Kannada Story : ನಾಗಮ್ಮ ಹಾಗೂ ಗೋಪಾಲಯ್ಯನ ಇಬ್ಬರು ಮಕ್ಕಳಲ್ಲಿ ಹಿರಿಯವನು ಅನಂತು, ಇವನಿಗಿಂತ ಆರು ವರ್ಷ ಚಿಕ್ಕವನು ಮುರಾರಿ. ಗೋಪಾಲಯ್ಯನವರು ಒಂದು ಫ್ಯಾಕ್ಟರಿಯಲ್ಲಿ ಸೂಪರ್ವೈಸರ್ ಆಗಿದ್ದರು. ಹಾಗಾಗಿ ತಕ್ಕಮಟ್ಟಿನ ಆದಾಯ, ಬಾಡಿಗೆ ಮನೆ. ಓದಿನಲ್ಲಿ ಅನಂತ ತುಂಬಾ ಬುದ್ಧಿವಂತನೇ ಆಗಿದ್ದರು ಆರ್ಥಿಕ ಮುಗ್ಗಟ್ಟಿನಿಂದಾಗಿ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಅನ್ನುವಂತಹ ಕನಸನ್ನು ಮೊಟಕುಗೊಳಿಸಿ ಟಿಸಿಎಚ್ ಮಾಡಿ ಒಂದು ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆಗೆ ಸೇರಿದನು. ತಾನು ಕಂಡ ಕನಸನ್ನು ತನ್ನ ಪ್ರೀತಿಯ ತಮ್ಮನಾದ ಮುರಾರಿಯಾದರೂ ಪೂರ್ಣಗೊಳಿಸಲಿ ಎನ್ನುವ ಆಸೆಯಿಂದ ಬ್ಯಾಂಕಿನಿಂದ ಸಾಲ ಪಡೆದು ಮುರಾರಿಯನ್ನು ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದರು. ಇದರಿಂದಾಗಿ ನಾಗಮ್ಮ ಹಾಗೂ ಗೋಪಾಲಯ್ಯನವರಿಗೆ ಹೆಮ್ಮ ಜೊತೆಗೆ ಸಂತೋಷಕ್ಕೆ ಪಾರವೇ ಇರಲಿಲ್ಲ.
ತರುವಾಯ ಅನಂತನಿಗೆ ಜೀವನ ಸಂಗಾತಿಯಾಗಿ ಬಂದವಳು ಅನಸೂಯ. ಅವಳು ಒಂದು ಪ್ರೈವೇಟ್ ಸ್ಕೂಲಿನಲ್ಲಿ ಪ್ರೈಮರಿ ಶಾಲಾ ಶಿಕ್ಷಕಿ ಆಗಿದ್ದರಿಂದ ಮಗನಿಗೆ ಹೊಂದಾಣಿಕೆಯಾಗುತ್ತಾಳೆ ಎಂದು ತಿಳಿದು ಅನಂತನಿಗೆ ಮದುವೆ ಮಾಡಿ ಕೊಂಡರು. ಅನಸೂಯ ತವರಿನವರು ಕೂಡ ಮಧ್ಯಮ ವರ್ಗದವರೇ ಆಗಿದ್ದರಿಂದ ತಕ್ಕಮಟ್ಟಿಗೆ ಸಂತೋಷವಾಗಿ ಮದುವೆ ಮಾಡಿಕೊಟ್ಟರು. ಅನುಸೂಯಾಳಿಗೆ ಇನ್ನು ಹೈ ಸ್ಕೂಲ್ ಓದುತ್ತಿದ್ದ ತಂಗಿಯೂ ಇದ್ದಿದ್ದರಿಂದ ಮನೆಯವರು ಸ್ವಲ್ಪ ಕೈಹಿಡಿದು ಖರ್ಚು ಮಾಡಿ ಮದುವೆಯನ್ನ ಮಾಡಿಕೊಟ್ಟರು.
ತಮ್ಮನ ಓದಿಗಾಗಿ ಮಾಡಿದ ಸಾಲ, ತನ್ನ ಮದುವೆಗಾಗಿ ತೆಗೆದುಕೊಂಡ ಸಾಲ.. ಎಲ್ಲವುದನ್ನು ತೀರಿಸಲು ಅನಂತನಿಗೆ ಹೆಂಡತಿ ಅನಸೂಯ ಕೂಡ ಕೈಜೋಡಿಸಿದಳು. ಜೀವನದ ಖುಷಿಗೆ ವರ್ಷದ ಬಳಿಕ ಹುಟ್ಟಿದ ಗಂಡು ಮಗು ಆನಂದ .
ಮುರಾರಿ ಇಂಜಿನಿಯರಿಂಗ್ ಮುಗಿಸಿ, ಬೆಂಗಳೂರಿನಲ್ಲಿ ಒಳ್ಳೆ ಕಂಪನಿ ಕೆಲಸಕ್ಕೆ ಸೇರಿದ. ಕೆಲವು ವರುಷಗಳ ಸಂಪಾದನೆಯ ನಂತರ ಮುರಾರಿಗೆ ಹೆಣ್ಣು ಹುಡುಕುವ ಸಮಯ ಬಂದಾಗ ನಾಗಮ್ಮನವರು ಪಟ್ಟು ಹಿಡಿದರು, “ನಮ್ಮ ಮಗ ಇಂಜಿನಿಯರ್ ಆಗಿದ್ದಾನೆ, ಅವನಿಗೆ ತಕ್ಕ ಹಾಗೆ ದೊಡ್ಡ ಮನೆಯ ಹುಡುಗಿಯನ್ನೇ ತರಬೇಕು, ಒಳ್ಳೆಯ ಸ್ಥಿತಿವಂತರಾಗಿರಬೇಕು” ಎಂದು. ಇಂತಹ ಹುಡುಕಾಟದಲ್ಲಿ ಸಿಕ್ಕ ವಧು ಮಮತಾ.
