ದಾವಣಗೆರೆ : ಗಾಂಧಿ ಪರಿವಾರ ದೇಶಕ್ಕಾಗಿ ಅನೇಕ ಸೇವೆ, ಪ್ರಾಣತ್ಯಾಗಗಳನ್ನು ಮಾಡಿದೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಹೇಳಿದರು.
ನಗರದ ಬಾಪೂಜಿ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದಿರಾಗಾಂಧಿ ನೋಡಿದಲ್ಲೆಲ್ಲಾ ಭಯವಾಗುತ್ತಿದೆ. ಅವರ ಕೆಲಸಗಳಿಂದ ಅವರಿಗೆ ಕೀಳುರಿಮೆ ಕಾಡುತ್ತಿದೆ. ಆದ್ದರಿಂದಲೇ ಇಂದಿರಾ ಗಾಂಧಿಯವರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇಂದು ಮಹಾತ್ಮ ಗಾಂಧಿಯವರನ್ನು ಗೋಡ್ಸೆಗೆ ಹೋಲಿಸಿ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಆದರೆ, ದೇಶಕ್ಕೆ ಮುಂದಿನ ದಿನಗಳಲ್ಲಿ ಬೇಕಾದ ತತ್ವ ಆದರ್ಶಗಳನ್ನು ಗಾಂಧಿ ನಮಗೆ ರೂಪಿಸಿ ಕೊಟ್ಟಿದ್ದಾರೆ. ಗಾಂಧಿ ಪರಿವಾರವನ್ನು ದೂಷಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ ಗಾಂಧಿ ಪರಿವಾರ ದೇಶಕ್ಕಾಗಿ ಸೇವೆ, ತ್ಯಾಗ ಮಾಡುವ ಪರಿವಾರವಾಗಿದೆ. ಗಾಂಧಿ ಪರಿವಾರ ದೇಶಕ್ಕಾಗಿ ಅನೇಕ ಸೇವೆ, ಪ್ರಾಣತ್ಯಾಗಗಳನ್ನು ಮಾಡಿದೆ” ಎಂದು ಸ್ಮರಿಸಿದರು.
“ಯುವ ಕಾಂಗ್ರೆಸ್ ನಲ್ಲಿ ಉತ್ತಮ ಅವಕಾಶಗಳಿದೆ. ಇಲ್ಲಿ ಕೆಲಸ ಮಾಡಿದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ಸೇರಿದಂತೆ ಅನೇಕರು ಇಂದು ಉತ್ತಮ ಸ್ಥಾನಮಾನ ಪಡೆದಿದ್ದಾರೆ ಮತ್ತು ಯುವ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದರೆ ರಾಷ್ಟ್ರಮಟ್ಟದಲ್ಲಿಯೂ ಕೂಡ ಉತ್ತಮ ಸ್ಥಾನಮಾನಗಳು ದೊರೆಯಲಿದೆ. ಪಕ್ಷದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ರಾಜೀವ್ ಗಾಂಧಿಯವರು ಕಾಂಗ್ರೆಸ್ ನಲ್ಲಿ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಬಯಸಿದ್ದರು. ಅವರು ಯುವ ಕಾಂಗ್ರೆಸನ್ನು ರಾಷ್ಟ್ರೀಯ ಕಾಂಗ್ರೆಸಿನ ಮುಂದಾಳು ಎಂದು ಕರೆಯುತ್ತಿದ್ದರು. ಏಕೆಂದರೆ ಯಾವುದೇ ಪ್ರತಿಭಟನೆಗಳು ಮತ್ತು ಸಮಾರಂಭಗಳು ಅಥವಾ ಕಾಂಗ್ರೆಸ್ನ ಯಾವುದೇ ಕಾರ್ಯಕ್ರಮಗಳಿದ್ದರೂ ಯುವ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿನ ಮುಂದಾಳುಗಳಾಗಿ ಕೆಲಸ ಮಾಡುತ್ತಾರೆ” ಎಂದು ಪ್ರಶಂಸಿಸಿದರು.
