ದಾವಣಗೆರೆ (Davanagere): ರಾಜ್ಯದಲ್ಲಿ ಭೂಮಿ ಹೊಂದಿರುವ ಬಡವರು, ಹಿಂದುಳಿದ ವರ್ಗದವರು, ಆದಿವಾಸಿಗಳು, ದಲಿತರು ಯಾವುದೇ ಕಾರಣಕ್ಕೂ ಅದರ ಮಾಲಿಕತ್ವದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ ಅದರಂತೆ ಹಂತ ಹಂತವಾಗಿ ಹಕ್ಕುಪತ್ರ ವಿತರಣೆ ಕಾರ್ಯ ಮಾಡಲಾಗುತ್ತಿದೆ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಭಾನುವಾರ ಮಾಯಕೊಂಡ ಕ್ಷೇತ್ರವ್ಯಾಪ್ತಿಯ ಮತ್ತಿ ಗ್ರಾಮ ಪಂಚಾಯಿತಿಗೆ ಸೇರಿದ ಹಾಗೂ ಸರ್ಕಾರ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿದ ದಾಸಪ್ಪನಗರ ಮರುನಾಮಕಾರಣ ಫಲಕ ಉದ್ಘಾಟನೆಯ ಸಮಾರಂಭದಲ್ಲಿ ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೆ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರ ಎರಡನೇ ವರ್ಷದ ಸಾಧನಾ ಸಮಾವೇಶ ಜರುಗಿತು. ಈ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಭೂ ಗ್ಯಾರಂಟಿ ಯೋಜನೆಗೆ ಆದ್ಯತೆ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಹಂತಹಂತವಾಗಿ ಭೂ ಗ್ಯಾರಂಟಿ ಮೂಲಕ ರೈತರಿಗೆ ನೆರವು ನೀಡಲಾಗುವುದು ಎಂದರು.
ಸಾಮಾಜಿಕ ನ್ಯಾಯ ನೀಡುವುದೇ ರಾಜ್ಯ ಸರ್ಕಾರದ ಗುರಿಯಾಗಿದೆ.ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಿದೆ.ಕೆಲವು ಗ್ರಾಮೀಣಭಾಗದಲ್ಲಿ ಸರ್ಕಾರಿ ಶಾಲೆಗಳು ಇಂದಿಗೂ ರಿಜಿಸ್ಟರ್ ಆಗಿಲ್ಲ. ಶಾಲೆ ನಡೆಸಲು ಹಿಂದೆ ಹಿರಿಯರು ಸ್ಥಳವನ್ನು ದಾನವಾಗಿ ನೀಡಿರುತ್ತಾರೆ ಆದರೆ ಸರ್ಕಾರದ ಹೆಸರಿನಲ್ಲಿ ರಿಜಿಸ್ಟರ್ ಆಗಿರುವುದಿಲ್ಲ ಅಂತಹವುಗಳನ್ನು ಗುರುತಿಸಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.ಸರ್ಕಾರದ ಕೆಲಸ ಏನೆಂದು ಜನರು ಅರ್ಥಮಾಡಿಕೊಳ್ಳಬೇಕು ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ದಾವಣಗೆರೆ ಕ್ಷೇತ್ರದ ಪ್ರತಿ ಹಳ್ಳಿಗೂ ನೀರೊದಗಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ನಾಗರಸನಹಳ್ಳಿ ಹಾಗೂ ಕನಗೊಂಡನಹಳ್ಳಿ ಗ್ರಾಮದಲ್ಲಿ 24×7 ನೀರಿನ ವ್ಯವಸ್ಥೆ ಮಾಡಲಾಗಿದೆ. ಎನ್ ಆರ್ ಎಲ್ ಎಂ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ಲೋನ್ ನೀಡಲಾಗುತ್ತದೆ. ಗ್ರಾಮೀಣ ಮಹಿಳೆಯರು ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಪ್ರಧಾನಮಂತ್ರಿ ವಸತಿ ಆವಾಸ್ ಯೋಜನೆಯಡಿ ಗ್ರಾಮೀಣಭಾಗದ ಜನರು ಮನೆ ನಿರ್ಮಾಣ ಮಾಡಿಕೊಳ್ಳಬೇಕು.