Kannada News | Dinamaanada Hemme | Dinamaana.com | 06-07-2024
ಆಕ್ಕಾ…ಸೀತಾ ನಿನ್ನಂತೆ ನಾನೂ ಶಂಕಿತ (Peer Basha)
ನಾನು ಅತ್ತಾಗ ಬಿದ್ದ ಕಣ್ಣೀರಿನಲ್ಲಿ ಜೀವವಿದೆ , ಅದು ನಾನು ಮತ್ತು ಕಾವ್ಯ ಹೀಗೆಂದು ಬರೆಯುತ್ತಲೇ…. ಜೀವವಿಲ್ಲದ ಹಾದಿಗಳಿಗೆ ಜೀವ ತುಂಬುತ್ತಾ ಸಾಗಿರುವ ಪೀರ್ ಬಾಷಾ ಎಂಬ ಕವಿ, ‘ಜೀವ ಬಂತು ಹಾದಿಗೆ’ ಎಂಬ 53 ಪುಟಗಳ ಪುಟ್ಟ ಮೊಟ್ಟಮೊದಲ ಸಂಕಲನದಲ್ಲಿ ತನ್ನ ಬರವಣಿಗೆಯ ಪ್ರಾಮಾಣಿಕತೆಯನ್ನು ನಿಚ್ಚಳವಾಗಿ ವ್ಯಕ್ತಪಡಿಸಿದ ಹೂವಿನ ಹಡಗಲಿಯ ಕವಿ ಬಾವಾಜಿ ಪೀರಭಾಷ , ತನ್ನದೇ ಆದ ದಾರಿಯೊಂದನ್ನು ಹುಡುಕಿಕೊಂಡು ಸಾಗುವ ಮಾನವೀಯ ಭಾವಸ್ಪಂದನ, ಅವರ ಅಕ್ಷರಗಳುದ್ದಕೂ ಗೋಚರಿಸುತ್ತದೆ.
1993 ರಲ್ಲಿ ಬಿಡುಗಡೆಯಾದ ಅಚ್ಚಿನಮನೆಯ ಶ್ರಮದ ಕೈಗಳ ಅಕ್ಷರಗಳುಳ್ಳ, ಇದೇ ಸಂಕಲನದ ‘ಕಾವ್ಯ ಮತ್ತು ನಾನು’ವಿನಲ್ಲಿ
ಕಾವ್ಯ ನನ್ನನ್ನು ಸೃಷ್ಟಿಸಿದೆ
ಏಕೆಂದರೆ –ನಾನು
ಕಾವ್ಯವನ್ನು ಸೃಷ್ಟಿಸಿದ್ದೇನೆ
ನನ್ನ ಬದುಕೇ ಕಾವ್ಯ,
ಏಕೆಂದರೆ ಅದು,ಕ್ರೂರ ಸತ್ಯ ಮತ್ತು
ಭ್ರಮೆಗಳ ನಡುವೆ
ಹಾದಿ ಹುಡುಕುತ್ತಿದೆ
ನಾನು ಅತ್ತಾಗ ಬಿದ್ದ ಕಣ್ಣೀರಿನಲ್ಲಿಜೀವವಿದೆ.
ಅದು
ನಾನು ಮತ್ತು ಕಾವ್ಯ.
ನಾನು ಅತ್ತಾಗ ಬಿದ್ದ ಕಣ್ಣೀರಿನಲ್ಲಿ ಜೀವವಿದೆ (Peer Basha)
ಹೀಗೆ ಕಾವ್ಯ ಮತ್ತು ಕವಿಯ ಅಂತಃಸಂಬಂಧವನ್ನು ಇಷ್ಟು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಹೇಳಲು ಮತ್ಯಾವ ಪದಗಳೂ ಬೇಕಾಗಿಲ್ಲ.ಇಲ್ಲಿ ಅನುಭವ ,ಅಕ್ಷರಗಳಾಗಿವೆ ಮತ್ತು ನಂಬಿಕೆಗೆ ಅರ್ಹವಾಗಿವೆ. ಇಲ್ಲಿನ ಕವಿತೆಯ ಕೂಗು, ದಲಿತ ಬಂಡಾಯದ ಕೂಗಿನಂತೆ ಆರ್ಭಟಿಸಿ ಒಮ್ಮೆಲೇ ಮೌನವಾಗುವಂತವಲ್ಲ. ನಾನು ಅತ್ತಾಗ ಬಿದ್ದ ಕಣ್ಣೀರಿನಲ್ಲಿ ಜೀವವಿದೆ…ಎನ್ನುವ ಸಾಲು ಶಬ್ದ ಚಿತ್ರವಾಗಿ ನಮ್ಮ ಮುಂದೆ ಕಾಡುತ್ತದೆ.
ಪ್ರತಿಭಟನೆಯನ್ನು ಸಹ ಭಾವ ತೀವ್ರತೆಯ ಓಟದಲ್ಲಿ ಕಟ್ಟಿಕೊಡುವ ಪರಿ ಮೆಚ್ಚುವಂತಿದೆ. ಒಬ್ಬ ಕವಿಗೆ ಸಹಜವಾಗಿಯೇ ಇರಬೇಕಾದ ಸಹೃದಯತೆ, ಬಹುಬೇಗ ಓದುಗ ಪ್ರಭುವಿನ ಮನದಾಳಕ್ಕಿಳಿಯುವ ರೀತಿಯ ಶಕ್ತ ಸಾಲುಗಳನ್ನು ಇವರ ಕವಿತೆಗಳಲ್ಲಿ ಕಾಣಬಹುದು.
ಒಂದು ಪದ್ಯವನ್ನು ಒಬ್ಬೊಬ್ಬ ಓದುಗ ಒಂದೊಂದು ರೀತಿಯಲ್ಲಿ ಅರ್ಥೈಸಿಕೊಳ್ಳಬಲ್ಲರು ಎಂಬ ಮಾತಿದೆ. ಆದರೆ, ಇವರ ಕವನದ ಸಾಲುಗಳಲ್ಲಿ ಓದುಗನ ಕಾಲದ ಸಂದರ್ಭ ಯಾವುದೇ ಇರಲಿ, ಅಂತಹ ಕಾಲ-ಸಂದರ್ಭಗಳೆರೆಡನ್ನೂ ಸೃಷ್ಟಿಮಾಡುವ ಸಾಮರ್ಥ್ಯ ಇಲ್ಲಿನ ಕವಿತೆಗಳಿವೆ.
ಮನುಷ್ಯ; ಮತ್ತಷ್ಟು ಮಾನವೀಯಗೊಳ್ಳಲಿಕ್ಕೆ , ಮಾನವೀಯವಾಗಿ ಬದುಕಲಿಕ್ಕೆ ಅರ್ಹವಾದ ವಾತಾವರಣವೊಂದನ್ನು ಸೃಷ್ಟಿಮಾಡುವ ಶಕ್ತಿಯಿರುವ ಸೃಜನಶೀಲ ಕವಿ ಪೀರ್ ಗೆ-
ಕಾವ್ಯವೇ………………
ನನ್ನ ಗುಡಿಸಲೊಳಗಿನ
ಬೆಳದಿಂಗಳಿನಷ್ಟು
ಸುಂದರವಾಗು
(ಬೆತ್ತಲೆ ಕಾವ್ಯ)
ನೀವು ನನ್ನನ್ನು ಕೊಂದು
ಬೂದಿಯಾಗಿಸುತ್ತೀರಿ-
ಕಾವ್ಯ
ನಿಮ್ಮ ಗೋರಿಯ ಮೇಲೆ
ವಿಜಯಗೀತೆ ಹಾಡುತ್ತದೆ.
(ಕಾವ್ಯ ಮತ್ತು ನಾನು)
ಸೃಜನಶೀಲ ರಚನೆಯ ಸಂದರ್ಭದಲ್ಲಿ ಸಹಜವಾಗಿ ಎದುರಾಗುವ ಭಾಷಾ ಸವಾಲುಗಳು , ಇಲ್ಲಿನ ಕವಿಗೆ ಎದುರಾಗಿಲ್ಲ.ಅಭಿವ್ಯಕ್ತಿ ಶಕ್ತಿಯನ್ನು ‘ಆಡುಕನ್ನಡ’ ದಲ್ಲಿನ ಸಾಧ್ಯತೆಗಳನ್ನು ತನ್ನ ಪ್ರಥಮ ಸಂಕಲನದಲ್ಲಿಯೇ ವ್ಯಕ್ತಪಡಿಸಿರುವುದು ಹೆಗ್ಗಳಿಕೆಯೇ ಸರಿ.
ಗೆಳೆಯಾ: ಇಲ್ಲಿ
ನನ್ನ ಕನಸುಗಳನ್ನು ಇಡಲು
ಜಾಗವಿಲ್ಲ.
