ಸ್ತನ ಕ್ಯಾನ್ಸರ್‌ನಲ್ಲೇ ಅಪಾಯಕಾರಿ HER2+: ಕ್ಯಾನ್ಸರ್ ಎಂಬುದಕ್ಕೆ ಹಲವು ಮುಖಗಳು. ಹಲವು ರೋಗಗಳ ಸಮೂಹವಾದ ಇದು, ಯಾವುದೇ ಒಂದು ಅಂಗದ ಮೇಲೆ ಪರಿಣಾಮ ಬೀರಿದರೂ, ಅದರ ಸ್ವರೂಪಗಳು ಹಲವು ಬಗೆಯದ್ದಾಗಿರುತ್ತದೆ ಮತ್ತು ಬಗೆಬಗೆಯ ಪರಿಣಾಮಗಳನ್ನು ಬೀರುತ್ತದೆ. ಜತೆಗೆ ಚಿಕಿತ್ಸೆಗಳಿಗೂ ಭಿನ್ನವಾಗಿಯೇ ಪ್ರತಿಕ್ರಿಯಿಸುವ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದಕ್ಕೆ ಸ್ತನ ಕ್ಯಾನ್ಸರ್ ಒಂದು ಸ್ಪಷ್ಟವಾದ ಉದಾಹರಣೆ.
ಸ್ತನ ಕ್ಯಾನ್ಸರ್‌ನಲ್ಲೂ ಹಲವು ಉಪವಿಧಗಳಿವೆ. ಅವುಗಳಲ್ಲಿ HER2+, ಟ್ರಿಪಲ್ ನೆಗೆಟಿವ್, ಲುಮಿನಲ್ A ಮತ್ತು B ಗಳೂ ಸೇರಿವೆ. ಇವುಗಳಲ್ಲಿ ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ನಡವಳಿಕೆ ಮತ್ತು ಚಿಕಿತ್ಸೆ ಹೊಂದಿವೆ. ಕಳೆದ ಕೆಲ ವರ್ಷಗಳಲ್ಲಿ ಬಹಳಷ್ಟು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಈ ಉಪವಿಧಗಳು ಪತ್ತೆಯಾಗಿರುವುದನ್ನು ನೋಡಿದ್ದೇನೆ. ಬಹಳಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಗೊತ್ತಿದೆ. ಅವುಗಳನ್ನು ತಾವೇ ಹೇಗೆ ಪರೀಕ್ಷಿಸಿಕೊಳ್ಳಬೇಕು ಎಂಬದೂ ತಿಳಿದಿದೆ. ಆದರೆ ಸ್ತನ ಕ್ಯಾನ್ಸರ್‌ನಲ್ಲೂ ಹಲವು ವಿಧಗಳಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಕ್ಯಾನ್ಸರ್ ಚಿಕಿತ್ಸೆಯ ಹಾದಿ ಸುಲಭದ್ದಾಗಿಲ್ಲ. ಈ ಪಯಣದಲ್ಲಿ ರೋಗಿ ಹಾಗೂ ಅವರನ್ನು ನೋಡಿಕೊಳ್ಳುವವರು ತೀವ್ರ ಕಷ್ಟಗಳನ್ನು ಎದುರಿಸುತ್ತಾರೆ. ಪ್ರತಿದಿನ, ಕ್ಯಾನ್ಸರ್ ಚಿಕಿತ್ಸೆಗಳು ರೋಗಿಗಳು ಮತ್ತು ಅವರ ಆರೈಕೆದಾರರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೇಗೆ ಕುಗ್ಗಿಸುತ್ತದೆ ಎಂಬುದನ್ನು ನಾನು ನೋಡಿದ್ದೇನೆ. ಸುತ್ತಲೂ ಕ್ಯಾನ್ಸರ್ ರೋಗಿಗಳಿಂದಲೇ ತುಂಬಿರುವ ಕೊಠಡಿಯಲ್ಲಿ ಕಳೆಯುವ ಸಮಯ, ಬದುಕುವ ಆಶಾಭಾವವನ್ನೇ ಕುಗ್ಗಿಸುತ್ತದೆ.