Read also : ದಾವಣಗೆರೆ | ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡರಿಂದ ತಿರಂಗಾ ಯಾತ್ರೆ
“ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ನಾವು ಅದನ್ನು ಮರೆತು ಪಕ್ಷಕ್ಕಾಗಿ ಸೇವೆ ಸಲ್ಲಿಸೋಣ. ಪಕ್ಷಕ್ಕಾಗಿ ದುಡಿಯೋಣ. ನೀವು ಇಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದರೆ ಪಕ್ಷ ನಿಮ್ಮನ್ನು ಗುರುತಿಸುತ್ತದೆ. ನಿಮ್ಮ ನಿಮ್ಮ ಗ್ರಾಮ ಮತ್ತು ನಗರಗಳಲ್ಲಿ ಉತ್ತಮ ಕೆಲಸ ಮಾಡಿ ಜನರ ಮಧ್ಯೆ ನಾಯಕರಾಗಿ ಬೆಳೆಯಿರಿ. ಅದು ನಿಮ್ಮ ಜನರ ನಡುವೆ ಪ್ರೀತಿ ವಿಶ್ವಾಸವನ್ನು ಬೆಳೆಸುತ್ತದೆ. ಅದನ್ನು ಪಕ್ಷ ಗುರುತಿಸಿ ನಿಮಗೆ ಸ್ಥಾನಮಾನ ನೀಡುತ್ತದೆ” ಎಂದು ಸ್ಪಷ್ಟಪಡಿಸಿದರು.
ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಶೆಟ್ಟಿ ಮಾತನಾಡಿ, ಯುವ ಕಾಂಗ್ರೆಸ್ ನಲ್ಲಿ ಉತ್ತಮ ಅವಕಾಶಗಳಿದೆ. ನಾನು ಯುವ ಕಾಂಗ್ರೆಸ್ ನಲ್ಲಿ ಸುಮಾರು 9 ವರ್ಷಗಳ ಕಾಲ ಕೆಲಸ ಮಾಡಿ ಬಂದಿದ್ದೇನೆ. ಅಲ್ಲಿ ಉತ್ತಮ ಕೆಲಸ ಮಾಡಿದವರನ್ನು ಗುರುತಿಸುತ್ತಾರೆ. ಅವರು ರಾಷ್ಟ್ರಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ನಾನು ಯುವ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದರಿಂದಲೇ ಇಂದು ನನಗೆ ನಗರಸಭೆಯ ಮತ್ತು ಇತರ ಅಧಿಕಾರಗಳು ದೊರಕಿವೆ. ಆದ್ದರಿಂದ ಉತ್ತಮ ಕೆಲಸ ಮಾಡಿ, ನಿಮ್ಮ ನಿಮ್ಮ ನಗರ ಮತ್ತು ನಿಮ್ಮ ಬೀದಿ, ಗ್ರಾಮಗಳಲ್ಲಿ ನೀವು ಗುರುತಿಸಿಕೊಂಡರೆ ನಾಯಕರಾಗಿ ಬೆಳೆಯಲು ಸಾಧ್ಯ” ಎಂದು ಸಲಹೆ ನೀಡಿದರು.
ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಮಾತನಾಡಿ, ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಪಕ್ಷಕ್ಕಾಗಿ ಯುವ ಕಾಂಗ್ರೆಸ್ ನಲ್ಲಿ ದುಡಿಯಬೇಕು. ಎಲ್ಲ ಪದಾಧಿಕಾರಿಗಳು ಕಾರ್ಯಕರ್ತರು ಕುಳಿತು ಬಗೆಹರಿಸಿಕೊಂಡು ಮುನ್ನಡೆಯಬೇಕು. ಯುವ ಕಾಂಗ್ರೆಸ್ ನಲ್ಲಿ ದುಡಿದಿದ್ದರಿಂದಲೇ ನಾವು ಇಂದು ಉತ್ತಮ ಸ್ಥಾನಮಾನಗಳನ್ನು ಪಡೆದು ಇಂದು ಇಲ್ಲಿ ನಿಂತಿರುವುದು. ಹಳಬರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ರಾಜ್ಯ ಪದಾಧಿಕಾರಿಗಳಾದ ಬಾಹುಬಲಿ ಜೈನ್, ಜಿಲ್ಲಾ ಅಧ್ಯಕ್ಷ ವರುಣ್ ಬೆಣ್ಣಿಹಳ್ಳಿ, ನಿಖಿಲ್ ಕೊಂಡಜ್ಜಿ, ಜಿಲ್ಲಾ ಕಾರ್ಯದರ್ಶಿ ತಾಹಿರ್, ಜವಾಹರ್ ಬಾಲ್ ಮಂಚ್ ನಾ ಮೈನುದ್ದೀನ್ , ಲಿಯಾಖತ್ ಅಲಿ ಸೇರಿದಂತೆ ಬ್ಲಾಕ್ ಅಧ್ಯಕ್ಷರು, ಅಸೆಂಬ್ಲಿ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.