ದಾವಣಗೆರೆ (Davanagere) : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅ. 3 ರಂದು ಪಿಎಸ್‍ಐ ಪರೀಕ್ಷೆ ನಡೆಯಲಿದ್ದು ದಾವಣಗೆರೆ ನಗರದ 11 ಕೇಂದ್ರಗಳಲ್ಲಿ 6512 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು ಪರೀಕ್ಷೆಯಲ್ಲಿ ಕಟ್ಟೆಚ್ಚರವಹಿಸಿ ಯಾವುದೇ ದೂರು, ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅ. 3 ರಂದು ಪಿಎಸ್‍ಐ ಹುದ್ದೆಗಳ ಆಯ್ಕೆಗೆ 2 ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಪತ್ರಿಕೆ-1ರ ಪರೀಕ್ಷೆ ನಡೆಯಲಿದೆ. ನಂತರ ಮಧ್ಯಾಹ್ನ 12-30 ರಿಂದ 2ಗಂಟೆವರೆಗೆ 2 ನೇ ಅವಧಿಯ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕನಿಷ್ಠ ಎರಡು ಗಂಟೆಗೂ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಅಲ್ಲದೇ ಬೆಳಿಗ್ಗೆ 9-45ರ ನಂತರ ಯಾವುದೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಆವರಣವನ್ನು ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ತಿಳಿಸಿದರು.
ಮೊದಲನೆ ಪತ್ರಿಕೆಯ ನಂತರ ಎರಡನೇ ಪತ್ರಿಕೆ ಪ್ರಾರಂಭ ಅಗುವ ಮೊದಲು ಇರುವ ಮೂವತ್ತು ನಿಮಿಷಗಳ ಕಾಲಾವಧಿಯಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರ ಹೋಗಲು ಅನುಮತಿಸುವುದಿಲ್ಲ. ಅಭ್ಯರ್ಥಿಗಳು ತಮ್ಮೊಡನೆ ವೈದ್ಯಕೀಯ ಔಷಧಿ, ಮಾತ್ರೆಗಳನ್ನು ಮಾತ್ರ ತೆಗೆದುಕೊಂಡು ಹೋಗಬೇಕೆಂದು ಮಾಹಿತಿ ನೀಡಿದರು.
ಅಭ್ಯರ್ಥಿಯು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಮೊದಲ ತಪಾಸಣೆಗೆ ಒಳಗಾಗಬೇಕು, ಅಭ್ಯರ್ಥಿಯು ಕೇಂದ್ರದ ಆವರಣವನ್ನು ಪ್ರವೇಶಿಸಿದ ತಕ್ಷಣ, ಪೆಂಡಾಲಿನಲ್ಲಿ ಅವರು ತರುವ ವಸ್ತುಗಳನ್ನು ಇರಿಸಿಕೊಳ್ಳಲು ಮತ್ತು ತಪಾಸಣೆಗೆ ಒಳಗಾಗಲು ವ್ಯವಸ್ಥೆ ಮಾಡಬೇಕು, ಯಾವುದೇ ಕಾರಣಕ್ಕೆ ಪರೀಕ್ಷಾರ್ಥಿಗಳು ಒಮ್ಮೆ ಪೆಂಡಾಲ್‍ನೊಳಗೆ ತಮ್ಮ ವಸ್ತುಗಳನ್ನು ನೀಡಿದ ನಂತರ ಮತ್ತೆ ಮರಳಿ ಪಡೆಯಲು ಅನುಮತಿಸಬಾರದು. ಅಲ್ಲದೇ ಪರೀಕ್ಷೆ ಮುಗಿದ ನಂತರವೇ ಅವರ ವಸ್ತುಗಳನ್ನು ಮರಳಿ ಪಡೆಯಬೇಕು ಎಂದು ಹೇಳಿದರು.
