ದಾವಣಗೆರೆ: ಹಿರಿಯ ರಾಜಕಾರಣಿ , ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಡಾ.ಶಾಮನೂರು ಶಾಮನೂರು ಶಿವಶಂಕರಪ್ಪ (Dr.Shamanur Shivashankarappa) ಅವರು ಸೋಮವಾರ ಸಂಜೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.
ನಗರದ ಹಳೇಯ ಭಾಗದ ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ಆವರಣದಲ್ಲಿರುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸಮಾಧಿ ಪಕ್ಕದಲ್ಲೇ ಸಂಜೆ 5.30 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ ನೆರವೇರಿಸಲಾಯಿತು.
ಭಾರತ ಧ್ವಜ ಪಾರ್ಥೀವ ಶರೀರದ ಮೇಲೆ ಹೊದಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಭಾರತದ ಧ್ವಜವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು. ಬಳಿಕ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.
ಪುತ್ರರಾದ ಎಸ್.ಎಸ್.ಗಣೇಶ್, ಎಸ್.ಎಸ್.ಬಕ್ಕೇಶ್, ಜಿಲ್ಲಾ ಉಸ್ತುವಾರಿ ಸಚಿವ ಎಸ್..ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ್, ನಾಲ್ವರು ಪುತ್ರಿಯರು ಹಾಗೂ ಕುಟುಂಬ ವರ್ಗದವರು ಅಂತಿಮ ವಿಧಿವಿಧಾನ ಪೂರೈಸಿದರು.
ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ರಾಷ್ಟ್ರೀಯ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್, ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಚಿವರಾದ ಈಶ್ವರ್ ಖಂಡ್ರೆ, ಟಿ.ಕೆ.ಜಾಜ್೯, ಭೈರತಿ ಸುರೇಶ್, ಎಚ್.ಸಿ.ಮಹಾದೇವಪ್ಪ, ಎಂ.ಬಿ.ಪಾಟೀಲ್, ಜಮೀರ್ ಅಹಮ್ಮದ್, ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಸುಧಾಕರ್, ಕೆ.ಎಚ್. ಮುನಿ ಯಪ್ಪ, ಶರಣಪ್ಪ ದರ್ಶನಾಪುರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲುವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವೆ ಉಮಾಶ್ರೀ, ಎಚ್.ಡಿ.ರೇವಣ್ಣ, ಶಾಸಕರಾದ ಕೆ.ಎಸ್.ಬಸವಂತಪ್ಪ, ಬಸವರಾಜ್ ಶಿವಗಂಗಾ, ಸಿ.ಟಿ.ರವಿ ಸೇರಿದಂತೆ ಸಚಿವರು, ಶಾಸಕರು, ರಾಜಕೀಯ ನಾಯಕರು ಅಂತಿಮ ದರ್ಶನ ಪಡೆದರು.
ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ಬಾಮೀಜಿ, ಮೈಸೂರಿನ ಸುತ್ತೂರು ಶ್ರೀ , ರಂಭಾಪುರಿ ಶ್ರೀ, ಆವರಗೊಳ್ಳದ ಶ್ರೀ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ:
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ 6.20 ಗಂಟೆಗೆ ಡಾ.ಶಾಮನೂರು ಶಿವಶಂಕರಪ್ಪ ನಿಧನರಾದರು. ಬಳಿಕ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಇರುವ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಗೆ ತರಲಾಯಿತು. ಅಲ್ಲಿ ಸೇರಿದ್ದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ನಂತರ ಬೆಂಗಳೂರಿನಿಂದ ದಾವಣಗೆರೆಗೆ ರಸ್ತೆ ಮಾರ್ಗವಾಗಿ ಜೀರೋ ಟ್ರಾಫಿಕ್ ಮೂಲಕ ಪಾರ್ಥೀವ ಶರೀರವನ್ನು ತರಲಾಯಿತು. ಶಾಮನೂರು ಶಿವಶಂಕರಪ್ಪ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಅವರ ನಿವಾಸದ ಬಳಿ ಸಾರ್ವಜನಿಕರು, ಅಭಿಮಾನಿಗಳು ಜಮಾಯಿಸಿದ್ದರು. ಮಧ್ಯೆರಾತ್ರಿ 3.15 ಗಂಟೆ ಸುಮಾರಿನಲ್ಲಿ ಶಾಮನೂರು ಶಿವಶಂಕರಪ್ಪ ಅವರ ಪಾರ್ಥೀವ ಶರೀರ ಆಗಮಿಸಿತು.