ಹುಡುಗಿಯ ತಂದೆ ಶಂಕರಯ್ಯನವರು ಸರಕಾರಿ ಕಚೇರಿಯಲ್ಲಿ ಕೆಲಸಕ್ಕೆ ಇದ್ದರು. ಅವರ ತಂದೆ ಒಂದಾನೊಂದು ಕಾಲದಲ್ಲಿ ಜೋಡಿ ಜಮೀನುದಾರರಾಗಿದ್ದರು. ಹೀಗಾಗಿ ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯಾಗಿ ಹೊಲಾಗದ್ದೆ, ಬೆಳ್ಳಿ ಚಿನ್ನದ ಒಡವೆಗಳು ಸಾಕಷ್ಟು ಇತ್ತು. ಶಂಕರಯ್ಯ ನವರ ಹಿರಿಯ ಅಳಿಯ ಡಾಕ್ಟರ್ ಆಗಿದ್ದ. ಹಾಗಾಗಿ ಅತ್ಯಂತ ಮುದ್ದಿನ ಮಗಳು ಮತಾಳಿಗೆ ಇಂಜಿನಿಯರ್ ಅಥವಾ ಡಾಕ್ಟರ್ ಹುಡುಗನನ್ನೇ ಹುಡುಕುತ್ತಿದ್ದರು. ಇಂತಹ ಸಂದರ್ಭದಲ್ಲಿ ಗೆಳೆಯನ ಮೂಲಕ ತಿಳಿದು ಬಂದಂತಹ ಸಂಬಂಧವೇ ಇಂಜಿನಿಯರ್ ಮುರಾರಿ. ಮಮತಾ ಎಂ ಎಸ್ಸಿ ಮಾಡಿಕೊಂಡಿದ್ದಳು, ತಮ್ಮ ಆಸೆಯಂತೆ ಇಂಜಿನಿಯರ್ ಹುಡುಗ ಸಿಕ್ಕಾಗ ಮದುವೆಗೆ ನೀರಿನಂತೆ ಹಣ ಖರ್ಚು ಮಾಡಲು ಸಿದ್ಧರಾದರು.
ಮತ್ತೊಮ್ಮೆ ನಾಗಮ್ಮ ಗೋಪಾಲಯ್ಯನವರು ಹಿರಿಯ ಮಗನನ್ನು ಕರೆದು ಹೇಳಿದರು.. ಅಲ್ಲಾ ಕಣೋ ಅನಂತು, ದೊಡ್ಡ ಮನೆಯ ಸಂಬಂಧ ಸಿಕ್ಕಿದೆ, ನಾವು ಅವರಿಗೆ ತಕ್ಕಹಾಗೆ ಉಪಚಾರ ಮಾಡದಿದ್ದರೆ ಆಗುತ್ತದೆಯೇ? ಮದುವೆ ಖರ್ಚನ್ನೆಲ್ಲ ಹೇಗೂ ನಿಭಾಯಿಸುವುದು? ಎಂದರು. ಅನಂತು ಸಮಾಧಾನವಾಗಿ ಹೇಳಿದ” ನಾನು ಅನುಸೂಯ ಇದೀವಲ್ಲ, ಹೇಗೋ ಆಗುತ್ತೆ, ಯೋಚನೆ ಮಾಡಬೇಡ ಬಿಡಮ್ಮ, ಎಲ್ಲವನ್ನು ನಾವು ನೋಡಿಕೊಳ್ಳುತ್ತೇವೆ”. ಮದುವೆ ಎಂದರೆ ಗಂಡಿನ ಮನೆಯವರಿಗೂ ಸಾಕಷ್ಟು ಖರ್ಚು ಇದ್ದೇ ಇರುತ್ತದೆ.