ಆದರೂ ನನ್ನವಳು
ನಾನು ನಗಬೇಕು ಎಂದು ಬಯಸುತ್ತಾಳೆ
ಆದರೆ,
ನಾನು ಮಣ್ಣಿಗಂಟಿಕೊಂಡಿಧ್ಧೇನೆ
ಅಳಬೇಕೆನಿಸಿದಾಗ
ಕಾವ್ಯ ಬರೆಯುತ್ತೇನೆ.
(ಕನಸು ಮತ್ತು…..
ಬಹುದೊಡ್ಡ ಪರಂಪರೆಯೇ ಇದೆ (Peer Basha)
ಪ್ರತಿಯೊಬ್ಬ ಕವಿಯ ಅನುಭವ -ಆತ ಪಡೆದ ಅನುಭವ ಪ್ರಮಾಣ ಪರಂಪರೆ ತನ್ನ ಕಾವ್ಯದ ಮೂಲಕ ಪ್ರತಿಫಲಿಸುತ್ತದೆ. ಹೂವಿನ ಹಡಗಲಿಯಂತಹ ಅಪ್ಪಟ ಮಣ್ಣು , ಹೂವಿನ ಗಂಧದ ಊರಿನಲ್ಲಿ ಚಳುವಳಿಗಾರರ , ಪ್ರತಿರೋಧದ ನೆಲೆಗಳ ನೆರಳಲ್ಲಿ ಬೆಳೆದ ಪೀರ್ ಬಾಷರ ಇಂಥ ಸಾಲುಗಳ ಹಿಂದೆ ಬಹುದೊಡ್ಡ ಪರಂಪರೆಯೇ ಇದೆ.
ಎಸ್.ಎಸ್.ಹಿರೇಮಠರು, ಶೇಷಗಿರಿ ಹವಲ್ದಾರ, ಪ್ರಭಾಕರ ಸರಾಫ್, ಹುಲಿಕಟ್ಟಿ ಚನ್ನಬಸಪ್ಪ, ರಾಟಿ ವೆಂಕಟೇಶ , ಬಡಿಗೇರ ಮೇಷ್ಟ್ರುರಂತಹವರ ಹೋರಾಟಗಳು , ಬರೆಹ , ಮಾತು-ಕತೆಗಳ ಪ್ರಭಾವದ ಎಳೆಗಳನ್ನು ಇವರ ಕವಿತೆಗಳಲ್ಲಿ ಹುಡುಕಬಹುದು.
ಕೊಲ್ಲುವ ಲೋಕ ಮತ್ತು ಸೃಷ್ಟಿಸುವ ಲೋಕಗಳ ಅರಿವಿರುವ ಕವಿ; ಈ ಎರಡೂ ಲೋಕಗಳ ಸರಳ ಚಿತ್ರಗಳನ್ನು ಕಟ್ಟಿಕೊಡುತ್ತಾರೆ ಎಂದು ಬಿಳಿಮಲೆಯವರು ಹೇಳಿದ ಮಾತುಗಳು ಈ ಹೊತ್ತಿಗೂ ಹೊಸದೆಂಬಂತೆ ಕೇಳಿಸುತ್ತವೆ.
ಇಲ್ಲಿ ಬೇರೆಯಾಗಿಯೇ ಹೀಗೆ
ವಂದೇ ಮಾತ-ರಮ್ ನ
ನಶೆಯ ಘೋಷಣೆ ಅರಚಿ
ಗಂಟಲನು ಸುಟ್ಟುಕೊಂಡು
ಕೂಪ ಮಂಡೂಕವಾಗುತ್ತವೆ.
(ಹರೆಯಗಳೇ ಹೀಗೆ)
ಮುವ್ವತ್ತು ವರ್ಷಗಳ ಹಿಂದೆ ಪ್ರಕಟವಾದ ಈ ಕವಿತೆಗಳ ಭಾವವು ಜಾತೀಯವಾದವನ್ನು ಭಗ್ನಗೊಳಿಸುವ ಪ್ರಯತ್ನದಂತೆ ಇಂದಿಗೂ ಕೇಳಿಸುತ್ತದೆ. ಪ್ರಜಾಪ್ರಭುತ್ವದ ಆರೋಗ್ಯ ಕಾಪಾಡುವ ಅಗತ್ಯ ನೋಟಗಳೆಡೆಗೆ ಬೆಳಕು ಚೆಲ್ಲುವ ಚಿಂತನಾರ್ಹ ಬರೆಹ-ಪರ್ಯಾಯ ರಾಜಕಾರಣದ ನೈತಿಕ ದನಿಯನ್ನು ಯುವ ಪೀಳಿಗೆಯಲ್ಲಿ ಕಾಣಲಾಗದ ವಿಷಾದ ಇಲ್ಲಿ ಸ್ಥಾಯಿಯಾಗಿದೆ.
ಕಾಲ ಬಲಿತಾಗ
ನನ್ನ ಹಕ್ಕನ್ನಾಗಿಸಿ
ನಿನ್ನನ್ನು ದಕ್ಕಿಸಿಕೊಳ್ಳುತ್ತೇನೆ
ಒಮ್ಮೆ
ನಿನಗೆ ರೆಕ್ಕೆ ನೀಡುತ್ತೇನೆ.
(ವಿಮೋಚನೆ)
ಅಸಮಾನತೆ, ನೋವು ಮತ್ತು ನಿರಾಶೆಗಳಿಗೆ ಪ್ರತಿಯಾಗಿ ಕವಿ ನಿರಾಶನಾಗದೆ ವಿಮೋಚನೆಗೆ ಬದ್ಧವಾಗಿದ್ದಾನೆ.ಇಲ್ಲಿ ಬಂಡಾಯ ನಿಜ ಅರ್ಥದಲ್ಲಿ ಅನಾವರಣಗೊಂಡಿದೆ ಎನ್ನುವ ಶೇಷಗಿರಿ ಹವಾಲ್ದಾರ್ ಮಾತುಗಳಿಗೆ ಪುಷ್ಟಿ ನೀಡುವ ಹಲವಾರು ಕವಿತೆಗಳು ಈ ಸಂಕಲನದಲ್ಲಿವೆ.
ಸ್ವಾತಂತ್ರ್ಯೋತ್ತರ ಭಾರತದ ಕಾಲಮಾನದ ರಾಜಕೀಯ ಪರಿಸ್ಥಿತಿಗಳಿಗಳಿಂದ ಉಂಟಾದ ಜನಜೀವನದ ಸಂದರ್ಭವು ಸಾಹಿತ್ಯದ ವಸ್ತುವಿನೊಂದಿಗೆ ಕಾರಣವಾಗಿಸುವುದು-ಪೀರಬಾಷರವರ ಕಾವ್ಯದಲ್ಲಿ ಎದ್ದು ಕಾಣಿಸುತ್ತದೆ. ಕೇವಲ 22ರ ಯುವಕನೊಬ್ಬನ ಗಾಂಭೀರ್ಯದ ಕುರಿತಂತೆ ಎಸ್.ಎಸ್.ಹಿರೇಮಠರು..
‘ಸಂಕಲನಕ್ಕೆ ಬರೆದ ಮಾತುಗಳೇ ಸಾಕ್ಷಿ (Peer Basha)
“ಈ ಮುಸ್ಲಿಮ್ ಹುಡುಗ ಸುಲಭವಾಗಿ ತನ್ನೊಳಗೆ ಬಿಟ್ಟುಕೊಳ್ಳಲಾರನಲ್ಲವೆ? ಕಣ್ಣೆದುರಿಗಿದ್ದೇ ದಂಗು ಬಡಿಸುತ್ತಾನಲ್ಲವೆ? ತನ್ನ ಕಾವ್ಯ ಪ್ರಕ್ರಿಯೆಯಲ್ಲಿ ನಿಗೂಢ ಅರ್ಥದ ಪದರುಗಳಲ್ಲಿ ಕಳೆದುಹೋಗಿ ಹುಡುಕ ಹಚ್ಚಿ ದೂರ ನಿಂತು ನಗುತ್ತಾನಲ್ಲವೆ? ಪೀರ್….ತುಟಿಯಲ್ಲಿ ಅರಳಿದ ತುಂಟ ನಗು ಯೌವ್ವನದ ಹೊಸ್ತಿಲಲ್ಲಿರುವಾಗಲೂ , ಗಾಂಭೀರ್ಯಕ್ಕೆ ಕಾಲಿಡುವಾಗಲೂ ಅರಳಿಕೊಂಡೇ ಇದೆ.”ಎಂದು ‘ಜಾಲಿ ಹೂಗಳ ನಡುವೆ’ಸಂಕಲನಕ್ಕೆ ಬರೆದ ಮಾತುಗಳೇ ಸಾಕ್ಷಿ.
