ದಾವಣಗೆರೆ, ಆ.19 (District Court Davanagere) : ಇಂದಿನ ದಿನಗಳಲ್ಲಿ ಮಧ್ಯಸ್ಥಿಕೆದಾರರ ಭಾಗವಹಿಸಿಕೆ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದು ಅತ್ಯುತ್ತಮ ಕಾರ್ಯವಾಗಿದೆ ಎಂದು ಪ್ರಧಾನ ಜಿಲ್ಲಾ, ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗ್ಡೆ ಹೇಳಿದರು.
ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ಬೆಂಗಳೂರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಾವಣಗೆರೆ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್(District Panchayat Davanagere) ಸಭಾಂಗಣದಲ್ಲಿ ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗದ ವಕೀಲ ಸಂಧಾನಕಾರರಿಗೆ ಏರ್ಪಡಿಸಿದ್ದ ಎರಡು ದಿನಗಳ ಪುನರ್-ಮನನ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಮಧ್ಯಸ್ಥಿಕದಾರರು ನ್ಯಾಯ ಕೋರಿ ಬಂದ ಪಕ್ಷಕಾರರಿಗೆ ಕಾನೂನು ಮಾಹಿತಿ ನೀಡುವುದುಷ್ಟೇ ಅಲ್ಲದೆ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ತಿಳಿಸಿ ಕೊಡುವುದರಿಂದ ಪಕ್ಷಕಾರರಿಗೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ನಿರ್ವಹಿಸುವ ಕಾರ್ಯಗಳ ಮೂಲಕ ಅನುಕೂಲವಾಗುತ್ತದೆ. ಮಧ್ಯಸ್ಥಿಕೆದಾರರ ಈ ರೀತಿಯ ಕಾರ್ಯಗಳು ನಿಜವಾಗಲೂ ಶ್ಲಾಘನೀಯ. ಮಧ್ಯಸ್ಥಿಕೆದಾರರಿಂದ ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
Read also : Davanagere | ಮೆಟ್ರಿಕ್ ನಂತರ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರು ಮಾತನಾಡಿ, ಇಂದಿನ ದಿನಗಳಲ್ಲಿ ಜನರಿಗೆ ಕಾನೂನು ಮಾಹಿತಿ ನೀಡುವುದು ಅತ್ಯವಶ್ಯಕವಾಗಿರುವುದರಿಂದ ವಕೀಲರು ಮತ್ತು ಸಂಧಾನಕಾರರ ಪಾತ್ರ ಬಹು ಮುಖ್ಯವಾಗಿದೆ. ಮಧ್ಯಸ್ಥಿಕೆಯು ಪ್ರಕರಣಗಳ ಶೀಘ್ರ ವಿಲೇವಾರಿಗೆ ಅನುಕೂಲಕರವಾಗಿದ್ದು ಕಡಿಮೆ ಖರ್ಚು ಮತ್ತು ಸಮಯ ಉಳಿತಾಯದ ಮಾರ್ಗವಾಗಿದೆ. ಅಲ್ಲದೆ ನ್ಯಾಯಾಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಇದು ಉತ್ತಮ ಸಾಧನವಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಎಲ್ ಎಚ್ ಮಾತನಾಡಿ, ಮಧ್ಯಸ್ಥಿಕೆಯ ಮೂಲಕ ವ್ಯಾಜ್ಯಗಳು ಬಗೆಹರಿದಲ್ಲಿ ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ತಿಳಿಸಿದರು.
ತರಬೇತಿದಾರರಾದ ಶೋಭಾ ಪಾಟೀಲ್, ಲತಾ ಪ್ರಸಾದ್, ಟಿ.ಎಂ ಅನ್ನಪೂರ್ಣ ಉಪಸ್ಥಿತರಿದ್ದರು.