ದೊಡ್ಡ ಮನೆಯ ಹುಡುಗಿ ಎಂದ ಮೇಲೆ ಭಾರಿ ರೇಷ್ಮೆ ಸೀರೆಗಳು, ಮಾಂಗಲ್ಯದ ಸರ, ಬೀಗರೂಟ ಹೀಗೆಲ್ಲಾ ಯೋಚಿಸಿ ಮತ್ತೊಮ್ಮೆ ಸಾಲ ಮಾಡಿ ಮದುವೆಯನ್ನ ನಡೆಸಿದರು. ಗೋಪಾಲಯ್ಯನವರು ಫ್ಯಾಕ್ಟರಿಯಿಂದ ನಿವೃತ್ತಿ ಆದಾಗ ಬಂದಿದ್ದ ಅಲ್ಪ ಸ್ವಲ್ಪ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದ್ದರು. ಈಗ ಭಾರಿ ಮದುವೆಗೆ ಖರ್ಚು ಮಾಡಲು ತೆಗೆದುಕೊಟ್ಟರು.. ಭಾರಿ ಶ್ರೀಮಂತರಾಗಿದ್ದ ಶಂಕರಯ್ಯನವರು ಮುದ್ದಿನ ಮಗಳು ಮಮತಾಳಿಗೆ ಅವರು ತಂದೆ ಕಾಲದಿಂದ ಬಂದಿದ್ದಂತಹ ಸಾಕಷ್ಟು ಬೆಳ್ಳಿ ಪಾತ್ರೆಗಳೊಂದಿಗೆ ಎಂಟು ಚಿನ್ನದ ಬಳೆಗಳನ್ನು, ಸರ, ನಕ್ಲೇಸ್ ಸಾಕಷ್ಟು ಒಡವೆಗಳನ್ನು ಹಾಕಿದರು. ಇದನ್ನು ಕಂಡ ನಾಗಮ್ಮನ ಖುಷಿಗೆ ಮಿತಿಯೇ ಇರಲಿಲ್ಲ.
ಇಷ್ಟೊಂದು ಚಿನ್ನದ ಬಳೆಗಳನ್ನು ಕಂಡ ನಾಗಮ್ಮನವರ ಮತಿ ಬ್ರಮಣೆಯಾದಂತಾಗಿ ಇದ್ದಕ್ಕಿದ್ದಂತೆ ಅವರ ನಡುವಳಿಕೆಯೇ ಬದಲಾಯಿತು. ಮದುವೆ ಮುಗಿಸಿ ಮನೆಗೆ ಬಂದ ಘಳಿಗೆಯಿಂದ ಬಂದವರೆಲ್ಲರ ಎದುರು ಮಮತಾಳನ್ನು ಹಾಗೂ ಮದುವೆ ವೈಖರಿಯನ್ನು ಹೊಗಳಿದ್ದೇ ಹೊಗಳಿದ್ದು. ನಮ್ಮ ಮನೆಯ ಭಾಗ್ಯದ ಲಕ್ಷ್ಮಿ ಎನ್ನುತ್ತಿದ್ದರು. ಬಂದವರಿಗೆಲ್ಲ ಕಾಫಿ ತಿಂಡಿ ಅನುಸೂಯ ಮಾಡಿದರೆ ಅದನ್ನು ತಂದು ಕೊಡುವ ಕೆಲಸ ಕೈತುಂಬಾ ಚಿನ್ನದ ಬಳೆಗಳನ್ನು ಹಾಕಿದ ಮಮತಾಳದ್ದು. ಮನೆಗೆ ಬಂದವರು ಎಲ್ಲಿ ಸೊಸೆಯ ಬಳೆಗಳನ್ನು ಗಮನಿಸುವುದಿಲ್ಲವೋ ಎಂದು ನಾಗಮ್ಮನವರು “ಮಮತಾ ಬಳೆಗಳನ್ನು ಹಿಂದೆ ಮಾಡಿಕೊಳ್ಳಮ್ಮ” ಅಂತಲೋ ಅಥವಾ ಇನ್ನು ಎರಡು ಬಳೆ ಇದೆಯಲ್ಲಾ ಅವನ್ನು ಏಕೆ ಬಿಚ್ಚಿಟ್ಟಿದ್ದೀಯಾ? ಎಂದು ಕೇಳುತ್ತಿದ್ದರು. ಚಿನ್ನದ ಬಳೆಗಳನ್ನು ಧರಿಸಿದ ಮಮತಾ ಮನೆಯಲ್ಲಿ ಯಾವ ಕೆಲಸವನ್ನೂ ಮಾಡುವಂತಿರಲಿಲ್ಲ… ಏಕೆಂದರೆ ಬಳೆಗಳ ಹೊಳಪು ಎಲ್ಲಿ ಕಡಿಮೆಯಾಗಿ ಬಿಡುತ್ತದೆ ಎನ್ನುವ ಭಯ ನಾಗಮ್ಮನವರಿಗೆ.
ಅದು ಅಲ್ಲದೆ ದೊಡ್ಡ ಮನೆಯ ಹುಡುಗಿ ಕೆಲಸ ಮಾಡಿ ಅಭ್ಯಾಸವಿರುತ್ತದೆಯೇ? ಕೆಲಸ ಮಾಡುವಾಗ ಏನಾದರೂ ಬಳೆಗಳು ಡೊಂಕಾದರೆ ಎನ್ನುವ ಭೀತಿ ಮತ್ತೊಂದೆಡೆ.
ಆದರೆ ಕೈತುಂಬಾ ಗಾಜಿನ ಬಳೆಯನ್ನು ಧರಿಸಿರುತ್ತಿದ್ದ ಅನುಸೂಯಾಳಿಗೆ ಇದ್ಯಾವುದೋ ಅನ್ವಯವಾಗಲಿಲ್ಲ…ತಲೆಗೆ ಎಣ್ಣೆ ಹಚ್ಚಲೆಂದು ಮಮತಾ ಎಣ್ಣೆ ಬಟ್ಟಲು ಹಿಡಿದು ಕೂತರೆ, ಬಾರಮ್ಮ ಮಮತಾ ನಾನೇ ಹಚ್ಚುತ್ತೇನೆ.. ಬಳೆಗಳಿಗೆ ಎಣ್ಣೆ ಬಿದ್ದರೆ ಮಣಕಾಗುವುದು, ಎಂದು ಸೊಸೆಯ ತಲೆಗೆ ತಾವೇ ಎಣ್ಣೆ ಮಸಾಜ್ ಮಾಡಿಕೊಡುತ್ತಿದ್ದರು.
