ಭಾರತದಲ್ಲಿ ‘ಗೌತಮಬುದ್ಧನು’ (Gautama Buddha) ಹೊಸ ಧಾರ್ಮಿಕ ಪ್ರವಾದಿ, ಪ್ರಥಮ ಸಮಾಜ ಸುಧಾರಕ. ವರ್ಣವ್ಯವಸ್ಥೆ ಪ್ರತಿಪಾದಿಸಿದ ಕುರುಡು ಆಚರಣೆಗಳನ್ನು ವಿರೋಧಿಸಿದ, ದಯೆ, ಅನುಕಂಪ, ಮಾನವ ಪ್ರೀತಿ ಹಾಗೂ ಸಹೋದರತ್ವ ಪ್ರತಿಪಾದಿಸಿದ. ವರ್ಣವ್ಯವಸ್ಥೆಯಿಂದ ನಲುಗಿಹೋದ, ಹತಾಶರಾಗಿದ್ದ ಜನವರ್ಗಕ್ಕೆ ಮಾನವರೆಲ್ಲರೂ ‘ಸಮಾನರು’ ಎಂಬ ಬುದ್ಧನ ತತ್ವ, ನೀತಿಯಿಂದ ಸಮಾಜದ ಕೆಳವರ್ಗ, ಜಾತಿಗಳ ಜನರಿಗೆ ಸ್ವರ್ಗ ಸಮಾನವಾದ ಅವಕಾಶಗಳಾದವು.
ಮಾನವನ ಆತ್ಮಕ್ಕೆ ಅಂಟಿದ ಅನಿಷ್ಟಗಳನ್ನು, ದೋಷಗಳನ್ನು ಹೊರತಳ್ಳಿ ಶುಚಿಗೊಳಿಸುವ ಧರ್ಮವೆಂದು ‘ಬೌದ್ಧಧರ್ಮವು’ ಹೆಸರು ಗಳಿಸಿತು. ಬುದ್ಧನ ಸಂದೇಶಗಳು ಜನತೆಯ ಬದುಕನ್ನು ಪರಿವರ್ತಿಸಿದವು, ಅನುಯಾಯಿಗಳನ್ನಾಗಿ ಮಾಡಿದವು.
‘ಬೌದ್ಧಮತವು’ ಒಂದು ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಆಂದೋಲನವೇ ಆಗಿ ಬೆಳೆದು ಭಾರತದ ವ್ಯಾಪ್ತಿಯಲ್ಲೇ ಉಳಿಯದೇ ಹೊರ ದೇಶಗಳಾದ ಟಿಬೆಟ್, ಚೀನಾ, ಕೋರಿಯಾ, ಬರ್ಮ, ಥೈಲೆಂಡ್, ಕಾಂಬೋಡಿಯಾ, ವಿಯಟ್‍ನಾಂ, ಲಾವೋಸ್, ಮಲೇಶಿಯಾ, ಇಂಡೋನೇಶಿಯಾ, ಜಾವಾ, ಸುಮತ್ರಾ, ಫಿಲಿಪೈನ್, ಶ್ರೀಲಂಕಾ ಹಾಗೂ ಜಪಾನ್ ದೇಶಗಳಿಗೆ ಪ್ರಸಾರಗೊಂಡು ಬೌದ್ಧಧರ್ಮವು ಜಾಗತಿಕ ಧರ್ಮವಾಗಿ ಬೆಳೆದು, ಕೊಟ್ಯಾಂತರ ಅನುಯಾಯಿಗಳನ್ನು ಹೊಂದಿದೆ.
ಸಿದ್ಧಾರ್ಥನ ಜನನ, ಬಾಲ್ಯ ಜೀವನ: (Gautama Buddha)
ಹಿಮಾಲಯದ ತಪ್ಪಲಿನ ರಾಜ್ಯ ಕಪಿಲವಸ್ತು, ಶಾಕ್ಯಗಣರಾಜ್ಯ, ಉತ್ತರ ಭಾರತದ ನಾಗರಿಕತೆಯ ಪರಿಧಿಯಲ್ಲಿ ಇಂದು ದಕ್ಷಿಣ ನೇಪಾಳದಲ್ಲಿರುವ ಗಂಗಾನದಿಯ ಜಲಾನಯನ ಪ್ರದೇಶದ ಉತ್ತರ ಅಂಚಿನಲ್ಲಿರುವ ಕಪಿಲವಸ್ತು ಬಳಿಯ ಲುಂಬಿನಿಯಲ್ಲಿ ಕ್ರಿ.ಪೂ. 564ರ ಹುಣ್ಣೆಮೆಯೆಂದು ಬುದ್ಧನು ಜನಿಸಿದನು. ತಂದೆ ರಾಜ ಶುದ್ಧೋದನ, ತಾಯಿ ರಾಣಿ ಮಹಾಮಾಯೆ. ಹುಟ್ಟಿದ ಮಗುವಿಗೆ ಸಿದ್ಧಾರ್ಥ ಎಂದು ಹೆಸರಿಟ್ಟರು.
