ದಾವಣಗೆರೆ : ನ್ಯಾ.ನಾಗಮೋಹನದಾಸ ಆಯೋಗದ ವರದಿಯನ್ನು ಅ.15 ರೊಳಗೆ ಜಾರಿ ಮಾಡಬೇಕು ಇಲ್ಲದಿದ್ದರೆ. ಮುಂಬರುವ ದಿನಗಳಲ್ಲಿ ಸಿಎಂ ಶವ ಯಾತ್ರೆ ನಡೆಸಿ,ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾದಿಗ ಮಹಾಸಭೆ ಹಾಗೂ ದಲಿತ ಸಂಘರ್ಷ ಸಮಿತಿಯ ಡಿಎಸ್‌ಎಸ್ ನ ಟಿ.ರವಿಕುಮಾರ್ ಹಾಗೂ ಪಂಜು ಪೈಲ್ವಾನ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಆಗಸ್ಟ್ 1 ಕ್ಕೆ ಸುಪ್ರೀಂಕೋರ್ಟ್ ತೀರ್ಪು ಬಂದು ಒಂದು ವರ್ಷ ಆದರೂ ಕರ್ನಾಟಕ ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ವಿಫಲವಾಗಿದೆ.ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಕರ್ನಾಟಕ ಸರ್ಕಾರ ಸ್ವೀಕರಿಸಿದೆ ಆದರೆ, ವರದಿಯ ಶಿಫಾರಸ್ಸನ್ನು ಜಾರಿ ಮಾಡಲು ಮುಂದಾಗಿಲ್ಲ. ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಲೆಳೆಯುವವರಿಂದ ಸಿದ್ದರಾಮಯ್ಯ ಹೊರಬಂದು ನ್ಯಾ. ನಾಗಮೋಹನ್ ದಾಸ್ ಅವರ ಶಿಫಾರಸ್ಸಿನ ಅನ್ವಯ ಒಳ ಮೀಸಲಾತಿ ಜಾರಿ ಮಾಡುವ ತೀರ್ಮಾನವನ್ನು, ಘೋಷಿಸಬೇಕಿತ್ತು. ಆದರೆ, ನಮ್ಮ ಈ ನಿರೀಕ್ಷೆ ಹುಸಿಯಾಗಿದೆ ಎಂದು ಹೇಳಿದರು.
ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗ ಮತ್ತು ಈಗ ನ್ಯಾ. ನಾಗಮೋಹನ ದಾಸ್ ಆಯೋಗ ಎಲ್ಲ ಮೂರೂ ಆಯೋಗಗಳು ಕರ್ನಾಟಕದಲ್ಲಿ ಮಾದಿಗ ಮತ್ತು ಅದರ ಉಪಜಾತಿಗಳ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ದೊಡ್ಡ ಸಮೂಹ ಎಂದು ಸ್ಪಷ್ಟವಾಗಿ ಹೇಳಿವೆ. ಈ ಎಲ್ಲಾ ಆಯೋಗಗಳು ಮಾದಿಗ ಉಪ ಜಾತಿಗಳ ಗುಂಪಿಗೆ 6% ಮೀಸಲಾತಿಯನ್ನು ನಿಗದಿಪಡಿಸಿವೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಮಾದಿಗರ ಪಾಲಿನ 6% ಮೀಸಲಾತಿಯನ್ನು ಪ್ರತ್ಯೇಕಿಸಿ ಘೋಷಿಸಲಿ, ಉಳಿದ ಹಂಚಿಕೆಯನು. ನಿಧಾನವಾಗಿ ಮಾಡಲಿ ಎಂದು ಆಗ್ರಹಿಸಿದರು.
ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸುಟ್ಟು ಹಾಕಿರುವ ಕಿಡಿಗೇಡಿಗಳ ಮೇಲೆ ಕ್ರಿಮಿನಲ್ ದೂರು ದಾಖಲಿಸಿ ಬಂಧಿಸಬೇಕು. ಇಲ್ಲವಾದಲ್ಲಿ ಇದೇ ಆಗಸ್ಟ್ ತಿಂಗಳ 15 ರಂದು ದಾವಣಗೆರೆ ನಗರದಲ್ಲಿ ಆಚರಿಸುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಕಪ್ಪ ಬಟ್ಟೆ ಪ್ರದರ್ಶನ ಮಡುವುದರ ಮುಖಾಂತರ ಪ್ರತಿಭಟನೆಯನ್ನು ಮಾದಿಗ ಮಹಾಸಭೆ ಹಾಗೂ ದಲಿತ ಸಂಘರ್ಷ ಸಮಿತಿ ದಾವಣೆಗೆರೆ ವತಿಯಿಂದ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
Read also : Political analysis | ಸುನೀಲ್ ಕುಮಾರ್ ಫೀಲ್ಡಿಗೆ ಎಂಟ್ರಿಯಾಗಿದ್ದು ಹೇಗೆ?
ಕರ್ನಾಟಕ ಸರ್ಕಾರ ಮಾದಿಗರಿಗೆ ಪ್ರತ್ಯೇಕ ಶೇ 6ರ ಮೀಸಲಾತಿಯನ್ನು ವಿಧಾನಸಭಾ ಅಧಿವೇಶನದ ಮೊದಲ ದಿನವೇ ಘೋಷಿಸಬೇಕು. ಇಲ್ಲವಾದರೆ ಮತ್ತೆ ಮಾದಿಗೆ ಸಂಬAಧಿತ ಜಾತಿಗಳು ಬೀದಿಗೆ ಇಳಿದು ಉಗ್ರ ಹೋರಾಟಕ್ಕೆ ಹೈ ಹಾಕಬೇಕಾಗುತ್ತದೆ ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಸೂಚ್ಯವಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುಮ್ಮನೂರು ಮಂಜಪ್ಪ, ರಾಘವೇಂದ್ರ ಡಿ.ಕಡೇಮನಿ, ಮಲ್ಲಿಕಾರ್ಜುನ ವಂದಾಲಿ, ಆಲೂರು ಕೆ.ಹೆಚ್. ಹನುಮಂತಪ್ಪ, ಹೂವಿನಮಡು ಮೈಲಾರಪ್ಪ, ಹಳಗವಾಡಿ ನಿಂಗಪ್ಪ, ಗುಮ್ಮನೂರು ರಾಮಚಂದ್ರ, ಎಂ.ರವಿ, ಸಿ.ಬಸವರಾಜ್, ರವಿಕುಮಾರ್ ಇತರರು ಇದ್ದರು.