ಅಂತೂ ಸದಾ ಕಾಲ ನಾಗಮ್ಮನವರಿಗೆ ಚಿನ್ನದ ಬಳೆಗಳದೇ ಚಿಂತೆಯಾಯಿತು. ಇಷ್ಟು ಸಾಲದ್ದಕ್ಕೆ ಮನೆಗೆ ಬಂದವರೆದುರಿಗೆ ಏನಂತೀರಿ ನೀವು..ಹಲವು ಜನ್ಮದ ಪುಣ್ಯ ಮಾಡಿದ್ದರೇನೇ ಇಷ್ಟೊಂದು ಚಿನ್ನ ಬಳೆ ಹಾಕಿಕೊಳ್ಳುವ ಅದೃಷ್ಟ ಸಿಗುವುದು.
ಆ ಅದೃಷ್ಟ ನಮ್ಮ ಮಮತಾ ಮಾಡಿದ್ದಾಳೆಕಣ್ರೀ..ಎನ್ನುವ ಮಾತು ಕಾಲಕ್ರಮೇಣ ಅನುಸೂಯಗಳಿಗೆ ಪ್ರತಿ ಬಾರಿ ತನ್ನನ್ನು ಹಂಗಿಸಿ ಅಣಕಿಸಿದಂತೆ ಅನಿಸ ತೊಡಗಿತ್ತು. ತನ್ನ ಬಳಿ ಚಿನ್ನದ ಬಳೆಗಳಿಲ್ಲವಲ್ಲ ಅದಕ್ಕ ಈ ತಾರತಮ್ಯ ಎಂದುಕೊಂಡು ಎಲ್ಲವನ್ನು ಸಹಿಸಿಕೊಂಡು ಸುಮ್ಮನಾದಳು.
ಮುರಾರಿ ಕೆಲಸಕ್ಕೆ ಬೆಂಗಳೂರಿನಲ್ಲಿ ಇದ್ದಿದ್ದರಿಂದ ಅವರು ಸಂಸಾರ ಅಲ್ಲಿಯೇ ಹೂಡಿದರು. ವರ್ಷದಲ್ಲೇ ಹೊಸ ಮನೆಯನ್ನು ಖರೀದಿಸಿದ ವಿಷಯ ತಿಳಿದು ನಾಗಮ್ಮ ಗೋಪಾಲಯ್ಯನವರಿಗೆ ಮತ್ತೊಂದು ಕೋಡು ಬಂದಂತಾಯಿತು. ಆದರೆ ಅನಂತ ಹಾಗೂ ಅನಸೂಯ ಮನಸ್ಸಿನಲ್ಲೆ ಯೋಚಿಸಿದರು,ಓದು, ಮದುವೆಗೆಂದು ಇಷ್ಟೊಂದು ಸಾಲ ಮಾಡಿದ್ದೆವು. ಸ್ವಲ್ಪ ಸಹಾಯ ಮಾಡಿದ್ದರೆ ಎಷ್ಟು ಸಹಾಯವಾಗುತ್ತಿತ್ತು ಅಲ್ವಾ ಅನಿಸಿತು. ಆದರೆ ಮಾತನಾಡಲಿಲ್ಲ. ಎರಡನೇ ವರ್ಷಕ್ಕೆ ಮಮತಾಳಿಗೆ ಒಂದು ಹೆಣ್ಣು ಮಗು ಜನಿಸಿತು. ಮತ್ತೊಮ್ಮೆ ನಾಗಮ್ಮನವರು ರಾಗಾ ಪಾಡಿದರು…
ಅನಂತು, ನಮ್ಮ ಮನೆಗೆ ಹೆಣ್ಣು ಮಗು ಲಕ್ಷ್ಮಿ ತರ ಬಂದಿದ್ದಾಳೆ ಕಣೋ, ಬೀಗರು ಭಾರಿ ನಾಮಕರಣ ಇಟ್ಟುಕೊಂಡಿದ್ದಾರೆ, ನಾವು ಮಗುವಿನ ಕೈಗೆ ಒಂದು ಜೊತೆ ಬಳೆಯನ್ನು ಹಾಕಬೇಕು ಅನ್ನುವುದು ನನ್ನ ಆಸೆ, ಬೀಗರ ಎದುರು ನಮ್ಮ ಮರ್ಯಾದೆ ಉಳಿಯುವುದು ಬೇಡವೇ.. ಹೇಗಾದರೂ ದುಡ್ಡು ಹೊಂದಿಸು.. ಎಂದಾಗ ,ಏನಮ್ಮ? ಈಗಲೇ ಸಾಕಷ್ಟು ಸಾಲ ನನ್ನ ತಲೆಯ ಮೇಲಿದೆ, ಮತ್ತೆಲ್ಲಿಂದ ತರಲಿ ಬಳೆಗಳನ್ನ? ಎಂದು ಪೇಚಾಡಿದ ಅನಂತ. ನೀನು ಮೇಷ್ಟ್ರಾಗಿದಿಯಾ, ನಾಲ್ಕಾರು ಮಕ್ಕಳಿಗೆ ಪಾಠ ಮಾಡ್ತೀಯಾ, ತಾಯಿ ಮನಸ್ಸನ್ನು ನೋಯಿಸಬಾರದು ಅನ್ನುವಷ್ಟು ಗೊತ್ತಿಲ್ವಾ? ಎಂದು ಬೇಸರಿಸಿಕೊಂಡು ಎದ್ದು ರೂಮಿಗೆ ನಡೆದರು. ರಾತ್ರಿ ಎಷ್ಟೊತ್ತಾದರೂ ಅನಂತು ಮಲಗದಿದ್ದನ್ನು ಕಂಡು ಅನುಸೂಯ ಕೇಳಿದಳು. ಯಾಕ್ರೀ ಬೆಳಗ್ಗೆಯಿಂದ ಏನೋ ಬೇಸರದಲ್ಲಿ ಇದ್ದೀರಾ.. ಏನಾಯ್ತು? ಎಂದಾಗ ಹೇಗಪ್ಪಾ ಹೇಳುವುದು ಅಂತ ಯೋಚಿಸಿ ಬೆಳಗ್ಗೆ ನಡೆದ ವಿಷಯವನ್ನು ಹೆಂಡತಿಯ ಬಳಿ ಹೇಳಿದ. ವಿಷಯ ಕೇಳಿ ನಕ್ಕು..
