ದಾವಣಗೆರೆ, ಡಿ.06 (Davanagere) : ಜ್ಞಾನವಂತರು, ಸಮಾಜ ಸುಧಾರಕರು, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರು ನಿರಂತರ ಅಧ್ಯಯನದಿಂದ ತಮ್ಮ ಜ್ಞಾನದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡರು. ತಮ್ಮ ಜ್ಞಾನ, ಶಿಕ್ಷಣ ಅಸ್ತ್ರದಿಂದ ಶೋಷಿತ, ದಮನಿತ ವರ್ಗಗಳಿಗೆ ಧ್ವನಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಶುಕ್ರವಾರ(ಡಿ.6) ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾಡಳಿತ ಕಚೇರಿಯಲ್ಲಿ ಆಯೋಜಿಸಲಾದ ಡಾ; ಬಿ.ಆರ್.ಅಂಬೇಡ್ಕರ್ ರವರ 68 ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಬಾಬಾ ಸಾಹೇಬರ ಮೂಲಮಂತ್ರಗಳಾದ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಧ್ಯೇಯ ವಾಕ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿರುವ ಶೋಷಿತರು, ತುಳಿತಕ್ಕೊಳಪಟ್ಟ ವರ್ಗಗಳಿಗೆ ನ್ಯಾಯ ಕೊಡಬೇಕಾಗಿದೆ ಎಂದರು.
ಪರಿನಿರ್ವಾಣ ಎಂಬುವುದು ಬೌದ್ದಧರ್ಮದ ಮುಖ್ಯ ತತ್ವ ಹಾಗೂ ಗುರಿಗಳಲ್ಲಿ ಒಂದಾಗಿದೆ. ಸಂಸ್ಕøತದಲ್ಲಿ ಪರಿನಿರ್ವಾಣಕ್ಕೆ ಸಾವಿನ ನಂತರ ನಿರ್ವಾಣ ಎಂದರ್ಥ ಇದು ದೇಹವು ಸತ್ತ ನಂತರ ನಿರ್ವಾಣದ ಸಾಧನೆಯನ್ನು ಸೂಚಿಸುತ್ತದೆ. ಬೌದ್ದಧರ್ಮದ ಪ್ರಕಾರ ನಮ್ಮ ಜೀವನದ ಕರ್ಮವನ್ನು ದೇಹದ ಮರಣದ ನಂತರ ಆತ್ಮದ ಮೂಲಕ ಮುಂದಿನ ಜನ್ಮಕ್ಕೆ ಸಾಗಿಸಲಾಗಿತ್ತದೆ. ಅಂಬೇಡ್ಕರರು ಅಪಾರ ಜ್ಞಾನ ಹೊಂದಿದ್ದರಿಂದಲೇ ಅವರು ಪ್ರಪಂಚ ಗುರುತಿಸುವಂತಹ ವ್ಯಕ್ತಿಯಾಗಿದ್ದರು, ಅದರಿಂದಾಗಿ ಇಡೀ ಪ್ರಪಂಚ ಅವರನ್ನು ಗೌರವಿಸುತ್ತಿದೆ. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ನಾವುಗಳು ಪ್ರತಿ ಹೆಜ್ಜೆಯಲ್ಲಿಯೂ ಪಾಲಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ವಿದ್ಯಾರ್ಥಿಭವನದ ಬಳಿಯ ಅಂಬೇಡ್ಕರ್ ವೃತ್ತದಲ್ಲಿನ ಡಾ; ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಹೆಗ್ಗೆರೆ ರಂಗಪ್ಪ ಮತ್ತು ನೀರ್ಥಡಿ ಸಂಗಡಿಗರಿಂದ ಅಂಬೇಡ್ಕರ್ ಕುರಿತು ಗಾಯನ ಪ್ರಸ್ತುತ ಪಡಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಸಿಇಓ ಸುರೇಶ್.ಬಿ.ಇಟ್ನಾಳ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ಡಿಡಿಪಿಐ ಕೊಟ್ರೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ರವಿಚಂದ್ರ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರಾದ ರವಿನಾರಾಯಣ, ನಂದಿಗಾವಿ ಶ್ರೀನಿವಾಸ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿಗಳು, ಅಂಬೇಡ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು.
Read also : ದೇಶದಲ್ಲಿ ಸಮಾನತೆ ತರುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ’