ದಾವಣಗೆರೆ .07: ದೇಶದಾದ್ಯಂತ ಇದೇ ನವೆಂಬರ್ 9 ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ದಿನದ ಅಂಗವಾಗಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ನ್ಯಾಯ, ಕಾನೂನಿನ ಅರಿವು, ನೆರವು ಒದಗಿಸುವುದು ಇದರ ಪ್ರಮುಖ ಉದ್ದೇಶವವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ತಿಳಿಸಿದರು.
ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಬಡವರು, ಮಹಿಳೆಯರು, ಮಕ್ಕಳು, ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ, ಹಿರಿಯ ನಾಗರಿಕರಿಗೆ, ಮಕ್ಕಳ ರಕ್ಷಣೆ ಹಾಗೂ ವಿವಿಧ ರೀತಿಯಲ್ಲಿ ದೌರ್ಜನ್ಯಕ್ಕೊಳಗಾದ ಸಂತ್ರಸ್ಥರಿಗೆ, ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗೆ, ದೌರ್ಜನ್ಯಕ್ಕೆ ಒಳಗಾಗಿ ಮರಣ ಹೊಂದಿದ ಕುಟುಂಬದ ಸಂತ್ರಸ್ಥರಿಗೆ, ಅಂಗವಿಕಲರಿಗೆ, ವಿಶೇಷವಾಗಿ ಕಾರಾಗೃಹದಲ್ಲಿರುವ ಕೈದಿಗಳಿಗೂ ಸಹ ಉಚಿತ ಕಾನೂನಿನ ನೆರವು ನೀಡಲಾಗುತ್ತದೆ. ಹಾಗೆಯೇ ಜನ ಸಾಮಾನ್ಯರಿಗೆ ದಿನನಿತ್ಯದ ಅವಶ್ಯಕತೆಗೆ ಬೇಕಾದ ಕಾನೂನಿನ ಅರಿವು, ಜಾಗೃತಿ ಶಿಬಿರದ ಮೂಲಕ ಕಾನೂನು ನೆರವು ನೀಡಲಾಗುವುದು. ಲೋಕಾ ಅದಾಲತ್ ಮತ್ತು ಮಧ್ಯಸ್ಥಗಾರ ಕೇಂದ್ರ ಸ್ಥಾಪಿಸಿ ವ್ಯಾಜ್ಯ ಪೂರ್ವ ಮತ್ತು ನಂತರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತಿದೆ.
Read also : ದಾವಣಗೆರೆ:ಗೋವುಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗ
ಅದಷ್ಟೇ ಅಲ್ಲದೇ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರಿಗೆ ಹಾಗೂ ಬುಡಕಟ್ಟು ಸಮುದಾಯದವರಿಗೂ, ಪ್ರಕೃತಿ ವಿಕೋಪಕ್ಕೆ ಒಳಗಾ ದಂತಹವರಿಗೂ ಸಂವಿಧಾನದ ಆಶಯದಂತೆ ಸಮಾನ ಅವಕಾಶ ಮತ್ತು ಕಾನೂನು ಅರಿವು ನೆರವು ನೀಡುವಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕಾನೂನು ಸೇವೆಗಳ ಪ್ರಾಧಿಕಾರ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾನೂನಿನ ಸಂಘರ್ಷಕ್ಕೆ ಒಳಗಾದ ಮತ್ತು 3 ಲಕ್ಷ ಆದಾಯ ಮಿತಿ ಹೊಂದಿ ದ ಇತರೆ ವರ್ಗದವರಿಗೂ ಎಲ್ಲಾ ರೀತಿಯ ಸಮಸ್ಯೆಗಳನ್ನ ಪರಿಗಣನೆಗೆ ತೆಗೆದುಕೊಂಡು ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸಮಾಜದಲ್ಲಿ ಎಲ್ಲರೂ ಕಾನೂನು ತಜ್ಞರಾಗಲು ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕನಿಷ್ಠ ಕಾನೂನು ಅರಿವು ಮೂಡಿಸುವುದರ ಜೊತೆಗೆ ಉಚಿತ ಕಾನೂನು ನೆರವು ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಂದರೆ ತಮ್ಮ ವಿರುದ್ಧ ಆರೋಪ ಬಂದಾಗ ಸಿವಿಲ್ ದಾವೆ ಹೂಡಲು, ಅಥವಾ ನ್ಯಾಯಾಂಗ ಬಂಧನದಲ್ಲಿ ಇರುವಂತಹ ಆರೋಪಿಯು ತನ್ನ ಪ್ರಕರಣವನ್ನು ನ್ಯಾಯಾಲಯದಲ್ಲಿ ನಡೆಸಲು ಶಕ್ತರಿರುವುದಿಲ್ಲವೋ ಅವರಿಗೆ ಸರ್ಕಾರಿ ಕಾನೂನು ಅಭಿರಕ್ಷಕರಿಂದ ಉಚಿತ ಕಾನೂನು ನೆರವು ಒದಗಿಸಲಾಗುತ್ತದೆ.
