೧.
ಅವರು ಭೂಮಿಯನ್ನಷ್ಟೆ ಕಿತ್ತುಕೊಂಡೆವು ಎಂದರು
ಉಳಿದಿರುವುದಾದರೂ ಏನು?
ಅವರ ಕಂಗಳಲ್ಲಿ ಅಪ್ಪನ ಪ್ರಶ್ನೆಗಳೂ ಇವೆ.
೨.
ಎಕರೆಗಟ್ಟಲೆ ಭೂಮಿ
ಅಂಗೈಯಗಲದ ಚೆಕ್ಕಿನ ಕೇವಲದ ಅಕ್ಷರಗಳು
ರಂಟೆಯ ಗೀರುಗಳಾಗಿ ತೋರಿ
ಅಪ್ಪ ಕೂಡ ಕವಿಯಾಗಿಬಿಡುತ್ತಿದ್ದ.
೩.
ಮಿರಿ ಮಿರಿ ಮಿಂಚುವ ಟೈಲ್ಸ್ ಗಳ ಮೇಲೆ ಮಣ್ಣ ಧೂಳಿನ ಒಡೆದ ಪಾದಗಳ ಗುರುತು
ಅಪ್ಪನನ್ನು ನೆನಪಿಸುತ್ತಿವೆ.
೪
ಕೆಲವು ದಿನಗಳ ಹಿಂದೆ
ಬೀದಿಯಲಿ ಹೀಗೆಯೇ ಬಿದ್ದಿದ್ದವು
ಹಸಿರು ಶಾಲು,
ಬಾರುಕೋಲು,
ಗೋಲೀಬಾರಿನ ಗುಂಡು ,
ಚೂರುಪಾರು ರಕ್ತ,
ಕೊನೆಯ ಉಸಿರಿನ ರಭಸದ….ನೆನಪು!
.
.
.
.
ಅಪ್ಪ …
ನೆನಪಾಗುವುದು ಹೀಗೆ!
೫.
ನರಗುಂದದಲ್ಲಿ
ಅಂದು ಕೂಗಿದ ಅದೇ ಹುಡುಗ
ಇಂದೂ
ಕೂಗುತ್ತಿದ್ದಾನೆ!
ಬದಲಾಗದ ಅಪ್ಪ ನೆನಪಾಗುವುದು ಹೀಗೆ!
ಬಿ.ಶ್ರೀನಿವಾಸ