ಮೊದಲು ಎಸ್.ಎಸ್.ಬಕ್ಕೇಶ್ ನಿವಾಸದಲ್ಲಿ ಕೆಲಕಾಲ ಪಾರ್ಥೀವ ಶರೀರವನ್ನಿಟ್ಟು ನಂತರ ಎಸ್.ಎಸ್.ಗಣೇಶ್ ಅವರ ನಿವಾಸ, ಬಳಿಕ ಶಾಮನೂರು ಶಿವಶಂಕರಪ್ಪ ಸಹೋದರನ ಪುತ್ರ ಮುರುಗೇಶ್ ನಿವಾಸ ಕೊನೆಗೆ ಕಿರಿಯ ಪುತ್ರ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನಿವಾಸದಲ್ಲಿ ಪಾರ್ಥೀವ ಶರೀರವನ್ನು ಇಡಲಾಯಿತು.
ಬೆಳಗ್ಗೆ 7 ಗಂಟೆಯಿಂದ 12 ಗಂಟೆಯವರೆಗೆ ಕುಟುಂಬ ವರ್ಗ ಮತ್ತು ವಿವಿಐಪಿಗಳಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಕುಟುಂಬ ವರ್ಗದವರು ಮಠಾಧೀಶರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಮುಂಜಾಗ್ರತಾ ಕ್ರಮವಾಗಿ ನಿವಾಸದ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರೂ, ನಿವಾಸದ ಒಳಗೆ ಯಾರನ್ನೂ ಬಿಡಲಿಲ್ಲ. ಪೊಲೀಸರು ಎಲ್ಲರನ್ನೂ ಹೊರಗೆ ನಿಲ್ಲಿಸಿ, ಕುಟುಂಬದವರು, ವಿವಿಐಪಿಗಳಿಗೆ ಅಷ್ಟೇ ಒಳಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದರು.
ಅಂತಿಮ ದರ್ಶನಕ್ಕೆ ಗಣ್ಯರು, ಅಭಿಮಾನಿಗಳ ಮಹಾಪೂರ:
ಸಚಿವರ ಮನೆಯಲ್ಲಿ ಕುಟುಂಬಸ್ಥರು, ಗಣ್ಯರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ ಸಾರ್ವಜನಿಕರು, ಅಭಿಮಾನಿಗಳು, ಬಾಪೂಜಿ ವಿದ್ಯಾಸಂಸ್ಥೆಯ ನೌಕರರು, ಸಿಬ್ಬಂದಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದರು.
ಉಜ್ಜಯಿನಿಯ ಶ್ರೀ ಗಳು, ಸಿದ್ಧಗಂಗೆ ಶ್ರೀ ಗಳು, ಸಾಣೇಹಳ್ಳಿ ಶ್ರೀ ಗಳು, ಮುರುಘಾ ಶರಣರು, ಕಣ್ವಕುಪ್ಪಿ ಶ್ರೀಗಳು, ಗಣ್ಯರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಬಿ.ವೈ. ರಾಘವೇಂದ್ರ, ಕೆ.ಎಸ್. ನವೀನ್, ಶಿವಮೊಗ್ಗ ಶಾಸಕ ಚನ್ನಬಸಪ್ಪ ಇನ್ನಿತರರು ಅಂತಿಮ ದರ್ಶನ ಪಡೆದರು. ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು ವಿಶ್ವವಿದ್ಯಾಲಯದ ಕೆಲ ಪರೀಕ್ಷೆ ಗಳನ್ನೂ ಮುಂದೂಡಲಾಗಿದೆ. ದಾವಣಗೆರೆ ನಗರದಲ್ಲಿ ಕೆಲ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು.
