ದಾವಣಗೆರೆ (DAVANAGERE): ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ಪಕ್ಷದ ವಿರುದ್ದ ನಗರದ ಡಾ|| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಹೋರಾಟ ನಡೆಸಿ ಘೋಷಣೆಗಳನ್ನು ಕೂಗಲಾಯಿತು.
ಈ ವೇಳೆ ಮಾತನಾಡಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಸಂವಿಧಾನದ ಮೂಲಕ ಶೋಷಿತರ, ಮಹಿಳೆಯರ ಹಾಗೂ ಸರ್ವರಿಗೂ ಹಕ್ಕುಗಳ ಮೂಲಕ ಧ್ವನಿಯಾಗಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ದೆಹಲಿಯ ಸದನದಲ್ಲಿ ಕೇಂದ್ರದ ಗೃಹ ಮಂತ್ರಿಗಳು ಅಪಮಾನ ಮಾಡಿದ್ದಾರೆ.
ಅಂಬೇಡ್ಕರ್ ಬದಲು ದೇವರನ್ನು ಜಪಿಸಿದರೆ ಒಳಿತಾಗುತ್ತಿತ್ತು ಎಂದು ಹೇಳುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇವರಂತೆ ಪೂಜಿಸುವ ಹೃದಯಗಳಿಗೆ ನೋವುಂಟು ಮಾಡಿದ್ದಾರೆ. ಸದನದಲ್ಲಿ ನಮ್ಮ ನಿಲುವುಗಳಿಗೆ, ನಮ್ಮ ಬೇಡಿಕೆಗಳಿಗೆ ಆಸ್ಪದ ನೀಡದವರು ಕೇವಲ ಅಂಬಾನಿ, ಆದಾನಿ ಅವರ ಅಭಿವೃದ್ಧಿಗೆ ನಿಂತಿದ್ದಾರೆ. ಇದನ್ನು ವಿರೋಧಿಸಿದವರ ಪ್ರಶ್ನೆಗಳನ್ನು ಕೇಳುವ ಸೌಜನ್ಯತೆಯು ಇರದವರು ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿದ್ದು ಅಂಬೇಡ್ಕರ್ ಅವರಿಗೆ ಮಾಡಿದ ಮಾಹಾ ದ್ರೋಹವಾಗಿದೆ ಎಂದರು.
ಇದನ್ನು ಪ್ರಶ್ನಿಸುವ ಹಾಗೂ ಚಿಂತಿಸುವುದರ ಮೂಲಕ ಜನತೆಯು ಹೋರಾಟ ಮಾಡಬೇಕಾಗಿದೆ. ಪ್ರತಿಭಟನೆಯ ಮೂಲಕ ಕೇಂದ್ರದ ಗೃಹ ಮಂತ್ರಿಗಳ ರಾಜೀನಾಮೆಗೆ ಒತ್ತಡ ಹಾಕಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಿತ್ತೊಗೆದ್ದಿದ್ದೇವೆ. ಕೇಂದ್ರದಲ್ಲಿಯು ಬಿಜೆಪಿ ಪಕ್ಷದ ಅಧಿಕಾರದ ಬದಲಾವಣೆ ಶೀಘ್ರದಲ್ಲೇ ಮಾಡುತ್ತೇವೆ. 100 ದಿನ ಅಧಿಕಾರ ಕೊಡಿ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವರು ಮೂರನೇ ಭಾರಿ ಅಧಿಕಾರಕ್ಕೆ ಬಂದರೂ ಸಹ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬಿಜೆಪಿಯಿಂದ ದ್ವೇಷದ ರಾಜಕೀಯ ನಡೆಯುತ್ತಿದೆ. ಬಿಜೆಪಿಯವರು ಸಂವಿಧಾನದ ವಿಷಯಕ್ಕೆ ಬಂದರೇ ತೀರ್ವ ಹೋರಾಟ ನಡೆಸಲಾಗುತ್ತದೆ ಎಂದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನಿತಾಬಾಯಿ ಮಾಲತೇಶ್, ಬ್ಲಾಕ್ ಕಾಂಗ್ರೆಸ್ ಕೆ.ಜಿ.ಶಿವಕುಮಾರ್, ಜಿ.ಸಿ.ನಿಂಗಪ್ಪ,ಕೆಪಿಸಿಸಿ ಸದಸ್ಯರು, ಕಾಂಗ್ರೆಸ್ ಪಕ್ಷದ ಎಲ್ಲಾ ಜನಪ್ರತಿನಿಧಿಗಳು, ಸರ್ಕಾರದಿಂದ ನೇಮಕಗೊಂಡಿರುವ ನಾಮನಿರ್ದೇಶನ ಸದಸ್ಯರುಗಳು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪ. ಜಾತಿ ಮತ್ತು ಪ.ಪಂಗಡ, ಹಿಂದುಳಿದ, ಅಲ್ಪಸಂಖ್ಯಾತರ, ಅಂಗವಿಕಲರ, ಕಿಸಾನ್ ಕಾಂಗ್ರೆಸ್, ಕಾರ್ಮಿಕರ, ವೈದ್ಯರ, ವಕೀಲರ ವಿಭಾಗಗಳು, ಎನ್.ಎಸ್.ಯು.ಐ., ಯುವ ಘಟಕ, ಮಹಿಳಾ ಘಟಕ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇತರರು ಇದ್ದರು.
Read also : ಜನವರಿ 4, 5 ರಂದು ಯುವಜನೋತ್ಸವ, ಸಚಿವರಿಂದ ಲೋಗೋ ಬಿಡುಗಡೆ