ದಾವಣಗೆರೆ: “ಇದೊಂದು ನಿಜವಾದ ದೇವಸ್ಥಾನ. ಈ ದೇವಸ್ಥಾನದಲ್ಲಿರುವ ನಿಜವಾದ ದೇವರುಗಳನ್ನು ಬಿಟ್ಟು ನಾವು ಕಣ್ಣಿಗೆ ಕಾಣದ ದೇವರುಗಳನ್ನು ಹುಡುಕುತ್ತಿದ್ದೇವೆ. ನಾವು ಇವರ ಸೇವೆ ಮಾಡಿದರೆ ನಾವು ನಿಜವಾದ ದೇವರನ್ನು ಕಂಡಂತಹ ಆತ್ಮತೃಪ್ತಿ ನಮಗೆ ಸಿಗಲಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಭಿಪ್ರಾಯಪಟ್ಟರು.
ನಗರದ ಸಮೀಪದ ವಡ್ಡಿನಹಳ್ಳಿಯಲ್ಲಿರುವ ವಿಕಲಚೇತನರ ಕೌಶಲ್ಯ ಅಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣಕ್ಕಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರ (ದಿವ್ಯಾಂಗಜನ್)ದಲ್ಲಿ ಬುಧವಾರ ಅಂಗವಿಕಲರ ಸಬಲೀಕರಣ ಇಲಾಖೆ ಭಾರತ ಸರ್ಕಾರ, ದಾವಣಗೆರೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿನ ಸಿಆರ್ ಸಿ ಕೇಂದ್ರ ದೇವರುಗಳನ್ನು ಕಾಣುವ ಪುಣ್ಯ ಸ್ಥಳವಾಗಿದ್ದು, ಈ ಮಕ್ಕಳ ಸೇವೆ ಮಾಡುವ ಭಾಗ್ಯ ನಮ್ಮದಾಗಬೇಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಪೋಷಕರು ಮತ್ತು ಅಧಿಕಾರಿಗಳು ಈ ಮಕ್ಕಳಿಗೆ ಮಾಡುತ್ತಿರುವ ಸೇವೆ ದೇವರ ದರ್ಶನ ಮಾಡಿದಂತೆ ಆಗುತ್ತಿದೆ ಎಂದರು.
ಅಂಗವಿಕಲ ಮಕ್ಕಳ ಸಬಲೀಕರಣಕ್ಕಾಗಿ ಅನೇಕ ಶಾಲಾ- ಕಾಲೇಜು ಹಾಗೂ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಕಾಲದಲ್ಲಿ ವಿಕಲಚೇತನರಿಗೆ ವಿದ್ಯಾಭ್ಯಾಸದ ಅವಕಾಶಗಳ ಜೊತೆಗೆ ಕೌಶಲಾಭಿವೃದ್ಧಿಗಳ ಕಲಿಕೆಯು ಅವರ ಬದುಕಿನಲ್ಲಿ ಸಾಧನೆ ಮಾಡುವಂತಹ ಭರವಸೆ ಮೂಡಿಸುತ್ತಿದೆ ಎಂದು ಹೇಳಿದರು.
ಅಂಗವಿಕಲ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹ ನೀಡುವುದರಿಂದ ಅವರ ದೌರ್ಬಲ್ಯಗಳ ಹೊರತಾಗಿಯೂ ಅದಮ್ಯ ಶಕ್ತಿ ಅವರಲ್ಲಿದೆ ಎಂಬುದನ್ನು ನಿರೂಪಿಸಲು ಸಾಧ್ಯ ಎಂದರು.
ಅಂಗವಿಕಲರ ಏಳಿಗೆಗೆ ಕುಟುಂಬದ ಸದಸ್ಯರು ಮಾತ್ರವಲ್ಲದೇ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ಅಂಗವಿಕಲರಿಗಾಗಿ ಕಾನೂನು ಅಡಿಯಲ್ಲಿ ಅನೇಕ ಹಕ್ಕುಗಳನ್ನು ನೀಡಿದ್ದು, ಅವರ ಶ್ರೇಯಸ್ಸು ಹಾಗೂ ಮಾನವ ಹಕ್ಕುಗಳಿಗೆ ಚ್ಯುತಿ ತರದಂತೆ ಅವರ ಅಭಿವೃದ್ಧಿಯಲ್ಲಿ ಸಹಕಾರ ನೀಡಬೇಕು ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಅಂಗವಿಕಲ ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ, ಸೈಕಲ್, ಕೃತಕ ಕಾಲು, ಇತರೆ ಸಾಮಗ್ರಿಗಳನ್ನು ವಿತರಿಸಿದರು.
ಈ ವೇಳೆ ಸಿಆರ್ ಸಿ ಕೇಂದ್ರದ ನಿರ್ದೇಶಕ ಡಾ.ಕೆ.ಮಾರುತಿ ಕೃಷ್ಣಗೌಡ, ಕನಗಸಬಪತಿ, ಶ್ರೀನಿವಾಸನ್, ಶಶಿ ಸೋಪ್ ಕಂಪನಿ ಮಾಲೀಕ ರವಿರಾಜ್, ವಾಸುದೇವ ರಾಯ್ಕರ್, ಮಾಜಿ ಎಪಿಎಂಸಿ ಅಧ್ಯಕ್ಷರಾದ ಅಣಜಿ ಎಸ್. ಕೆ.ಚಂದ್ರಣ್ಣ, ಆಲೂರು ಸೋಮಣ್ಣ ಸೇರಿದಂತೆ ಮಕ್ಕಳು, ಪೋಷಕರು, ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದರು.
ಅಂಗವಿಕಲರು ಸಮಾಜದಲ್ಲಿ ಎಲ್ಲರ ಪ್ರೀತಿ , ವಿಶ್ವಾಸಕ್ಕೆ ಪಾತ್ರರಾಗಿ ಆತ್ಮವಿಶ್ವಾಸದಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸುವುದು ಸಮಾಜ ಹಾಗೂ ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು.-ಕೆ.ಎಸ್.ಬಸವಂತಪ್ಪ, ಶಾಸಕರು.