ಮೆರವಣಿಗೆ ಆರಂಭ:
12.45 ಗಂಟೆ ಸುಮಾರಿನಲ್ಲಿ ಹೂವಿನಿಂದ ಅಲಂಕಾರ ಮಾಡಿದ್ದ ವಾಹನದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ನಿವಾಸದಿಂದ ಪಾರ್ಥೀವ ಶರೀರದ ಮೆರವಣಿಗೆ ಆರಂಭವಾಯಿತು. ನಿವಾಸದಿಂದ ಶಾಮನೂರು ರಸ್ತೆ, ಗುಂಡಿ ಮಹಾದೇವಪ್ಪ ವೃತ್ತ, ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತದಿಂದ ಜನತಾ ಬಜಾರ್ ರಸ್ತೆಯ ಮೂಲಕ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿದ್ದ ಸ್ಥಳಕ್ಕೆ ಮಧ್ಯಾಹ್ನ .1.35 ಗಂಟೆ ಸುಮಾರಿಗೆ ತರಲಾಯಿತು. ವಾಹನದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ಅವರ ಪುತ್ರರರು, ಎಸ್.ಎಸ್.ಗಣೇಶ್ ಇದ್ದರು, ಮೆರವಣಿಗೆಯಲ್ಲಿ ಶಾಸಕರಾದ ಕೆ.ಎಸ್.ಬಸವಂತಪ್ಪ, ಮೆರವಣಿಗೆ ಮಾರ್ಗದಲ್ಲಿ ಜಮಾಯಿಸಿದ್ದ ಸಾರ್ವಜನಿಕರು ಪಾರ್ಥೀವ ಶರೀರದ ದರ್ಶನ ಪಡೆದು ಅಶ್ರುದರ್ಪಣ ಸಲ್ಲಿಸಿದರು.
ಅಂತಿಮ ದರ್ಶನಕ್ಕೆ ಜನಸಾಗರ:
ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿದ್ದರಿಂದ ಬೆಳಗ್ಗೆಯಿಂದಲೇ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ರಾಜ್ಯದಿಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು, ಅಭಿಮಾನಿಗಳು ಜಮಾಯಿಸಿದ್ದರು. ಮಧ್ಯಾಹ್ನದ ವೇಳೆಗೆ ಪಾರ್ಥೀವ ಶರೀರ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಸರತಿ ಸಾಲಿನಲ್ಲಿ ಸಾಗಿ ಅಂತಿನ ದರ್ಶನ ಪಡೆದರು.
ಕಲ್ಲೇಶ್ವರ ರೈಸ್ ಮಿಲ್ ಗೆ ಮೆರವಣಿಗೆ:
ಸಾರ್ವಜನಿಕ ದರ್ಶನ ಮುಗಿದ ಬಳಿಕ ಹೈಸ್ಕೂಲ್ ಮೈದಾನದಿಂದ ಅಂತ್ಯಕ್ರಿಯೆ ನಡೆಯುವ ಕಲ್ಲೇಶ್ವರ ರೈಸ್ ಮಿಲ್ ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಹಸ್ರಾರು ಜನರು ಭಾಗವಹಿಸಿದ್ದರು.
ಸಂಜೆ 5.30 ಗಂಟೆ ಸುಮಾರಿನಲ್ಲಿ ಕ್ರಿಯಾ ಸಮಾಧಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಪಾರ ಜನಸ್ತೋಮ ನೆರದಿದ್ದು ಅಗಲಿದ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಲಾಯಿತು.
