ದಾವಣಗೆರೆ,ಏಪ್ರಿಲ್.03 :
ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮಾರ್ಚ್ 16 ರಿಂದ ಏಪ್ರಿಲ್ 3 ರ ವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗಿದ್ದು ಜಿಲ್ಲೆಯಲ್ಲಿ ಇದುವರೆಗೆ ರೂ.1,41,91,569 ಮೌಲ್ಯದಷ್ಟು ನಗದು, ವಿವಿಧ ವಸ್ತುಗಳು ಹಾಗೂ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಅನುಷ್ಠಾನ ಮಾಡಲು ಹದ್ದಿನ ಕಣ್ಣಿಡಲಾಗಿದೆ. 21 ಫ್ಲೈಯಿಂಗ್ ಸ್ಕ್ವಾಡ್‍ಗಳು, 32 ಚೆಕ್‍ಪೋಸ್ಟ್‍ಗಳಲ್ಲಿ 24*7 ಮಾದರಿಯಲ್ಲಿ ದಿನದ ಮೂರು ಪಾಳಿಯಲ್ಲಿ ಚುನಾವಣಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೇ 9 ಅಬಕಾರಿ ಜಾಗೃತ ದಳದವರು ಕಾರ್ಯನಿರ್ವಹಿಸುತ್ತಿದ್ದು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯು ಗಸ್ತು ನಡೆಸಲಾಗುತ್ತಿದೆ.
ವಶಪಡಿಸಿಕೊಂಡ ನಗದು ಮೌಲ್ಯದಲ್ಲಿ ಎಫ್.ಎಸ್.ಟಿ.ಯಿಂದ ರೂ.75,62,100 ಗಳನ್ನು ವಶಕ್ಕೆ ಪಡೆದು ಪರಿಶೀಲನೆಗೆ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲಾಗಿದೆ. ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ ಮಾಡಿದಾಗ ದಾಖಲೆ ಇಲ್ಲದೇ ನಗದು ಕೊಂಡೊಯ್ಯುತ್ತಿದ್ದ ವೇಳೆ 51,86,023 ರೂ.ಗಳನ್ನು ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ ದಾಖಲೆ ನೀಡಲಾದ ರೂ.15,65,780 ಗಳನ್ನು ವಾಪಸ್ ಮರಳಿಸಲಾಗಿದೆ. ಉಳಿದ ರೂ.36,20,243 ಗಳನ್ನು ಖಜಾನೆಯಲ್ಲಿರಿಸಲಾಗಿದೆ.
ಇದೇ ಅವಧಿಯಲ್ಲಿ ಒಟ್ಟು ರೂ.2,90,466 ಮೌಲ್ಯದ 673.61 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 387.18 ಲೀ ಅಬಕಾರಿ, 286.43 ಲೀ ಪೊಲೀಸ್ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ. ರೂ.10,52,980 ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪಡೆದ ವಸ್ತುಗಳಲ್ಲಿ 4630 ಕೆ.ಜಿ.ಅಕ್ಕಿ, 17 ಮೊಬೈಲ್, 400 ಟವರ್ ಫ್ಯಾನ್, 56.36 ಗ್ರಾಂ ಚಿನ್ನ, 579 ಸ್ಯಾರಿ, 51 ಕುಪ್ಪಸ, 300 ಜೀನ್ಸ್ ಪ್ಯಾಂಟ್‍ಗಳು ಸೇರಿವೆ.
ಮತ್ತು ಅಬಕಾರಿ ಕಾಯಿದೆ ಉಲ್ಲಂಘನೆಯಡಿ ಎಫ್.ಎಸ್.ಟಿ.ಯಿಂದ 2, ಪೊಲೀಸ್‍ನಿಂದ 175 ಮತ್ತು ಇತರೆ ಕಾಯಿದೆಯಡಿ 1 ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
……………