ದಾವಣಗೆರೆ (Davangere District) : ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ರಾಜಕಾರಣಿಗಳು ರೈತರ ಪರವಾಗಿ ರೈತ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಬೆಳೆಗಳನ್ನ ಬೆಳೆಯಲು ಅಗತ್ಯವಿರುವ ನೀರಾವರಿ ಒದಗಿಸುವುದು, ಬಿತ್ತನೆ ಬೀಜ, ರಸಗೊಬ್ಬರಗಳ ಪೂರೈಕೆ ಮಾಡುವ ಕುರಿತು ಹೆಚ್ಚು ಹೋರಾಟಗಳನ್ನ ಕೈಗೊಳ್ಳಬೇಕು. ರೈತಪರ ವೈಜ್ಞಾನಿಕ ಚಿಂತನೆಗಳ ಅನುಷ್ಠಾನಕ್ಕೆ ಪ್ರಯತ್ನಿಸಬೇಕು ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಆನಗೋಡು ಬಳಿ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ 32 ನೇ ರೈತ ಹುತಾತ್ಮರ ದಿನಾಚರಣೆಯ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು,ಪಡೆಯದೆ ನಾಯಕರನ್ನ ಆಯ್ಕೆ ಮಾಡಿಕೊಳ್ಳಬೇಕು. ಆಗ ಯೋಗ್ಯ ನೇತಾರ ಆಯ್ಕೆಗೆ ಪ್ರಯತ್ನಿಸಬೇಕು ಎಂದು ನೀಡಿದರು.
ಯಾರನ್ನೂ ಹೆಚ್ಚು ಹೊಗಳಬಾರದು. ಹೊಗಳಿಕೆಯಿಂದ ರಾಜಕಾರಣಿಗಳು, ಮಠಾಧೀಶರೂ ದಾರಿ ತಪ್ಪಬಹುದು. ಆದರೆ ಅವರಿಂದ ಉತ್ತಮ ಕೆಲಸ ಪಡೆದುಕೊಳ್ಳಬೇಕು. ನಾನು ಕಳೆದ ವರ್ಷ ಬಂದಾಗ ರಸ್ತೆ ಅಭಿವೃದ್ದಿ, ಸಮುದಾಯ ಭವನ, ಆಗಬೇಕು ಎಂದು ಹೇಳಿದ್ದೆವು ಇನ್ನೂ ಆಗಿಲ್ಲ. ಮುಂದಿನ ಬಾರಿ ಕಾರ್ಯಕ್ರಮಕ್ಕೆ ಬಂದಾಗ ಈ ಸ್ಥಳದಲ್ಲಿ ಒಂದು ಸುಂದರ ಭವನ ನಿರ್ಮಾಣ ಆಗಬೇಕೆಂಬ ಎಲ್ಲರ ಕನಸು ಎಸ್. ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ನನಸಾಗುವ ಭರವಸೆ ಇದೆ. ಸರ್ಕಾರದ ಜೊತೆ ಪ್ರತಿಯೊಬ್ಬರ ಕೈಜೋಡಿಸುವ ಸಹಕಾರ ನೀಡಿದರೆ ಅಭಿವೃದ್ದಿ ಸಾಧ್ಯ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಆನಗೋಡು ಗ್ರಾಮದಲ್ಲಿ ಗೋಲಿಬಾರ್ ನಂಥ ದುರಂತ ನಡೆದು ಹುತಾತ್ಮರಾಗಲು ಪರೋಕ್ಷವಾಗಿ ನಮ್ಮಂತ ರಾಜಕಾರಣಿಗಳೇ ಕಾರಣ. ದುರಂತ ಆಗಬಾರದಿತ್ತು. ಸಂಘಟಿತ ಹೋರಾಟವಿಲ್ಲದೆ ಯಾವ ಕಾರ್ಯವೂ ಸಿದ್ದಿಸುವುದಿಲ್ಲ. ಆದ್ದರಿಂದ ರೈತ ಸಂಘಟನೆ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕೆಂದರು.
