ದಾವಣಗೆರೆ ಸೆ13 (Davanagere ): ಪತ್ರಕರ್ತರು ಹಾರ್ಡ್ ವೇರ್ ಇದ್ದಂತೆ. ಕಾಲಕ್ಕೆ ತಕ್ಕ ಸಾಫ್ಟ್ ವೇರ್ ಅಳವಡಿಸಿಕೊಳ್ಳುವ ಸವಾಲು ನಮ್ಮೆದುರಿಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಪತ್ರಕರ್ತರು ಭವಿಷ್ಯದ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಬೇಕಿದೆ. ಈಗ ತಂತ್ರಜ್ಞಾನದ ವೇಗ ವಿಪರೀತ ಹೆಚ್ಚಿದೆ. ಈ ವೇಗಕ್ಕೆ ನಾವು ಪತ್ರಕರ್ತರು ಸಿದ್ದಗೊಳ್ಳಬೇಕಿದೆ. ಮೊಬೈಲಿನ ಒಂದು ಆವಿಷ್ಕಾರ ಉಳಿದೆಲ್ಲಾ ವೃತ್ತಿಗಳಿಗಿಂತ ಪತ್ರಿಕಾವೃತ್ತಿಯಲ್ಲಿ ಅಪಾರ ಬದಲಾವಣೆ ತಂದಿದೆ. ನಾವು ಪತ್ರಕರ್ತರು ಹಾರ್ಡ್ ವೇರ್ ಗಳಿದ್ದಂತೆ. ನಾವು ನಮ್ಮೊಳಗಿನ software ನ್ನು update ಮಾಡಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಈಗ ಬಹುತೇಕ ದೊಡ್ಡ ಸಂಸ್ಥೆಗಳೂ ಕೃತಕ ಬುದ್ದಿಮತ್ತೆಯನ್ನು ಅಳವಡಿಸಿಕೊಳ್ಳಲು ಮುಂದಾಗಿವೆ. ಕೆಲವೇ ವರ್ಷಗಳಲ್ಲಿ ಕೃತಕ ಬುದ್ದಿಮತ್ತೆ ಎಲ್ಲಾ ನ್ಯೂಸ್ ರೂಮುಗಳಲ್ಲೂ ಚಾಲ್ತಿಗೆ ಬರುತ್ತವೆ. ಮೇಕಪ್ ಅಗತ್ಯವಿಲ್ಲದ ಕೃತಕ ಸುಂದರಿಯರು ನ್ಯೂಸ್ ಆ್ಯಂಕರ್ ಗಳಾಗುತ್ತಾರೆ ಎಂದರು.
Read also : Davanagere | ವಕ್ಫ್ ಮಸೂದೆ ಹಿಂಪಡೆಯಿರಿ : ಎಸ್‍ಡಿಪಿಐ ಒತ್ತಾಯ
ಈ ಸವಾಲಿಗೆ ನಾವುಗಳು ಸಜ್ಜಾಗಬೇಕಿದೆ. ಈ ತಂತ್ರಜ್ಞಾನವನ್ನು ಅರಿಯುವ, ಕಲಿಯುವ ಕಾರ್ಯಾಗಾರಗಳು ಮತ್ತು ಶಿಬಿರಗಳನ್ನು ಪತ್ರಕರ್ತರ ಸಂಘಗಳು ಹೆಚ್ಚೆಚ್ಚು ಸಂಘಟಿಸಬೇಕು. ಇದಕ್ಕಾಗಿ ವಾರ್ತಾ ಇಲಾಖೆ, ಮಾಧ್ಯಮ ಅಕಾಡೆಮಿ ಸಹಯೋಗ ಪಡೆಯಬಹುದು. ಮೊಬೈಲ್ ನಲ್ಲಿ ಕ್ರಾಪ್ ಮಾಡಿದ ಒಂದು ಸುಳ್ಳು ಫೋಟೋ, voice converter ಮೂಲಕ ಸೃಷ್ಟಿಸಿದ ಒಂದು ಆಡಿಯೊ, ಕೃತಕ ಬುದ್ದಿಮತ್ತೆ ಮೂಲಕ ರೆಡಿಯಾದ ಒಂದು ವಿಡಿಯೊ ಸಮಾಜದಲ್ಲಿ ದೊಡ್ಡ ಗಲಭೆಗಳನ್ನು ಸೃಷ್ಟಿಸಿ ಸರ್ವನಾಶ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಕೊಪ್ಪಳ ವಿವಿಯ ವಿಸಿ ಬಿ.ಕೆ.ರವಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.