ಹಂತಹಂತವಾಗಿ ಅನುದಾನ ಬರುತ್ತದೆ ಆದ್ದರಿಂದ ಫಲಾನುಭವಿಗಳು ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು. ಗ್ರಾಮಪಂಚಾಯತ್ ಉತ್ತಮವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಜೀವನದ ಮೌಲ್ಯಗಳನ್ನು ಬೆಳೆಸಬೇಕು. ಗ್ರಾಮೀಣಭಾಗದ ಜನರು ಶಾಲೆಗಳ ದುರಸ್ತಿಗೆ ಮನವಿ ಮಾಡುತ್ತಾರೆ.ಆದ್ದರಿಂದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳು,ಗ್ರಾಮಸ್ಥರು ಸೇರಿ ಹಣ ಒಟ್ಟು ಗೂಡಿಸಿ ಹನಿಹನಿಕೂಡಿದರೆ ಹಳ್ಳ ಎಂಬಂತೆ ನಾವು ಕೂಡ ಸಹಾಯ ಮಾಡುತ್ತವೆ.ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಮೂಹಿಕ ಪ್ರಯತ್ನ ಮುಖ್ಯವಾಗಲಿದೆ ಎಂದರು.ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿರುವ ಕೇರ್ ಟ್ರಸ್ಟ್ ಮೂಲಕ ಆರೋಗ್ಯದ ಕಾಳಜಿಯಿಂದ ಮೂರು ಉಚಿತ ಸೇವೆಗಳನ್ನು ಮಾಡಲಾಗುತ್ತಿದೆ.ಡಯಾಲಿಸಿಸ್ ಸೇವೆ,ಹೆರಿಗೆ ಸೇವೆ ಹಾಗೂ ಕಣ್ಣಿನ ಪೊರೆ ಚಿಕಿತ್ಸೆ ಒದಗಿಸಲಾಗಿದೆ.ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.ದಾಸಪ್ಪ ನಗರದ ಗ್ರಾಮಸ್ಥರು ಆರೋಗ್ಯ ಶಿಬಿರ ಆಯೋಜಿಸಲು ಕೋರಿದ್ದಾರೆ ಮುಂದಿನದಿನಗಳಲ್ಲಿ ನಡೆಸಲಾಗುವುದು ಎಂದರು.
ಮಾಯಕೊಂಡ ಶಾಸಕ ಕೆ.ಎಸ್ ಬಸವಂತಪ್ಪ ಮಾತನಾಡಿ,ಮಾಯಕೊಂಡ ನಕಾಶೆ ದಾರಿ ಮುಕ್ತ ಕ್ಷೇತ್ರವನ್ನಾಗಿಸಲು ಪಣ ತೊಟ್ಟಿದ್ದು, ನಕಾಶೆ ದಾರಿಯನ್ನು ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ಹೊಡೆದು ಹಾಕಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ರಾಜ್ಯದಲ್ಲೇ ಅತೀ ಹೆಚ್ಚು ನಕಾಸೆ ದಾರಿಗಳನ್ನು ಹೊಂದಿದ ಕ್ಷೇತ್ರ ಮಾಯಕೊಂಡ ಆಗಿದ್ದು, ನಕಾಸೆ ದಾರಿಗಳನ್ನು ಒತ್ತುವರಿ ಮಾಡಿಕೊಂಡಿರುವುದು ರೈತರು ಹೊಲ-ಮನೆಗಳಿಗೆ ಓಡಾಡುವುದು ಸಮಸ್ಯೆ ಆಗಿದೆ. ಈ ನಿಟ್ಟಿನಲ್ಲಿ ತಹಸೀಲ್ದಾರ್‌ಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದರು.
