ದಾವಣಗೆರೆ : ದಲಿತ ಮಹಿಳೆಯರು ದಸರಾ ಉದ್ಘಾಟನೆ ಮಾಡಲು ಅಧಿಕಾರವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಇಡೀ ದಲಿತ ಸಮುದಾಯ ಮಹಿಳೆಯರಿಗೆ ಅವಮಾನ ಮಾಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ನಗರದ ಜಯದೇವವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ, ದಸರಾ ಹಬ್ಬದಲ್ಲಿ ದಲಿತ ಹೆಣ್ಣು ಮಕ್ಕಳಿಗೆ ಹೂ ಮುಡಿಸಲು ಅವಕಾಶವಿಲ್ಲವೆಂದು ಹೇಳುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ದಲಿತ ಹೆಣ್ಣು ಮಕ್ಕಳನ್ನು ಅತ್ಯಂತ ಕೀಳುಮಟ್ಟದಲ್ಲಿ ಸಾರ್ವಜನಿಕವಾಗಿ ನಿಂದಿಸಿ ಅವಮಾನ ಮಾಡಿದ್ದಾರೆ. ಅದ್ದರಿಂದ ಇವರ ವಿರುದ್ದ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಯತ್ನಾಳ ಅವರು ದಲಿತರು ಮತ್ತು ಅಲ್ಪ ಸಂಖ್ಯಾತ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಹರಿಹರ ಶಾಸಕ ಬಿ.ಪಿ ಹರೀಶ್ ನಾಯಿಗೆ ಹೋಲಿಸಿ ಮಾತನಾಡಿ ಅವರಿಗೆ ಅವಮಾನ ಮಾಡಿದ್ದಾರೆ. ನೀಚ ಮನಸ್ಥಿತಿಯ ಜಾತಿವಾದಿಗಳಿಗೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಮಹಿಳಾ ದೌರ್ಜನ್ಯ, ಎಸ್.ಸಿ./ಎಸ್.ಎಸ್ಟಿ ಜಾತಿ ದೌರ್ಜನ್ಯ (ಜಾತಿ ನಿಂದನೆ) ಮತ್ತು ಜೀವ ಬೆದರಿಕೆ ಪ್ರಕರಣಗಳನ್ನು ದಾಖಲಿಸಿ ಸಮುದಾಯಕ್ಕೆ ನ್ಯಾಯ ದೊರಕಿಸಿಬೇಕು ಎಂದರು.
Read also : ಜಗತ್ತಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಬೆಳಸಿಕೊಳ್ಳಿ : ಡಾ. ಟಿ. ಎನ್. ನಾಗಭೂಷಣ
ಪ್ರತಿಭಟನೆಯಲ್ಲಿ ಮಹಿಳಾ ಘಟಕದ ವಿಜಯಮ್ಮ, ದುಗ್ಗಪ್ಪ, ಪ್ರದೀಪ, ಮೈಲಾರಪ್ಪ ಚಿಕ್ಕನಹಳ್ಳಿ , ಸದಾನಂದ , ಮಂಜುನಾಥ ಚಿತನಹಳ್ಳಿ, ನಾಗರಾಜ, ಶಂಕರ ಗಾಂಧಿನಗರ , ತಿಪ್ಪೇಶ್ , ಜೀವನ್ ಅಣಬೇರು, ರಾಜು ಬಾಬು, ಮಳ್ಳೆಕಟ್ಟೆ ಪರಶುರಾಮ, ಕೊಡಗನೂರು ಲಕ್ಷö್ಮಣ, ಮೈಲಾರಪ್ಪ ಗಾಂಧಿನಗರ ಸೇರಿದಂತೆ ಇತರರರು ಇದ್ದರು.