ಈ ರಾಜ ವಂಶದ ಕುಲಗುರುಗಳಾದ ‘ಆಸಿತಮುನಿ’ ತಿಳಿಸಿದಂತೆ ಮಗು ಸಿದ್ಧಾರ್ಥ ಜಗತ್ ಪ್ರಸಿದ್ಧ ಚಕ್ರವರ್ತಿಯಾಗುವನು, ಇಲ್ಲವೇ ಜಗತ್ತಿನ ಜನರ ಮನಸ್ಸನ್ನು, ಹೃದಯಗಳನ್ನು ಗೆಲ್ಲುವ ಮಹಾಪುರುಷನಾಗುವನು ಎಂಬ ಆಶಯ ವ್ಯಕ್ತ ಪಡಿಸಿದ್ದರೆಂಬುದು ಉಲ್ಲೇಖ. ತಾಯಿ ರಾಣಿ ‘ಮಹಾಮಾಯೆ’ ಬಹಳ ದಿನ ಬದುಕದೇ ಅಸುನೀಗಿದಳು. ಮಗುವಿನ ಆರೈಕೆಯನ್ನು ರಾಜ ಶುದ್ಧೋದನನ ಕಿರಿಯರಾಣಿ ‘ಪ್ರಜಾವತಿ’ಗೆ ನೋಡಿಕೊಳ್ಳುವ ಜವಾಬ್ದಾರಿ ಬಂದಿತು.
ಸಿದ್ಧಾರ್ಥನನ್ನು ಬಾಲ್ಯದಲ್ಲಿ ಕೃತಕವಾದ ಸುಖ, ಸಂತೋಷದ ವಾತಾವರಣದಲ್ಲಿ ಬೆಳೆಸಿದರು. ರಾಜನ ಏಕೈಕ ಪುತ್ರನಾದ ಸಿದ್ಧಾರ್ಥ ಬಾಲ್ಯದಲ್ಲಿ ಹೆಚ್ಚು ಅಂತರ್ಮುಖಿಯಾಗಿದ್ದ. ಹಲವು ವರ್ಷಗಳು ಕಳೆದವು ಸಿದ್ಧಾರ್ಥನ ಮನಸ್ಥಿತಿ ಬದಲಾಗಲಿಲ್ಲ. ಸಹಜೀವಿಗಳ, ಪ್ರಾಣಿಪಕ್ಷಿಗಳ, ಇತರ ಜೀವಜಾಲದ ಬಗ್ಗೆ ಕರುಣೆ, ಅನುಕಂಪ ಬೆಳೆಯುತ್ತ ಬಂದವು. ರಾಜಕುಮಾರನಿಗೆ ಸಲ್ಲತಕ್ಕ ವಿದ್ಯಾಭ್ಯಾಸಗಳು ಆದವು. ಉತ್ತಮ ವಿದ್ಯಾರ್ಥಿಯಾಗಿದ್ದ, ಗ್ರಹಣಶಕ್ತಿ ಅದ್ಬುತವಾಗಿತ್ತು. ಹದಿಹರೆಯದ ಘಟ್ಟವನ್ನು ತಲುಪಿದ. ಅಂತರ್ಮುಖಿ ಸ್ವಭಾವ ಮುಂದುವರೆಯಿತು. ಆತನಿಗೆ ಮದುವೆ ಒಂದೇ ದಾರಿ ಎಂಬ ತೀರ್ಮಾನಕ್ಕೆ ಬಂದರು. ಸೂಕ್ತಳಾದ ವಧುವಿನ ಹುಡುಕಾಟಕ್ಕೆ ತೊಡಗಿದರು.
ಸಿದ್ಧಾರ್ಥನ ವಿವಾಹ, ಸಾಂಸಾರಿಕ ಜೀವನತ್ಯಾಗ: (Gautama Buddha)
ಸಿದ್ಧಾರ್ಥನಿಗೆ ಮುದುವೆಯ ಏರ್ಪಾಡಾಯಿತು. ಸಂಗಾತಿ ಆಯ್ಕೆಗೆ ‘ಸ್ವಯಂವರ’ ನಡೆಸುವ ಕುರಿತು ಎಲ್ಲಾ ರಾಜ್ಯಗಳಿಗೆ ಪ್ರಚಾರ ಕಾರ್ಯಮಾಡಿದರು. ಈ ಸ್ವಯಂವರಕ್ಕೆ ವಿವಿಧ ರಾಜ್ಯಗಳಿಂದ ವಧುಗಳು ಆಗಮಿಸಿದರು. ರಾಜಕುಮಾರ ಸಿದ್ಧಾರ್ಥ ಅತ್ಯಂತ ಸುಂದರಿಯಾದ ರಾಜಕುಮಾರಿ ‘ಯಸೋಧರೆ’ಯ ಕೊರಳಿಗೆ ಹೂಮಾಲೆ ಹಾಕಿ, ಆಯ್ಕೆ ಮಾಡಿದ. ಇವರಿಬ್ಬರ ವಿವಾಹ ವಿಜೃಂಭಣೆಯಿಂದ ನೆರವೇರಿತು.
