ದಾವಣಗೆರೆ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ, ಅತ್ಯಂತ ದುರ್ಬಲ ಸಮುದಾಯಗಳಲ್ಲಿ ಪ್ರಮುಖವಾದ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಂಚನೆ ಮಾಡಲು ನಡೆದಿದೆಯನ್ನಲಾದ 87 ಕೋಟಿ ರೂಗಳ ಹಗರಣ ಅತ್ಯಂತ ಆತಂಕಕಾರಿ ವಿಚಾರವಾಗಿದೆ ಎಂದು ಸಿಪಿಐ(ಎಂ) ಕಾರ್ಯದರ್ಶಿ ಆನಂದರಾಜು ಕೆ.ಹೆಚ್. ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 187 ಕೋಟಿ ರೂ ಮೊತ್ತದಲ್ಲಿ ಅದರ ಸುಮಾರು ಶೇ 50 ರಷ್ಟು ಮೊತ್ತವನ್ನು ಸರ್ಕಾರದ ಮೂಗಿನ ಕೆಳಗಿರುವ ಉನ್ನತ ಹಂತದ ಅಧಿಕಾರಿ ವಲಯದಲ್ಲಿಯೇ ಲಪಟಾಯಿಸಲು ಮುಂದಾಗಿರುವುದು ಅತ್ಯಂತ ಗಂಭೀರ ಹಾಗು ತೀವ್ರ ಖಂಡನೀಯ ವಿಚಾರವಾಗಿದೆ ಎಂದಿದ್ದಾರೆ.
ಇದು ದುರ್ಬಲ ಸಮುದಾಯಗಳ ಫಲಾನುಭವಿಗಳಿಗೆ ಸರ್ಕಾರದ ನೆರವು ಸಿಗದಂತೆ ಉನ್ನತ ವಲಯದಲ್ಲಿಯೆ ಹೇಗೆ ಲಪಟಾಯಿಸಲಾಗುತ್ತದೆ ಎಂಬುದರ ಸ್ಪಷ್ಟ ಚಿತ್ರಣ ನೀಡಿದೆ. ಭ್ರಷ್ಟಾಚಾರದ ದ ವಿಚಾರಕ್ಕೆ ಸಂಬಂಧಿಸಿ ನಿಗಮದ ಕೇಂದ್ರ ಕಛೇರಿಯ ಅಧೀಕ್ಷಕ ಚಂದ್ರಶೇಖರನ್ ಮಾನಸಿಕ ಒತ್ತಡ ಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆಯು ಘಟಿಸಿದೆ.
ಈ ಎಲ್ಲ ಪ್ರಕರಣದ ಹಿಂದೆ ಕಾಣದ ಕೈಗಳು ಇಲ್ಲವೆನ್ನಲು ಹಳೆಯ ಅನುಭವಗಳು ಅವಕಾಶ ನೀಡುತ್ತಿಲ್ಲ. ಈ ಒಟ್ಟು ಪ್ರಕರಣದ ಮೂಲವನ್ನು ಬೇಧಿಸಲು, ರಾಜ್ಯದ ಜನತೆಯ ಆತಂಕವನ್ನು ನಿವಾರಿಸಲು ಮತ್ತು ಸತ್ಯವೇನೆಂದು ತಿಳಿಯುವಂತಾಗಲು ನೇರ ಸರಕಾರದ ನಿಯಂತ್ರಣ ದಿಂದ ಸ್ವತಂತ್ರವಾದ ನ್ಯಾಯಾಂಗದ ಸುಪರ್ಧಿಯಲ್ಲಿ ನ್ಯಾಯಾಂಗ ತನಿಖೆ ನಡೆಸುವುದೊಂದೆ ಸರಿಯಾದ ವಿಧಾನವಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಈ ಕೂಡಲೇ ಪ್ರಕರಣವನ್ನು ನ್ಯಾಯಾಂಗದ ತನಿಖೆಗೆ ವಹಿಸಬೇಕು. ಈ ಕೂಡಲೇ ಡೆತ್ ನೋಟ್ ನಲ್ಲಿ ಹೆಸರಿಸಲಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಮತ್ತು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಕುಟುಂಬಕ್ಕೆ ಸೂಕ್ತ ನೆರವು ನೀಡುವಂತೆ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.