ದಾವಣಗೆರೆ : ಭಾಷಾಭಿಮಾನವು ಕೇವಲ ಪದಗಳಲ್ಲಿ ವ್ಯಕ್ತವಾಗದೇ ನಮ್ಮ ನಡೆ ನುಡಿ ಆಚರಣೆಗಳು ಮತ್ತು ಕ್ರಿಯಾತ್ಮಕ ಕಾರ್ಯಗಳಿಂದ ಅಭಿವ್ಯಕ್ತವಾಗಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಕ್ಷರಿ ಹೇಳಿದರು.
ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ,ದಾವಣಗೆರೆ ಜಿಲ್ಲೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಮೂರನೇ ಪ್ರಾಚೀನ ಭಾಷೆ ಎಂಬ ಹೆಗ್ಗಳಿಕೆ ಕನ್ನಡ ಬಾಷೆಗಿದ್ದು ನಾವೆಲ್ಲರೂ ನಮ್ಮ ನಾಡು ,ನುಡಿ ,ಸಂಸ್ಕøತಿ ಮತ್ತು ಸಾಹಿತ್ಯದ ಉಳಿವಿಗಾಗಿ ಕಟಿಬದ್ಧರಾಗಬೇಕಿದೆ ಎಂದರು. ರಾಜ್ಯ ಸರ್ಕಾರಿ ನೌಕರರರಿಗಾಗಿ ಆರೋಗ್ಯ ಸಂಜೀವಿನಿ ಯೋಜನೆಯು ಜಾರಿಯಾಗಿದ್ದು, ಹೊಸ ಪಿಂಚಣಿ ಯೋಜನೆ ರದ್ದು ಮಾಡಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸಂಘವು ಯಾವುದೇ ರೀತಿಯ ಹೋರಾಟಕ್ಕೂ ಬದ್ಧವಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಾಮದೇವಪ್ಪ ಮಾತನಾಡಿ, ಆದಿಕವಿ ಪಂಪನಾದಿಯಾಗಿ ಪ್ರಸ್ತುತ ದಿನಮಾನದವರೆಗೂ ಭಾಷೆ ಸ್ವಾಭಿಮಾನದ ಸಂಕೇತವಾಗಿದ್ದು, ಯುವ ಜನತೆ ಭಾಷೆಯ ರಾಯಭಾರಿಯಾಗುವಲ್ಲಿ ಕಾರ್ಯತತ್ಪರರಾಗಬೇಕೆಂದರು.
Read also : ಸಮಾಜ ಸೇವೆ ಗುರುತಿಸಿ ಲಿಯಾಖತ್ ಆಲಿ ಎಂ.ಕೆ ಅವರಿಗೆ ಸನ್ಮಾನ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ವೀರೇಶ್ ಎಸ್ ಒಡೇನಪುರ ಪ್ರಾಸ್ತಾವಿಕವಾಗಿ ಮಾತನಾಡಿ ಭಾಷೆಗಳ ರಾಣಿ ಎಂದೇ ಕರೆಯಲ್ಪಡುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಶ್ರಮಿಸಬೇಕೆಂದರು. ಕನ್ನಡ ನಾಡು -ನುಡಿಯ ಉಳಿವಿಗಾಗಿ ಸಂಘವು ಎಲ್ಲಾ ಸಹಕಾರ ನೀಡುವುದೆಂದರು.
ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಮಂಜುನಾಥ್ ಹೆಚ್ ಮಾತನಾಡಿ, ಪರಂಪರೆ ನಶಿಸದಂತೆ ತಡೆಯಲು ನಮ್ಮ ಮಾತೃಭಾಷಾ ಬಳಕೆ ವೃದ್ಧಿಯಾಗಬೇಕೆಂದರು.
ರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಸಾಮೂಹಿಕ ನೃತ್ಯ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತ ಸುಧಾ ಮತ್ತು ಸಂಗಡಿಗರಿಗೆ ರೂ.25000-00, ದ್ವತೀಯ ಸ್ಥಾನ ಪಡೆದ ಹರಿಹರದ ಆಶ್ರಿತಾ ಮತ್ತು ತಂಡಕ್ಕೆ ರೂ15,000-00ಹಾಗೂ ತೃತೀಯ ಸ್ಥಾನ ಪಡೆದ ಜಿ.ಎಮ್.ಐ.ಟಿ ತಂಡಕ್ಕೆ ರೂ.10000-00 ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷರು, ರಾಜ್ಯ ಮತ್ತು ಜಿಲ್ಲಾ ಹಂತದ ಪದಾಧಿಕಾರಿಗಳು, ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ದಿಳ್ಯಪ್ಪ ಸೇರಿದಂತೆ ಹಲವರು ಉಪಸ್ಥತರಿದ್ದರು.
