಚೂರ್ ನೂರ್ ಚೂರ್ ನೂರ್ ಚೂರ್..
ಹೀಗೆ ತಾವೇ ಬರೆದ ಸಂಭಾಷಣೆಗಳನ್ನು ಹೇಳುತ್ತಾ, ಗೆಳೆಯರಂತಿದ್ದ ವಿದ್ಯಾರ್ಥಿಗಳ ಹಲಿಗೆ ಬಡಿತದ ಸದ್ದು ಕೇಳುತ್ತಾ….ಚಳುವಳಿಗಳನ್ನು ಕಟ್ಟಿದ ಹಿರೇಮಠರು,ನಾಡು ಕಟ್ಟುವ ಭರದಲ್ಲಿ ಮನೆಮಾರು ಮರೆತರು. ಅದುವರೆಗೂ ಇದ್ದೂ ಇಲ್ಲದಂತಿದ್ದ ಕಮ್ಯೂನಿಸ್ಟ್ ಪಾರ್ಟಿಗೆ ಮಾತ್ರ ಹೊಸ ವೈಚಾರಿಕತೆಗಳ ಮೇಷ್ಟ್ರು- ಮತ್ತವರ ಸೂಜಿಗಲ್ಲಿನಂತೆ ಆಕರ್ಷಸುವ ಗುಣದಿಂದಾಗಿ ಅನೇಕ ಹೊಸಬರು ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕಾರಣವಾಯಿತು.
ಪೊಲೀಸರ ಲಾಠಿಯೇಟುಗಳನ್ನೂ ತಿನ್ನಬೇಕಾಯಿತು
ಇದರಿಂದ ಚಳುವಳಿಗಳಿಗೆ ಆನೆಬಲ ಬಂದಂತಾಯಿತು. ಹೊಸಪೇಟೆಯ ಕಾಲೇಜಿನಲ್ಲಿದ್ದಾಗ ಮಾರ್ಕ್ಸ್ವಾದ ದ ತೀವ್ರತೆಯಿಂದಾಗಿ ಇವರ ಮೇಲೆ ಆಂಧ್ರದ ನಕ್ಸಲೈಟ್ ರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಗುಲ್ಲು ಎದ್ದು ಪೊಲೀಸರ ಲಾಠಿಯೇಟುಗಳನ್ನೂ ತಿನ್ನಬೇಕಾಯಿತು.ಆದರೆ ಇವರ ನೋವಿದ್ದುದು ತಮ್ಮಿಂದಾಗಿ ಅಮಾಯಕ ಕಾರ್ಯಕರ್ತರು ನೋವು ಉಣ್ಣಬೇಕಾಯಿತಲ್ಲವೆಂದು ನೊಂದುಕೊಂಡರು.
ಅಸ್ಪೃಶ್ಯತೆಯ ವಿರೋಧಿ ಹೋರಾಟಕ್ಕೆ ಸ್ಫೂರ್ತಿ ತುಂಬಿದರು
ಆಗ ಹೊಸಪೇಟೆಯ ರಸ್ತೆಗಳಲ್ಲಿ “ನಕ್ಸಲೈಟ್ ನಮಗೆ ಗೊತ್ತಿಲ್ಲ,ಹೋರಾಟ ಬಿಡಲ್ಲ”ಘೋಷಣೆಗಳು ಕೇಳಿಬಂದವು.ಹೊಸಪೇಟೆಯಿಂದ ಹಲವು ಆರೋಪಿಗಳ ಮೇಲೆ ಅವರನ್ನು ಹೂವಿನ ಹಡಗಲಿಗೆ ವರ್ಗಾಯಿಸಲಾಯಿತು.ಅಲ್ಲಿಗೆ ಹೋದಾಗಲೂ ಹರಿಜನಕೇರಿಯ ಗಾಳೆಮ್ಮನಗುಡಿಯಲ್ಲಿ ಅಸ್ಪೃಶ್ಯತೆಯ ವಿರೋಧಿ ಹೋರಾಟಕ್ಕೆ ಸ್ಫೂರ್ತಿ ತುಂಬಿದರು.ಅಲ್ಲಿಯೂ ಅನೇಕ ಸಂಕಟ,ಅನುಮಾನಗಳಿಗೆ ತುತ್ತಾದರು.