ಸಿದ್ಧಾರ್ಥನ ದಾಂಪತ್ಯ ಜೀವನ ಹೆಚ್ಚುಕಾಲ ಉಳಿಯಲಿಲ್ಲ. ಅವರ ಚಿಂತನಾಲಹರಿಯು, ಅಂತರ್ಮುಖಿ ಭಾವವು, ಏಕಾಂಗಿಯಾಗಿ ಉಳಿಯುವುದು ರಾಣಿ ‘ಯಶೋಧರೆ’ಗೆ ಗೊಂದಲವುಂಟಾಯಿತು. ಸಿದ್ಧಾರ್ಥನ ಮನಸ್ಸು ಸಾಂಸಾರಿಕ ತ್ಯಾಗ, ಧ್ಯಾನ, ಚಿಂತನೆಗಳ ಕಡೆ ವಾಲಿತು.
ತಾನು ಜನರಲ್ಲಿ ಕಂಡ ಸಾವು, ರೋಗ, ವೃದ್ದಾಪ್ಯ, ದುಃಖ, ದುಮ್ಮಾನಗಳ ಸಮಸ್ಯೆಗಳಿಂದ ಹೊರಬರಲು ಉಪಾಯವನ್ನು, ಶಾಶ್ವತಶಾಂತಿಗೆ ಏನಾದರೂ ಮಾರ್ಗವಿದೆಯೇ ಎಂಬುದೇ ಅವನ ಜಿಜ್ಞಾಸೆಯಾಗಿತ್ತು. ಇದೇ ಸಂದರ್ಭದಲ್ಲಿ ರಾಣಿ ‘ಯಶೋಧರೆ’ ಗಂಡು ಮಗುವಿಗೆ ಜನ್ಮವಿತ್ತಳು. ಮಗುವಿಗೆ ‘ರಾಹುಲ್’ ಎಂದು ಹೆಸರಿಟ್ಟರು.
ಮಗುವಿನ ಪ್ರೀತಿ, ಹಾಗೂ ಮೋಹ ಸಿದ್ಧಾರ್ಥನನ್ನು ಸಾಂಸಾರಿಕ ಕರ್ತವ್ಯಗಳತ್ತ ಎಳೆದು ತರುವುದು ಎಂಬ ವಿಶ್ವಾಸ, ನಂಬಿಕೆ ತಂದೆ-ತಾಯಿಗಳಿಗೆ ಇತ್ತು. ಈ ಪ್ರಾಪಂಚಿಕ ಜೀವನವನ್ನು ತ್ಯಜಿಸುವದು ಒಂದೇ ದಾರಿ ಎಂದು ಸಿದ್ಧಾರ್ಥ ತೀರ್ಮಾನಿಸಿದ, ದೃಢಸಂಕಲ್ಪ ಮಾಡಿದ ‘ಮಧ್ಯರಾತ್ರಿ ಎದ್ದು ಹೋದ ಬುದ್ಧ’ ಇದು ಸಾಮಾನ್ಯ ಕಥೆಯಾದರೆ. ಪಕ್ಕದ ರಾಜ್ಯದವರೊಂದಿಗೆ ನಡೆದ ನದಿಯ ಜಲವಿವಾಧ, ವ್ಯಾಜ್ಯದಿಂದ ಬೇಸರಗೊಂಡ ಸಿದ್ಧಾರ್ಥ ತನ್ನ ಸಾಮ್ರಾಜ್ಯ ತೊರೆದ ಎಂಬ ಕಥೆಗಳಿವೆ.
Read also : ಖಾಸಗಿ ಕಾರ್ಯಕ್ರಮಕ್ಕೆ ಬಿ.ವಾಮದೇವಪ್ಪ ಅಧ್ಯಕ್ಷತೆ : ದಾವಣಗೆರೆ ಸಾಹಿತ್ಯ ವಲಯದಲ್ಲಿ ಅಸಮಾಧಾನ
ಏನೇ ಇದ್ದರೂ ‘ಹುಣ್ಣೆಮೆಯ’ ದಿನದಂದು ರಾಜಕುಮಾರ ಸಿದ್ಧಾರ್ಥ ಸಾಂಸಾರಿಕ ಬಂಧನದಿಂದ ತನ್ನ ಅರಮನೆಯಿಂದ ಕಾಡಿನತ್ತ ಪ್ರಯಾಣಿಸಿದ ಸಂಗತಿ ಸುಳ್ಳೆನಲ್ಲ. ಅರಣ್ಯದ ಅಂಚಿನಲ್ಲೇ ಹರಿಯುವ ‘ಅನೋಮಾ’ ನದಿಯ ದಂಡೆಯ ಮೇಲೆ ತನ್ನ ಆಭರಣಗಳನ್ನು, ರಾಜ ಉಡುಪುಗಳನ್ನು ಕಳಚಿ ತನ್ನ ರಥದ ಸಾರಥಿ ‘ಚಂಡಕನ’ ಕೈಗಿತ್ತು ಅರಮನೆಗೆ ವಾಪಸ್ಸು ಹೋಗಲು ಹೇಳಿದ. ಸಿದ್ಧಾರ್ಥ ಪ್ರಾಪಂಚಿಕ ಜೀವನ ತ್ಯಾಗಮಾಡಿದ ಸಂಗತಿಯಿಂದ ತಂದೆ, ತಾಯಿ, ಪತ್ನಿ ಹಾಗೂ ಸಾಮ್ರಾಜ್ಯದ ಪ್ರಜೆಗಳೆಲ್ಲರೂ ಚಿಂತಾಕ್ರಾಂತರಾದರು. ಆಗ ಸಿದ್ಧಾರ್ಥನ ಮಗ ‘ರಾಹುಲ್’ ಒಂದು ವರ್ಷದ ಮಗುವಾಗಿದ್ದನು.
