ದಾವಣಗೆರೆ: ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಕೊಡುವಾಗ ತರಗತಿ ಶಿಕ್ಷಕರನ್ನು ಅವರ ಜೊತೆ ಕರೆಯುವುದು ಒಂದು ಉತ್ತಮ ಸಂಪ್ರದಾಯವಾಗಿದೆ. ನಾವು ಜ್ಞಾನ-ವಿಜ್ಞಾನ ಹೇಗೆ ಕಲಿಯುತ್ತೇವೆಯೋ ಅದರಂತೆ ಸುಜ್ಞಾನವನ್ನು ಕಲಿಯಬೇಕು ಎಂದು ಡಾ. ಎಂ.ವಿ. ಸತ್ಯನಾರಾಯಣ ಹೇಳಿದರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಭಾನುವಾರ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂದೆ-ತಾಯಿ, ಗುರುಗಳಿಗೆ ಮತ್ತು ನಮಗಿಂತ ಹಿರಿಯರಿಗೆ ಗೌರವಿಸುವ, ನಮಸ್ಕರಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕು. ಜ್ಞಾನದ ಜೊತೆಗೆ ಸಂಸ್ಕಾರವನ್ನು ಪಡೆಯಬೇಕು. ಅಂತಹ ಉತ್ತಮ ಸಂಸ್ಕಾರವನ್ನು ನೀಡಿ ಮಕ್ಕಳಲ್ಲಿ ಶಿಕ್ಷಣದ ಜೊತೆ ಸುಜ್ಞಾನವನ್ನು ಈ ಶಾಲೆ ಬೆಳೆಸುತ್ತಿದೆ. ಮಕ್ಕಳು ಶಿಕ್ಷಣದ ಜೊತೆ ಸಂಸ್ಕಾರವನ್ನು ಬೆಳೆಸಿಕೊಂಡು ಶ್ರೇಷ್ಠ ವ್ಯಕ್ತಿಗಳಾಗಿರಿ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್ ಮಾತನಾಡಿ, ಆಧ್ಯಾತ್ಮಿಕತೆ, ಶಿಕ್ಷಣ & ಸೇವೆಗೆ ಸ್ವಾಮಿ ಬಹಳ ಮಹತ್ವ ನೀಡಿದ್ದಾರೆ. ಅದರಂತೆ ಮಕ್ಕಳಲ್ಲಿ ಬಾಲ್ಯದಿಂದಲೇ ಸೇವಾ ಮನೋಭಾವವನ್ನು ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಾ ಬಂದಿದ್ದೇವೆ. ಮಕ್ಕಳು ಒತ್ತಡದಿಂದ ಶಿಕ್ಷಣವನ್ನು ಕಲಿಯದೇ, ಸಂತೋಷದಿಂದ, ಆನಂದದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಕಲಿಕೆ ಫಲಪ್ರದವಾಗುತ್ತದೆ. ಬಾಲವಿಕಾಸ ತರಗತಿಗಳಲ್ಲಿ ಸಣ್ಣ ಸಣ್ಣ ನೀತಿ ಕಥೆಗಳನ್ನು, ಶ್ಲೋಕಗಳು ಮತ್ತು ವೇದಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತಿ ಬೆಳೆಸಲಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಆರ್.ಸುಜಾತ ಕೃಷ್ಣ, ಜ್ಞಾನಮೂರ್ತಿ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರು ಮೇರು ಪರ್ವತವಿದ್ದಂತೆ, ಅವರನ್ನು ವರ್ಣಿಸಲು ಅಸಾಧ್ಯ ಅವರು ತಿಳಿಸಿದ ಸಂದೇಶಗಳನ್ನು ನಾವು ಪಾಲಿಸಬೇಕು. ಹಿಂದೆ ಯಾವ ಅವತಾರಗಳೂ ಮಾಡದಿರುವಂಥ ಸೇವೆಯನ್ನು ಸ್ವಾಮಿ ಮಾಡಿದ್ದಾರೆ.
Read also : ಹೆಣ್ಣನ್ನು ಪೌರಾಣಿಕ ಕಾಲದಿಂದಲೂ ದ್ವಿತೀಯ ದರ್ಜೆಯಾಗಿ ಕಾಣಲಾಗುತ್ತಿದೆ: ಡಾ. ಎಚ್. ಎಲ್. ಪುಷ್ಪ ಕಳವಳ
ಮಾನವ ಸೇವೆಯೇ ಮಾಧವ ಸೇವೆ ಎಂದು ಹೇಳಿ ಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಸ್ವಾಮಿಯ ತಾಯಿ ಈಶ್ವರಮ್ಮನವರಿಗೆ ಕೊಟ್ಟ ಮಾತಿನಂತೆ ಸ್ವಾಮಿ ಯಾವ ದೇಶಗಳಿಗೂ ಹೋಗದೆ ತಮ್ಮ ಜನ್ಮ ಭೂಮಿಯನ್ನೇ ಕರ್ಮ ಭೂಮಿಯನ್ನಾಗಿ ಮಾಡಿಕೊಂಡು ಧರ್ಮ ಕ್ಷೇತ್ರವನ್ನಾಗಿಸಿದರು.