ಅದರಲ್ಲೂ ಮುಖ್ಯವಾಗಿ ವಿರಾಮದ ಸಮಯದಲ್ಲಿ ಅವರಿಗೆ ಪ್ರತಿ ಅಭ್ಯರ್ಥಿಗಳಿಗೆ ಬಾಳೆಹಣ್ಣು ಮತ್ತು ಬಿಸ್ಕತ್ತು ಪ್ಯಾಕನ್ನು ಸರಬರಾಜು ಮಾಡಬೇಕು. ಪರೀಕ್ಷೆಯ ಕರ್ತವ್ಯಕ್ಕಾಗಿ ಒಬ್ಬ ಸ್ಕ್ವಾಡ್, ಒಬ್ಬ ವೀಕ್ಷಕ ಮತ್ತು ಒಬ್ಬ ಕಸ್ಟೋಡಿಯನ್‍ರನ್ನು ಗೊತ್ತುಪಡಿಸಲಾಗಿದೆ. ವಿರಾಮದ ವೇಳೆಯಲ್ಲಿಯೂ ಕೊಠಡಿ ಮೇಲ್ವಿಚಾರಕರು ಕೊಠಡಿಯಲ್ಲಿರಬೇಕು, ಯಾವುದೇ ಕಾರಣಕ್ಕೂ ರಿಲೀವರ್ ಇಲ್ಲದೇ ಕೊಠಡಿ ಬಿಡುವಂತಿಲ್ಲ ಎಂದು ತಿಳಿಸಿದರು.
Read also : Harihara | ಶಾಸಕರಿಂದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ, ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬ ಪರೀಕ್ಷಾರ್ಥಿಯ ಕಿವಿಗಳನ್ನು ತಪಾಸಣೆ ಮಾಡುವ ಹಿನ್ನೆಲೆಯಲ್ಲಿ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಇ.ಎನ್.ಟಿ.ತಜ್ಞರನ್ನು ನೇಮಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅಲ್ಲದೇ ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಎಂದರು.
ಯಾವುದೇ ಅಭ್ಯರ್ಥಿ ಒಮ್ಮೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪಡೆದ ನಂತರ ಮತ್ತೆ ಹೊರಗೆ ಹೋಗುವಂತಿಲ್ಲ. ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಇರುವ ಬಗ್ಗೆ ಅಭ್ಯರ್ಥಿಯ ಮೇಲೆ ಅನುಮಾನ ಕಂಡು ಬಂದರೆ ಪೊಲೀಸ್ ಅಧಿಕಾರಿಗಳ ಸಹಾಯದೊಂದಿಗೆ ಚೆಕ್ ಮಾಡಬೇಕು. ಅಲ್ಲದೇ ಪರೀಕ್ಷಾ ಕೇಂದ್ರದ ಒಳಗೆ ನಕಲು ಮಾಡುತ್ತಿರುವ ಬಗ್ಗೆ ಅನುಮಾನ ಬಂದರೆ ತಕ್ಷಣವೇ ಅವರನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಕರೆ ತಂದು ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ತಪಾಸಣೆ ಮಾಡಬೇಕು ಎಂದು ಹೇಳಿದರು.
ಪುರುಷ ಅಭ್ಯರ್ಥಿಗಳ ವಸ್ತ್ರ ಸಂಹಿತೆ: ಪರೀಕ್ಷೆಯ ದಿನದಂದು ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‍ಗಳನ್ನು ಧರಿಸುವುದನ್ನು ಖಚಿತ ಪಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಕಾಲರ್‍ರಹಿತ ಶರ್ಟ್ ಧರಿಸಲು ಆದ್ಯತೆ ನೀಡುವುದು. ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ/ಕಡಿಮೆ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ. ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ. ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು ಅಂದರೆ ಜಿಪ್ ಪಾಕೆಟ್‍ಗಳು, ಪಾಕೆಟ್‍ಗಳು, ದೊಡ್ಡ ಬಟನ್‍ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟಗಳು ಇರಬಾರದು. ಪರೀಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ. ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳ ವಸ್ತ್ರ ಸಂಹಿತೆ : ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‍ಗಳು ಅಥವಾ ಬಟನ್‍ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು, ಜೀನ್ಸ್ ಪ್ಯಾಂಟ್ ಧರಿಸಬಾರದು, ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಮತ್ತು ನಾವು ಉಲ್ಲೇಖಿಸಿರುವ ನಿಯಮದಂತೆ ಧರಿಸುವಂತೆ ನಿರ್ದೇಶಿಸಲಾಗಿದೆ.
ಎತ್ತರವಾದ ಹಿಮ್ಮಡಿಯ ಶೂಗಳನ್ನು, ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ, ಚಪ್ಪಲಿಗಳನ್ನಾಗಲಿ ಧರಿಸಬಾರದು, ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ.
