ದಾವಣಗೆರೆ: 60 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 25 ವರ್ಷ ಕಾರಾಗೃಹ ಶಿಕ್ಷೆ ಹಾಗೂ 37,000 ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಘಟನೆ ವಿವರ : ಹೊನ್ನಾಳ್ಳಿ ತಾಲೂಕಿನ ಅರಕೆರೆ ಗ್ರಾಮದ ಶ್ರೀಮತಿ ಜ್ಯೋತಿ ಗಂಡ ಚೌಡಪ್ಪ ಇವರು ದಿ. 01-04-2022 ರಂದು ಹೊನ್ನಾಳಿ ಠಾಣೆಗೆ ಹಾಜರಾಗಿ 60 ವರ್ಷ ವಯಸ್ಸಿನ ನಮ್ಮ ತಾಯಿಯಾದ ಸಂತ್ರಸ್ಥೆಯು ಅರಕೆರೆಯ ಎ.ಕೆ ಕಾಲೋನಿಯಲ್ಲಿ ಒಬ್ಬರೇ ವಾಸವಾಗಿದ್ದು, ನಾನು ನನ್ನ ಗಂಡ ಮತ್ತು ಮಕ್ಕಳೊಂದಿಗೆ ಅದೇ ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸವಾಗಿರುತ್ತೇವೆ.
ದಿನಾಂಕ :30/03/2022 ರಂದು ಬೆಳಿಗ್ಗೆ 08-30 ಗಂಟೆಗೆ ನಾವು ಕೂಲಿ ಕೆಲಸಕ್ಕೆ ಹೊರಟಿದ್ದೇವು ಅದೇ ವೇಳೆಗೆ ನಮ್ಮ ಚಿಕ್ಕಮ್ಮ ಸುಮಿತ್ರಮ್ಮ ನಿಮ್ಮ ತಾಯಿ ಕೂಗಿಕೊಳ್ಳುತ್ತಿದ್ದಾರೆ ಎರಡೂ ಕೈಗಳು ಮುರಿದಂತೆ ಕಾಣುತ್ತಿವೆ ಅಂತಾ ತಿಳಿಸಿದಾಗ ನಾವು ಕೂಡಲೇ ಬಂದು ನೋಡಲಾಗಿ ನಮ್ಮ ಅಮ್ಮನ ಎರಡೂ ಕೈಗಳು ಹಿಂದಕ್ಕೆ ತಿರುಗಿದ್ದು, ಕುತ್ತಿಗೆ ಗಲ್ಲದ ಮೇಲೆ ಗಾಯದ ಗುರುತುಗಳಾಗಿ ರಕ್ತ ಬರುತ್ತಿದ್ದು ಈ ಬಗ್ಗೆ ವಿಚಾರಿಸಿದಾಗ ದಿ. :29/03/2022 ರಂದು ರಾತ್ರಿ ಸುಮಾರು 11-30 ಗಂಟೆಗೆ ನಾನು ಮನೆಯಲ್ಲಿ ಮಲಗಿದ್ದಾಗ ಆಂಜಿನಪ್ಪ @ ಮೋಹನ ಈತನು ಊಟ ತಂದಿದ್ದೀನಿ ಎದ್ದೇಳು ಅಜ್ಜಿ ಎಂದು ಬಾಗಿಲು ತೆಗೆಸಿ ನನ್ನನ್ನು ದಬ್ಬಿ ಅತ್ಯಾಚಾರ ಮಾಡಿರುತ್ತಾನೆಂದು ತಿಳಿಸಿದ್ದರಿಂದ ಸದರಿ ಅಂಜಿನಪ್ಪ @ ಮೋಹನ ಇವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿದ ತನಿಖಾಧಿಕಾರಿ ದೇವರಾಜ್. ಟಿ.ವಿ. ಸಿಪಿಐ ಪ್ರಕರಣದಲ್ಲಿ ತನಿಖೆ ಪೂರೈಸಿ ಆಂಜಿನಪ್ಪ @ ಮೋಹನ ಈತನ ವಿರುದ್ದ ಘನ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯ, ದಾವಣಗೆರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಪಾದ್.ಎನ್ ರವರು ಆರೋಪಿ ಆಂಜಿನಪ್ಪ @ ಮೋಹನ ಇವರ ಮೇಲೆ ಆರೋಪ ಸಾಬೀತಾಗಿದ್ದರಿಂದ ದಿನಾಂಕ:-01-03-2024 ರಂದು ಆರೋಪಿತನಿಗೆ 25 ವರ್ಷ ಶಿಕ್ಷೆ ಹಾಗೂ 37,000/- ರೂ ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ರವರು ನ್ಯಾಯ ಮಂಡನೆ ಮಾಡಿಸಿದ್ದಾರೆ. ವೃತ್ತ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ,ಎಎಸ್ಪಿ ವಿಜಯಕುಮಾರ ಎಂ. ಸಂತೋಷ, ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.