ಕಿಂದರಿಜೋಗಿಯಂತೆ ಓಣಿ,ಓಣಿ,ಊರೂರು ಅಲೆದು ಕಮ್ಯುನಿಸ್ಟ್ ಪಡೆಯನ್ನು ಕಟ್ಟಿದರು.ಜನರ ನಡುವೆ ಓಡಾಡುತ್ತಲೇ ಕ್ರಾಂತಿಯ ಬೀಜ ಬಿತ್ತುವ ಮಾಂತ್ರಿಕನಂತೆ ಕಾಣಿಸುತ್ತಿದ್ದ ಉತ್ರಾಣಿ ಕಡ್ಡಿಯಂತಿದ್ದ ಮೇಷ್ಟ್ರನ್ನು ಕಂಡರೆ ಆಗದ ವಿರೋಧಿಗಳ ಗುಂಪು ಇದ್ದಿತು.ಒಂದಲ್ಲಾ ಒಂದು ಅಪವಾದದ ಗೂಬೆಯನ್ನು ಕೂಡಿಸಲು ಯೋಜಿಸುತ್ತಿದ್ದವರಿಗೆ 1982ರ ಅದೊಂದು ದಿನ ರಾತ್ರಿ,ಹಡಗಲಿಯ ದೇವರಗುಡಿಯೊಂದರಲ್ಲಿ ಯಾರೋ ಚಪ್ಪಲಿ ಎಸೆದಿದ್ದಾರೆ ಎನ್ನುವ ಗುಲ್ಲು ಎದ್ದಿತು.
ಅದು ಸತ್ಯವೋ ಸುಳ್ಳೋ ಎಂದು ಪರಾಮರ್ಶಿಸದೆ,ಕಿಡಿಗೇಡಿಗಳು ಅವರ ಹೆಸರಿಗೆ ಮಸಿ ಬಳಿಯುವ ವಿವಾದ ಎಬ್ಬಿಸಿದರು.ಮೊದಲೇ ಕೆಂಗಣ್ಣು ಬಿಡುತ್ತಿದ್ದ ಊರಿನ ಮುಖಂಡರು,ಹಿರೇಮಠರನ್ನು ಪೊಲೀಸ್ ಸ್ಟೇಷನ್ನಿಗೆ ಕರೆಯಿಸಿ,ತಮ್ಮ ಚಪ್ಪಲಿಗಳನ್ನು ತೋರಿಸಿ “ನೀನೆ ಹೊಡಕಂತೀಯಾ…ಇಲ್ಲಾ..ನಾವೇ ಹೊಡೀಬೇಕಾ?”ಎಂದರು.
ನಾನು ಇಂಥ ತಪ್ಪು ಮಾಡುವ ಹೇಡಿ ಮನುಷ್ಯನಲ್ಲ
ಸ್ವಲ್ಪವೂ ವಿಚಲಿತರಾಗದ ಮೇಷ್ಟ್ರು,”ನಾನು ಇಂಥ ತಪ್ಪು ಮಾಡುವ ಹೇಡಿ ಮನುಷ್ಯನಲ್ಲ”ಎಂದು ಖಡಾಖಂಡಿತವಾಗಿ ಮತ್ತು ಅಷ್ಟೇ ನಿರ್ಭಿಡೆಯಿಂದ ನಿರಾಕರಿಸಿದರು.ಇಂತಹ ಎಷ್ಟೋ ಹಿಂಸೆಯ ಕ್ಷಣಗಳಿಗೆ ಬದುಕನ್ನು ಒಡ್ಢಿಕೊಂಡರೂ ಅವರೆಂದೂ ಹೋರಾಟಗಳಿಂದ ವಿಮುಖರಾಗಲಿಲ್ಲ.ಪ್ರಗತಿಪರ ತಂಡಗಳು ಬಲಿಷ್ಟವಾಗುತ್ತಿದ್ದ ಹಂತದಲ್ಲಿಯೇ ಅವರನ್ನು ಹರಪನಹಳ್ಳಿ ಕಾಲೇಜಿಗೆ ವರ್ಗಾಯಿಸಲಾಯಿತು.
