ದಾವಣಗೆರೆ :
ಸ್ಕಾರ್ಪಿಯೊ ಕಾರು ನಿಲ್ಲಿಸಿ ಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಅಂತರ್ ರಾಜ್ಯ ದರೋಡೆಕೋರರನ್ನು ಅಜಾದನಗರದ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ದುರ್ಯೊಧನ, ರಮೇಶ, ಲಕ್ಷ್ಮಣ್ (62),ಲಕ್ಷ್ಮಣ(32),ಗಣೇಶ (37) ಬಂಧಿತ ಆರೋಪಿಗಳು
ಮಾಗನಹಳ್ಳಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಹತ್ತಿರ ರಸ್ತೆ ಪಕ್ಕದಲ್ಲಿ ಬಿಳಿಯ ಬಣ್ಣದ ಸ್ಕಾರ್ಪಿಯೊ ಕಾರನ್ನು ನಿಲ್ಲಿಸಿಕೊಂಡು ಯಾರೋ ಐದು ಜನರು ದರೋಡೆ ಮಾಡುವ ಉದ್ದೇಶದಿಂದ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಾ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ನಗರ ಪೊಲೀಸ್ ಉಪಾಧೀಕ್ಷಕರ ಸೂಚನೆ ಮೇರಗೆ ಕಾರ್ಯ ಪ್ರವೃತ್ತರಾದ ಎಎಸ್ಪಿ ಮತ್ತು ನಗರ ಡಿವೈಎಸ್ಪಿ, ಸಿಪಿಐ ಅಶ್ವಿನ್ ಹಾಗೂ ದಾವಣಗೆರೆ ಡಿ.ಸಿ.ಆರ್.ಬಿ ಘಟಕದ ಪೊಲೀಸ್ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ ವೇಳೆ ಬಿಳಿ ಬಣ್ಣದ ಸ್ಕಾರ್ಪಿಯೊ ಕಾರನ್ನು ನಿಲ್ಲಿಸಿ 5 ಜನರು ಒಟ್ಟಾಗಿ ಸೇರಿಕೊಂಡು ದರೋಡೆ ಮಾಡುವ ಉದ್ದೇಶದಿಂದ ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.
ಒಂದು ಶಾಕ್ ಅಬ್ಜರ್ ಪೈಪ್, ಒಂದು ಕಬ್ಬಿಣದ ರಾಡ್, ಒಂದು ಕಬ್ಬಿಣದ ನಲ್ಲಿ ಪೈಪ್, ಒಂದು ಜಾಲರಿ ಕಟ್ಟರ್ , ಒಂದು ವೈರ್ ಕಟ್ಟರ್ , ಒಂದು ಅಡಿ ಉದ್ದದ ಚಾಕು, ಒಂದು 10 ಇಂಚು ಉದ್ದದ ಚಾಕು, 6 ಸಣ್ಣ ಬ್ಲೇಡ್ ಚಾಕುಗಳು , ಹ್ಯಾಂಡ್ ಗ್ಲೌಸ್, ಸುಮಾರು 15 ಅಡಿ ಉದ್ದದ 3 ಹಗ್ಗಗಳು, 5 ಕಪ್ಪು ಬಣ್ಣದ ಮಾಸ್ಕ್, 5 ಕಾರದ ಪುಡಿ ಪಾಕಿಟ್ ಗಳು, ಒಂದು ಗಮ್ ಟೇಪ್, ಒಂದು ಬ್ಯಾಗ್, ಎರಡು ಒಊ-42-ಃಎ-5141 ಸಂಖ್ಯೆ ಇರುವ ವಾಹನದ ನಂಬರ್ ಪ್ಲೇಟ್ ಗಳು ಮತ್ತು ಸ್ಕಾರ್ಪಿಯೊ ಕಾರ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರಿನಿಂದ ಬಂಗಾರದ ವ್ಯಾಪಾರಿಯನ್ನು ಹಿಂಬಾಲಿಸಿ ಬಂದಿದ್ದು, ವ್ಯಾಪಾರಿಯು ಬೆಂಗಳೂರಿನಿಂದ 11 ಕೆಜಿ ಗಿಂತ ಹೆಚ್ಚು ಬಂಗಾರದ ಆಭರಣಗಳನ್ನು ತೆಗೆದುಕೊಂಡು ಬಂದು ದಾವಣಗೆರೆಯ ಲಾಡ್ಜ್ ವೊಂದರಲ್ಲಿ ರಾತ್ರಿ ತಂಗಿದ್ದು, ಆಭರಣಗಳನ್ನುದರೋಡೆ ಮಾಡಲು ಲಾಡ್ಜ್ ಬಳಿ ಹೊಂಚು ಹಾಕಿದ್ದಾರೆ. ಅದರೆ ಆ ಸಂಚು ವಿಫಲವಾಗಿದೆ. ನಂತರ ವಾಪಾಸ್ ಹೋಗಲು ನಿರ್ಧರಿಸಿದ್ದರು. ಖರ್ಚಿಗೆ ಹಣಕ್ಕಾಗಿ ದಾವಣಗೆರೆ ನಗರದಲ್ಲಿ ಸಂಚರಿಸಿ ರಾತ್ರಿ ಸಮಯದಲ್ಲಿ ದರೋಡೆ ಯತ್ನಿಸಿದ್ದರು. ಈ ದರೋಡೆಕೋರರ ಮುಖ್ಯ ಟಾರ್ಗೆಟ್ ಬಂಗಾರದ ವ್ಯಾಪಾರಿಗಳು ಆಗಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದರೋಡೆ ಪ್ರಕರಣವನ್ನು ತಡೆಯುವಲ್ಲಿ ಯಶಸ್ವಿಯಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ ಸಂತೋಷ, ಜಿ ಮಂಜುನಾಥ, ನಗರ ಪೊಲೀಸ್ ಉಪಾಧೀಕ್ಷಕರಾದ ಮಲ್ಲೇಶ್ ದೊಡ್ಮನಿ ರವರು, ಆಜಾದ್ ನಗರ ಪೊಲೀಸ್ ನಿರೀಕ್ಷಕ ಅಶ್ವಿನ್ ಹಾಗೂ ಸಿಬ್ಬಂದಿಗಳಾದ – ಆಂಜನೇಯ ಕೆ.ಟಿ, ಮಜೀದ್ ಕೆ.ಸಿ, ರಾಘವೇಂದ್ರ, ಬಾಲರಾಜ್, ರಮೇಶ್ ನಾಯ್ಕ ಹಾಗು ಆಜಾದ್ ನಗರ ಠಾಣೆಯ ಸಿಬ್ಬಂದಿಗಳಾದ – ಮಂಜುನಾಥ ನಾಯ್ಕ, ಕೃಷ್ಣ ನಂದ್ಯಾಲ್, ತಿಪ್ಪೇಸ್ವಾಮಿ, ನಾಗರಾಜ ಡಿ ಬಿ, ವೆಂಕಟೇಶ, ನಾಗರಾಜ್, ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತರಾಜು ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶ್ಲಾಘಿಸಿರುತ್ತಾರೆ.