ದಾವಣಗೆರೆ (Davanagere): ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಎಸಗಲು ಸಹಕಾರ ನೀಡಿದ ಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಫ್‌ಟಿಎಸ್‌ಸಿ-1 ನ್ಯಾಯಾಲಯ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ನಗರದ ಇಸ್ಮಾಯಿಲ್ ಖಾನ್ ಶಿಕ್ಷೆಗೊಳಗಾದ ಆರೋಪಿ. ಪ್ರಕರಣದ ಎ1 ಆರೋಪಿಯು ಅಪ್ರಾಪ್ತ ಬಾಲಕಿಯನ್ನು ವಿವಾಹ ಆಗುವುದಾಗಿ ನಂಬಿಸಿ ದೆಹಲಿಗೆ ಕರೆಸಿಕೊಂಡಿದ್ದ. ಬಳಿಕ ಉತ್ತರ ಪ್ರದೇಶದ ಮುಜಾಫರ್ ನಗರಕ್ಕೆ ಕರೆದೊಯ್ದು, ಅಲ್ಲಿ ಕೊಠಡಿ ಬಾಡಿಗೆಗೆ ಪಡೆದು ಅಪ್ರಾಪ್ತ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಎ1 ಆರೋಪಿ ಬಳಿ ಅಪ್ರಾಪ್ತ ಬಾಲಕಿಯನ್ನು ಕಳುಹಿಸಲು ಎ2 ಆರೋಪಿ ಇಸ್ಮಾಯಿಲ್ ಖಾನ್ ಸಹಕಾರ ನೀಡಿದ್ದ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿ ತನಿಖಾಧಿಕಾರಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಆರೋಪ ಸಾಬೀತಾದರಿಂದ ಆರೋಪಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ಹಾಗೂ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದರು.
Read also : ರಾಜ್ಯದ ಮೇಲೆ 3D ನೀತಿ ಅನುಸರಿಸಿದ ಕೇಂದ್ರ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆರೋಪ