ದಾವಣಗೆರೆ : ಲೋಕಸಭಾ ಕ್ಷೇತ್ರದ ಜನ ನನ್ನನ್ನು ಮಗಳು, ತಾಯಿ, ಅಕ್ಕ-ತಂಗಿ ರೀತಿ ಕಾಣುತ್ತಿದ್ದಾರೆ. ಎಲ್ಲ ಕಡೆಯು ಉತ್ತಮ ಸ್ಪಂದನೆ ಇದೆ. ನಾನು ಭೇಟಿ ಕೊಟ್ಟ ಪ್ರತಿ ಗ್ರಾಮದಲ್ಲೂ ಮತದಾರರು ನಗು ಮೊಗದಿಂದ ಸ್ವಾಗತಿಸುತ್ತಿದ್ದಾರೆ. ನಾವು ಗೆಲ್ಲುವುದರಲ್ಲಿ ಯಾವುದೇ ಸಂದೇಶವಿಲ್ಲ ಎಂದು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.
ಸೋಮವಾರ ಬೆಳಗ್ಗೆ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು.
ಚುನಾವಣೆ ನನಗೇನು ಹೊಸದಲ್ಲ. ೩೦ ವರ್ಷಗಳಿಂದ ಮಾವನವರ, ಪತಿ ಸಿದ್ದೇಶ್ವರ್ ಅವರ ಚುನಾವಣೆ ಮಾಡಿಕೊಂಡು ಬಂದಿದ್ದೇನೆ. ಇಷ್ಟು ದಿನ ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದೆ. ಈಗ ತೆರೆಯ ಮುಂದೆ ಬಂದಿದ್ದೇನೆ. ಜನ ತುಂಬ ಆದರದಿಂದ ಸ್ವಾಗತ ಮಾಡುತ್ತಿದ್ದಾರೆ ಎಂದರು.
ಅತ್ಯಧಿಕ ಮತಗಳಿಂದ ಗೆಲ್ಲುತ್ತೇವೆ
ಲೋಕಸಭಾ ಸದಸ್ಯರಾದ ಡಾ.ಜಿ.ಎಂ.ಸಿದ್ದೇಶ್ವರ್ ಅವರು ಮಾತನಾಡಿ, ರಾಷ್ಟ್ರೀಯ ನಾಯಕರು ಈ ಬಾರಿ ನನ್ನ ಪತ್ನಿಗೆ ಟಿಕೆಟ್ ನೀಡಿದ್ದಾರೆ. ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ಧೇವೆ. ಜಿಲ್ಲೆಯಲ್ಲಿ ೨೦ ವರ್ಷಗಳ ಕಾಲ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು, ೧೦ ವರ್ಷದಲ್ಲಿ ಮೋದಿ ಜೀ ಅವರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದ ರೀತಿ, ರಾಜ್ಯದಲ್ಲಿ ಯಡಿಯೂರಪ್ಪ ಅವರು ಮಾಡಿರೋ ಕೆಲಸಗಳು ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವಂತೆ ಮಾಡುತ್ತದೆ. ಗಾಯಿತ್ರಿ ಸಿದ್ದೇಶ್ವರ್ ಅವರು ಮುಂದಿನ ದಿನಗಳಲ್ಲಿ ಜನ ಸೇವೆ ಮಾಡಲಿದ್ಧಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುತ್ರಿ ಜಿ.ಎಸ್.ಅಶ್ವಿನಿ, ಜಿ.ಎಲ್.ರಾಜೀವ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಜೊತೆಯಲ್ಲಿ ತೆರಳಿ ಶ್ರೀಮತಿ ಗಾಯಿತ್ರಿ ಸಿದ್ಧೇಶ್ವರ್ ಅವರು ನಾಮಪತ್ರ ಸಲ್ಲಿಸಿದರು.
ಏ.೧೯ ಕ್ಕೆ ಸ್ಟಾರ್ ಕ್ಯಾಂಪೇನರ್ಸ್
ಏಪ್ರಿಲ್ ೧೯ ರಂದು ಜನ ಬೆಂಬಲದೊಂದಿಗೆ ಇನ್ನೊಮ್ಮೆ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಅಂದಿನ ರ್‍ಯಾಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಚಿತ್ರನಟಿ ಶೃತಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಭೈರತಿ ಬಸವರಾಜ್, ಗಾಲಿ ಜನಾರ್ಧನ ರೆಡ್ಡಿ, ಶ್ರೀರಾಮಲು, ಮಾಧುಸ್ವಾಮಿ ಸೇರಿದಂತೆ ಅನೇಕ ಸ್ಟಾರ್ ಕ್ಯಾಂಪೇನರ್ಸ್ ಆಗಮಿಸಲಿದ್ದಾರೆ.