ನಿಷೇಧಿತ ವಸ್ತುಗಳ ಪಟ್ಟಿ: ಡ್ರೆಸ್‍ಕೋಡನ್ನು ಅನುಸರಿಸುವುದರ ಜೊತೆಗೆ, ಪರೀಕ್ಷಾ ಕೇಂದ್ರಕ್ಕೆ ಇಲ್ಲಿ ಪಟ್ಟಿ ಮಾಡಲಾದ ಯಾವುದೇ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ, ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬೇಕು.
ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಪೋನ್‍ಗಳು, ಪೆನ್‍ಡ್ರೈವ್‍ಗಳು, ಇಯರ್ ಪೋನ್‌ಗಳು, ಮೈಕ್ರೋ ಪೋನ್‌ಗಳು, ಬ್ಲೂಟೂಥ್ ಸಾಧನಗಳು, ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ. ತಿನ್ನಬಹುದಾದ ಪದಾರ್ಥಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಹಾಗು ತಿನ್ನುವುದನ್ನು ನಿಷೇಧಿಸಲಾಗಿದೆ, ಕುಡಿಯುವ ನೀರಿನ ಬಾಟಲಿಗೂ ಸಹ ಅನುಮತಿ ಇರುವುದಿಲ್ಲ. ಪರೀಕ್ಷಾ ಕೇಂದ್ರದಲ್ಲಿಯೇ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಪೆನ್ಸಿಲ್, ಪೇಪರ್, ಎರೇಸರ್, ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ. ತಲೆಯ ಮೇಲೆ ಟೋಪಿ ಧರಿಸಿಬಾರದು. ಯಾವುದೇ ರೀತಿಯ ಮಾಸ್ಕ್ ಅನ್ನು ಧರಿಸುವಂತಿಲ್ಲ.
ಅನುಮತಿಸಲಾದ ಕೆಲ ವಸ್ತುಗಳ ವಿವರ ;
ಪ್ರವೇಶ ಪತ್ರ ಕಡ್ಡಾಯ. ಸರ್ಕಾರದಿಂದ ಮಾನ್ಯವಾದ ಪೋಟೋ ಗುರುತಿನ ಚೀಟಿ. ಅವುಗಳಲ್ಲಿ ಪಾಸ್‍ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸಾರ್ವಜನಿಕ ಸ್ವಾಮ್ಯದ ಅಥವಾ ಸರ್ಕಾರದ ಅಧೀನಕ್ಕೊಳಪಟ್ಟ ಖಾಸಗಿ ಕಂಪನಿಗಳು ವಿತರಿಸಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಾರ್ವಜನಿಕ ಬ್ಯಾಂಕುಗಳು, ಅಂಚೆ ಕಚೇರಿಗಳು ವಿತರಿಸಿರುವ ಭಾವಚಿತ್ರವಿರುವ ಪಾಸ್ ಪುಸ್ತಕ.ಭಾವಚಿತ್ರ ಸಮೇತ ನೋಂದಣಿಯಾಗಿರುವ ಸ್ವತ್ತಿನ ದಾಖಲೆ ಪತ್ರ ಅಥವಾ ಪಟ್ಟಾ ಪುಸ್ತಕ, ಭಾವಚಿತ್ರ ಸಮೇತ ಸಂಬಂಧಪಟ್ಟ ಪ್ರಾಧಿಕಾರಿಯವರು ವಿತರಿಸಿರುವ ಜಾತಿ ಪ್ರಮಾಣ ಪತ್ರ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಿತರಿಸಿರುವ ಪಿಂಚಣಿ ಪುಸ್ತಕ, ಪಿಂಚಣಿ ಮಂಜೂರಾತಿ ಆಗಿರುವ ಆದೇಶ, ಎನ್‍ಆರ್‍ಇಜಿಎಸ್‍ಯಿಂದ ನೀಡಿದ ಭಾವಚಿತ್ರವಿರುವ ಉದ್ಯೋಗ ಚೀಟಿ, ಎಲೆಕ್ಟೋರಲ್ ಪೋಟೋ ಗುರುತಿನ ಚೀಟಿ, ಭಾರತೀಯ ಗುರುತು ಪ್ರಾಧಿಕಾರದಿಂದ ನೀಡಲಾಗಿರುವ ಆಧಾರ್ ಕಾರ್ಡ್ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರತಕ್ಕದ್ದು.
ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
English Summary : From the Karnataka Examination Authority. The PSI exam will be held on 3rd and 6512 candidates will write the exam in 11 centers of Davangere city.