ಅದಕ್ಕಂತಲೇ ಗಾದೆ ಮಾಡಿರುವುದು, ಮನೆಗೆ ಹಿರಿಮಗನಾಗಬೇಡ, ಹಿತ್ತಲ ಬಾಗಲಾಗಬೇಡ ಎಂದು ಹೇಳುತ್ತಾ, ಬೇಸರವಾದರೂ ಸಹ ಗಂಡ ಬೇಜಾರಿರುವುದನ್ನು ನೋಡಲು ಆಗಲಿಲ್ಲ. ಇರಲಿ ಬಿಡಿ, ನಾನು ಒಂದು ಚೀಟಿ ಹಾಕಿದ್ದೆ ಒಂದು ಜೊತೆ ಬಳೆ ಮಾಡಿಸಿಕೊಳ್ಳೋಣ ಅಂತ… ಇರಲಿ ಮುರಾರಿ ಮಗು ನಮ್ಮ ಮನೆ ಮಗುನೇ ಅಲ್ಲವಾ? ನೀವು ಚಿಂತಿಸಬೇಡಿ, ಆ ದುಡ್ಡಿನಲ್ಲಿ ಮಗುವಿಗೆ ಒಂದು ಜೊತೆ ಬಳೆ ತನ್ನಿ ಎಂದು ಹೇಳಿದಾಗ ಅನಂತನಿಗೆ ಏನು ಹೇಳಬೇಕೆಂದು ತೋಚಲಿಲ್ಲ.
ಮಾರನೆಯ ದಿನ ಶಾಲೆಯಲ್ಲಿ ಅನಸೂಯಾಳ ಆಪ್ತ ಗೆಳತಿ ಸೌಮ್ಯ ಳಿಗೆ ಈ ವಿಷಯ ಗೊತ್ತಾಗಿ ಕೋಪಗೊಂಡು ಬುದ್ಧಿ ಹೇಳಿದಳು..” ಅಲ್ಲ ಕಣೆ ಅನು, ಇನ್ನು ಎಷ್ಟು ವರ್ಷ ಅಂತ ಹೀಗೆ ಬಾಯಿಗೆ ಬೀಗ ಹಾಕಿ, ಇವೆಲ್ಲವನ್ನು ಸಹಿಸಿಕೊಂಡು ಇರ್ತಿಯ? ಇದೆಲ್ಲಾ ಆಗೋದಿಲ್ಲ.. ಅಂತ ಬೇರೆ ಹೋಗಬಾರದಾ? ನಿಮ್ಮ ಮಗನೂ ದೊಡ್ಡವನಾಗುತ್ತಿದ್ದಾನೆ ಅವನ ವಿದ್ಯಾಭ್ಯಾಸಕ್ಕೂ ಮುಂದೆ ದುಡ್ಡಿರಬೇಕು, ಆವಾಗ ನಿನಗೆ ಬಳೆ ಮಾಡಿಸಿಕೊಳ್ಳಲು ಆಗುತ್ತದೆಯೇ?ಅಂದಾಗ, ಅದು ಹಾಗಲ್ಲವೇ ಸೌಮ್ಯ, ನಾನು ಹಾಗೂ ಅನಂತು ಬಡತನದಲ್ಲೇ ಬೆಳೆದೆವು, ಈ ಬವಣೆಗಳು ನಮಗೆ ಹೊಸದೇನಲ್ಲ, ಚಿನ್ನದ ಬಳೆ ಅನ್ನುವುದು ಕೇವಲ ಒಂದು ವಸ್ತು ಕಣೆ, ಅದಕ್ಕಾಗಿ ನಾನು ನನ್ನ ಗಂಡನ ಮನಸ್ಸನ್ನು ನೋಯಿಸಲಾರೆ, ಅದು ಅಲ್ಲದೆ ಅನಂತ ಬಹಳ ಮುಗ್ಧ, ಸಹೃದಯಿ, ಅವರದಲ್ಲದ ತಪ್ಪಿಗೆ ನಾನೇಕೆ ಅವರ ಮನಸ್ಸನ್ನು ನೋಯಿಸಲಿ? ಎಂದಾಗ ಕೋಪದಲ್ಲಿದ್ದ ಸೌಮ್ಯ ಶಾಂತಳಾಗಿ ಕೈಮುಗಿದು ಬಿಟ್ಟಳು.