ಈ ನಿಟ್ಟಿನಿಲ್ಲಿ ಈಗಾಗಲೇ ಕಳೆದ ಒಂದು ವಾರದಿಂದ ವಿವಿಧ ಶಾಲಾ – ಕಾಲೇಜ್, ಹಾಸ್ಟೆಲ್‌ಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ 25 ಪ್ಯಾನಲ್ ವಕೀಲರು, 37 ಮಧ್ಯಸ್ಥಗಾರ, 100 ಪ್ಯಾನಲ್ ಸ್ವಯಂ ಸೇವಕರು, 08 ಕಾನೂನು ನೆರವು ಅಭಿರಕ್ಷಕರನ್ನು ನೇಮಿಸಲಾಗಿದೆ.
ಹರಿಹರ, ಹೊನ್ನಾಳಿ, ಜಗಳೂರು ಹಾಗೂ ಚನ್ನಗಿರಿಯಲ್ಲಿ ತಾಲ್ಲೂಕುವಾರು ತಲಾ 25 ಕಾನೂನು ಸ್ವಯಂ ಸೇವಕ ಮತ್ತು 10 ಪ್ಯಾನಲ್ ವಕೀಲರು ಸೇರಿ ಒಟ್ಟು 204 ಕಾನೂನು ಅರಿವು, ನೆರವು ನೀಡಲು ನೇಮಿಸಲಾಗಿದೆ. ಅಲ್ಲದೇ ಎಲ್ಲಾ ನ್ಯಾಯಾಲಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಒಬ್ಬ ಉಚಿತ ಕಾನೂನು ಸಲಹೆಗಾರರನ್ನು ನೇಮಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕೆಂದರು.
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಶಾಲಾ, ಕಾಲೇಜು, ಹಾಸ್ಟೆಲ್, ಗ್ರಾಮ ಪಂಚಾಯಿತಿ ಹಾಗೂ ಹಾಸ್ಪಿಟಲ್‌ಗಳು ಸೇರಿ ಒಟ್ಟು 34 ಸ್ಥಳಗಳಲ್ಲಿ ಕಾನೂನು ಅರಿವು ಕುರಿತು ಜಾಗೃತಿ ಕಾರ್ಯಗಾರ ನಡೆಸಲಾಗಿದೆ.
ಇದೇ ನವೆಂಬರ್ 11 ರಂದು ರಾಮ್ ಅಂಡ್-ಕೊ ವೃತ್ತದಲ್ಲಿ ಆರ್‌ಎಲ್ ಕಾನೂನು ಕಾಲೇಜು ವತಿಯಿಂದ ಈ ಕುರಿತು ಜಾಗೃತಿ ಮೂಡಿಸಲು ಕಿರು ಬೀದಿ ನಾಟಕ ಹಮ್ಮಿಕೊಳ್ಳಲಾಗಿದೆ.
ನ.15ರಂದು ಆರ್‌ಎಲ್ ಕಾನೂನು ವಿದ್ಯಾಲಯದಲ್ಲಿ ಜಾಗೃತಿ ಕಾರ್ಯಗಾರ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು. ದೇಶದ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.10 ರಷ್ಟು ಜನರು ತೊಂದರೆ, ಖಾಯಿಲೆ ಹಾಗೂ ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿದ್ದಾರೆ. ಸಾಮಾಜಿಕ ಕಳಕಳಿಯಿಂದ ಪ್ರತಿದಿನವೂ ಇದೇ ರೀತಿ ಕಾನೂನು ಸೇವಾ ಮಹತ್ವದ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುವುದು ಎಂದರು.
ಉಚಿತ ಸಹಾಯವಾಣಿ ಸಂಖ್ಯೆ:
ಸಮಾಜದಲ್ಲಿ ಇಂದಿಗೂ ಕೆಲವರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಹೀಗೆ ಯಾವ ಇಲಾಖೆಗಳಲ್ಲಿ ಯಾವ ರೀತಿಯ ಸೇವೆಗಳನ್ನು ಪಡೆಯಬಹುದು ಎಂಬ ಪರಿವೇ ಇಲ್ಲ. ಸಾರ್ವಜನಿಕರ ಮತ್ತು ಸಂಬಂಧಪಟ್ಟ ಇಲಾಖೆಗಳ ನಡುವೆ ನ್ಯಾಯಾಲಯ ಸೇತುಬಂದವಾಗಿ ಕಾರ್ಯನಿರ್ವಹಿಸಲಿದೆ. ಯಾವುದೇ ಒಬ್ಬ ವ್ಯಕ್ತಿಗೆ ಕಾನೂನು ಸಂಘರ್ಷದಲ್ಲಿ ಸಿಲುಕಿಕೊಂಡವರು ಅಥವಾ ಕಾನೂನು ಬಗ್ಗೆ ಅರಿವಿಲ್ಲದೇ ಇರುವ ಯಾರೇ ಆಗಲಿ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಸಹಾಯಾಣಿ ಸಂಖ್ಯೆ 15100 ಕರೆ ಮಾಡಿ ಮಾಹಿತಿ ಪಡೆಯಬಹುದು.
ಈ ವೇಳೆ ಮುಖ್ಯ ಕಾನೂನು ಅಭಿರಕ್ಷಕ ಕೆ.ಕೆಂಚಪ್ಪ ಇದ್ದರು.