ಸಿದ್ಧಾರ್ಥನ ಆಧ್ಯಾತ್ಮಿಕ ವಿಕಾಸ:(Gautama Buddha)
ಅರಮನೆಯ ಸುಗಂಧ ದ್ರವ್ಯಗಳ ಸುವಾಸನೆಗೆ ಒಗ್ಗಿ ಹೋಗಿದ್ದ ಸಿದ್ಧಾರ್ಥನಿಗೆ ದಟ್ಟ ಅರಣ್ಯದ ವಾಸನೆ, ವಿಶಿಷ್ಟ ಅನುಭವ ನೀಡಿತು. ಕೆಲವು ದಿನಗಳ ಕಾಲ ಅರಣ್ಯದಲ್ಲಿ ನಡೆಯುತ್ತಲೇ ಹೋದ. ಮಗಧ ರಾಜಧಾನಿಯ ಪಕ್ಕದಲ್ಲೇ ಬೆಟ್ಟ ಶ್ರೇಣಿಯ ಬುಡದಲ್ಲಿದ್ದ ಗವಿಗಳಲ್ಲಿ ಅನೇಕ ಜನ ಸಾಧಕರು ಧ್ಯಾನ, ತಪಸ್ಸಿನಲ್ಲಿ ನಿರತರಾಗಿದ್ದರು. ಅಲ್ಲಿರುವ ಆಶ್ರಮಕ್ಕೆ ಸೇರಿದ, ಗುರು ಋಷಿ ಆಲಾದರ ಶಿಷ್ಯತ್ವ ಪಡೆದ.
ಸಿದ್ಧಾರ್ಥ ಅನೇಕ ದಿನಗಳ ಕಾಲ ಧ್ಯಾನಮಾಡಿದ ಆಧ್ಯಾತ್ಮದ ಜ್ಞಾನ ಸಿಗಲಿಲ್ಲ. ನಂತರ ತನ್ನ ಗುರಿಸಾಧನೆಗಾಗಿ ‘ಅಲಾರ್ಕಲಂ’ ಎಂಬ ಗುರುವಿನ ಆಶ್ರಮ ಸೇರಿದ. ಸದಾಕಾಲ ತಪಸ್ಸು, ಧ್ಯಾನ ಮಾಡತೋಡಗಿದ ಸಿದ್ಧಾರ್ಥ ಬಯಸಿದ್ದು ಸಿಗಲಿಲ್ಲ. ನಂತರ ‘ಉದ್ಧಕರಾಮಪುತ್ರ’ ಎಂಬ ಗುರುವಿನ ಆಶ್ರಮಕ್ಕೆ ಹೋದ. ಅಲ್ಲಿಂದ ‘ಐದು’ ಜನ ಸನ್ಯಾಸಿಗಳೊಂದಿಗೆ ‘ಉರುವೆಲಾ’ ಎಂಬ ಕಾಡಿನಲ್ಲಿ ಬಂದು ಧ್ಯಾನವನ್ನು ಪ್ರಾರಂಭಿಸಿದ.
‘ಆರುವರ್ಷಗಳ’ ವರೆಗೆ ಈ ಸಾಧನೆ ಮುಂದುವರೆದು ಸಿದ್ಧಾರ್ಥನು ಬಹುಕಾಲದಿಂದ ಹಂಬಲಿಸುತ್ತಿದ್ದ ‘ಸತ್ಯದಸಾಕ್ಷಾತ್ಕಾರ’, ಪರಮಜ್ಞಾನ ಪ್ರಾಪ್ತಿಯಾಯಿತು. ಯಾವ ಮರದಡೀ ಜ್ಞಾನೋದಯವಾಯಿತೋ ಅದು ‘ಭೋಧಿವೃಕ್ಷ’ ವೆಂದೇ ಪ್ರಖ್ಯಾತವಾಗಿದೆ. ಬೌದ್ಧರಿಗೆ ಈ ಮರ ಅತ್ಯಂತ ಪವಿತ್ರವಾಗಿದೆ. ಬುದ್ಧಪಡೆದ ಜ್ಞಾನವನ್ನು ಅನುಯಾಯಿಗಳು ‘ಭೋಧಿಸತ್ವ’ ಎಂದು ಕರೆಯುವರು. ಭೋಧಿವೃಕ್ಷದ ಕೆಳಗೆ ಗಳಿಸಿದ ಆಧ್ಯಾತ್ಮಿಕ ಜ್ಞಾನದ ತಿರುಳು ಎಂದು ಇದರ ಅರ್ಥವಾಗಿದೆ.
