ದಾವಣಗೆರೆ: 2026 ರ ಜ.2 ರಿಂದ 90 ದಿನಗಳ ಕಾಲ ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮಧ್ಯಸ್ಥಗಾರಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಈ ಕೆಳಕಂಡ ಪ್ರಕರಣಗಳನ್ನು ಮಧ್ಯಸ್ಥಗಾರಿಕೆಗೆ ಕಳುಹಿಸಿಕೊಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿ.ಕಾ.ಸೇ.ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿಚಾರಣೆ ಬಾಕಿ ಇರುವ ಪ್ರಕರಣಗಳ ಅಂದಾಜು ಅಂಕಿ ಅಂಶಗಳ ವಿವರ: ಡಿವಿ ಕಾಯ್ದೆ ಪ್ರಕರಣಗಳು ಮತ್ತು 498ಎ ಐಪಿಸಿ/85ಬಿಎನ್‍ಎಸ್-1007, ಚೆಕ್ ಅಮಾನ್ಯ ಪ್ರಕರಣಗಳು-444, ಮೋಟಾ ರು ವಾಹನ ಅಪಘಾತ ಪ್ರಕರಣಗಳು-4681, ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು-619, ಭೂ ಸ್ವಾಧೀನ ಅಪರಾಧಿಕ ಪ್ರಕರಣಗಳು-384, ಪಾಲು ವಿಭಾಗ ಪ್ರಕರಣಗಳು-3342, ಮನೆ ಮಾಲಿಕ-ಬಾಡಿಗೆದಾರರ ಮಧ್ಯದ ಪ್ರಕರಣಗಳು-52, ವಾಣಿಜ್ಯ ವ್ಯವಹಾರಗಳ ವ್ಯಾಜ್ಯಗಳು-709, ಅರ್ಹ ಸಿವಿಲ್ ಸೇವಾ ಪ್ರಕರಣಗಳು-0, ಕಾರ್ಮಿಕ ವ್ಯಾಜ್ಯಗಳು-42, ಗ್ರಾಹಕ ಪರಿಹಾರ ವ್ಯಾಜ್ಯಗಳು-10, ಇತರೆ ಸಿವಿಲ್ ವ್ಯಾಜ್ಯಗಳು-5000(ಅಂದಾಜು) ಒಟ್ಟು-16290.
ಈ ಪ್ರಕ್ರಿಯೆಯಲ್ಲಿ ವ್ಯವಸ್ಥಿತವಾಗಿ ಸಂಧಾನಕಾರರಾಗಿ ಕಾರ್ಯನಿರ್ವಹಿಸಲು ಜಿಲ್ಲೆಯಾದ್ಯಂತ ಒಟ್ಟು 45 ಜನ ನುರಿತ ಮತ್ತು ಕನಿಷ್ಠ 20 ವರ್ಷಕ್ಕಿಂತ ಹೆಚ್ಚಿನ ವಕೀಲಿಕೆ ಅನುಭವವುಳ್ಳ ವಕೀಲರು ಮಧ್ಯಸ್ಥಿಕೆ ದಾರರು ಲಭ್ಯವಿದ್ದು ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ಬಗ್ಗೆ ಅವರು ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಿರುತ್ತಾರೆ.
ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಕಳೆದ ತಿಂಗಳು ಇನ್ನೂ ಹೆಚ್ಚು ಸಂಖ್ಯೆಯ ಮಧ್ಯಸ್ಥಗಾರರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಆಯ್ಕೆಪಟ್ಟಿ ಅನುಮೋದನೆಯಾಗಿ ಬರುವುದು ಬಾಕಿ ಇದೆ. ಈ ಮಧ್ಯಸ್ಥ್ರಗಾರಿಕೆ ಅಭಿಯಾನದಲ್ಲಿ ಪಾಲ್ಗೊಳ್ಳುವ ಪಕ್ಷಕಾರರು ಸ್ವಂತ ಮನಸ್ಸಿನಿಂದ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಬಹುದು.
Read also : Crime News:ತಾಳೆ ಬೆಳೆಯೊಂದಿಗೆ ಸುಟ್ಟು ಕರಕಲಾದ ರೈತ
ಈ ಪ್ರಕ್ರಿಯೆಯಲ್ಲಿ ಪಕ್ಷಕಾರರನ್ನು ಮತ್ತು ಅವರ ಪರವಾಗಿ ವಕೀಲರನ್ನು ಮಧಸ್ಥಗಾರರ ಮೂಲಕ ರಾಜೀಸಂಧಾನಕ್ಕೆ ಕರೆತರಲಾಗುವುದು. ರಾಜೀ ಪ್ರಕ್ರಿಯೆಯು ಪಾರದರ್ಶಕ ಮತ್ತು ಶುಲ್ಕ ರಹಿತವಾಗಿ ಒಂದು ವೇಳೆ ಈಗಾಗಲೇ ನ್ಯಾಯಾಲಯದಲ್ಲಿ ಶುಲ್ಕವನ್ನು ಪಾವತಿ ಮಾಡಿ ಪ್ರಕರಣ ದಾಖಲಾಗಿದ್ದರೆ ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯ ಶುಲ್ಕವನ್ನು ಮರಳಿ ನೀಡುವಂತೆ ನ್ಯಾಯಾಲಯಗಳಿಂದ ನಿರ್ದೇಶನಗಳನ್ನು ಕೂಡ ನೀಡಲಾಗುವುದು.
ಪ್ರಕ್ರಿಯೆಯಲ್ಲಿ ಎರಡು ಪಕ್ಷದವರನ್ನು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಕರೆದು, ಅವರಲ್ಲಿರುವ ವ್ಯಾಜ್ಯಕ್ಕೆ ನಿಜವಾದ ಕಾರಣಗಳನ್ನು ಮತ್ತು ಸಾಧ್ಯವಾಗಬಹುದಾದ ರಾಜೀ ಸಂಧಾನಗಳನ್ನು ಚರ್ಚೆಗೆ ಒಳ ಪಡಿಸಲಾಗುವುದು. ಪ್ರಕ್ರಿಯೆಯಲ್ಲಿ ವಕೀಲರು ಅಷ್ಟೇ ಅಲ್ಲದೆ ವಿವಿಧ ಇಲಾಖೆಯ ನುರಿತ ಅಧಿಕಾರಿಗಳು, ಹಿರಿಯ ನ್ಯಾಯವಾದಿಗಳು, ಅರೆಕಾಲಿಕ ಕಾನೂನು ಸ್ವಯಂಸೇವಕರು ಮತ್ತು ಪ್ಯಾನಲ್ ವಕೀಲರುಗಳ ಸಹಾಯ ಮತ್ತು ಸಹಕಾರ ಪಡೆದುಕೊಳ್ಳಲು ಅವಕಾಶವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