ಈ ನಡುವೆ ದಲಿತರ ಸಾಂಸ್ಕೃತಿಕ ಅಧ್ಯಯನಕ್ಕೆ ತೊಡಗಿ,ದಲಿತರೆಂದಿಗೂ ಬೌದ್ಧಿಕವಾಗಿ ಹಿಂದುಳಿದವರಲ್ಲ ಎಂದ ಹಿರೇಮಠರನ್ನು ಸಿ.ಪಿ.ಎಂ. ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಯ್ತು.ಜಾತಿ ಸಂಘಟನೆಗಳನ್ನು ಮಾಡುತ್ತಿದ್ದಾರೆಂಬ ಆರೋಪವನ್ನೂ ಮೇಷ್ಟ್ರು ಮೇಲೆ ಮಾಡಲಾಯಿತು.
ನಿಗೂಢತೆಯನ್ನೆ ಹೊದ್ದಂತಿರುವ ಪಕ್ಷದಲ್ಲಿ ಪ್ರಜಾಸತ್ತಾತ್ಮಕ ಚರ್ಚೆಗಳು ನಡೆಯಲಿಲ್ಲ.ಇದರಿಂದಾಗಿ ಹಿರೇಮಠರು ಪಾರ್ಟಿಯ ಕೇಂದ್ರದಲ್ಲಿದ್ದ ಡಿಕ್ಟೇಟರ್ ಷಿಪ್ ನ್ನೂ ಪ್ರಶ್ನಿಸಿದರು.ಪರಿಣಾಮ,ಪಕ್ಷದಿಂದ ಹೊರಬರಬೇಕಾಯ್ತು.ಎಲ್ಲ ಅಸಹಾಯಕರ ಹಾಗೆ ಡೆಮಾಕ್ರಟಿಕ್ ಕಮ್ಯುನಿಸ್ಟ್ ಪಾರ್ಟಿ ಎಂಬ ಹೊಸ ಪಕ್ಷ ಕಟ್ಟಲು ಹವಣಿಸಿ ವಿಫಲರಾದರು.
ವ್ಯವಸ್ಥೆಯ ಜೊತೆಗೆಂದೂ ರಾಜಿಯಾಗದ ಹಿರೇಮಠರನ್ನು ಕಂಡರೆ, ಸ್ವತಃ ಒಂದು ಕಾಲದ ಒಡನಾಡಿಗಳಾಗಿದ್ದ ಮಂತ್ರಿ ಎಂ.ಪಿ.ಪ್ರಕಾಶರೂ ಸಹ ಮೇಷ್ಟ್ರನ್ನು ವಿರೋಧಿಸಲು ಚಾಲೂ ಮಾಡಿದರು.”ಆ ಅಯ್ಯಪ್ಪನಿಗೆ ಬಾಯಿ ಮುಚ್ಚಿಕೊಂಡಿರಾಕ ಹೇಳ್ರಿ ಯಾವುದಾದ್ರೂ ಪ್ರಶಸ್ತಿ ಕೊಡಿಸೋಣ” ಎಂದಿದ್ದರಂತೆ.
ಇಂಥವುಗಳಾವುದಕ್ಕೂ ತಲೆಕೆಡಿಸಿಕೊಳ್ಳದ ಛಲಗಾರ,ಮೇಲ್ಜಾತಿಯಲ್ಲಿ ಹುಟ್ಟಿದ್ದರೂ,ದಲಿತರು ,ಹಿಂದುಳಿದವರು ಏಳಿಗೆಗಾಗಿ ದುಡಿದು,ಅವರ ಸಾಂಸ್ಕೃತಿಕ ಅಸ್ಮಿತೆಗಾಗಿ,ಕಟ್ಟಕಡೆಯ ವ್ಯಕ್ತಿಯೋರ್ವನ ಸಂಕಟ,ಅವಮಾನಗಳಿಗೆ ಸದಾ ಮಿಡಿದ ಜೀವ ಎಸ್ಸೆಸ್ ಹಿರೇಮಠರದು.