Read also : World No Tobacco Day | ದುಶ್ಚಟಗಳಿಂದ ದೂರವಿರಿ : ನ್ಯಾ.ವೇಲಾ ಡಿ.ಕೆ
ನಕಾಸೆ ದಾರಿಗೆ ಒಂದೆಡೆ ಖಾಸಗಿ ಭೂಮಿನೂ ಕೊಡುತ್ತಿಲ್ಲ. ಇನ್ನೊಂದೆಡೆ ಖಾಸಗಿಯವರು ಒಪ್ಪಂದದAತೆ ಜಾಗನೂ ಕೊಡುತ್ತಿಲ್ಲ, ಮತ್ತೊಂದೆಡೆ ಸರ್ಕಾರಿ ನಕಾಸೆ ದಾರಿಯನೂ ಒತ್ತುವರಿ ಮಾಡಿಕೊಳ್ಳಲಾಗಿದೆ. ಆಗಿದ್ದರೆ ರೈತರು ಎಲ್ಲಿ ಓಡಾಡಬೇಕು ಎಂದು ಪ್ರಶ್ನಿಸಿದ ಶಾಸಕರು, ನಕಾಸೆ ದಾರಿ ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವ ಆಗಿದ್ದರೂ ಮಣಿಯದೆ ನಕಾಸೆ ದಾರಿ ಒತ್ತುವರಿ ತೆರವುಗೊಳಿಸಿ ರೈತರು ಓಡಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಗ್ರಾಮದಲ್ಲಿ ಎಸ್ಸಿ ಎಸ್ಟಿ ಸಮುದಾಯ ಬಹಳ ಹಿಂದುಳಿದಿವೆ. ಇವರಿಗೆ ಸೂರು ಸಿಗುವುದು ಬಹಳ ಕಷ್ಟ. ಆಗಿನ ಕಾಲದಲ್ಲಿ ದಾಸಪ್ಪನವರ ಮನೆತನ ಅವರು ಸೂರು ಕಟ್ಟಿಕೊಳ್ಳಲು ಭೂಮಿ ದಾನ ಮಾಡಿದ್ದು, ಇವತ್ತು ಅವರನ್ನು ನೆನಸಿಕೊಳ್ಳಬೇಕು. ಏಕೆಂದರೆ ಯಾರೋ ೧೦ ರುಪಾಯಿ ಕೊಟ್ಟಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ನೀವು ನಿಮಗೆ ನಿವೇಶನ ಕೊಟ್ಟ ಈ ಕುಟುಂಬವನ್ನು ಯಾವೊತ್ತು ಸ್ಮರಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ಮಂಜುನಾಥ್, ರೈತ ಮುಖಂಡರಾದ ತೇಜಸ್ವಿ ಪಟೇಲ್, ಎನ್.ಡಿ.ಮುರಿಗೆಪ್ಪ, ಜಯಪಾಲ್, ತ್ಯಾವಣಗಿ ಗೋವಿಂದಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಕೆ.ಎನ್.ಮಂಜುನಾಥ್, ಮಾಜಿ ಉಪಾಧ್ಯಕ್ಷ ಹುಲಿಕಟ್ಟೆ ಶಿವಣ್ಣ , ಕುಕ್ಕವಾಡ ಮಾಜಿ ಪ್ರಧಾನರಾದ ಡಿ.ಮಲ್ಲೇಶಪ್ಪ, ತಹಸೀಲ್ದಾರ್ ಡಾ.ಎಸ್.ಬಿ.ಅಶ್ವತ್ಥ್, ಮತ್ತಿ ಗ್ರಾಪಂ ಪಿಡಿಒ ವನಿತಾಬಾಯಿ, ಗ್ರಾಮದ ಮುಖಂಡರಾದ ಹೂವಿನಮಡು ಚಂದ್ರಣ್ಣ , ಹೂವಿನಮಡು ಹಾಲೇಶಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಸತೀಶ್, ಕಂದಗಲ್ಲು ಮಲ್ಲಿಕಾರ್ಜುನಗೌಡ್ರು, ವಕೀಲರಾದ ಮತ್ತಿ ಹನುಮಂತಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.