ಹೀಗೆ ಹಲವಾರು ವರ್ಷಗಳು ಕಳೆದರೂ ನಾಗಮ್ಮ ದಂಪತಿಗಳಿಗೆ ಕಿರಿ ಮಗ ಸೊಸೆಯ ಮೇಲಿನ ವ್ಯಾಮೋಹ ಹಾಗೂ ಗರ್ವ ಹೆಚ್ಚುತಲೆ ಹೋಯಿತು. ನಾಗಮ್ಮ ಗೋಪಾಲಯ್ಯ ಕಿರಿ ಮಗನ ಮನೆಯಲ್ಲಿ ಒಂದು ತಿಂಗಳಿದ್ದು ಬರೋಣ ವೆಂದು ಹೊರಟರು. ಮನೆ ಸೇರುವ ಹೊತ್ತಿಗೆ ಸಂಜೆಯಾಗಿತ್ತು. ಬಹಳ ಆಯಾಸವು, ಹಸಿವು ಆಗಿದ್ದರಿಂದ ಕಂಗೆಟ್ಟಂತಾಗಿತ್ತು.
ಸೊಸೆ ನಾವು ಬರುವ ಸುದ್ದಿ ಕೇಳಿ ಹಬ್ಬದ ಅಡಿಗೆ ಮಾಡಿರುತ್ತಾಳೆ, ತಟ್ಟೆ ಇಟ್ಟು ಹಪ್ಪಳ ಸಂಡಿಗೆ ಪಾಯಸವನ್ನು ಚಿನ್ನದ ಬಳೆಗಳ ಕೈಗಳಿಂದ ಹೇಗೆಲ್ಲಾ ಬಡಿಸಬಹುದೆಂದು ದಾರಿ ಉದ್ದಕ್ಕೂ ಯೋಚಿಸಿಕೊಂಡು ಹೋಗಿದ್ದರು, ಆದರೆ ಅಲ್ಲಿ ಆಗಿದ್ದೆ ಬೇರೆ…ಹಿಂದಿನ ದಿನ ಉಳಿದಿದ್ದ ಹಿಟ್ಟಿನಿಂದ ದೋಸೆಯನ್ನು ಮಾಡಿಕೊಟ್ಟಳು, ಏಕೋ ಹುಳಿ ಹುಳಿಯಾದ ದೋಸೆ ಗಂಟಲಲ್ಲಿ ಇಳಿಯದಾಯಿತು. ಆದರೂ ವಿಧಿ ಇಲ್ಲದೆ ಅದನ್ನೇ ಸಂತೋಷವಾಗಿ ತಿಂದರು. ಚಿನ್ನು (ಮಗಳು) ರಾತ್ರಿ ಪಿಜ್ಜಾ ಬೇಕು ಅಂತ ಹಠ ಮಾಡುತ್ತಿದ್ದಾಳೆ, ನೀವು ಅದನ್ನೆಲ್ಲ ತಿನ್ನುವುದಿಲ್ಲ ಅಲ್ಲವೇ? ಎಂದಳು ಮಮತಾ. ನಮಗೆ ಬೇಡಮ್ಮ, ಈಗ ತಿಂದ ದೋಸೆಯೆ ಸಾಕಾಗಿದೆ ಎಂದರು. ಸರಿ ಹಾಗಿದ್ದರೆ ನಾವು ಮೂವರು ಹೊರಗೆ ಹೋಗಿ ತಿಂದು, ಲೇಟಾಗಿ ಬರುತ್ತೇವೆ. ನೀವು ಸುಧಾರಿಸಿಕೊಳ್ಳಿ. ಏಕೆಂದರೆ ಮತ್ತೆ ಬೆಳಗ್ಗೆ ಎದ್ದು ಹೊರಡಬೇಕಲ್ಲವೇ ಅಂದಳು..