HER2+ ಸ್ತನ ಕ್ಯಾನ್ಸರ್
ಸ್ತನ ಕ್ಯಾನ್ಸರ್‌ನ ಉಪವಿಧಗಳಲ್ಲಿ HER2+ ಎಂಬುದು ಅತ್ಯಂತ ಆಕ್ರಮಣಕಾರಿ. HER2+ ಎಂದರೆ ಹ್ಯೂಮನ್ ಎಪಿಡರ್ಮಲ್ ಗ್ರೋಥ್ ಫ್ಯಾಕ್ಟರ್ ರೆಸೆಪ್ಟರ್ 2 ಎಂದು. ಪ್ರೊಟೀನ್ ಆಧಾರಿತ ಅಣುವಿಗೆ ಪ್ರತಿಕ್ರಿಯಿಸುವ ಜೀವಕೋಶವಾಗಿದೆ. ಹೀಗಾಗಿ ಇದು ಪದೇ ಪದೇ ಕಾಣಿಸಿಕೊಳ್ಳುವ ಹಾಗೂ ಬದುಕಿಗೇ ಸಂಚಕಾರ ತರವಂತ ಕ್ಯಾನ್ಸರ್ ಪ್ರಬೇಧವಾಗಿದೆ.
HER2+ ಎಂಬ ಸ್ತನ ಕ್ಯಾನ್ಸರ್ ಪ್ರಬೇಧದಿಂದ ಗೆಡ್ಡೆಯ ಗಾತ್ರವೂ ತ್ವರಿತವಾಗಿ ದೊಡ್ಡದಾಗುತ್ತದೆ. ಸ್ತನ ಕ್ಯಾನ್ಸರ್‌ನಲ್ಲಿ HER2 ಪ್ರೋಟೀನ್‌ನ ಹೆಚ್ಚುವರಿ ಉಪಸ್ಥಿತಿ ಇದೆಯೇ ಎಂದು ನಿರ್ಧರಿಸುವಲ್ಲಿ ಬಯೋಮಾರ್ಕರ್ ಪರೀಕ್ಷೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ನಿಖರ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.
ಕಳೆದ ಕೆಲ ವರ್ಷಗಳಲ್ಲಿ HER2+ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿರುವ ಸಂಖ್ಯೆಯನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಆದರೆ ಇದು ಆಕ್ರಮಣಕಾರಿ ಸ್ವಭಾವ ಇರುವುದರಿಂದ ನಿಯಮಿತವಾಗಿ ಸ್ವಯಂ ತಪಾಸಣೆ ಮಾಡಿಕೊಳ್ಳುವುದು ಉತ್ತಮ. ಇದರಿಂದ ಕ್ಯಾನ್ಸರ್‌ನ ಆರಂಭಿಕ ಹಂತದಲ್ಲೇ ಅದನ್ನು ಪತ್ತೆ ಮಾಡಿ, ಸಕಾಲಕ್ಕೆ ವೈದ್ಯಕೀಯ ಸಲಹೆ, ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡಲು ಸಹಕಾರಿ.
ಭಾರತದಲ್ಲಿ ಸದ್ಯ ಲಭ್ಯವಿರುವ ಚಿಕಿತ್ಸೆಗಳು
ಕೀಮೋಥೆರಪಿ ಸದ್ಯ ಭಾರತದಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಹಾಗೂ ನೀಡಲಾಗುತ್ತಿರುವ ಮೊದಲ ಹಂತದ ಚಿಕಿತ್ಸೆ. ಆದಾಗ್ಯೂ, ಕೀಮೋಥೆರಪಿಗಿಂತಲೂ ಪರಿಣಾಮಕಾರಿಯಾಗಿ ಹಾಗೂ ನಿಖರವಾಗಿ HER2+ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ನಡೆಸಿ, ಕೊಲ್ಲಬಲ್ಲ ಚಿಕಿತ್ಸೆಗಳೂ ಲಭ್ಯ ಇವೆ. ಕೀಮೋಥೆರಪಿ ಮತ್ತು ಇಂಥ ನಿಖರ ಚಿಕಿತ್ಸೆಗಳು ಉತ್ತಮ ಫಲಿತಾಂಶ ನೀಡಿದ ಸಾಕಷ್ಟು ಉದಾಹರಣೆಗಳಿವೆ. ಇದರಿಂದ HER2+ ಎಂಬ ಸ್ತನ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸಲು ಸಾಧ್ಯ. ಆದರೆ ಕೀಮೋಥೆರಪಿ ಒಂದನ್ನೇ ಪಡೆಯುವುದಕ್ಕಿಂತ, ಇಂಥ ಆಧುನಿಕ ಚಿಕಿತ್ಸೆ ಅತ್ಯುತ್ತಮ ಎಂಬುದು ಹಲವು ಪ್ರಕರಣಗಳಲ್ಲಿ ಸಾಭೀತಾಗಿದೆ.
