ದಾವಣಗೆರೆ (Davanagere): ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ, 38 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಹರಿಹರ ನಗರದ ಜೆ.ಅನಿಲ್ ಕೊಟ್ರೇಶ್ (27) ಶಿಕ್ಷೆಗೆ ಒಳಗಾದ ಆರೋಪಿ. 15 ವರ್ಷದ ಅಪ್ರಾಪ್ತ ಬಾಲಕಿ 9ನೇ ತರಗತಿ ಓದುತ್ತಿದ್ದಳು. ಆರೋಪಿ ಅನಿಲ್ ಶಾಲೆಗೆ ಹೋಗುವಾಗ ಪರಿಚಯ ಮಾಡಿಕೊಂಡು ಶಾಲೆಗೆ ತನ್ನ ಆಟೋದಲ್ಲಿಯೇ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದ.
ಒಂದು ದಿನ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ನಂಬಿಸಿ ಸುಮಾರು 9 ತಿಂಗಳ ಹಿಂದೆ ಆಟೋದಲ್ಲಿ ಕರೆದುಕೊಂಡು ಹೋಗಿ ಬೇಡವೆಂದರೂ ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಬಲವಂತವಾಗಿ ಅತ್ಯಾಚಾರ ಮಾಡಿದ್ದ. ಈ ವಿಚಾರ ನಿಮ್ಮ ತಂದೆ-ತಾಯಿಗೆ ತಿಳಿಸಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೆದರಿಸಿದ್ದ.
2022 ರ ಫೆಬ್ರವರಿ 10 ರಂದು ನನಗೆ ಹೊಟ್ಟೆನೋವು ಬರುತ್ತಿದೆ ಎಂದು ಮಗಳು ತಂದೆಗೆ ತಿಳಿಸಿದ್ದಾಳೆ. ಕೂಡಲೇ ತಂದೆ ಆಸ್ಪತ್ರೆಗೆ ಕರೆದುಕೊಂಡು ಪರೀಕ್ಷೆ ಮಾಡಿಸಿದ್ದಾರೆ. ಆಗ ವೈದ್ಯರು ಏಳು ತಿಂಗಳು ಗರ್ಭಿಣಿ ಆಗಿರುವುದಾಗಿ ತಿಳಿಸಿದ್ದಾರೆ.
ಬಳಿಕ ನಡೆದ ಘಟನೆ ಬಗ್ಗೆ ತಂದೆಗೆ ಮಗಳು ವಿವರಿಸಿದ್ದಾಳೆ. ಕೂಡಲೇ ಹರಿಹರ ನಗರ ಪೊಲೀಸ್ ಠಾಣೆಗೆ 2022 ರ ಫೆಬ್ರವರಿ 11 ರಂದು ನನ್ನ ಮಗಳಿಗೆ ಹೆದರಿಸಿ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಅನಿಲ್ ವಿರುದ್ಧ ಫೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಸಿಪಿಐ ಯು. ಸತೀಶ್‌ಕುಮಾರ್ ಆರೋಪಿ ಅನಿಲ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ಮಂಗಳವಾರ ದಾವಣಗೆರೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ವಿಚಾರಣೆ ನಡೆಸಿದಾಗ ಆರೋಪ ಸಾಬೀತಾಗಿದ್ದರಿಂದ ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ಮತ್ತು 38 ಸಾವಿರ ರೂ. ದಂಡ ಹಾಗೂ ದಂಡದ ಮೊತ್ತ 38 ಸಾವಿರ ರೂ. ಪ್ರಕರಣದ ಸಂತ್ರಸ್ತೆಗೆ ನೀಡುವಂತೆ ಹಾಗೂ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಪರ‍್ಯಾದಿ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ನ್ಯಾಯ ಮಂಡನೆ ಮಾಡಿದ್ದಾರೆ.
ತನಿಖೆ ನಡೆಸಿ ತನಿಖಾಧಿಕಾರಿ ಸಿಪಿಐ ಯು.ಸತೀಶ್‌ಕುಮಾರ್ ಮತ್ತು ಸಿಬ್ಬಂದಿ, ಪರ‍್ಯಾದಿ ಪರವಾಗಿ ನ್ಯಾಯ ಮಂಡನೆ ಮಾಡಿದ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ಅವರಿಗೆ ಎಸ್ಪಿ ಉಮಾ ಪ್ರಶಾಂತ್ ಅಭಿನಂದನೆ ಸಲ್ಲಿಸಿದ್ದಾರೆ.
Read also : Davanagere | ನಾಟಿ ಕೋಳಿ ಮರಿಗಳಿಗೆ ಅರ್ಜಿ ಆಹ್ವಾನ