ಗೌತಮಬುದ್ಧನ ಭೋಧಿಸತ್ವ ಬೋಧನೆಗಳು:(Gautama Buddha)
ಗೌತಮನೊಂದಿಗೆ ‘ಉರುವೆಲ’ದಲ್ಲಿ ಧ್ಯಾನಿಸುತ್ತಿದ್ದ ‘ಐದು’ ಜನ ಸನ್ಯಾಸಿಗಳು ಸಿದ್ಧಾರ್ಥನನ್ನು ಬಿಟ್ಟು ‘ಸಾರನಾಥದ’ ಬಳಿಯ ಅರಣ್ಯವೊಂದರಲ್ಲಿ ಆಧ್ಯಾತ್ಮ ಸಾಧನೆ ಮಾಡುತ್ತಿದ್ದರು. ಅನೇಕ ಕಾಲದ ನಂತರ ಅವರಿಗೆ ಸಿದ್ಧಿಯಾಗಲಿ, ಜ್ಞಾನವನ್ನಾಗಲಿ ಪಡೆಯಲಾಗಲಿಲ್ಲ. ಪುನಃ ಗೌತಮನಲ್ಲಿಗೆ ಬಂದು ನಮಗೆ ಮಾರ್ಗವನ್ನು ತೋರಿಸು ಎಂದು ಕೋರಿದರು.
ಬುದ್ಧನು ಅವರನ್ನು ನೋಡಿ ಅಭಯಹಸ್ತದ ಮುದ್ರೆಯನ್ನು ತೋರಿದರು. ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದರ ಸಂಕೇತವಾಗಿತ್ತು. ಈ ‘ಐವರು’ ಬುದ್ಧನ ಮೊದಲ ಶಿಷ್ಯರಾದವರು. ಅವರಿಗೆ ‘ಭೋಧಿಸತ್ವ’ವನ್ನು ಬೋಧಿಸಿದ ಅದುವೇ ಬುದ್ಧನ ಮೊಟ್ಟ ಮೊದಲ ಬೋಧನೆಯಾಗಿದೆ.
ಸಾತ್ವಿಕ ಜೀವನ ನಡೆಸಲು ಕೆಲವು ತತ್ವಗಳನ್ನು ಅನುಸರಿಸಿ; ದುರಾಸೆಯನ್ನು ಹತೋಟಿಯಲ್ಲಿಡಿ, ಅದುವೇ ಎಲ್ಲಾ ಅನಿಷ್ಟಗಳ ಮೂಲವಾಗಿದೆ; ಎಲ್ಲಾ ಮನುಷ್ಯರು ಸಮಾನರು, ಜಾತಿ, ಜನಾಂಗಗಳ ನಡುವೆ ಭೇದವೆಣಿಸಬೇಡಿ; ಕಠೋರ ಮಾತು ಕೈಯ ಏಟಿಗಿಂತಲೂ ಬಲವಾದದು, ಮೃದುವಾದ ಮಾತುಗಳನ್ನಾಡಿ, ಎಲ್ಲರ ಬಗ್ಗೆಯೂ ಅನುಕಂಪ ವಿರಲಿ. ಗೌತಮ ಬುದ್ಧ ಆಡಿದ ಈ ಮಾತುಗಳು ಸರಳವೂ, ನೇರವೂ, ಸಮರ್ಪಕವೂ, ಸಹಜವೂ ಆಗಿದ್ದವು. ಈ ಸರಳವಾದ ಸತ್ಯಗಳು ಜನತೆಯ ಮೇಲೆ ಪರಿಣಾಮವನ್ನುಂಟು ಮಾಡಿದವು.
ಒಂದು ಪಂಥದ ರೂಪವನ್ನು ಪಡೆದುಕೊಂಡವು. ಹೊಸಬೆಳಕನ್ನು, ಹೊಸ ತಿಳುವಳಿಕೆಯನ್ನು ಮೂಡಿಸಿದವು. ಈ ತತ್ವ ಪ್ರಸಾರಮಾಡಲು ‘ಅರವತ್ತು’ ಜನ ಶಿಷ್ಯರು ನಿರತರಾದರು. ಬುದ್ಧನು ವರ್ಷದ ನಾಲ್ಕು ತಿಂಗಳು ಒಂದು ಸ್ಥಳದಲ್ಲಿ, ಉಳಿದ ಎಂಟು ತಿಂಗಳುಕಾಲ ‘ಊರೂರು’ ಸಂಚರಿಸುತ್ತ ತನ್ನ ಸಂದೇಶಗಳನ್ನು ಸಾರುತ್ತಿದ್ದನು. ಅವರ ಮಾತುಗಳನ್ನು ಕೇಳಲು ಜನ ಕಿಕ್ಕಿರಿದು ಸೇರುತ್ತಿದ್ದರು. ಲಕ್ಷಾಂತರ ಜನ ಅನುಯಾಯಿಗಳಾದರು.ಬುದ್ಧನ
‘ಸಂಘ’ ರಚನೆಯ ನಿಯಮಗಳು: (Gautama Buddha)
ಬುದ್ಧನ ಅನುಯಾಯಿಗಳ ಕೂಟವನ್ನು ಜನರು ‘ಸಂಘ’ ಎಂದು ಕರೆಯತೊಡಗಿದರು. ಸಂಘವನ್ನು ಸೇರಬಯಸುವ ಜನರು ಈ ವಾಕ್ಯಗಳನ್ನು ‘ಮೂರು’ ಬಾರಿ ಹೇಳಬೇಕಿತ್ತು. “ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ”. ನಾನು ಬುದ್ಧನಿಗೆ ಶರಣುಬರುವೆ, ಸಂಘಕ್ಕೆ ಶರಣು ಬರುವೆ, ಧರ್ಮಕ್ಕೆ ಶರಣು ಬರುವೆ ಎಂಬುದೇ ಇದರರ್ಥ.