ನಾಗಮ್ಮ ಗಾಬರಿಯಾಗಿ ನೋಡಿದರು ಮಮತಾ ಮುಂದುವರಿಸಿದಳು ನಾವು ನಾಳೆ ಗೋವಾ ಗೆ ಟೂರ್ ಹೊರಟಿದ್ದೇವೆ ಬರುವುದು 3-4 ದಿನವಾಗುತ್ತದೆ, ನಿಮ್ಮಿಬ್ಬರಿಗೆ ಇಲ್ಲಿ ಇದ್ದು ಮ್ಯಾನೇಜ್ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಅಲ್ಲವೇ ಅದಕ್ಕೆ ಎಂದಳು. ಒಂದು ತಿಂಗಳಿದ್ದು ಯುಗಾದಿ ಹಬ್ಬಕ್ಕೆ ಜೊತೆಯಲ್ಲೇ ತಮ್ಮೂರಿಗೆ ಹೋಗುವುದಾಗಿ ಯೋಚಿಸಿ ಬಂದಿದ್ದರು ಇಬ್ಬರು. ಆದರೆ ಅದನ್ನು ಹೇಳದೆ ಮಾರನೆಯ ದಿನ ಹೊರಡುವ ಅನಿವಾರ್ಯ ಏರ್ಪಟ್ಟಿತು. ಆದರೂ ಪ್ರೀತಿಯಿಂದ ನಾಗಮ್ಮ “ನೀವು ಮೂವರು ಹಬ್ಬಕ್ಕೆ ಊರಿಗೆ ಬನ್ನಿ, ಒಟ್ಟಿಗೆ ಹಬ್ಬ ಮಾಡೋಣ ಎಂದು ಆಹ್ವಾನಿಸಿದಾಗ ಇಲ್ಲ ಅತ್ತೆ, ಬರೋಕೆ ಆಗೋದಿಲ್ಲ, ಹೇಳೋದನ್ನೇ ಮರೆತಿದ್ದೆ.. ಇವರಿಗೆ ವಿದೇಶಿ ಕಂಪನಿಯಿಂದ ಒಂದು ಒಳ್ಳೆಯ ಆಫರ್ ಬಂದಿದೆ, ಅದರ ಓಡಾಟದಲ್ಲಿ ನಿಮ್ಮ ಮಗ ಬ್ಯುಸಿ ಇದ್ದಾರೆ. ಅಷ್ಟು ಹೊತ್ತಿಗೆ ನಾವು ವಿದೇಶಕ್ಕೆ ಪ್ರಯಾಣ ಮಾಡಬೇಕಾಗಬಹುದು. ಮಗಳ ಸ್ಕೂಲು ಅಲ್ಲೇ ಮುಂದುವರಿಸಲು ಎಲ್ಲಾ ವ್ಯವಸ್ಥೆ ಆಗಿದೆ, ಎಲ್ಲಾ ಖಚಿತವಾದ ಮೇಲೆ ತಿಳಿಸೋಣ ಅಂತ ಸುಮ್ಮನಿದ್ದೆವು ಎಂದಾಗ ನಾಗಮ್ಮ ಗೋಪಾಲಯ್ಯ ಅವರ ಬಾಯಿಂದ ಮಾತೆ ಹೊರಡಲಿಲ್ಲ. ಮಾರನೆಯ ದಿನ ಎಂದು ತಮ್ಮೂರಿಗೆ ವಾಪಸಾದರು. ಅನಂತ ಅನಸೂಯಗೆ ಆಶ್ಚರ್ಯ.
ಒಂದೇ ದಿನಕ್ಕೆ ಹಿಂತಿರುಗಿ ಬಂದಿದ್ದರಿಂದ ಏನಾಯಿತು ಎಂದು ಕೇಳಿದರು ಏನು ಬಾಯಿ ಬಿಡಲಿಲ್ಲ. ರಾತ್ರಿಯಲ್ಲ ಮಂಕಾಗೆ ಇದ್ದ ಗೋಪಾಲಯ್ಯ ಬೆಳಿಗ್ಗೆ ಎದ್ದಾಗ ಸುಸ್ತಾಗಿ ಕುಸಿದು ಬಿದ್ದರು.. ಅದನ್ನು ಕಂಡ ನಾಗಮ್ಮ ಜೋರಾಗಿ ಚೀರುತ್ತಾ, ಮಗ ಸೊಸೆಯನ್ನು ಕರೆಯಲು ಧಾವಿಸಿದರು.. ಓಡುವ ಭರದಲ್ಲಿ ಎಡವಿ ಬಿದ್ದು ಮಂಡಿ ಪೆಟ್ಟಾಗಿ ಮುಂದಿನ ದಿನಗಳಲ್ಲಿ ಓಡಾಡುವುದು ಕಷ್ಟವಾಯಿತು. ಗೋಪಾಲಯ್ಯನವರಿಗೆ ಆಸ್ಪತ್ರೆ ಸೇರಿಸಿದಾಗ ಲಘು ಹೃದಯಘಾತವಾಗಿರುವುದು ತಿಳಿದುಬಂತು.
ವಿಷಯ ತಿಳಿದ ಮಮತಾ ಮುರಾರಿ ಆಸ್ಪತ್ರೆಗೆ ಬರುವಾಗ ಒಂದಷ್ಟು ಸೇಬು, ಬಾಳೆಹಣ್ಣು ತಂದಿದ್ದರು . ವಿದೇಶಕ್ಕೆ ಹೊರಟಿರುವುದರಿಂದ ವೀಸಾ, ಪಾಸ್ಪೋರ್ಟ್, ಫ್ಲೈಟ್ ಟಿಕೆಟ್ ಹೀಗೆಲ್ಲಾ ದುಡ್ಡು ಬಹಳ ಖರ್ಚಾಗಿದೆ, ಇಲ್ಲ ಅಂದರೆ ನಾನೇ ಆಸ್ಪತ್ರೆಯ ಬಿಲ್ಲನ್ನು ಭರಿಸುತ್ತಿದ್ದೆ..ಎಂದು ಸೌಹಾರ್ದಯುತವಾದ ಮಾತನ್ನು ಹೇಳಿ ಆರೋಗ್ಯವನ್ನು ನೋಡಿಕೊಳ್ಳಿ ಎಂದು ಹೇಳಿ ಹೊರಟರು.ಅನಸೂಯ ಮತ್ತೊಮ್ಮೆ ಚಿನ್ನದ ಚೀಟಿ ಕಟ್ಟಿ ಒಂದು ಜೊತೆ ಬಳೆ ಕೊಂಡಿದ್ದಳು.. ಯುಗಾದಿ ಹಬ್ಬದ ದಿನ ಹಾಕಿಕೊಳ್ಳುವುದಾಗಿ ಅನಂತನಿಗೆ ತೋರಿಸಿದ್ದಳು. ಆದರೆ ಅಯಾಚಿತ್ತಾಗಿ ಬಂದ ಆಸ್ಪತ್ರೆ ಬಿಲ್ಲು ನೋಡಿ ಏನು ತೋಚದೆ ಮತ್ತೊಮ್ಮೆ ಅನುಸೂಯ ಹೊಸ ಬಳೆಗಳನ್ನು ಗಂಡನಿಗೆ ಕೊಟ್ಟು ಆಸ್ಪತ್ರೆ ಬಿಲ್ ಭರಿಸಿ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೊರಟರು.
