ಹರಿಹರ (Harihara): ಪ.ಜಾತಿ-ಪಂಗಡಗಳ ಒಳ ಮೀಸಲಾತಿ ಜಾರಿಗೆ ಸರ್ವೋಚ್ಚ ನ್ಯಾಯಾಲಯದ ಸಪ್ತ ನ್ಯಾಯಾಧೀಶರ ಸಂವಿಧಾನಿಕ ಪೀಠವು ಐತಿಹಾಸಿಕ ತೀರ್ಪನ್ನು ನೀಡಿದ್ದು ರಾಜ್ಯ ಸರ್ಕಾರವು ಒಳ ಮೀಸಲಾತಿ ಜಾರಿಗೆ ವಿಳಂಬ ನೀತಿ ಅನುಸರಿಸುತ್ತಿದೆ. ಈ ಕೂಡಲೇ ಸರ್ಕಾರ ಒಳ ಮೀಸಲಾತಿಯ ಅನುಷ್ಠಾನ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾದಿಗ ಸಮಾಜದ ಯುವ ಪಡೆ ಮಹೇಶ್ ಕುಮಾರ್ ಎನ್. ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಯಾಗುವವರೆಗೂ ಯಾವುದೇ ನೇಮಕಾರಿ ನಡೆಸಬಾರದು ಎಂದ ಅವರು, ಮೀಸಲಾತಿಗಾಗಿ ಕಳೆದ 30 ವರ್ಷಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಕುರಿತು ಸರ್ಕಾರವು ನ್ಯಾ. ಎ ಜೆ ಸದಾಶಿವ ಆಯೋಗ, ಕಾಂತರಾಜು ವರದಿ, ನ್ಯಾ. ನಾಗಮೋಹನ್ ದಾಸ್ ಆಯೋಗ ಮತ್ತು ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯ ವರದಿಗಳನ್ನು ಪಡೆದಿದೆ. ಆದರೆ ಸರ್ಕಾರಗಳ ವಿಳಂಬ ನೀತಿಯಿಂದ ನಮ್ಮ ಸಮುದಾಯವು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಎಚ್ಚೆತ್ತುಕೊಂಡು ಒಳ ಮೀಸಲಾತಿ ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ದಾವಣಗೆರೆ ಜಿಲ್ಲಾ ಮಾದಿಗ ಚಲವಾದಿ ಸಮುದಾಯಗಳ ಒಕ್ಕೂಟದಿಂದ ಅ 23 ರಂದು ಬೃಹತ್ ಪ್ರತಿಭಟನೆಯನ್ನು ದಾವಣಗೆರೆ ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭಿಸಿ ಎಸಿ ಕಚೇರಿಗೆ ಸಾಗಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಒಳ ಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸುವ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
Read also : Davanagere | ಕರ್ನಾಟಕ ಪೊಲೀಸರು ದೇಶಕ್ಕೆ ಮಾದರಿ : ಸುರೇಶ್ ಬಿ.ಇಟ್ನಾಳ್
ಪ್ರತಿಭಟನೆಯಲ್ಲಿ ಹರಿಹರ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ದಲಿತ ಸಂಘ ಸಂಘಟನೆಗಳ ಹೋರಾಟಗಾರರು, ಪದಾಧಿಕಾರಿಗಳು, ಸಮಾಜದ ಮುಖಂಡರು, ಗುರು ಹಿರಿಯರು, ಯುವಕರು, ಹಿತೈಷಿಗಳು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಒಕ್ಕೂಟದ ಯುವ ಪಡೆಯ ವತಿಯಿಂದ ಶ್ರೀಕಾಂತ್, ಮಂಜುನಾಥ್, ಷಣ್ಮುಖ, ಸಾಗರ್, ಮಹೇಶ್ ವೈ, ವಿಕ್ರಂ ದೊಡ್ಡಮನಿ ಆಕಾಶ್ ಹಾಗೂ ಇತರರು ಉಪಸ್ಥಿತರಿದ್ದರು.