ದಾವಣಗೆರೆ : ವಿದ್ಯಾರ್ಥಿಗಳು ತಮ್ಮ ಉತ್ತಮ ಶೈಕ್ಷಣಿಕ ಅಂಕಪಟ್ಟಿಯ ಜೊತೆಗೆ ಪಠ್ಯೇತರ ಚಟವಟಕೆಗಳಲ್ಲಿ ಭಾಗವಹಿಸಿದ್ದೇ ಆದರೆ ಅಂತಹ ವಿದ್ಯಾರ್ಥಿಗಳಿಗೆ ಕೈಗಾರಿಕಾ ವಲಯಗಳಲ್ಲಿ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಗ್ರಾಸಿಮ್ ಇಂಡಸ್ಟ್ರಿ ಲಿಮಿಟೆಡ್ ಕಂಪನಿಯ ಉತ್ಪಾದನಾ ವಲಯದ ಜನರಲ್ ಮ್ಯಾನೇಜರ್ ಡಿ. ಬದ್ರಿನಾಥ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ನಡೆದ ಡಿಪ್ಲೋಮೋ ಮೊದಲ ವರ್ಷ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಒಂದು ವಾರದ ಇಂಡಕ್ಷನ್ ಪ್ರೋಗ್ರಾಮ್ ಉದ್ಘಾಟಿಸಿ ಮಾತನಾಡಿದರು.
ಅನೇಕ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಉದ್ಯೋಗಗಳನ್ನು ಅಲಂಕರಿಸಿದ್ದಾರೆ. ಯಾವುದಕ್ಕೂ ಹಿಂಜರಿಯದೆ ಸಾಧನೆಗೆ ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಬೇಕೆಂದು ಕರೆ ಕೊಟ್ಟರು.
ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಮತ್ತು ಸಾಧನೆಗೆ ಎಲ್ಲಾ ತರಹದ ಸಹಕಾರವಿದ್ದು, ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವಂತೆ ಕರೆ ಕೊಟ್ಟರು.
ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ತೇಜಸ್ವಿ ಕಟ್ಟಿಮನಿ ಟಿ ಆರ್ ಮಾತನಾಡಿ, ಮುಂಬರುವ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮತ್ತು ಕಂಪನಿಗಳ ಬಗ್ಗೆ, ಕಂಪನಿಗಳ ಸಂದರ್ಶನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಎದುರಿಸುವ ಬಗ್ಗೆ ಮಾಹಿತಿಯನ್ನು ಕೊಟ್ಟರು.
ಜಿಎಂಐಟಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ ಬಿ ಆರ್ ಶ್ರೀಧರ್, ಎಲ್ಲಾ ಅತಿಥಿಗಳನ್ನು ಸ್ವಾಗತಿಸುವ ಮೂಲಕ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಅಲ್ಲದೆ ಇಂಡಕ್ಷನ್ ಕಾರ್ಯಕ್ರಮದ ಬಗ್ಗೆ ನೆರೆದಿದ್ದ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರುಗಳಿಗೆ ಮಾಹಿತಿಯನ್ನು ನೀಡಿದರು.
ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪಾರಿತೋಷಕ ಪದಕ ನೀಡುವುದರ ಮೂಲಕ ಗೌರವಿಸಲಾಯಿತು. ಮೊದಲನೇ ವರ್ಷಕ್ಕೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಿಟ್ ಈ ಸಂದರ್ಭದಲ್ಲಿ ವಿತರಿಸಲಾಯಿತು.
ಪ್ರಾರ್ಥನೆಯನ್ನು ಕುಮಾರಿ ಅನುಶ್ರೀ ಎಸ್ ಜಿ, ವಂದನಾರ್ಪಣೆಯನ್ನು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಪ್ರವೀಣ್ ಕುಮಾರ್ ಎಂ, ಇಂಡಕ್ಷನ್ ಕಾರ್ಯಕ್ರಮದ ಮಾಹಿತಿಯನ್ನು ಅಶೋಕ್ ಎಚ್ಎಸ್ ನೆರವೇರಿಸಿ ಕೊಟ್ಟರು.
ನಿರೂಪಣೆಯನ್ನು ಸಿವಿಲ್ ವಿಭಾಗದ ಮುಖ್ಯಸ್ಥರಾದ ನಿಂಗರಾಜು ಸಿ ಮತ್ತು ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕಿಯಾದ ಯಾಸ್ಮಿನ್ ಬೇಗಮ್ ನಡೆಸಿಕೊಟ್ಟರು.