ನೋಡಲು ಥೇಟ್ ಕಾಲೇಜು ಹುಡುಗನಂತೆ ಕಾಣುತ್ತಿದ್ದ ಈತ ಕವಿಯ ಗಾಂಭೀರ್ಯದ ಕವನ ವಾಚನಕ್ಕೆ ಹಲವರು ಹುಬ್ಬೇರಿಸಿದರೆ ಮತ್ತೆ ಕೆಲವರಿಗೆ ಈತನಿಗೆ ‘ಅಹಂ’ಎಂದು ಮೂಗು ಮುರಿದದ್ದೂ ಉಂಟು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕವಿ ಪೀರ್,
ಗೆಳೆಯಾ; ಇಲ್ಲಿ
ನನ್ನ ಕವನಗಳನ್ನು ಇಡಲು
ಜಾಗವಿಲ್ಲ.ಆದರೂ ನನ್ನವರು
ನಾನು ನಗಬೇಕು ಎಂದು ಬಯಸುತ್ತಾರೆ …
ಎಂದು ಉತ್ತರಿಸುತ್ತಾರೆ.
ಮೇಲಿನ ಕವನದ ಸಾಲಿನ ‘ಇಲ್ಲ”ಎಂಬ ಪದ ಹುಟ್ಟಿಸುವ ಅರ್ಥ ಬಹುಮುಖ್ಯವಾದುದು. ಇಲ್ಲ,ಎಂಬುದು ಕೇವಲ ಎದೆಯ , ತುಟಿಗಳಂಚಿನ ನಗು ಮಾತ್ರ .ಅಂದರೆ-ಅದು ಹೊರಡಿಸುವ ಅರ್ಥ ವಿಶಾಲ ವ್ಯಾಪ್ತಿಯದಾಗಿದೆ.
ಜಾಲಿಯ ಹೂ…ಬಿರುಬಿಸಿಲ ನಾಡು ಬಳ್ಳಾರಿಯ ಜನತೆಯ ಪಾಲಿಗೆ ಬಡತನದ ರೂಪಕದಂತೆ ಕಂಡರೆ,ಕಾವ್ಯ ಸ್ಪರ್ಶದಿಂದ ಕವಿಯೇ ಹೂವಾಗುವ ಕವಿ ಪೀರ್….
ದೇವರು ಮನುಷ್ಯನಾದ ರಾತ್ರಿ
ಈ ಜಗತ್ತು ಹೊಸ ಹಗಲನ್ನು ಪಡೆಯುತ್ತದೆ.
ಎಂದು ಬರೆಯುತ್ತಾರೆ.
ಪೀರನ ಅಕ್ಕ ಸೀತಾ…. (Peer Basha)
ಇಲ್ಲಿನವರು ಸಾಹಿತ್ಯದ ಮೂಲಕ ಹೊಸ ಭಾಷೆಗಳನ್ನು, ಶಾಸ್ತ್ರಗಳನ್ನು,ಚಿಹ್ನೆಗಳನ್ನು ತಮ್ಮ ಹೊಟ್ಟೆಗಳಲ್ಲಿ,ಮನಸ್ಸಿನಲ್ಲಿ ಸೇರಿಸಿಕೊಂಡು ಆರೋಗ್ಯ ಕೆಡಿಸಿಕೊಳ್ಳದೆ, ಮನುಷ್ಯ ಸ್ವಭಾವದ ಪಾತ್ರಗಳನ್ನು ಆಡುಭಾಷೆಯಲ್ಲಿ ಹೇಳುತ್ತಾ ಹೋದರು. ಪ್ರಕಟಿತ ಕೃತಿಗಳ ಕಂಟೆಂಟ್ ಗಳು ಮೊದಲ ಪುಟದಲ್ಲಿ ಪರಿಚಯವಾದ ತಕ್ಷಣ ಅವು ಮುಂದೆ ಹೀಗೆಯೇ ಹೋಗುತ್ತವೆ ಎಂಬುದು ಗೊತ್ತಾಗಿಬಿಡುತ್ತದೆ.
ಕಾಯಿಲೆಗೆ ಔಷಧಿ ಸಿಕ್ಕೇ ಬಿಡುವ ಭರವಸೆಯಲ್ಲಿ ಡಾಕ್ಟರ್ ಮುಂದೆ ಕುಳಿತ ರೋಗಿಯ ಹಾಗೆ ,ಭಾವವನ್ನು ಮೂಡಿಸುತ್ತವೆ. ಅನುಭವಕ್ಕೆ ಆಳವನ್ನು,ವಿಸ್ತಾರವನ್ನು, ಸಮಕಾಲೀನ ಘಟನೆಗಳೊಂದಿಗೆ ಸಮೀಕರಿಸಿ ನೋಡುವ ಮತ್ತು ಸಮಸ್ಯೆಗಳಿಗೆ ಐತಿಹಾಸಿಕ , ಪೌರಾಣಿಕ ಅರ್ಥದ ಹಿನ್ನೆಲೆಯನ್ನು ಕೊಡುವುದರಿಂದ-ಸಾಹಿತ್ಯ ಕೃತಿಗಳು ಚಿರಂತನತೆಯೆಡೆಗೆ ಚಲಿಸುತ್ತವೆ.
ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ (Peer Basha)
ಪೀರ್ ಬಾಷಾರ , ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ ಎಂಬ ಕಥನವು ದೇಶದ ಯಾರನ್ನೂ ದ್ವೇಷಿಸುವುದಿಲ್ಲ,ದೂಷಿಸುವುದೂ ಇಲ್ಲ,ಆದರೆ ಕವಿಯೊಬ್ಬನ ತಳಮಳಗಳು ಸೃಷ್ಟಿಸುವ ಸಂವೇದನಾಶೀಲತೆಯು ಬಹುದೂರ ಸಾಗಿ ಸಹೃದಯರ ಮನ ಮುಟ್ಟುತ್ತದೆ.
ಕೋಮುವಾದದ ಕರಾಳತೆಗೆ ಬಲಿಯಾಗುವ ಮುಗ್ಧ ಪ್ರಜೆಗಳ ನೋವನ್ನು ಬರೆಹದ ಮೂಲಕ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿದ ಕತೆಗಾರ ಮಾಂಟೋ ಮತ್ತೆ ಮತ್ತೆ ನೆನಪಾಗುತ್ತಾನೆ.
ಹೌದು ಅಕ್ಕ ಸೀತಾ
ನಿನ್ನಂತೆ ನಾನೂ ಶಂಕಿತ
ನಿನ್ನ ಪಾತಿವ್ರತ್ಯದಂತೆಯೇ ನನ್ನ ದೇಶಭಕ್ತಿ
ಸಾಬೀತುಪಡಿಸುವುದಾದರೂ
ಹೇಗೆ ಹೇಳು
ಶೀಲ!
ಭಾರತದಲ್ಲಿ ಧರ್ಮ -ದೀರ್ಘಾವಧಿಯ ರಾಜಕಾರಣ ಮಾಡಿದರೆ,ರಾಜಕಾರಣ-ಅಲ್ಪಾವಧಿಯ ಧರ್ಮವಾಗುತ್ತದೆ. ಆದ್ದರಿಂದಲೇ ಹಿಂದೂ ಧರ್ಮದ ಉದಾರವಾದಿಗಳು ಮತ್ತು ಮತಾಂಧರ ನಡುವಣ ಸಂಘರ್ಷವೇ ನಮ್ಮ ದೇಶದ ಇತಿಹಾಸವನ್ನು ರೂಪಿಸುತ್ತಾ ಬಂದಿದೆ ಎಂಬುದನ್ನು ಲೋಹಿಯಾ ನಂಬಿದ್ದರು.
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂಸೆ ಅನಿವಾರ್ಯವೆನ್ನುವ ನಿಲುವನ್ನು ಕೈಬಿಡದೆ ಬಲಪಂಥೀಯರು ‘ದಯೆಯೇ ಧರ್ಮವಯ್ಯ’ಎಂದ ಬಸವಣ್ಣನಂತಹ ಸಾಂಸ್ಕೃತಿಕ ನಾಯಕರನ್ನು ಕೊಲೆ ಮಾಡಿದಂತಾಗುತ್ತದೆ.