ಹರಪನಹಳ್ಳಿಗೆ ಸಾಂಸ್ಕೃತಿಕ ಸ್ಪರ್ಶ
ಕೋಮುವಾದಿ ಸರ್ಕಾರದಲ್ಲಿ ಅರಸಿ ಬಂದ ಪ್ರಶಸ್ತಿಯನ್ನು ತಿರಸ್ಕರಿಸಿ,ತಮ್ಮ ಪ್ರತಿರೋಧವನ್ನು ದಾಖಲಿಸಿದರು. ನಂಬಿದ ಸಿದ್ಧಾಂತಗಳನ್ನು ಎಂದಿಗೂ ಕೈಬಿಡದ ಹಿರೇಮಠರು,ಅಲ್ಲಿ ಕೂಡ ದೊಡ್ಡ ಪಡೆಯನ್ನೇ ಕಟ್ಟಿಬೆಳೆಸಿದರು.ಅನೇಕ ನಾಟಕಗಳನ್ನು ಆಡಿಸಿ, ಹರಪನಹಳ್ಳಿಗೆ ಸಾಂಸ್ಕೃತಿಕ ಸ್ಪರ್ಶವನ್ನು ನೀಡಿದರು.
ವರ್ತಮಾನಕ್ಕೆ ಮುಖಾಮುಖಿಯಾಗಿ ಬೆಲ್ಚಿ,ಪತ್ರೆ ಸಂಗಪ್ಪನ ಕೊಲೆ,ಹಷ್ಮಿಅಮರ,ಜೋಗತಿ ಕಲ್ಲು ಮುಂತಾದ ಬೀದಿ ನಾಟಕಗಳನ್ನು ಆಡಿಸಿದರು.ವಿಶೇಷವೆಂದರೆ ಇಂತಹ ನಾಟಕಗಳಿಗೆ ಸಂಭಾಷಣೆ,ಕತೆಗಳ ದೃಶ್ಯಗಳನ್ನು ,ಹಾಡುಗಳು ರಾಗ ಸಂಯೋಜನೆಯನ್ನು ಗೆಳೆಯರಂತಿದ್ದ ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿದ್ದರು.ಹಲವು ಬೀದಿನಾಟಕಗಳಿಗೆ ಹರಪನಹಳ್ಳಿಯ ಕವಿಗಳು ರಚಿಸಿದ ಹಾಡುಗಳನ್ನು ಸಂಯೋಜಿಸಿದರು.
ಓ ಕವನವೇ
ಅಳಲು ಬಿಡು ನನಗೆ
ಹೊನಲುಕ್ಕಿ ಹರಿದು ಬರಲಿ
ಎಸ್ಸೆಸ್ ಹಿರೇಮಠರ ಮೊದಲ ಕವನದ ಸಾಲುಗಳೇ ಅವರ ಸಾವಿನ ತನಕವೂ ಅವರನ್ನು ಹಿಂಬಾಲಿಸಿದ್ದು ಮಾತ್ರ ದುರಂತವೇ ಸರಿ.
ಬಹುತೇಕ ಸೃಜನಶೀಲ ಲೇಖಕರಿಗೆ ಸಾರ್ವಜನಿಕತೆ ಉಸಿರುಗಟ್ಟಿಸುವಂತಾಗಿಬಿಡುತ್ತದೆ.ಆಗ ಏಕಾಂತಕ್ಕೆ ಓಡುವುದುಂಟು.ಆದರೆ ಎಸ್ಸೆಸ್ ಮಾತ್ರ ಲೋಕದ ಜನರ ನಡುವೆ ಇದ್ದೇ ಬರೆಯುತ್ತಾರೆ ಇದೊಂದು ಕನ್ನಡ ಚಳುವಳಿ ಪ್ರತಿಭೆಯ ಅನನ್ಯ ಮಾದರಿ-ಎಸ್ಸೆಸ್ ಹಿರೇಮಠ ಎಂದೇ ಹೇಳಬೇಕಾಗುತ್ತದೆ.
ನೀವು ಹೋದಿರಿ ನಿಜ-
ಆದರೆ ನೀವು ಅರಳಿಸಿದ ಹೂಗಳ
ಕಂಪಿಗೆಲ್ಲಿಯ ಸಾವು!
ನೀವು ನೀಡಿದ ಹೊಸ ಕಣ್ಣಿಗೆ ಎಲ್ಲಿಯೇ ನೋವು
ನೀವೆಳೆದ ಬಂಡಾಯ ಬಂಡಿಗೆಲ್ಲಿಯ ನಿಲವು?
ಎನ್ನುವ ಕವಿ ಹುರಕಡ್ಲಿ ಶಿವಕುಮಾರರ ಮಾತುಗಳು ನಮ್ಮೆಲ್ಲರವೂ ಆಗಿವೆ.
…ಮುಂದುವರಿಯುವುದು.
ಬಿ.ಶ್ರೀನಿವಾಸ