22 ಕೆರೆ ಏತ ನೀರಾವರಿ ಯೋಜನೆಯ ಪೈಪ್ ಲೈನ್ ಕಾಮಗಾರಿ ಕಳಪೆ ಆಗಿತ್ತು. ಈಗ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇವೆ. ಡಿಐ ಪೈಪ್ ಹಾಕಿಸಿ ನೀರು ಕೆರೆಗಳಿಗೆ ತರಲಾಗುವುದು. ಕೆರೆ ತುಂಬಿಸಲು ಮತ್ತೊಮ್ಮೆ ಇಲ್ಲೇ ಅಧಿಕಾರಿಗಳೊಂದಿಗೆ ಸಭೆ ಮಾಡಿ ಚರ್ಚಿಸೋಣ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬಹುದು. ಎಪಿಎಂಸಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. ಆನಗೋಡಿನಲ್ಲಿ ಒಂದು ಭವನ ನಿರ್ಮಾಣಕ್ಕೆ ಅನುದಾನ ನೀಡಿ, ಅಭಿವೃದ್ದಿಗೆ ಒತ್ತು ನೀಡುತ್ತೇನೆ. ಹಿಂದೆ ಇದ್ದವರು ಕ್ಷೇತ್ರದಲ್ಲಿ ಮಾಡಿರುವ ಕೊಳೆ ಇನ್ನು ತೊಳೆಯುವ ಕೆಲಸ ಆಗಬೇಕಿದೆ. ರೈತರ ಹಿತ ಕಾಯಲು ಬದ್ದನಾಗಿದ್ದೇನೆ. ರೈತರಿಗೆ ಅಗತ್ಯವಿರುವ ಯೋಜನೆಗಳನ್ನ ಜಾರಿಗೆ ತರಲು ಪ್ರಯತ್ನಿಸುತ್ತೇನೆ ಎಂದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಹುತಾತ್ಮರ ಅತ್ಮಕ್ಕೆ ಶಾಂತಿ ಸಿಗಬೇಕಾದರೆ ಸಂಘಟಿತರಾಗಬೇಕು. ಕೇಂದ್ರದಲ್ಲಿ ರೈತಪರವಾಗಿ ಕನಿಷ್ಠ ಬೆಂಬಲ ಬೆಲೆ ಒದಗಿಸಲು, ಭದ್ರಾ ಯೋಜನೆ ಸೇರಿದಂತೆ ವಿವಿಧ ರೈತರ ಯೋಜನೆಗಳ ಅನುಷ್ಠಾನಕ್ಕೆ ನಿಮ್ಮಗಳ ದನಿಯಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಹಿಳೆಯರು ರೈತ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಮನಮೋಹನ್ ಸಿಂಗ್ ಅವಧಿಯಲ್ಲಿ ಮೆಕ್ಕೇಜೋಳಕ್ಕೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯಲಾಗಿತ್ತು.
ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಖರೀದಿ ಕೇಂದ್ರ ತರಬೇಕು ಎಂದು ಒತ್ತಾಯಿಸಿದರು.
ತರಳಬಾಳು ಶ್ರೀಗಳ ಕನಸಿನ ಕೂಸು 22 ಕೆರೆ ಏತ ನೀರಾವರಿ ಎಲ್ ಅಂಡ್ ಟಿ ಕಂಪನಿಯ ಕಳಪೆ ಕಾಮಗಾರಿಯಿಂದ ನೀರು ಬಂದಿಲ್ಲ. ಮಲ್ಲಿಕಾರ್ಜುನ ಸಾಹೇಬರ ಕಾಳಜಿಯಿಂದ ಕೆರೆಗಳಿಗೆ ಅಲ್ಪ ಪ್ರಮಾಣದ ನೀರು ಬಂತು ಎಂದರು.
18 ಕೋಟಿ ಹಣ ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಮಂತ್ರಿಗಳು, ಸಂಸದರ ನೇತೃತ್ವದಲ್ಲಿ ಶೀಘ್ರ ನೀರು ಕೆರೆಗಳಿಗೆ ಹರಿಸುತ್ತೇವೆ, ಮಾಯಕೊಂಡದ ಬುಳ್ಳಾಪುರ, ಹುಣಸೆಕಟ್ಟೆ ಗುಡ್ಡಗಳಲ್ಲಿನ ಕೆರೆಗಳ ಅಭಿವೃದ್ದಿ ಮಾಡಿ, ನೀರು ತುಂಬಿಸುವ ಕೆಲಸ ಮಾಡುತ್ತೇವೆ. ಸದಾ ರೈತ ಬೆಂಬಲಕ್ಕೆ ನಾವಿರುತ್ತೇವೆ. ರೈತ ಸಂಘಟನೆ ಹರಿದ ಹೊಸ ಅಂಗಿ ಆಗಿದೆ. ಎಲ್ಲ ಸಂಘಟನೆಗಳೂ ಹೋರಾಟಕ್ಕೆ ಒಗ್ಗೂಡಿಸುವ ಕೆಲಸದ ನೇತೃತ್ವವನ್ನ ಪಂಡಿತಾರಾಧ್ಯ ಶ್ರೀಗಳು ವಹಿಸಿಕೊಳ್ಳಬೇಕು ಎಂದರು.