ಲೋಹಿಯಾ ಕೂಡ ವರ್ತಮಾನದ ಅನಾಥರಂತೆ ಕಾಣಿಸುತ್ತಾರೆ (Peer Basha)
ವಿವೇಕದ ದೇವರು ದಯೆಯ ದೇವರಿಲ್ಲದೆ ಒಂಟಿಯಾಗುತ್ತಾನೆ ಎನ್ನುವ ಲೋಹಿಯಾ ಕೂಡ ವರ್ತಮಾನದ ಸಂದರ್ಭದಲ್ಲಿ ಅನಾಥರಂತೆ ಕಾಣಿಸುತ್ತಾರೆ.ಇಷ್ಟೆಲ್ಲ ವೈಚಾರಿಕತೆಯನ್ನು ಎಡಪಂಥೀಯ ಲೇಖಕರು ಪುಟ್ಟ ಕವಿತೆಗಳಲ್ಲಿ ಹಿಡದಿಡುವ ರೀತಿ ಬೆರಗುಗೊಳಿಸುತ್ತದೆ.
ಕವಿತೆಯೆಂದರೆ ಚಮ್ಮಾರ ಚಪ್ಪಲಿ ಹೊಲಿದಂತೆ , ಅಕ್ಕಸಾಲಿಗ ಒಡವೆ ಮಾಡಿದಂತೆ , ಬಡಗಿ ಮರಗೆಲಸ ಮಾಡಿದಂತೆ ಎನ್ನುವ ಸಂಗಾತಿ ಪರಶುರಾಮ ಕಲಾಲರ ಮಾತುಗಳು ಮೌಲಿಕವಾದ ನುಡಿಗಳೇ ಆಗಿವೆ.
Read also : ದಿನಮಾನ ಹೆಮ್ಮೆ : ಚನ್ನಣ್ಣನೆಂಬ ಮನೆಯಣ್ಣನ ನೆನೆದು
ಗಡಿಗಳಿಲ್ಲದ ಜಗತ್ತಿನ ಕನಸುಗಾರರ ಸಾಲಿನಲ್ಲಿ ನಾನು ಕೊನೆಯವನೇನಲ್ಲ ಎಂಬ ವಿಶ್ವಾಸದ ಕವಿಗೆ ಸಹೋದರಿ ಸೀತಾ,ಭೂಮಿಯ ಒಡಲಿಗೆ ಜೀವಂತ ಸರಿದು ಭೂಮಿಗೆ ಜೀವ ತುಂಬಿದವಳಾಗಿ ಕಾಣಿಸುತ್ತಾಳೆ.ಪೀರ್ ಮತ್ತು ಸೀತಾಳಂತಹ ಮನುಷ್ಯರೆಲ್ಲ ಒಡಹುಟ್ಟಿದವರೆಂಬುದನ್ನು ಸಾಬೀತುಪಡಿಸಬೇಕಾದ ವರ್ತಮಾನದ ಕುರಿತು ನನಗೆ ಖೇದವಿದೆ.
ಯಾವ ಸಾಕ್ಷಿಗಳನ್ನು ತರುವುದೆಲ್ಲಿಂದ
ನಮ್ಮ ಮನೆಯಲ್ಲಿಯೇ ನಾವು ನಿರಾಶ್ರಿತರು
ತುಂಬಿದ ನಾಡೊಳಗೆ ಪರಕೀಯರು
ಕವಿತೆಯ ಸಾಲುಗಳನ್ನಿಲ್ಲಿ ವಿವರಿಸುವ ಅಗತ್ಯವೇ ಇಲ್ಲದ ಹಾಗೆ ಕವಿಯ ಬರೆಹ ಸರಳವಾಗಿದೆ ಮತ್ತು ಅಷ್ಟೇ ಸ್ಪಷ್ಟವಾಗಿದೆ. ಜೊತೆಗೆ, ಭಾರತ ಹಿಂದೂ ರಾಷ್ಟ್ರವೋ ಅಥವಾ ಭೌಗೋಳಿಕ ಸರಹದ್ದಿನೊಳಗೆ ವಾಸಿಸುತ್ತಿರುವ ಎಲ್ಲ ಮತಧರ್ಮದವರಿಗೂ ಸಮಾನ ನೆಲೆಯಲ್ಲಿ ಸೇರಿದ ರಾಷ್ಟ್ರವೋ ಎಂಬ ಚರ್ಚೆ ಎಂದಿಗಿಂತಲೂ ಈಗ ಬಿರುಸಾಗಿದೆ.
ಈ ಹಿಂದೆ ರವೀಂದ್ರನಾಥ ಟಾಗೋರ್ ‘ಗೋರಾ’ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ “ಇಂಡಿಯಾದ ಪ್ರತಿ ಜಾತಿಯೂ ನನ್ನ ಜಾತಿ , ಪ್ರೀತಿ ಆಹಾರವೂ ನನ್ನ ಆಹಾರ…ಹಿಂದೂ ಮುಸ್ಲಿಮರೆಂಬ ಭೇದ ನನ್ನಲ್ಲಿಲ್ಲ,ನಾನು ನಿಜವಾದ ಭಾರತೀಯ”ಎಂದು ಹೇಳುತ್ತಾನೆ.
ಅಕ್ಕ ಸೀತಾ….ಎಂದು ಕರೆದಾಗಲೇ ಕವಿತೆ ಅದೆಷ್ಟೋ ಯೋಜನ ದೂರ ಚಲಿಸಿ ಬಿಡುತ್ತದೆ.ಇನ್ನು ನಿನ್ನಂತೆ ನಾನೂ ಶಂಕಿತ…ಎಂದಾಗಲಂತೂ ಕಾವ್ಯ ಕಣ್ಣೊಳಗಿನ ನೀರಾಗುತ್ತದೆ. ಒಂದು ಸಮರ್ಥ ಕವನ , ಬರೆಹ ಗೆಲ್ಲಬೇಕಾದ್ದು ಹೀಗೇನೆ.
ಭಾರತ ಹಿಂದೂ ರಾಷ್ಟ್ರವಾಗಿ ರೂಪುಗೊಳ್ಳುವ ಈ ಹೊತ್ತಿನಲ್ಲಿ, ಒಂದು ವೇಳೆ ಹಾಗೇನಾದರೂ ಸಂಭವಿಸಿಯೇಬಿಟ್ಟರೆ , ಅನಿವಾರ್ಯವಾಗಿ ಹಿಂದೂಗಳಲ್ಲಿ ದೇವರನ್ನು ಅನ್ಯಧರ್ಮೀಯರು ಅಷ್ಟು ಮಾತ್ರವಲ್ಲ, ನಾಗರಿಕರಾಗಿ ಯಾರೂ ಅನ್ಯರು ಎಂದು ಈ ಸಮಾಜ ಪರಿಗಣಿಸುತ್ತದೆ ಎಂದ ಜಿ.ರಾಜಶೇಖರರ ಆತಂಕ ನಿಚ್ಚಳವಾಗಿ ಗೋಚರಿಸುತ್ತದೆ.
ಸಂವಿಧಾನದ ವಿರೋಧಿ ನಿಲುವು.. (Peer Basha)
ಹಿಂದೂಯೇತರರು ಮನುಷ್ಯರೇ ಅಲ್ಲ ಎಂಬಂತಹ ನಿರ್ಣಯಕ್ಕೆ ಬಂದರೂ ಅಚ್ಚರಿಯೇನಿಲ್ಲ.ಇದು ಭಾರತದ ಒಪ್ಪಿತ ಸಂವಿಧಾನದ ವಿರೋಧಿ ನಿಲುವಲ್ಲದೆ ಮತ್ತೇನು? ಎಂಬ ಮಿಲಿಯನ್ ಪ್ರಶ್ನೆಗಳನ್ನು ಕವಿತೆ ಎದುರುಗೊಳ್ಳುತ್ತದೆ.
ಅಲ್ಪಸಂಖ್ಯಾತನೊಬ್ಬನ ಅಸಾಧ್ಯ ಸಂಕಟಗಳ ಗುಚ್ಛದಂತಿರುವ ಅಕ್ಕ ಸೀತಾ…ಪದ್ಯದ ಸಾಲುಗಳು ಕವಿಯೊಬ್ಬ ಅನುಭವಿಸುವ ಅಸಾಧ್ಯ ಹಿಂಸೆಯ ಆತ್ಮಕತೆಯ ಭಾಗವೂ ಆಗಿ ತೋರುತ್ತದೆ. ಒಟ್ಟಾರೆ, ಈ ಕವಿತೆ ನಮ್ಮದೇ ಆತ್ಮಸಾಕ್ಷಿಯ ಪ್ರತಿಭಟನೆಯಂತೆ ಕಾಣಿಸುತ್ತದೆ.
ಅಕ್ಕ ಸೀತಾ
ನಾವು ಈ ನೆಲದ ಮಕ್ಕಳು
ಪರೀಕ್ಷೆಯೆಂಬ ಪಿತೂರಿಯ
ಬೆಂಕಿಯಲ್ಲೇಕೆ ನಾವು ಬೇಯಿಸಬೇಕು
ಬೆನ್ನಿಗೆ ಬಾಣ ಬಿಡುವ
ಕ್ರೌರ್ಯವೇಕೆ ನಮ್ಮನ್ನಾಳಬೇಕು
ಎಂದು ಪ್ರಶ್ನಿಸುವ ಕವಿಯ ಪ್ರಶ್ನೆ ಓದುಗನಿಗೂ ಆಗಿಬಿಡುತ್ತದೆ.
ಕಾಲವೇ
ಏಳೇಳು ಕಾಲಕ್ಕೂ
ನನ್ನ ಅಕ್ಕ ತಂಗಿಯರನ್ನು
ಸೀತೆಯರನ್ನಾಗಿಸಬೇಡ
ಕಳಂಕದ ಬೆಂಕಿಯಲ್ಲಿ
ನಮ್ಮನ್ನು ಬೇಯಿಸಬೇಡ
ಎನ್ನುತ್ತಾರೆ.
ಈ ಮುಸ್ಲಿಂ ಹುಡುಗ ಅಷ್ಟು ಸುಲಭವಾಗಿ ತನ್ನೊಳಗೆ ಬಿಟ್ಟುಕೊಳ್ಳಲಾರನಲ್ಲವೆ?ಕಣ್ಣೆದುರಿದ್ದೇ ದಂಗು ಬಿಡಿಸುತ್ತಾ ನಲ್ಲವೆ? ತನ್ನ ಕಾವ್ಯ ಕ್ರಿಯೆಯಲ್ಲಿ ನಿಗೂಢನಾಗಿ ಅರ್ಥದ ಪದರುಗಳಲ್ಲಿ ಕಳೆದುಹೋಗಿ ಹುಡುಕ ಹಚ್ಚಿ ದೂರವೇ ನಿಂತು ನಗುತ್ತಾನಲ್ಲವೆ? ಪೀರ್ ತುಟಿಯಲ್ಲಿ ಅರಳಿದ ತುಂಟ ನಗು ಯೌವ್ವನದ ಹೊಸ್ತಿಲಲ್ಲಿರುವಾಗಲೂ ಗಾಂಭೀರ್ಯಕ್ಕೆ ಕಾಲಿಡುತ್ತಿರುವಾಗಲೂ ಅರಳಿಕೊಂಡೇ ಇದೆ-‘ಜಾಲಿ ಹೂಗಳ ನಡುವೆ’ ಸಂಕಲನಕ್ಕೆ ಗುರುಗಳಾದ ಎಸ್.ಎಸ್.ಹಿರೇಮಠರು ಬರೆದ ಮೇಲಿನ ಮಾತುಗಳನ್ನಾಡಿ ಈಗಾಗಲೇ ಸರಿಸುಮಾರು ಮೂರು ದಶಕಗಳೇ ಸರಿದು ಹೋಗಿವೆ.
ಹಡಗಲಿಯ ಬಿಚ್ಚುಗತ್ತಿ ಓಣಿ, ಅಕ್ಕಿಪೇಟೆ,ಸೊಪ್ಪಿನರ ಓಣಿ,ಶ್ರೀ ರಾಮದೇವರ ಗುಡಿ ಬಯಲುಗಳಲ್ಲಿ , ಮೊದಲಘಟ್ಟದ ಆಂಜನೇಯನ ಗುಡಿ,ಹೊನ್ನೂರು ಸ್ವಾಮಿ ದರ್ಗಾದ ಅಂಗಳಗಳಲ್ಲಿ ಅದೆಷ್ಟೋ ನೆನಪುಗಳು ಜಾರಿಹೋಗಿವೆ. ಹೋಳಿಹಬ್ಬದ ರಂಗಿನಾಟದ ಗೆಳೆಯರ ಗುಂಪೂ ಕರಗಿ ಹೋಗಿದೆ.ಪೀರ್ ತುಟಿಗಳಲ್ಲೀಗ ತುಂಟ ನಗುವಿಲ್ಲ.ವಿಷಾದ ಮಡುಗಟ್ಟಿದೆ.ಮೇಷ್ಟರ ಮಾತಿಗೆ ಉತ್ತರವೋ ಎಂಬಂತೆ,
…..ಇಲ್ಲಿ ನನ್ನ ಕನಸುಗಳನ್ನು
ಇಡಲು ಜಾಗವಿಲ್ಲ,
ಆದರೂ ನನ್ನವರು
ನಾನು ನಗಬೇಕು ಎಂದು ಬಯಸುತ್ತಾರೆ.
ಎಂದು ಉತ್ತರಿಸುವಾಗಲೂ ಎದೆಯ ಭಾರವನ್ನು ಹೊರ ಹಾಕುತ್ತಾರೆ.
ಜಗತ್ತಿನ ಎಲ್ಲ ಧರ್ಮೀಯರಿಗೆ ಒಬ್ಬನೇ ಭಗವಂತನಿದ್ದು,ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಮಾತನಾಡಲು ಗೊತ್ತಿದ್ದಿದ್ದರೆ ಸಮಸ್ಯೆ ಇರಲಿಲ್ಲ. ಕವಿ,ಮಾನವೀಯತೆಗೆ ಮೊರೆಹೋಗಿ-
ಧರ್ಮಗ್ರಂಥಗಳ ಗೊಬ್ಬರವನುಂಡು
ಜೋಳ ಗುಲಾಬಿಗಳು ಕಾಡು ಬೆಳೆಯಲಿ
ದೇಶ ಧ್ವಜಗಳೆಲ್ಲ ಚಿಂದಿ ಅರಿವೆಗಳಾಗಿ
ಗಡಿಗಳಿಲ್ಲದ ಜಗದ ಕೌದಿಯಾಗಲಿ…
(ಸೈತಾನರೂ ಇಲ್ಲಿ..)
ಎಂದು ಕವಿ ಹಾರೈಸುತ್ತಾನೆ.ಅಷ್ಟೇ ಅಲ್ಲ,
ಕಾಲ ಅವನಿಗೆ
ದ್ವೇಷದ ಜೇಬು ಕೊಟ್ಟಿದ್ದಾನೆ
ಅವನ ಖರ್ಚಿಗಿಷ್ಟು ಪ್ರೀತಿಯನ್ನು ಅದರಲ್ಲಿಟ್ಟು ಬರುವೆ…
(ಹಂಚಿದಷ್ಟು)
ಎಂಬ ಆಶಯವನ್ನು ವ್ಯಕ್ತಪಡಿಸುತ್ತಾನೆ.
ಕಾಲದ ಓಟದಲ್ಲಿ ಕಟ್ಟುವ ಕನಸನ್ನಷ್ಟೇ ಕಾಣುವ ಪೀರ್,ಒಂದು ಕವನದಲ್ಲಿ…
ಕಾಲವೇ…
ಈ ಸೃಷ್ಟಿಯಲ್ಲಿ…
ಒಂದೇ ಒಂದು ಅಂತಹದೊಂದು
ಗುಂಡನ್ನು ಸಿಡಿಸು
ಈ ಲೋಕದ
ಎಲ್ಲ ಬಂದೂಕುಗಳು
ಸುಟ್ಟುಹೋಗಲಿ
(ಎಲ್ಲ ಬಂದೂಕುಗಳು ಸುಟ್ಟು ಹೋಗಲಿ)
ನಾನು
ಕಾಲನ ಕೂಸು
ಕೊಲ್ಲುವ ಹೃದಯವನ್ನು
ಅಂಗೈಯಲ್ಲಿ ಬಂಧಿಸುವೆ
ನನ್ನ ಸಾವು
ಕೊಂದವರ ಒಡಲಲ್ಲಿ
ಜೀವವಾಗಲಿ
(ಪ್ರೀತಿ ನನ್ನ ಹೆಸರು)
ಲೋಕದ ಕಳಂಕಿತರ ಪ್ರತಿನಿಧಿಯ ಅಂತರಾಳದ ಧ್ವನಿ -ಪೀರ್ ಬಾಷಾ ನನ್ನನ್ನು ದೇಶದ್ರೋಹಿಯೆಂದು ಕರೆದರೆ ನಾನು ವಿಷಾದಿಸುವುದಿಲ್ಲ.ಏಕೆಂದರೆ ನಮ್ಮನ್ನು ದೇಶದ್ರೋಹಿಗಳನ್ನಾಗಿ ಮಾಡಿದ ಹೊಣೆ ಈ ನಾಡಿನದು…ನಾನೇನಾದರೂ ದೇಶ ಸೇವೆಯ ಕೆಲಸ ಮಾಡಿದ್ದರೆ ಅದು ದೇಶಭಕ್ತಿಯ ಭಾವನೆಯಿಂದ ಮಾಡಿದ್ದಲ್ಲಿ ಶುದ್ಧಾಂತಕರಣದಿಂದ ಪ್ರೇರಿತನಾಗಿ ಮಾಡಿದ್ದು.