ಅನುಯಾಯಿಗಳ, ಅಭಿಮಾನಿಗಳ ಹಾಗೂ ಬೆಂಬಲಿಗರ ದೇಣಿಗೆಯ ಸಂಪನ್ಮೂಲದಿಂದ ಆಶ್ರಮಗಳು, ವಿಹಾರಗಳು, ಛತ್ರಗಳು ನಿರ್ಮಾಣವಾದವು. ಬುದ್ಧವಿಹಾರದ ವಾಸಿಗಳು ಈ ನಿಯಮಗಳನ್ನು ಅನುಸರಿಸಬೇಕಿತ್ತು. ಹಿಂಸಾಚಾರ ಸಂಪೂರ್ಣವಾಗಿ ನಿಷಿದ್ಧ; *ಕಳ್ಳತನ ಮಾಡಕೂಡದು; ಸುಳ್ಳು ಹೇಳಕೂಡದು; ಮಾದಕ ವಸ್ತು ಸೇವನೆ ಮಾಡಬಾರದು; ಬರೀ ನೆಲದಲ್ಲಿ ಮಲಗಬೇಕು. ಮೆತ್ತನೆಯ ಹಾಸಿಗೆ ಬಳಸಬಾರದು; ಕಟ್ಟುನಿಟ್ಟಿನ ಬ್ರಹ್ಮಚರ್ಯವನ್ನು ಪಾಲಿಸಬೇಕು; ಬಂಗಾರ, ಬೆಳ್ಳಿಯನ್ನು ಉಪಯೋಗಿಸಕೂಡದು; ಆಲಸಿಯಾಗಿ ತಿರುಗಾಡಬಾರದು; ಊಟ, ಉಪಹಾರಗಳನ್ನು ನಿಗದಿತ ಕಾಲದಲ್ಲಿ ಮಾತ್ರ ಮಾಡಬೇಕು; ಹಾಡು, ಕುಣಿತ, ವಾದ್ಯ ಸಂಗೀತಗಳಿಗೆ ಅವಕಾಶವಿಲ್ಲ, ಇತ್ಯಾದಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿತ್ತು.
ಬುದ್ಧನು ಶಿಷ್ಯರಿಗೆ ವಿಧಿಸಿದ್ಧ ಆಚಾರ ಸಂಹಿತೆಗಳು: (Gautama Buddha)
ಹಳದಿಬಟ್ಟೆ ತೊಡಬೇಕು; ಸರಳವಾದ ಆಹಾರ ಸೇವಿಸಬೇಕು; ಪ್ರತಿದಿನವೂ ಪಡೆದ ಭಿಕ್ಷೆಯಿಂದ ಹೊಟ್ಟೆ ಹೊರೆಯಬೇಕು; ಯಾವುದೇ ವೈಯಕ್ತಿಕ ಆಸ್ತಿ-ಪಾಸ್ತಿ ಹೊಂದಬಾರದು; ಜಾತಿ, ವರ್ಣ, ಜನಾಂಗ ಭೇದದಲ್ಲಿ ನಂಬಿಕೆ ಇಡಬಾರದು; ಎಲ್ಲರನ್ನು ಸಮಾನವಾಗಿ ಪರಿಗಣಿಸಬೇಕು, ಪ್ರೀತಿ, ಅನುಕಂಪದಿಂದ ಅವರೊಂದಿಗೆ ಇರಬೇಕು; ಯಾವುದೇ ಪ್ರಾಣಿಯನ್ನು ಕೊಲ್ಲಬಾರದು; ಯಾವುದೇ ಐಹಿಕ ಸುಖೋಪ ಭೋಗಗಳಲ್ಲಿ ಭಾಗವಹಿಸಬಾರದು; ವರ್ಣವ್ಯವಸ್ಥೆ ರೂಪಿಸಿರುವ ಯಾವುದೇ, ಆಚಾರ, ಸಂಪ್ರದಾಯಗಳನ್ನು ಅನುಸರಿಸಬಾರದು.