ರೈತ ಹುತಾತ್ಮ ಸಮಿತಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ ಸಚಿವರು, ಸಂಸದರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ದಾವಣಗೆರೆ ಸಂಪೂರ್ಣ ಅಭಿವೃದ್ದಿ ಮಾಡಿದ್ದೀರಿ ರೈತರಿಗಾಗಿ ಒಂದು ಭವನ ನಿರ್ಮಾಣ ಮಾಡಿಕೊಡಿ, ಕಂದಾಯ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವಂತೆ ಸೂಚಿಸಿ , ಮಾಯಕೊಂಡ ಕ್ಷೇತ್ರದ ಅಭಿವೃದ್ದಿಗೆ ಆದ್ಯತೆ ನೀಡಿ ಎಂದು ಒತ್ತಾಯಿಸಿದರು.
ಆನಗೋಡು ನಂಜುಂಡಪ್ಪ ಮಾತನಾಡಿ, ಹೋರಾಟಗಾರರ ಸ್ಮರಿಸುವ ಕೆಲಸ ಆಗಬೇಕು. ಈ ಸ್ಥಳದಲ್ಲಿ ರೈತರ ಕೃಷಿ ಸಂಶೋಧನ ಕೇಂದ್ರ, ಕೃಷಿ ಮ್ಯೂಸಿಯಂ ತೆರೆದು, ಪ್ರವಾಸಿ ತಾಣದಂತೆ ಅಭಿವೃದ್ದಿ ಮಾಡಬೇಕು ಎಂದು ಒತ್ತಾಯಿಸಿದರು.
ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ ಮಾತನಾಡಿ, ರೈತ ಸಂಘಟನೆಗಳು ಪಕ್ಷಾತೀತವಾಗಿ ಸಂಘಟಿತರಾಗಬೇಕು. ಸಿರಿಗೆರೆ ಶ್ರೀಗಳ ಹೋರಾಟದಿಂದ ಜಗಳೂರು, ದಾವಣಗೆರೆ, ಭರಮಸಾಗರ ಕೆರೆಗಳಿಗೂ ನೀರು ಹರಿಯುತ್ತಿದೆ ಎಂದು ಸ್ಮರಿಸಿದರು.
ತೇಜಸ್ವಿ ಪಟೇಲ್ ಮಾತನಾಡಿ, ಹುತಾತ್ಮರ ಕುಟುಂಬಗಳ ಸ್ಥಿತಿ ಗಮನಿಸಬೇಕು. ಪೊಲೀಸ್ ಗೋಲಿಬಾರ್ ನಿಂದ ಹುತಾತ್ಮರ ಕುಟುಂಬಗಳಿಗೆ ಮಾಸಾಶನ ಜೊತೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಬಿತ್ತನೆ ಬೀಜ ಸಂಸ್ಕೃತಿ ಹಾಳಾಗುತ್ತಿದೆ. ರೈತರ ನೆರವಿಗೆ ಸರ್ಕಾರಗಳು ನಿಲ್ಲಬೇಕು ಎಂದರು.
ರೈತ ಹೋರಾಟಗಾರರ ಮೇಲೆ ಪೋಲೀಸರು ದರ್ಪದಿಂದ ಕೇಸು ದಾಖಲಿಸಿದ್ದಾರೆ ಎಂದು ಚಿನ್ನಸಮುದ್ರ ಶೇಖರನಾಯ್ಕ ಆರೊಪಿಸಿದರು.
ರೈತನ ಸಂಕಷ್ಟ ಪರಿಹಾರಕ್ಕೆ ಬೆಳೆನೀತಿ ಬೆಲೆ ನೀತಿ ಅತ್ಯಗತ್ಯ, ಸ್ವಾಮಿನಾಥನ್ ವರದಿ ಅನುಷ್ಠನಾ ಮಾಡಬೇಕು ಎಂದು ಆವರಗೆರೆ ರುದ್ರಮುನಿ ಪ್ರಾಸ್ತವಿಕವಾಗಿ ಮಾತನಾಡಿದರು.
ಹೊನ್ನೂರು ಮುನಿಯಪ್ಪ ಮಾತನಾಡಿ,ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ಆದರೆ ರೈತರ ಕಾಳಜಿ ಅತ್ಯಗತ್ಯ ಎಂದರು.