ನಾಗಮ್ಮ ಗೋಪಾಲಯ್ಯ ಇಬ್ಬರು ಹಾಸಿಗೆ ಹಿಡಿದು ಮಲಗಿದ್ದಾರೆ. ಅಡಿಗೆ ಮನೆಯಿಂದ ಬರುವ ಅನುಸೂಯಾಳ ಗಾಜಿನ ಬಳೆಗಳ ಸದ್ದಿನೊಂದಿಗೆ ಏನು ಅಡಿಗೆ ಮಾಡುತ್ತಿದ್ದಾಳೆ ಎಂದು ತಿಳಿಯುವಷ್ಟು ಪಳಗಿದ್ದಾರೆ ನಾಗಮ್ಮ…ಜಣಜಣ ಗಾಜಿನ ಬಳೆಯ ಸದ್ದಿಗೆ .. ಅನು ಚಪಾತಿ ಲಟ್ಟಿಸುತ್ತಿದ್ದಾಳೆ ,ರೊಟ್ಟಿ ಮಾಡುತ್ತಿದ್ದಾಳೆ. ಕಾಯಿ ತುರಿಯುತ್ತಿದ್ದಾಳೆ ,ಮಜ್ಜಿಗೆ ಕಡಿಯುತ್ತಿದ್ದಾಳೆ.. ಇನ್ನೇನು ಊಟ ಬರುವುದೆಂದು ಗಂಡನಿಗೆ ಖಚಿತವಾಗಿ ಹೇಳುತ್ತಾರೆ. ಇವೆಲ್ಲವನ್ನು ಗಮನಿಸಿದ್ದ ಮಗ ಆನಂದ ಹೇಳಿದ…ಅಮ್ಮ ನಾನು ಚೆನ್ನಾಗಿ ಓದಿ ಕೆಲಸಕ್ಕೆ ಸೇರಿದ ಮೇಲೆ ನಿನಗೆ ಚಿನ್ನದ ಬಳೆಗಳನ್ನು ಮಾಡಿಸಿ ಕೊಡುವೆ ಎಂದ.. ಅನಸೂಯ ಹೇಳಿದಳು “ಮಗು ಚಿನ್ನದ ಒಡವೆಗಳಾಗಲಿ, ಬಳೆಗಳಾಗಲಿ ಆಪತ್ತಿಗೆ ಧನವಾಗಿ ಇರಬೇಕೆ ಹೊರತು ಅದೇ ಬದುಕಾಗಬಾರದು. ಹೊಟ್ಟೆ ತುಂಬಾ ಊಟ ಒಳ್ಳೆಯ ಆರೋಗ್ಯ ಇರಬೇಕು.
ಮನಸು ಅಪರಂಜಿ, ನಡತೆ ಬಂಗಾರದಂತಿರಬೇಕು. ಸಹನೆ, ಸಹೃದಯತೆ ,ಸರಳತೆ, ಪ್ರೀತಿ ಹಾಗೂ ನಗು ಇವೆ ನಮ್ಮ ಒಡವೆಗಳಾಗಬೇಕು.. ನಿನ್ನ ಅಪ್ಪನಂತೆ ಎಂದು ಹೇಳಿದಾಗ ಮಗ ಅಮ್ಮನನ್ನು ತಬ್ಬಿದ.. ಅನಂತನ ಕಣ್ಣಲ್ಲಿ ನೀರು ಜೇನುಗಿತು.. ಅತ್ತೆ ಮಾವನ ಪ್ರತಿಕ್ರಿಯೆ ಏನೆಂದು ನಿರೀಕ್ಷಿಸದೆ, ಕೈ ತುಂಬಾ ಹಾಕಿದ್ದ ಗಾಜಿನ ಬಳೆಗಳನ್ನು ಪ್ರೀತಿಯಿಂದ ನೋಡುತ್ತಾ ಅಡುಗೆ ಮನೆ ಕಡೆ ನಡೆದಳು ಅನಸೂಯ.
ಸವಿತಾ ಎಸ್ ವೆಂಕಟೇಶ್.
ಸಹ ಪ್ರಾಧ್ಯಾಪಕರು. ಮೈಸೂರು