ಬುದ್ಧನ ‘ಸಂಘ’ ಸೇರಿದ ಮಹಿಳೆಯರು: (Gautama Buddha)
ಸಂಘದ ನೈತಿಕ ಶಿಸ್ತಿಗೆ ಧಕ್ಕೆ ಬರಬಾರದೆಂದು ಬುದ್ಧ ಮಹಿಳೆಯರಿಗೆ ‘ಸಂಘ’ ಸೇರಲು ಆರಂಭದಲ್ಲಿ ಅವಕಾಶ ಮಾಡಿದ್ದಿಲ್ಲ. ಆದರೆ ಪರಮಶಿಷ್ಯ ಆನಂದನ ವಿಚಾರಗಳಿಗೆ ಸಮ್ಮತಿಸಿ, ಅನುಮತಿಸಿದ. ಇದರಿಂದ ಮಹಿಳೆಯರೂ ‘ಸಂಘ’ ಸೇರಲು ಬೌದ್ಧ ಭಿಕ್ಕುಗಳಾಗಲು ಅವಕಾಶವಾಯ್ತು. ಮಹಿಳೆಯರಿಗಾಗಿಯೇ ವಿಹಾರಗಳು ತೆರೆದವು.
ಸಾವಿರಾರು ಜನ ಮಹಿಳೆಯರು ‘ಸಂಘ’ವನ್ನು ಸೇರಿದರು. ಅವರ ಶ್ರದ್ಧೆ, ನಿಷ್ಠೆ, ಕರ್ತವ್ಯ ಬದ್ಧತೆಗಳು ಬೌದ್ಧಮತಕ್ಕೆ ಹೆಚ್ಚಿನ ಗೌರವನ್ನು ತಂದುಕೊಟ್ಟವು. ಬೌದ್ಧ ಸನ್ಯಾಸಿಯರು ‘ಸಂಘ’ದ ಆಡಳಿತ ಮಂಡಳಿಯ ಸದಸ್ಯರಾಗುವ, ಬೌದ್ಧಮತದ ಪ್ರಚಾರ ಮಾಡುವ ಹಕ್ಕನ್ನು ಪಡೆದರು. ಕ್ರೃಶಾ, ಪ್ರಿತಾಚರಳ, ಅಮ್ರಪಾಲಿ ಮುಂತಾದ ಮಹಿಳೆಯರು ಬೌದ್ಧ ವಿಹಾರಗಳಲ್ಲಿ ಪ್ರಮುಖ ಸ್ಥಾನ ಹೊಂದಿದ್ದರು. ಬೌದ್ಧಮತ ಹೆಚ್ಚು ಜನರಿಗೆ ತಲುಪಲು ಮಹಿಳಾ ಬೌದ್ಧ ಸನ್ಯಾಸಿಗಳ ಪಾತ್ರವು ಪ್ರಮುಖವಾಗಿದೆ.
ಬುದ್ಧನ ಸಂದೇಶ, ತತ್ವದ ಪರಿಣಾಮಗಳು:(Gautama Buddha)
ಬೌದ್ಧ ವಿಹಾರದಲ್ಲಿ ಒಬ್ಬ ಸನ್ಯಾಸಿ ಮೌಲ್ಜಫಗ್ಗುನ ಎಂಬುವನು ದುರುಳವರ್ತನೆಮಾಡಿ ಬೌದ್ಧಮತಕ್ಕೆ ಕೆಟ್ಟ ಹೆಸರು ತರುತ್ತಿದ್ದ. ಬುದ್ಧ ಹೇಳಿದ ಕಥೆಯಿಂದ ಪ್ರಭಾವಿತನಾಗಿ ತನ್ನ ತಪ್ಪನ್ನು ತಿದ್ದಿಕೊಂಡು ಉತ್ತಮ ಸನ್ಯಾಸಿಯಾಗಿ ಹಲವರಿಗೆ ಮಾರ್ಗದರ್ಶನ ಮಾಡಿದ. ಒಬ್ಬ ಡಕಾಯಿತ, ಕಳ್ಳ ‘ಅಂಗುಲಿಮಾಲ’ ಬೌದ್ಧ ‘ಸಂಘ’ ಸೇರಿ ಪರಿವರ್ತನೆಗೊಂಡ.
ಪಿಂಡಕ ಎಂಬುವನು ಜೇಠ್‍ವನವನ್ನು ಬೌದ್ಧ ವಿಹಾರವಾಗಲು ಸಮ್ಮತಿಸಿದ. ಕಪಿಲ ವಸ್ತಿವಿನಲ್ಲಿ ಬುದ್ಧನ ವಿಚಾರಗಳನ್ನು ಕೇಳಿ ಅವರ ತಂದೆ, ತಾಯಿ, ಪತ್ನಿ, ಮಗ ಎಲ್ಲರೂ ಬೌದ್ಧ ‘ಸಂಘ’ ಸೇರಿ ಬೌದ್ಧಮತ ಪ್ರಚಾರಕರಾದರು. ಬುದ್ಧನ ಮೇಲೆ ಕುತಂತ್ರರೂಪಿಸಿ, ಅಪಪ್ರಚಾರಮಾಡಿ ಇವರನ್ನು ಹತ್ಯೆ ಮಾಡಿಸುವ ಪ್ರಯತ್ನದಲ್ಲಿದ್ದ ದೇವದತ್ತನು ಬದಲಾವಣೆಗೊಂಡು ಬುದ್ಧನ ಪರಮಶಿಷ್ಯನಾಗಿ ಬೌದ್ಧಮತದ ಪ್ರಚಾರಕನಾದನು.
