ದಾವಣಗೆರೆ:
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹಾಳಾದ ರಸ್ತೆಗಳ ಅಭಿವೃದ್ಧಿ ಮತ್ತು ಶಾಲೆ, ಕಾಲೇಜು, ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಅಂದಾಜು 60 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಕ್ಷೇತ್ರದ ವ್ಯಾಪ್ತಿಯ ಕಂದಗಲ್ಲು ಗ್ರಾಮದಲ್ಲಿ ಶನಿವಾರ 50 ಲಕ್ಷ ರೂ. ವೆಚ್ಚದಲ್ಲಿ ಎರಡೂವರೆ ಕಿ.ಮೀ. ದೂರದ ಕಂದಗಲ್ಲು-ಬೆಳ್ಳಿಗನೋಡು ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದವು. ಅಲ್ಲದೇ ಶಾಲೆ, ಕಾಲೇಜು, ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಅಧಿವೇಶನದಲ್ಲಿ ಚರ್ಚಿಸಿ ಸಂಬಂಧಪಟ್ಟ ಸಚಿವರ ಗಮನ ಸೆಳೆಯಲಾಗಿತ್ತು.
ಅಲ್ಲದೇ ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗಿತ್ತು. ಈಗ ಕ್ಷೇತ್ರದ ವ್ಯಾಪ್ತಿಯ ಹಾಳಾದ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಡಿ 25 ಕೋಟಿ ರೂ., ಲೋಕೋಪಯೋಗಿ ಇಲಾಖೆಯಡಿ 20 ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರ ಮಂಜೂರಾತಿ ನೀಡಿದೆ ಎಂದು ತಿಳಿಸಿದರು.
ಅಲ್ಲದೇ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನ ಬಿಡುಗಡೆಯಾಗಿದ್ದು ಅಲ್ಪಸಂಖ್ಯಾತರ ಇಲಾಖೆಯಡಿ 5 ಕೋಟಿ ರೂ. ಅನುದಾನ ಸೇರಿ ಒಟ್ಟು ಕ್ಷೇತ್ರದ ಅಭಿವೃದ್ಧಿಗೆ 60 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿರುವುದರಿಂದ ವಿಶೇಷ ಗಮನ ಹರಿಸಿ ಈಗ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿದ್ದು, ಈಗಾಗಲೇ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಾಳಾದ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಒಮ್ಮೆ ಮಾಡಿದ ಕೆಲಸ ಶಾಶ್ವತವಾಗಿ ಉಳಿಯಬೇಕು. ಅದು ಸಾರ್ವಜನಿಕರ ಉಪಯೋಗ ಬರಬೇಕು. ಆದಾದಾಗ ಮಾತ್ರ ನಮಗೂ, ನಿಮಗೂ ಒಳ್ಳೆಯ ಹೆಸರು ಬರುತ್ತದೆ. ಇಲ್ಲದಿದ್ದರೆ ಸಾರ್ವಜನಿಕರಿಂದ ಹಿಡಿಶಾಪ ಹಾಕಿಸಿಕೊಳ್ಳಬೇಕಾಗುತ್ತದೆ. ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಕಳಪೆ ಕಾಮಗಾರಿ ಆಗಿದೆ ಎಂದು ದೂರುವ ಬದಲು ನೀವು, ಕೂಡ ಗುಣಮಟ್ಟ ಕಾಮಗಾರಿ ಆಗುವಂತೆ ಆಗಾಗ ಪರಿಶೀಲನೆ ನಡೆಸಬೇಕು. ಆಗ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟ ಕಾಮಗಾರಿ ನಡೆಸಲು ಸಾಧ್ಯವಾಗುತ್ತದೆ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಲ್ಯಾಂಡ್ ಆರ್ಮಿ ಇಂಜಿನಿಯರ್ ರೇಣುಕಪ್ಪ, ಇಂಜಿನಿಯರ್ ವಸಂತಕುಮಾರ್, ಹಾಲೇಶಣ್ಣ, ಗಂಗಜ್ಜ, ವೀರಾಚಾರಿ, ಚಂದ್ರಪ್ಪ, ಜಯಬಾಬಣ್ಣ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.