ದಾವಣಗೆರೆ (Davanagere) : ಕಲ್ಯಾಣ ಎಂದರೆ ಒಳಿತು ಎಂದರ್ಥ. ಬದುಕಿನಲ್ಲಿ ಒಳಿತನ್ನು ಸಾಧನೆ ಮಾಡುವುದೇ ನಿಜವಾದ ಕಲ್ಯಾಣವಾಗಿದೆ. ಸರ್ವರಿಗೂ ಒಳಿತನ್ನು ಬಯಸಿ ಮತ್ತು ಒಳ್ಳೆಯದನ್ನು ಮಾಡಿದ ಬಸವಣ್ಣನವರು ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದಾರೆ ಎಂದು ಡಾ.ಶ್ರೀ ಬಸವಪ್ರಭು ಸ್ವಾಮೀಜಿ (Basavaprabhu Swamiji) ಹೇಳಿದರು.
ನಗರದ ವಿರಕ್ತಮಠ (Viraktamatha) ದಲ್ಲಿ ಹಮ್ಮಿಕೊಂಡಿರುವ ಶ್ರಾವಣ ಮಾಸದ 114 ನೇ ವರ್ಷದ ಪ್ರವಚನ ಕಲ್ಯಾಣದಿಂದ ಉಳವಿಯಡೆಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಆಶೀರ್ವಚನ ನೀಡಿದರು.
ಆಧುನಿಕ ಕಾಲದ ಜನರು ಯಾಂತ್ರಿಕವಾಗಿ ಜೀವಿಸುತ್ತಿದ್ದಾರೆ ಸದಾಕಾಲವೂ ಹಣ ಗಳಿಸವುದರಲ್ಲಿಯೇ ಮುಳುಗಿ ಹೋಗಿದ್ದಾರೆ ಹಣದ ಹಿಂದೆ ಹೋಗಿ ಒಳಿತನ್ನು ಮರೆತಿದ್ದಾರೆ ಹಿಂದಿನ ಕಾಲದಲ್ಲಿ ಓದು ಬರಹ ಬರಲಾರದ ಜನರು ಒಳಿತನ್ನು ಮಾಡುವುದೇ ಬದುಕಿನ ನಿಜವಾದ ಸಾಧನೆ ಎಂದು ತಿಳಿದಿದ್ದರು ಯಾವಾಗಲೂ ಹಣವೇ ಮುಖ್ಯ ಎಂದು ಬಡಿದಾಡಲಿಲ್ಲ ಹಾಗಾಗಿಯೇ ಅವರ ಬದುಕಿನಲ್ಲಿ ಶಾಂತಿ ನೆಮ್ಮದಿ ಇತ್ತು ಎಂದರು.
ಇಂದು ನಾವು ಹಣ , ಆಸ್ತಿಯ ಬೆನ್ನು ಹತ್ತಿ ಬದುಕಿನ ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ ಈ ನೆಮ್ಮದಿಯನ್ನು ಪಡೆಯುವ ಮಾರ್ಗವೆಂದರೆ ಶ್ರಾವಣ. ಶ್ರಾವಣ ಎಂದರೆ ಶ್ರವಣ ಎಂದರ್ಥ ಒಳ್ಳೆಯ ವಿಚಾರಗಳನ್ನು , ಬಸವಾದಿ ಶರಣರ ಆದರ್ಶದ ಬದುಕನ್ನು ಕೇಳಿದಾಗ ಬದುಕಿನಲ್ಲಿ ನಾವು ಒಳಿತನ್ನು ಕಾಣಲು ಸಾಧ್ಯವಾಗುತ್ತದೆ.
Read also : DAVANGERE : ಬಿಜೆಪಿ-ಜೆಡಿಎಸ್ ಪಿತೂರಿಗೆ ಜಗ್ಗುವುದಿಲ್ಲ : ಕೆ.ಸಿ. ವೇಣುಗೋಪಾಲ್
ನಮ್ಮ ಅಂತರಂಗ ಶುದ್ದಿಯಾಗಲು , ಮನ ಪರಿವರ್ತಿಸುವ ಕಾರ್ಯವನ್ನು ಮಾಡಲು ಪ್ರವಚನಗಳು ಬೇಕು. ಯಾವ ರೀತಿ ಹೊಲ ಹಸನು ಮಾಡಿದರೆ ಅಲ್ಲಿ ಸಮೃದ್ಧ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆಯೋ ಹಾಗೆಯೇ ಶ್ರಾವಣದಲ್ಲಿ ಹೃದಯ , ಮನಸ್ಸನ್ನು ಎಂಬ ಹೊಲದಲ್ಲಿ ಸಂಸ್ಕಾರ , ಸದ್ಭಾವದ ಬೀಜಗಳನ್ನು ಬಿತ್ತನೆ ಮಾಡಿದರೆ ವ್ಯಕ್ತಿಯ ಜೀವನ ಸುಂದರವಾಗಲು ಸಾಧ್ಯ ಎಂದು ನುಡಿದರು.
ಅಂತರಂಗದಲ್ಲಿ ತೊಳಲಾಟ , ಬಹಿರಂಗದಲ್ಲಿಯೂ ಬಳಲಾಟ ಇಂದಿನ ಸ್ಥಿತಿಯಾಗಿದೆ ತೊಳಲಾಟ ಬಳಲಾಟಗಳಿಂದ ಹೊರ ಬರಲು ಶರಣರ ಒಡನಾಟ ಬೇಕು ಅದುವೆ ಸತ್ಸಂಗವಾಗಿದೆ ಹಾಗಾಗಿ ಕಲ್ಯಾಣದಿಂದ ಉಳವಿಯಡೆಗೆ ಪ್ರವಚನ ಕೇಳಿ ನಾವು ಪುನೀತರಾಗೋಣ ದಾವಣಗೆರೆ ವಿರಕ್ತಮಠದ ವಿಶೇಷವೆಂದರೆ ಮಠದಲ್ಲಿ ಪ್ರವಚನ ಕಾರ್ಯಕ್ರಮ ಪ್ರಾರಂಭವಾಗಿ 114 ವರ್ಷಗಳಾಗಿವೆ ಇಂತಹ ಇತಿಹಾಸ , ಪರಂಪರೆಯನ್ನು ನಮ್ಮ ಮಠ ಹೊಂದಿದೆ. ಬಸವಾದಿ ಶರಣರ ವಚನಗಳನ್ನು ಉಳಿಸುವ , ಬೆಳೆಸುವ ಕಾರ್ಯವನ್ನು ಶ್ರೀ ಮುರುಘಾಮಠವು ಮಾಡುತ್ತಿದೆ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.
ಸಮಾರಂಭದಲ್ಲಿ ಬಸವಲಿಂಗಮೂರ್ತಿ ಸ್ವಾಮೀಜಿ ಪ್ರವಚನವನ್ನು ನಡೆಸಿಕೊಟ್ಟರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡಿದಾಳ,ಎಸ್. ಬಸಪ್ಪ, ಅಂದನೂರು ಮುಪ್ಪಣ್ಣ, ಕಣಕುಪ್ಪಿ ಮುರುಗೇಶಪ್ಪ, ಅನಸೂಯಮ್ಮ ಪಟೇಲ್ ಇದ್ದರು.