ಇವು-ಡಾ.ಬಿ.ಆರ್.ಅಂಬೇಡ್ಕರ್, 1931ರಲ್ಲಿ ಆಡಿದ ಮಾತುಗಳು.
ಬಾಬಾಸಾಹೇಬರ ಸಂಕಟದಂತೆಯೇ ಈ ದೇಶದ ಅಲ್ಪ ಸಂಖ್ಯಾತರೂ ಇಂದು ಪರಕೀಯತೆಯನ್ನು ( ( otherness feeling) ಅನುಭವಿಸುತ್ತಿದ್ದಾರೆ. ಅಂಥದ್ದೇ ನೋವು ಸಂಕಟಗಳ ಮಾತುಗಳಂತಿರುವ
ಈ ಕೆಳಗಿನ ಕವಿತೆ…
ನಾನು
ಅಪಭ್ರಂಶಗೊಂಡ
ಹೆಸರಿನ ದೇಶದ ಪ್ರಜೆ
ಅನಾಚಾರವೇ ಇಲ್ಲಿ ಧರ್ಮ
ವಾಗಿ ಆಳುತ್ತಿದೆ
ನನ್ನ ಹೆಸರಿಗೆ ಕೊಲೆಗಡುಕನ ಪಟ್ಟ
ಅಂಟಿಕೊಂಡಿದೆ
ನನ್ನ ಹೆಸರು
ಕೊಲೆಗಡುಕರ ಪಟ್ಟಿಯಲ್ಲಿದೆ
ದೇಶಭಕ್ತರು ನನ್ನ ತಾಯಿಯ
ಸೀರೆ ಹರಿದು ಬಾವುಟ ಮಾಡಿದ್ದಾರೆ
ಕಾಲವೇ….ಅವರನ್ನು ಕ್ಷಮಿಸು
ತಾಯಿ ಗರ್ಭವನ್ನು ಮರೆತವರು
ಗರ್ಭಗುಡಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ
ಯಾರು ನನ್ನ ಬಂಧುಗಳು
ಕೊಂದವರಲ್ಲ
ಕೊಲೆಯಾದವರ ವಂಶದ ಚಿಗುರು ನಾನು
ಈ ಲೋಕದ ಕಳಂಕಿತರ ಪ್ರತಿನಿಧಿ
ನನ್ನ ಮಕರಂದದಲ್ಲಿ
ಮುಕ್ಕೋಟಿ ಬೀಜಗಳು
‘ಪರಕೀಯ ಪ್ರಜ್ಞೆ (Peer Basha)
ಅನುಭವವೇ ದೊಡ್ಡದಾದುದಲ್ಲದೆ ಕೃತಿ ದೊಡ್ಡದಾಗುವುದು ಸಾಧ್ಯವೇ ಇಲ್ಲ ಎಂಬ ಮಾತಿನಂತೆ ಕವಿ ಪೀರ್ ತಾನು ಪಡೆದ ಅನುಭವ ‘ಪರಕೀಯ ಪ್ರಜ್ಞೆ’ಯನ್ನು ಇಡೀ ಸಾಮುದಾಯಿಕ ಪ್ರಜ್ಞೆಯನ್ನಾಗಿಸಿ ವೇದಿಕೆಗಳಿಗೆ ಮಾತು ಕೊಡಬಲ್ಲ ಕಾವ್ಯವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾನೆ.
ನಾನು ಈ ಲೋಕದ ಪ್ರಜೆ
ತುಳಿವ ಕಾಲುಗಳೆಲ್ಲ ನನ್ನ ಕೊರಳ ಮೇಲೇ ಇವೆ…
ಹೀಗೆ ಹೇಳುವ ಕವಿಯ ಮಾತಿಗೆ ಬೇರೆ ವಿಶ್ಲೇಷಣೆ ಅಗತ್ಯವಿಲ್ಲ.
ಧರ್ಮದ ಹೆಸರಿನಲ್ಲಿ ಭೂಗೋಲವೇ
ಸ್ಮಶಾನವಾಗುತಿರುವ ಹೊತ್ತು
ಸಂಸ್ಕೃತಿಯ ಹೆಸರಿನಲ್ಲಿ ಸಮಾಜಕ್ಕೆ
ನೆತ್ತರು ಹರಿಯುತ್ತಿರುವ ಹೊತ್ತು
ಭಕ್ತರ ಮಂಚದಲ್ಲಿ ರಾಷ್ಟ್ರಧ್ವಜ
ಲಜ್ಜೆಗೊಂಡಿರುವ ಹೊತ್ತು
ದೇಶಭಕ್ತರು ನನ್ನ ತಾಯಿಯ ಸೀರೆ ಹರಿದು ಬಾವುಟ ಮಾಡಿದ್ದಾರೆ…
ಎಂದು ಕವಿ ಹೇಳುವಾಗ ಈ ಕಾಲಘಟ್ಟದಲ್ಲಿ ‘ದೇಶಭಕ್ತರು’ಮತ್ತು ‘ಬಾವುಟ’ಪದಗಳು ಧ್ವನಿಸುವ ಅರ್ಥ ಬಹುದೂರ ಚಲಿಸುತ್ತದೆ.ಸಂವೇದನಾಶೀಲ ಮನಸ್ಸು ಘಾಸಿಗೊಂಡಿದ್ದರೂ …
ಕಾಲವೇ
ಅವರನ್ನು ಕ್ಷಮಿಸು
ಎನ್ನುವ ಕವಿ,ಓದುಗನ ಅಂತರಾಳ ಪ್ರವೇಶಿಸುತ್ತಾನೆ.
ಚರಿತ್ರೆಯ ಸಂಕೀರ್ಣತೆಯನ್ನು ಮತ್ತು ಕ್ರೂರ ವರ್ತಮಾನದ ಸಂಕಟಗಳನ್ನೂ ,ರಾಜಕೀಯ,ಸಾಮಾಜಿಕ ,ಧಾರ್ಮಿಕವಾಗಿ ಮತ್ತು ಕೌಟುಂಬಿಕ ಹಿನ್ನೆಲೆಯಲ್ಲಿನ ಪ್ರಶ್ನೆಗಳಿಗೆ ಉತ್ತರಿಸಬಹುದಾದ ಸಂವೇದನಾಶೀಲ ಭಾವವನ್ನು ಪೀರ್ ಬಾಷಾರ ಕಾವ್ಯ ಸೃಷ್ಟಿಸುತ್ತದೆ.
ಪೀರಣ್ಣ ಮತ್ತು ದೇವರು
ನನ್ನ
ಬೆವರ ಹನಿ
ನೆಲಕ್ಕೆ ಬಿದ್ದಾಗಲೆ
ಅಂದುಕೊಂಡೆ
ನಾನು ಸಾಯುವುದಿಲ್ಲ
ಎಂದು !
ಹೀಗೆ ಬೆವರ ನಂಬಿದ ಶ್ರಮಿಕ ಕವಿ ಪೀರ್ ಕಣ್ಣಲ್ಲಿ ದೇವರು ಫ್ರೆಂಡ್ ಆಗಿ ಕಾಣಿಸುತ್ತಾನೆ. ಇಂಡಿಯಾದ ರಾಮ ಮತ್ತು ಮಂದಿರದ ಕಾರಣಕ್ಕಾಗಿ ಮೂರು ದಶಕಗಳಿಂದ ಸುದ್ದಿಯಲ್ಲಿದ್ದರೂ ಕವಿಗೆ ಅವನೊಬ್ಬ ರಾಮ ಮಾತ್ರವೇ ಆಗಿ ಕಾಣಿಸುತ್ತಾನೆ.
ರಾಮ
ನೀನೊಂದು ಮರವಾಗಿ
ನಾಲ್ವರಿಗೆ ನೆರಳು ನೀಡಿದ್ದರೆ ಸಾಕಿತ್ತು.
ಈ ರೀತಾಂಬರಿ,ಪೀತಾಂಬರಗಳ
ನಡುವೆ ನರಳುವುದಾದರೂ ತಪ್ಪುತ್ತಿತ್ತು.
ವರ್ತಮಾನದಲ್ಲಿ ರಾಮ ಎಂಬ ದೇವರು ಸೃಷ್ಟಿಸಿದ ಆತಂಕ ಕಂಡ ಕವಿ,
ರಾಮ, ನೀನೊಂದು ಮರವಾಗಿ
ಹರಿವ ನೀರು ಹಿಡಿದಿಟ್ಟು
ನೆಲ ತಂಪಾಗಿರಿಸಿದ್ದರೆ ಸಾಕಿತ್ತು.