ಗೌಡ್ರು ಮಹೇಶ್ವರಪ್ಪ ಮಾತನಾಡಿ, ಗೋಲಿಬಾರ್ ಗೆ ಪೋಲಿಸ್ ಇಲಾಖೆ ಅಧಿಕಾರಿಗಳೆ ನೇರ ಹೊಣೆ ಎಂದು ಆರೋಪಿಸಿದರು.
ಸೌಲಭ್ಯಗಳನ್ನ ಧನಿಕರು ಲೂಟಿ ಮಾಡುತ್ತಿದ್ದಾರೆ. ಪರಿಸರ ರಕ್ಷಣೆ ಮಾತ್ರ ರೈತರ ಮೇಲೆ ಹೇರಲಾಗುತ್ತಿದೆ ಎಂದು ಅರುಣಕುಮಾರ್ ಕುರುಡಿ ತಿಳಿಸಿದರು.
ರೈತ ತನ್ನ ವೃತ್ತಿ ನಿಲ್ಲಿಸಿದರೆ ಪ್ರಪಂಚ ಸರ್ವನಾಶ ಆಗುತ್ತದೆ. ಎಫ್ ಪಿಒ ಸ್ಥಾಪನೆ ಮಾಡಿ ಕೈ ಬಿಡಲಾಗಿದೆ. ಅದರ ಅಭಿವೃದ್ದಿಗೆ ಶಾಸಕರು ವಿಧಾನಸಭೆಯಲ್ಲಿ ಚರ್ಚಿಸಲಿ ಎಂದು ಹೆದ್ನೆ ಮುರಿಗೇಶಪ್ಪ ತಿಳಿಸಿದರು.
22 ಕೆರೆ ಏತ ನೀರಾವರಿ ಸರಿಪಡಿಸಿ ಕೆರೆಗಳಿಗೆ ನೀರು ತಂದರೆ ಶಾಸಕರನ್ನ, ಸಂಸದರನ್ನ ಮೆರವಣಿಗೆ ಮಾಡಿಕೊಂಡು ಬರುತ್ತೇವೆ ಎಂದು ಹೊನ್ನನಾಯ್ಕನಹಳ್ಳಿ ಮುರಿಗೇಂದ್ರಪ್ಪ ತಿಳಿಸಿದರು.
Read also : Davanagere | ನಮ್ಮನ್ನು ನಾವು ಹೊಸ ವೇಗಕ್ಕೆ, ಹೊಸ ಸ್ವರೂಪಕ್ಕೆ update ಮಾಡಿಕೊಳ್ಳಬೇಕಿದೆ: ಕೆವಿಪಿ
ಸಾಣೇಹಳ್ಳಿ ಶಿವ ಸಂಚಾರ ಸಂಚಾಲಕ ನಾಗರಾಜ್ ರೈತ ಗೀತೆ ಹಾಡಿದರು.ಶಾಮನೂರು ಲಿಂಗರಾಜ್ ಸ್ವಾಗತಿಸಿದರು,
ಕಾರ್ಯಕ್ರಮದಲ್ಲಿ ಜಿಪಂಬ ಇಒ ಸುರೇಶ್ ಇಟ್ನಾಳ್, ತಹಶೀಲ್ದಾರ್ ಡಾ. ಅಶ್ವಥ್, ಇಂಜಿನಿಯರ್ ಗಳಾದ ಕೆ.ಎನ್. ಶಿವಮೂರ್ತಿ, ರಾಘವೇಂದ್ರ, ಟಾಟ್ ಶಿವನ್, ಗುತ್ತಿಗೆದಾರ ರೇವಣಸಿದ್ದಪ್ಪ, ಮುಖಂಡರಾದ ಮಹೇಶ್ವರಪ್ಪ, ಬುಳ್ಳಾಪುರ ಹನುಮಂತಪ್ಪ, ನೇರ್ಲಿಗೆ ಅಕ್ಕಮಹಾದೇವಿ, ಹೆಬ್ಬಾಳು ರುದ್ರಮುನಿ, ವಿ.ಜಿ. ರುದ್ರೇಶ್, ಹೊನ್ನನಾಯ್ಕನಹಳ್ಳಿ ಕಿರಣಕುಮಾರ್ , ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಉಮೇಶನಾಯ್ಕ, ಗುಮ್ಮನೂರು ಬಸವರಾಜ್ ರೈತ ಮುಖಂಡರು, ರೈತರು ರೈತ ಮಹಿಳೆಯರು ಭಾಗವಹಿಸಿದ್ದರು