ಜಗಳೂರು :
ತಾಲೂಕಿನ ಉರುಲುಕಟ್ಟೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ಬಸವೇಶ್ವರ ಸ್ವಾಮಿಯ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಶ್ರೀ ಬಸವೇಶ್ವರ ಸ್ವಾಮಿಯ ಬಾವುಟ 2.10 ಲಕ್ಷಕ್ಕೆ ಹಾರಾಜು
ವಿವಿಧ ಪೂಜೆಗಳನ್ನು ಮಾಡಿದ ನಂತರ ಶ್ರೀ ಬಸವೇಶ್ವರ ಸ್ವಾಮಿಯ ಬಾವುಟ ಗ್ರಾಮದ ಮಡ್ರಳ್ಳಿಪುತ್ರ ರಾಜು ಎಂಬವರು 2 ಲಕ್ಷದ 10 ಸಾವಿರಕ್ಕೆ ಹರಾಜು ಆಗುತ್ತಿದ್ದಂತೆ ಸ್ವಾಮಿಯ ಘೋಷಣೆಯೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಆಗಮಿಸಿದ್ದ ಭಕ್ತರು ಹಣ್ಣು, ಕಾಯಿ ಸಮರ್ಪಣೆ ಮಾಡಿದರು.
ಸಡಗರ ಸಂಭ್ರಮ
ರಥೋತ್ಸವಕ್ಕೆ ದಾವಣಗೆರೆ, ಚಿತ್ರದುರ್ಗ , ವಿಜಯನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ರಥೋತ್ಸವ ಹಿನ್ನೆಲೆ ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಸಡಗರ ಸಂಭ್ರಮ ಮನೆ ಮಾಡಿತ್ತು. ಮುಖ್ಯ ರಸ್ತೆ, ಬೀದಿಗಳಲ್ಲಿ ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು.
ರಥೋತ್ಸವ ನಡೆದ ನಂತರ ಆಗಮಿಸಿದ ಪ್ರತಿಯೊಬ್ಬ ಭಕ್ತರು ಗುಡ್ಡದ ಮೇಲಿರುವ ಬಸವಣ್ಣದೇವರ ದರ್ಶನ ಮಾಡಿದರು.
ದಾವಣಗೆರೆ ಮಾಜಿ ಮೇಯರ್ ವೀರೇಶ್ , ಗ್ರಾಮದ ಮುಖಂಡರುಗಳು ಸೇರಿದಂತೆ ಗಣ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.