ಮಾರಕವಾಗಿದ್ದ
ನೀನೊಂದು ತಪ್ಪಾಗಿ
ಬೇಡನ ಬಾಯಲ್ಲಿ ರಾಮನಾಗಿ
ಸೃಷ್ಟಿಯಾಗಿಬಿಟ್ಟೆ
ಬೇಡದ ಎಷ್ಟೊಂದು ತಪ್ಪುಗಳ ಸೃಷ್ಠಿಸಿಬಿಟ್ಟೆ.
ಹೀಗೆಂದು ಹೇಳುತ್ತಲೇ,
ರಾಮ ರಾಮ
ನಿನ್ನ ಪೂರ್ವಜನ್ಮಕ್ಕೆ ನೀನು
ಮರಳಿ ಬಿಡು
ಮಡದಿ ಮಕ್ಕಳ ಕೂಡ
ವನವಾಸದಲ್ಲೊಂದು ಮರವಾಗಿ ಉಳಿದುಬಿಡು.
(ರಾಮ ರಾಮ ನೀನೊಂದು ಮರವಾಗು)
ದೇವರು ಮನುಷ್ಯರಾದ ರಾತ್ರಿ
ಈ ಜಗತ್ತು ಹೊಸ ಹಗಲನ್ನು ಹಡೆಯುತ್ತದೆ
ಕಾಲಿಗೆ ಎದೆಯೊಳಗಿನ ಕೋವಿಗಳು
ಆತ್ಮಹತ್ಯೆಗೈದುಕೊಂಡ ಸಂಜೆ
ಕಮಂಡಲ ಗೂಡೊಳಗೆ ಕ್ರೌಂಚ ಮಿಥುನ
ಪ್ರೇಮ ಕಾವ್ಯಕ್ಕೆ ಭಾಷ್ಯ ಬರೆಯುತ್ತದೆ
ದೇವರು ಮನುಷ್ಯರಾದ ದಿನವೇ
ಈ ಜಗತ್ತು ಹೊಸ ಬದುಕನ್ನು ಬದುಕುತ್ತದೆ.
(ದೇವರು ಮನುಷ್ಯರಾದ ದಿನ)
ಬರೀತಾ ಬರೀತಾ ಅನುಭಾವದ ಭಾಷೆ ಬಯಸುವ ಇಂಥ ಕಾವ್ಯದ ದೇವರು ಇಲ್ಲಿ ಕವಿಯ ಸೈಕಲ್ಲಿನ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುವವನ ಹಾಗೆ ಕಾಣಿಸುತ್ತಾನೆ.
ದೇವರ ಜೊತೆಗೆ ಕವಿಗೆ ಎಷ್ಟು ಸಲಿಗೆಯೆಂದರೆ,
ದೇವರೇ,
ಈ ಲೋಕದ ಎಲ್ಲ ಹಸಿದವರಿಗೆ
ನೀನೊಂದು ಕಾಳಿನ ತೆನೆಯಾಗುವುದಾದರೆ
ನನ್ನ ಪಾಲಿನ ರೊಟ್ಟಿ ಮಾಡಿಕೊಂಡು ತಿಂದು
ನಿನ್ನ ಜನ್ಮ ಸಾರ್ಥಕವಾಗಿಸುತ್ತೇನೆ.
ದೇವರೇ
ಈ ಲೋಕದ ಚೆಲುವಿಗೆ ಬಿದ್ದ
ಧೂಳು ಜಾಡಿಸಲು
ನೀನೊಂದು ಕಸಬರಿಗೆ ಯಾಗುವುದಾದರೆ
ಜಾಡಿಸಿ….ಆ ಆನಂದದಲ್ಲಿ
ನನ್ನಾತ್ಮದ ಜಾಗದಲ್ಲಿ
ನೀನೆಂಬ ಅದನ್ನು ಪ್ರತಿಷ್ಠಾಪಿಸುತ್ತೇನೆ.
(ದೇವರೇ ಬಾ ಸಾಯೋಣ)
ಹೀಗೆಂದು ಹೇಳುತ್ತಲೇ , ದೇವರೇ ನೀನೊಂದು ತೆನೆಯಾಗಿ,.ಕೋಳ ಕತ್ತರಿಸುವ ಖಡ್ಗವಾಗಿ…ಕಸಬರಿಗೆಯಾಗಿ ಅನ್ನ, ಸ್ವಾತಂತ್ರ್ಯ ..ನೀಡುವಿಯಾದರೆ ನಾವಿಬ್ಬರೂ ನಮ್ಮ ಬದುಕುಗಳನ್ನು ಪರಸ್ಪರ ಅರ್ಪಿಸಿಕೊಳ್ಳೋಣ ಎಂದು ಕವಿ ದೇವರ ಹೆಗಲ ಮೇಲೆ ಕೈ ಹಾಕಿ ಹೇಳಿದಂತಿರುವ ಸಾಲುಗಳು ದೇವರು-ಮನುಷ್ಯನೂ ಹೌದು ಎಂದು ಗುರುತಿಸುತ್ತಾನೆ.
ಹೀಗೆ ಬರೆಯುವಾಗ,ಪಕ್ಕಾ ಎಡಪಂಥೀಯ ನಾಸ್ತಿಕರ ಹಾಗೆ ದೇವರನ್ನು ಅಲ್ಲಗಳೆಯದೆ,ಆತನೊಂದಿಗೆ ಸಂಭಾಷಿಸುತ್ತಲೆ, ಭಾರತೀಯ ಸಮಾಜದ ಬಹುಸಂಖ್ಯಾತರು ನಂಬಿರುವ ನಂಬಿಕೆಗಳ ಜೊತೆಗೇ ಸಾಗಿ ಚಿಂತನೆಗೆ ಹಚ್ಚುವ ಕ್ರಮ ಮೆಚ್ಚುವಂತದ್ದು.
ರೊಟ್ಟಿಯೇ ಪರಮದೈವ
ಹೊಟ್ಟೆಯೇ ಪ್ರೇಮ ಭಕ್ತ
ರೊಟ್ಟಿ,ಹೊಟ್ಟೆಗಳ
ಪ್ರೇಮ ಪ್ರೇಮದ ಸೃಷ್ಟಿ
ಅಸ್ತಿತ್ವ……
ಅನಂತ
ರಾಮ,ಅಲ್ಲ
ಎಲ್ಲ ದೇವರೂ
ಇವರ ಸಂಗದ
ಶಿಶುಗಳು
(ರೊಟ್ಟಿ ತುಂಡುಗಳು)
ರಂಜಾನ್ ದರ್ಗಾ ,ಕವಿಯ ಕುರಿತು “ಸಮಾನತೆಯಲ್ಲಿ ನಂಬಿಕೆಯಿಟ್ಟವರ ಕವನಗಳು ತಣ್ಣಗೆ ಪೆಟ್ರೋಲಿನ ಹಾಗೆ ಇರಬೇಕು.ತುಳಿತಕ್ಕೊಳಗಾದವರು ಒಂದಾದಾಗ ತಾಪದ ಕಿಡಿಗಳು ಏಳಲಾರಂಭಿಸುತ್ತವೆ.ಆಗ ಈ ಪೆಟ್ರೋಲಿಗೆ ಬೆಂಕಿ ಹತ್ತುತ್ತದೆ.ಸುಲಿಗೆಯನ್ನು ಸಮರ್ಥಿಸುವ ದೇವರುಗಳು ಮತ್ತು ಸುಲಿಗೆ ಕೋರಲು ಈ ಬೆಂಕಿಯಲ್ಲಿ ಸುಟ್ಟು ಹೋಗಬೇಕು.ಸಕಲ ಜೀವರಾಶಿಯ ಜೊತೆ ಕೇವಲ ಮನುಷ್ಯರು ಉಳಿಯಬೇಕು….ಆಗ ದೇವರು ಸಮಾನತೆಯಲ್ಲಿ ನಂಬಿಕೆ ಇಟ್ಟವರ ದೋಸ್ತ್ ಆಗುತ್ತಾನೆ”. ಎಂದ ಮಾತುಗಳು ಇವರ ಕಾವ್ಯಕ್ಕೆ ಅನ್ವಯಿಕದಂತಿವೆ.
ಮಣ್ಣು,ಕಣ್ಣೀರು ಮತ್ತು ಕವಿ- ಕಾವ್ಯ
ನಾನು ಮಣ್ಣಿಗಂಟಿಕೊಂಡಿದ್ದೇನೆ
ಅಳಬೇಕೆನಿಸಿದಾಗ
ಕಾವ್ಯ ಬರೆಯುತ್ತೇನೆ
(ಜೀವ ಬಂತು ಹಾದಿಗೆ ಪು:25)
ನನ್ನ ಕಣ್ಣೀರು
ಅಕ್ಷರವಾದಾಗಲೇ
ಹೇಳಿದೆ
ನನ್ನ ಕಾವ್ಯ
ಸಾಯುವುದಿಲ್ಲ
(ಜಾಲಿ ಹೂಗಳ ನಡುವೆ ಪು:5)
ತನ್ನ ಐವರು ಮಕ್ಕಳನ್ನು ಉಡಿಯಲ್ಲಿ ಕಟ್ಟಿಕೊಂಡು ವಿಧವೆಯಾದ ತಂಗಿಯ ದುಃಖ ವು, ಆಕೆಯ ಕಣ್ಣೀರಿನಿಂದಲೇ ಲೋಕದ ಕಡಲುಗಳು ಉಕ್ಕುತ್ತಿವೆ ಎಂದೆನಿಸುತ್ತದೆ.