ಆದರೆ, ಚರ್ಮದ ಕೆಳಭಾಗದಿಂದ ನೀಡುವ ಚುಚ್ಚುಮದ್ದು ಇಂದು ಹೊಸ ಭರವಸೆ ಮೂಡಿಸಿದೆ. ಕ್ಯಾನ್ಸರ್‌ಕಾರಕ ಕೋಶವನ್ನೇ ಗುರಿಯಾಗಿಸಿ ನೀಡುವ ಚಿಕಿತ್ಸೆಯು HER2+ ನಿವಾರಣೆಯಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಅದೂ ಕೆಲವೇ ನಿಮಿಷಗಳ ಕೆಲಸ ಇದಾಗಿದೆ. ಈ ಚಿಕಿತ್ಸೆ ಪಡೆದ ಸ್ತನ ಕ್ಯಾನ್ಸರ್ ರೋಗಿಗಳು ಗುಣಮುಖರಾಗಿ, ತಮಗಿಷ್ಟದ ಕೆಲಸವನ್ನು ಮಾಡಿಕೊಂಡಿದ್ದಾರೆ. ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಅವರು ಕ್ಯಾನ್ಸರ್ ರೋಗಿಗಳ ವಾರ್ಡ್‌ನಲ್ಲಿ ಕಳೆಯುವುದನ್ನು ತಪ್ಪಿಸಿಕೊಂಡಿದ್ದಾರೆ. ಹೊಸ ಚಿಕಿತ್ಸೆಯು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ಜತೆಗೆ ವೈದ್ಯರ ವಿಶ್ವಾಸವೂ ವೃದ್ಧಿಸಿದೆ.
ಭಾರತೀಯ ಮಹಿಳೆಯರಲ್ಲಿ HER2+ ಕ್ಯಾನ್ಸರ್ ಪ್ರಬೇಧವು ಏರುಮುಖವಾಗಿದೆ. ಆರಂಭಿಕ ಹಂತದಲ್ಲೇ ಇದರ ಪತ್ತೆ ಮತ್ತು ಸೂಕ್ತ ಚಿಕಿತ್ಸೆ ಪಡೆಯುವುದ ಅತ್ಯವಶ್ಯಕವಾಗಿದೆ. ಆಧುನಿಕ ಚುಚ್ಚುಮದ್ದು ಮೂಲಕ ರೋಗಿಗಳ ಒಟ್ಟಾರೆ ಬದುಕುಳಿಯುವ ಮತ್ತು ಜೀವನದ ಗುಣಮಟ್ಟದಲ್ಲಿ ತೀವ್ರ ಸುಧಾರಣೆ ತರಲು ಸಾಧ್ಯವಾಗುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ.
ಪ್ರತಿ ರೋಗಿಗೂ ಅವರಲ್ಲಿರುವ ಕ್ಯಾನ್ಸರ್ ಪ್ರಬೇಧ ಮತ್ತು ಗಾತ್ರದ ಆಧಾರದಲ್ಲಿ ಚಿಕಿತ್ಸೆಯನ್ನು ವೈಯಕ್ತಿಕಗೊಳಿಸಲು ಸಾಧ್ಯವಾಗಿದೆ. ಸೂಕ್ತ ಆರೈಕೆ ಮತ್ತು ರೋಗಿಯ ಚೇತರಿಕೆಯ ಫಲಿತಾಂಶಗಳ ಆಧಾರದಲ್ಲಿ ನಿರಂತರ ಗಮನ ಹರಿಸುವುದರಿಂದ ರೋಗಿಯ ಬದುಕುಳಿಯುವ ಸಾಧ್ಯತೆ ಹೆಚ್ಚಳವಾಗುವುದರ ಜತೆಗೆ, ಜೀವನದ ಗುಣಮಟ್ಟವನ್ನೂ ಸುಧಾರಿಸಲು ಸಾಧ್ಯ.
– ಡಾ. ನೀತಿ ರೈಜಾದಾ, ಪ್ರಧಾನ ನಿರ್ದೇಶಕಿ, ಕ್ಯಾನ್ಸರ್ ಚಿಕಿತ್ಸಾ ವಿಭಾಗ, ಫೋರ್ಟಿಸ್, ಬೆಂಗಳೂರು