ಬುದ್ಧನು ನಿರ್ವಾಣದತ್ತ: (Gautama Buddha)
ಗೌತಮ ಬುದ್ಧನಿಗೆ ಬೋಧಿವೃಕ್ಷದಡಿಯಲ್ಲಿ ಜ್ಞಾನೋದಯವಾಗಿ 45 ವರ್ಷಗಳು ಕಳೆದವು. ಈಗ ಬುದ್ಧ 80 ವರ್ಷದ ವಯೋವೃದ್ಧ. ಸೃಷ್ಟಿಯ ಶಕ್ತಿಯೊಂದಿಗೆ ಐಕ್ಯಗೊಂಡು ಶಾಶ್ವತಶಾಂತಿಯನ್ನು ಪಡೆಯುವ ಕಾಲ ಹತ್ತಿರ ಬರುತ್ತಿತ್ತು. ವೃದ್ಧಾಪ್ಯದಲ್ಲಿಯೂ ಬುದ್ಧ ಚಲಿಸುತ್ತಲೇ ಇದ್ದ. ಶಿಷ್ಯ ಆನಂದನೊಂದಿಗೆ ಋಷಿ ನಗರವನ್ನು ತಲುಪಿದರು. ಬುದ್ಧನಿಗೆ ಅನಾರೋಗ್ಯ ತಲೆದೋರಿತು. ಬುದ್ಧನಿಗೆ ಅರಿವಾಯಿತು.
ಸೃಷ್ಟಿಕರ್ತನಿಂದ ಕರೆಬಂದಿತ್ತು. ಎರಡು ಮರಗಳು ಜತೆಗಿರುವಲ್ಲಿಗೆ ಹೋಗಿ ಮಲಗಿ ಕಣ್ಣುಗಳನ್ನು ಮುಚ್ಛಿದ. ಉಸಿರು ನಿಧಾನವಾಗುತ್ತಾ ಸಾಗಿತು. ನಂತರ ಉಸಿರು ಸಂಪೂರ್ಣವಾಗಿ ನಿಂತಿತು. ಬುದ್ಧ ಮತ್ತೆ ಕಣ್ಣು ತೆರೆಯಲಿಲ್ಲ. ಅವನು ಚಿರನಿದ್ರೆಯನ್ನು ಪಡೆದಿದ್ದ. ಭಗವಾನ್ ಬುದ್ಧ ಹುಟ್ಟಿದ್ದು, ಜ್ಞಾನೋದಯವಾಗಿದ್ದು ಹಾಗೂ ನಿರ್ವಾಣಹೊಂದಿದ್ದು ಮರದಡಿಯಲ್ಲೇ “ಭೋಧಿವೃಕ್ಷವೇ” ಬುದ್ಧನ ಸ್ಮಾರಕ. ಬೌದ್ಧ ಧರ್ಮದ ಹೂರಣವಾದ ಅವನ ಬೋಧನೆಗಳು ಅಳಿವಿಲ್ಲದ ವೃಕ್ಷವೇ ಆಗಿ ಬೆಳೆದು ನಿಂತಿವೆ. ಬುದ್ಧನ ನಿರ್ವಾಣ ಕುರಿತು ಇತಿಹಾಸಕಾರರಲ್ಲಿ ಒಮ್ಮತವಿಲ್ಲ ಕ್ರಿ.ಪೂ.447 ಎಂದರೆ ಇನ್ನು ಕೆಲವರು ಕ್ರಿ.ಪೂ. 483 ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಬುದ್ಧನ ಚಿತಾಭಸ್ಮವನ್ನು ಹತ್ತು ಭಾಗಗಳಾಗಿ ಮಾಡಿ ವಿವಿಧ ಸ್ಥಳಗಳಲ್ಲಿ ಸಂರಕ್ಷಿಸಿ ಇರಿಸಲಾಗಿದೆ ನಂತರ ಆ ಸ್ಥಳಗಳಲ್ಲಿ ಸ್ತೂಪಗಳನ್ನು, ಪಗೋಡಗಳನ್ನು ನಿರ್ಮಿಸಲಾಯಿತು. ಬೌದ್ಧಧರ್ಮದ ಜ್ಯೋತಿ ಈಗಲೂ ಬೆಳಗುತ್ತಿದೆ. ಅದು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರಕಾಶಮಾನವಾಗುತ್ತ ಪ್ರಜ್ವಲಿಸುತ್ತಿದೆ. ಮಹಾತ್ಮ ಗೌತಮ ಬುದ್ಧ ಹಾಕಿಕೊಟ್ಟ ಶಾಂತಿ, ಸಮಾಧಾನ, ಅಹಿಂಸೆ, ಸಮಾನತೆ ಹಾಗೂ ಸಹೋದರತ್ವದ ನೆಲೆಯಲ್ಲಿ ನಾವು-ನೀವು ಅರಿತು ಬದುಕಬೇಕಾಗಿದೆ.
ಡಾ. ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.
ಮೊ: 9880093613