ಕವಿಯ ನೈಜ ಕೆಲಸ ಸಮಸ್ಯೆಗಳನ್ನು ಪರಿಹರಿಸುವುದಲ್ಲ,ಅವುಗಳನ್ನು ಕುರಿತು ಚಿಂತಿಸುವುದು.ಕಾವ್ಯ ಒಳಗುದಿಯನ್ನು,ತಳಮಳವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿರಬೇಕು.ಅಂತಹದ್ದೇ ಲೋಕದ ಅನುಭವಗಳ ಗುಚ್ಛದಂತಿರುವ ಸಾಹಿತ್ಯ ರಚಿಸಿರುವ ಕವಿ ಪೀರ್ ಬರೆಹದ ಸಾಲುಗಳು ಉಂಟುಮಾಡುವ ಅನುಭವ ಓದುಗನನ್ನು ಗಾಢವಾಗಿ ಪ್ರಭಾವಿಸಬಲ್ಲವು.
ಜಾಲಿ ಹೂ ,ಬೀದಿ, ಮಣ್ಣು,ಕಣ್ಣೀರು…ಮುಂತಾದ ಪದಗಳು ಇಲ್ಲಿ ರೂಪಕಗಳಾಗಿದ್ದರೂ ಅವುಗಳ ಸ್ಫುರಿಸುವ ಧ್ವನಿ ಪೂರ್ಣತೆಯಿಂದಾಗಿ ಜೀವಂತ ಕನ್ನಡವನ್ನು ಸೃಷ್ಟಿಸುತ್ತವೆ.
ಚಳುವಳಿಗಳೊಂದಿಗೆ ಬೆಳೆಸಿಕೊಂಡು ಬಂದ ಚಲನಶೀಲ ಸಂಬಂಧದ ಪರಂಪರೆ ಕವಿಯ ಬೆನ್ನಿಗಿದೆ.
ಆದ್ದರಿಂದಲೇ
ತೊದಲುತ್ತ ಕಲಿತ ಕ್ರಾಂತಿಘೋಷ
ಬಲಿತಂತೆಲ್ಲ ಬರಿ ಬಾಯಿಪಾಠವಾಯ್ತು
ಎಂದು ಸಾಮಾಜಿಕ ಕಳಕಳಿಯ ಬದ್ಧತೆ ಸವಕಳಿಯಾಗುವುದನ್ನು ವಿಷಾದದಿಂದ ಬರೆಯುತ್ತಾರೆ.ಈ ಹೊತ್ತು ಮೇಲಿನ ಸಾಲುಗಳ ಅಕ್ಷರಗಳು ಹೋರಾಟ,ಚಳುವಳಿಗಳ ಸೋಲಿಗೆ ಆತ್ಮವಿಮರ್ಶೆಯ ಮಾತುಗಳಂತಿವೆ.
ಹೂವಿನ ಹಡಗಲಿ ಸುತ್ತಮುತ್ತಲಿನ ಪರಿಸರದ ಇದೇ ತಲೆಮಾರಿನ ಬಹುತೇಕ ಕವಿಗಳು -ಬದುಕನ್ನು ಕೇಂದ್ರವಾಗಿಟ್ಟುಕೊಂಡು ಬರೆದರು.ಹೀಗೆ ಬರೆಹಗಾರನ ಬದುಕಿನ ಪ್ರಜ್ಞೆಯು ಸಾಮಾಜಿಕವೂ ಆಗುವ ಅಭಿವ್ಯಕ್ತಿ ಚಿತ್ರಗಳನ್ನು ಸೃಷ್ಟಿಸುತ್ತಾರೆ.
ಭಾರತದ ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ತತ್ವ (political creed)ಗಳನ್ನು ದೇಶಕ್ಕಿಂತ ಮೇಲೆ ಎಂದು ಭಾವಿಸಬಾರದು.ಇಲ್ಲದೇ ಹೋದಲ್ಲಿ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಧಕ್ಕೆಯುಂಟಾಗುತ್ತದೆ.ನಮ್ಮ ರಕ್ತದ ಕೊನೆಯ ಹನಿ ಇರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಬೇಕು. ಎಂದ ಅಂಬೇಡ್ಕರ್ ಮಾತುಗಳನ್ನು ಉಳಿಸಿಕೊಳ್ಳುವಂತೆ ಸಾಹಿತ್ಯ ಪೀರ್ ರ ಸಾಹಿತ್ಯ ಸೃಷ್ಟಿಯಾಗುತ್ತದೆ.
ಅಖಂಡ ನೆಲವೇ ನನ್ನ ಮಾತೃಭೂಮಿ
ಸೀತಾ ನನ್ನ ಅಕ್ಕ,ಬಸವ ನನ್ನಣ್ಣ
ಶಂಭೂಕನ ನನ್ನ ಬಂಧು
ಬುದ್ಧ ಮಾರ್ಗದರ್ಶಕ,ದತ್ತ ನನ್ನ ಮಿತ್ರ
ತುತ್ತಿನ ತತ್ವಶಾಸ್ತ್ರ ನನ್ನ ಸಿದ್ಧಾಂತ
ನೈಲ್,ಆಫ್ರಿಕಾ,ದ್ರಾವಿಡಗಳಲ್ಲಿ ನನ್ನ ಕುಲಮೂಲ
ಪ್ಯಾಲೆಸ್ತೇನಿನ ವಿಧವೆ,ರುಮೇನಿಯಾದ ಚೆಲುವೆ
ಗ್ರೀಕಿನ ಕೂಲಿ,ಫ್ರಾನ್ಸಿನ ಜಾಡಮಾಲಿ
ಚೀನಾದ ರೈತ,ಕ್ಯೂಬಾದ ಯೋಧ,ಅಫ್ಘಾನ್ ಅನಾಥ
ಎಲ್ಲ ನನ್ನ ಸಂಬಂಧಿಗಳು
.
ತುಳಿವ ಕಾಲುಗಳೆಲ್ಲ ನನ್ನ ಕೊರಳ ಮೇಲೇ ಇವೆ.
ಇಲ್ಲ…ನನಗೆ ನಿಷ್ಟೆಯಿಲ್ಲ ಈ ಗಡಿಗಳ ಮೇಲೆ
ಖಂಡಿತ ನಾನು ಬದ್ಧನಲ್ಲ ಹುಸಿ ರಾಷ್ಟ್ರೀಯತೆಗೆ
ಪ್ರಜೆಗಳನ್ನು ಪತ್ರೋಳಿಗಳನ್ನಾಗಿಸಿದ ಪ್ರಭುತ್ವಕ್ಕೆ
ಎಂಬಂತಹ ನಿಷ್ಟುರವಾದಿತನವನ್ನು ಕವಿ ತೋರುತ್ತಾನೆ.
(ಅಖಂಡ ನೆಲವೇ ನನ್ನ ಮಾತೃಭೂಮಿ)
ಒಟ್ಟಾರೆ , ಪೀರ್ ಬಾಷಾರ ಕಾವ್ಯ ಈ ಹೊತ್ತಿನ ಕಾಲ ಸಂದರ್ಭದಲ್ಲಿ ಬಹುಬೇಗನೆ ಅರ್ಥವಾಗುವುದರೊಂದಿಗೆ ಮನಸ್ಸಿಗೂ ಇಳಿಯುತ್ತವೆ. ಸೃಜನಶೀಲತೆಯೆನ್ನುವುದೇ ಶ್ರೇಷ್ಠವಾದುದು. ಇಂಥ ಶ್ರೇಷ್ಠವಾದುದು ಯಾವ ಕಾಲದಲ್ಲಿಯೇ ಆಗಲಿ,ಯಾವ ಕ್ಷೇತ್ರದಲ್ಲಿಯೇ ಆಗಲಿ, ಬಹು ಅಪರೂಪದ್ದು. ಇಂತಹ ಅಪರೂಪಗಳಿಂದಲೇ ಮನುಷ್ಯ ಮತ್ತಷ್ಟು ಮಾನವೀಯವಾಗಿ ಬದುಕಲು ಸಾಧ್ಯವಾಗಿರೋದು.
ಬಿ.ಶ್ರೀನಿವಾಸ