ನರ್ಸರಿಯಿಂದ ಹಿಡಿದು ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ. ಉಚಿತ ಶಿಕ್ಷಣ ನೀಡಿದರು. ಉಚಿತ ಚಿಕಿತ್ಸೆ ನೀಡುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಟ್ಟಿಸಿದರು. ಯಾವ ಸರ್ಕಾರಗಳೂ ಮಾಡದೇ ಇರುವ ಹಳ್ಳಿ ಹಳ್ಳಿಗಳಿಗೂ ಸುಮಾರು 2000 ಮೈಲುಗಳಷ್ಟು ಪೈಪ್ ಲೈನ್ ಹಾಕಿಸಿ ಕುಡಿಯುವ ನೀರಿನ ಯೋಜನೆಯನ್ನು ಆಂದ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕಾರ್ಯರೂಪಕ್ಕೆ ತಂದರು. ತಮ್ಮ ತಾಯಿಗೆ ಕೊಟ್ಟ ಮಾತಿನಂತೆ, ಸಮಾಜಕ್ಕೆ ಮತ್ತು ಮಾನವ ಜನಾಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದರು. ಇಡೀ ವಿಶ್ವವೇ ಪುಟ್ಟಪರ್ತಿಯ ಕಡೆಗೆ ನೋಡುವಂತೆ ಮಾಡಿದರು.
ಸಮಾಜ ನಮಗೇನು ಕೊಟ್ಟಿದೆ ಎಂದು ಪ್ರಶ್ನಿಸುವ ಬದಲು ಸಮಾಜಕ್ಕೆ ನಾವೇನು ಕೊಡುಗೆ ನೀಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ವಿದ್ಯೆ ಜೀವನಕ್ಕಾಗಿ ಅಲ್ಲ, ಜೀವನದ ಸಾರ್ಥಕತೆಗಾಗಿ ಎಂದು ಸ್ವಾಮಿ ಹೇಳಿರುವಂತೆ ನೀವೆಲ್ಲರೂ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಸಮಾಜಕ್ಕೆ ಕೊಡುಗೆ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳುವಂತವರಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಶ್ರೀ ಸತ್ಯ ಸಾಯಿ ಸಮಿತಿಯ ಅಧ್ಯಕ್ಷರಾದ ಸಾಯಿ ಕಿರಣ್ ರಾಯ್ಕರ್ ಮಾತನಾಡಿ, ಎಲ್ಲಾ ಕಡೆ ದೇವರಿದ್ದಾನೆ. ನಿಮ್ಮ ತಂದೆ-ತಾಯಿಗಳು ದೇವರ ಪ್ರತಿನಿಧಿಗಳು, ಕೃತಘ್ನತೆಯ ಮನೋಭಾವ ಹಾಗೂ ಸ್ವಾಮಿ ಸಂದೇಶವಾದ ದೈವ ಪ್ರೀತಿ, ಪಾಪ ಭೀತಿ, ಸಂಘ ನೀತಿ ಇವುಗಳನ್ನು ಮಕ್ಕಳು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬಾಲವಿಕಾಸ ವಿದ್ಯಾರ್ಥಿಗಳು ತಮ್ಮ ಜೀವನ ಪರ್ಯಂತ ಸ್ವಾಮಿಯ ಆದರ್ಶವನ್ನು ಮತ್ತು ಶಿಸ್ತನ್ನು ಪಾಲಿಸುತ್ತಿರಬೇಕು ಎಂದು ತಿಳಿಸಿದರು.
ಈಶ್ವರಮ್ಮ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್, ಶಾಲಾಡಳಿತ ಮಂಡಳಿಯ ಸದಸ್ಯರಾದ ಕೆ.ವಿ.ಸುಜಾತ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಬಿ.ಎನ್. ಸಾಯಿಪ್ರಸಾದ್ ಉಪಸ್ಥಿತರಿದ್ದರು.
ಶಾಲಾ ಉಪಪ್ರಾಂಶುಪಾಲರಾದ ಜಿ.ಎಸ್. ಶಶಿರೇಖಾ ವಂದಿಸಿದರು. ಇದೇ ಸಂದರ್ಭ ದಲ್ಲಿ ಪ್ರೌಢ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶ್ರೀ ಸತ್ಯ ಸಾಯಿ ವಿದ್ಯಾರ್ಥಿ ವೇತನ ನೀಡಲಾಯಿತು.
2025 ರ ಉತ್ತಮ ವಿದ್ಯಾರ್ಥಿ ಪುರಸ್ಕಾರ ಮತ್ತು ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.
ರೋಹಿಣಿ ಎಂ. ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಶಾಲೆಯ ಎಲ್ಲಾ ಮಕ್ಕಳಿಗೆ ಜನ್ಮ ಶತಮಾನೋತ್ಸವದ ಅಂಗವಾಗಿ ಮಹಾಪಸಾದದ ವ್ಯವಸ್ಥೆ ಮಾಡಲಾಯಿತು.
