ದಾವಣಗೆರೆ: ಹುಬ್ಬಳ್ಳಿಯ ರೈಲ್ವೆಸೌಧದಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ದಾವಣಗೆರೆ ರೈಲ್ವೆ ನಿಲ್ದಾಣದ ಆರ್‌ಪಿಎಫ್ ಮುಖ್ಯ ಪೇದೆ ಸತೀಶ್ ಬೆಂಕಿಕೆರೆ ಅವರಿಗೆ ‘ವಿಶಿಷ್ಟ ರೈಲು ಸೇವಾ ಪುರಸ್ಕಾರ-2025 ನೀಡಿ ಗೌರವಿಸಲಾಗಿದೆ.
ಹುಬ್ಬಳ್ಳಿಯ ರೈಲ್ವೆಸೌಧದಲ್ಲಿ ನೈರುತ್ಯ ರೈಲ್ವೆ ವಲಯದ ವತಿಯಿಂದ ಆಯೋಜಿಸಿದ್ದ ‘ವಿಶಿಷ್ಟ ರೈಲ್ವೆ ಸೇವಾ ಪುರಸ್ಕಾರ’ ಪ್ರದಾನ ಕಾರ್ಯಕ್ರಮದಲ್ಲಿ ಸತೀಶ್ ಬೆಂಕಿಕೆರೆ ಅವರಿಗೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥೂರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಯುವಕನೊಬ್ಬ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಂದರ್ಭದಲ್ಲಿ ಪ್ರಯಾಣಿಕನ ಜೀವ ರಕ್ಷಣೆ ಮಾಡಿದ ಮತ್ತು ನೈರುತ್ಯ ರೈಲ್ವೆ ವಲಯದಲ್ಲಿ ಉತ್ತಮ ಸೇವೆ ಮಾಡಿರುವುದನ್ನು ಗುರುತಿಸಿ ಸತೀಶ್ ಬೆಂಕಿಕೆರೆ ಅವರಿಗೆ ೨೦೨೫ರ ‘ವಿಶಿಷ್ಟ ರೈಲು ಸೇವಾ ಪುರಸ್ಕಾರ’ ನೀಡಿ ಗೌರವಿಸಲಾಗಿದೆ.
ಕಾರ್ಯಕ್ರಮದಲ್ಲಿ ನೈರುತ್ಯ ರೈಲ್ವೆ ವಲಯದ ಆರ್‌ಪಿಎಫ್‌ನ ಐಜಿ ಆರ್‌ಎಸ್‌ಪಿ ಸಿಂಗ್, ಮೈಸೂರು ಡಿಆರ್‌ಎಂ ಮೋಧಿತ್ ಮಿತ್ತಲ್ ಉಪಸ್ಥಿತರಿದ್ದರು.
ಪುರಸ್ಕಾರಕ್ಕೆ ಭಾಜನರಾಗಿರುವ ಸತೀಶ್ ಬೆಂಕಿಕೆರೆ ಅವರಿಗೆ ಹಿರಿಯ ಮಂಡಲ ಸುರಕ್ಷಾ ಆಯುಕ್ತರಾದ ಶ್ಯಾಮ್ ಪ್ರಶಾಂತ್, ದಾವಣಗೆರೆ ರೈಲ್ವೆ ಆರ್‌ಪಿಎಫ್‌ನ ನಿರೀಕ್ಷಕರಾದ ಆರ್.ಕೆ.ಭಾರದ್ವಾಜ್ ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.
